‘ಅಲ್ಲಲೇ ಬಸ್ಸಿ, ಈ ಕಾಮನ್ ಸೆನ್ಸ್ ಪ್ರಾಬ್ಲಂ ಅಂದ್ರೇನಲೇ?’ ರುದ್ರೇಶಿ ಚಕಿತನಾಗಿ ಪ್ರಶ್ನಿಸಿದ.
‘ಕೆಲವ್ರಿಗೆ ಕೆಲವೊಮ್ಮೆ ಸೆನ್ಸ್ ಲೆಸ್ಸು ಮತ್ತೆ ಕಾಮ ಪ್ಲಸ್ಸು ಆಗ್ತತಿ. ಇದನ್ನೇ ಕಾಮನ ಸೆನ್ಸು ಪ್ರಾಬ್ಲಂ ಅಂತಾರಿಪ್ಪಟ್ಟು’ ಚಂಬಸ್ಯ ಸಮಜಾಯಿಷಿ ನೀಡಿದ.
‘ಅದ್ಸರಿ, ಈ ಕೆಲವ್ರು ಅಂದ್ರೆ ಯಾರಂತ ಬಿಡಿಸಿ ಹೇಳಲೇ’
‘ಕೆಲವ್ರು ಅಂದ್ರೆ ಕೆಲವ್ರೇ ಕಣಲೇ. ಉದಾಹರಣಿಗೆ ಕಾಮೀಜಿಗಳು, ಮೋಜುಕಾರಣಿಗಳು, ಉನ್ನತ ಮುದ್ದೆ ಬೆದೆಕಾರಿಗಳು ಇತ್ಯಾದಿ. ಆದ್ರೆ ಯಾರಿಗೆ ಯಾವಾಗ ಈ ಕಾಮನ್ ಸೆನ್ಸ್ ಬಾಧೆ ಅಂಟ್‍ಕ್ಯತದೋ ಗೊತ್ತಾಗದುಲ್ಲ. ಇಪ್ಪಟ್ಟ್ ಇದು ಅಂಟ್‍ಕ್ಯತಂದ್ರೆ ಸಂದಿಗೊಂದಿ ಕ್ಯಾಮರಾಗಳೆಲ್ಲ ಅಲರ್ಟ್ ಆಗ್ತಾವು. ಮಿಡಿಯಾದವ್ರಿಗೆ ನಿದ್ದಿ ಹಾರ್ತಾವು. ಕೊರೊನಾ ವೈರಸ್‍ಗಿಂತಲೂ ವೇಗವಾಗಿ ವಿಡಿಯೋ ಕ್ಲಿಪ್ಪಿಂಗ್‍ಗಳು ವೈರಲ್ ಆಗ್ತಾವು. ದೇಶದ ಜ್ವಲಂತ ಸಮಸ್ಯೆಗಳೆಲ್ಲ ತಮ್ಮಿಂತಾವೇ ಸೈಡಿಗೋಗಿ, ಕಾಮಕ್ಕೆ ಪ್ಲಾಟ್‍ಫಾರಂ ಬಿಟ್ಟ್‍ಕೊಡ್ತವೆ’
‘ಹಂಗರೆ ಈ ಕಾಮದ ಬಾಧೆಗೆ ಮೂಲಕಾರಣ ಏನಲೇ ಬಸ್ಸಿ?’
‘ಈ ಹೊಳಿ ಒಳಗೆ ನಡೆಯೊವಾಗ ಪಾಚಿ ಕಟ್ಟಿದ್ ಕಲ್ಲ್ ಮ್ಯಾಕ್ ಕಾಲಿಟ್ರೆ ರಮ ರಮಾಂತ ಜಾರತತಲ್ಲ, ಹಂಗೆ ಮನಸ್ಸು ಜಾರತತಿ. ಮನಸ್ಸಿನ ಜಾರಕಿನೇ ಈ ಕಾಮನ್ ಸೆನ್ಸ್ ಬಾಧೆಗೆ ಮೂಲ ಕಾರಣ. ಈ ಬಾಧೆಗೆ ಒಳಪಟ್ಟವರ ಪಾಡು ಪುರದ ಪುಣ್ಯಂ ಕಾಮ ರೂಪಿಂದೆ ಪೋಗುತಿದೆ ಅನ್ನಂಗ್ ಆಗ್ತತಿ’
ಚಂಬಸ್ಯನ ವಿವರಣೆ ಕೇಳಿ ಆಲೋಚನೆಗೆ ಬಿದ್ದ ರುದ್ರೇಶಿ ‘ಎಲ್ಲಿ ಜಾರಿತೋ ಮನವು, ಎಲ್ಲೆ ಮೀರಿತೋ’ ಎಂದು ಗುನುಗಹತ್ತಿದ. ಅದಕ್ಕೆ ಪ್ರತಿಯಾಗಿ ಚಂಬಸ್ಯನೂ ‘ಕಾಮವೇಕೆ ಭೂಮಿ ಮೇಲಿದೆ?’ ಎಂದು ಉಲಿಯಹತ್ತಿದ.
ಬಿ.ಆರ್.ಸುಬ್ರಹ್ಮಣ್ಯ
[email protected]