ನೂರಾರು ವರ್ಷಗಳಿಂದ ಕೃಷಿ ಹಾಗೂ ಕೃಷಿ ಭೂಮಿಯ ಮೇಲೆ ನಿರಂತರ ಪ್ರಯೋಗಗಳು ನಡೆಯು ತ್ತಿವೆ. ಆದರೆ ದುರಂತವೆಂದರೆ, ಹೆಚ್ಚಿನ ಆವಿಷ್ಕಾ ರಗಳು ಕೃಷಿ ಭೂಮಿಯನ್ನು, ರೈತರನ್ನು ಹಾಗೂ ಪರಿಸರವನ್ನು ಅವನತಿಯೆಡೆಗೆ ದೂಡಿರುವುದು ಹೆಚ್ಚು ಎಂದರೆ ಅತಿಶಯೋಕ್ತಿಯಲ್ಲ. ದಿನ ದಿಂದ ದಿನಕ್ಕೆ ರಾಸಾಯನಿಕ ಗೊಬ್ಬರ ಹಾಗೂ ರಾಸಾಯನಿಕ ಕೀಟನಾಶಕಗಳ ಹಾವಳಿಯಿಂದ ಸಾವಿರಾರು ವರ್ಷಗಳಿಂದ ಜೀವ ಸಂಕುಲಕ್ಕೆ ಆಹಾರ ಪೂರೈಸುತ್ತಾ ಬಂದಿರುವ, ಜೀವ ವೈವಿಧ್ಯತೆಯನ್ನು ಕಾಪಾಡಿ, ಪರಿಸರ ಸಮತೋ ಲನಕ್ಕೆ ಕಾರಣವಾಗಿರುವ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ಕ್ಷೀಣಿಸುತ್ತಿವೆ.
ನಮ್ಮ ಪೂರ್ವಜರು ಮಣ್ಣಿನಲ್ಲಿರುವ ಕೋಟ್ಯಾನು ಕೋಟಿ ಸೂಕ್ಷ್ಮ ಜೀವಿಗಳ ಬಗ್ಗೆ ಅಧ್ಯಯನ ಮಾಡಿರಲಿಲ್ಲ. ಆದರೆ ತಮಗೆ ಆಹಾರ ನೀಡುತ್ತಿರುವ ಭೂಮಿ ತಾಯಿಗೆ ತಾವು ಆಹಾರ ನೀಡಬೇಕು ಎಂಬುದನ್ನು ಮರೆತಿರಲಿಲ್ಲ. ಅದಕ್ಕಾಗಿ ಸೊಪ್ಪು-ಸದೆ, ಕೊಟ್ಟಿಗೆ ಗೊಬ್ಬರಗಳಿಂದ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡಿದ್ದರು. ಆದರೆ ಈಗ ಮಣ್ಣಿನ ಬಗ್ಗೆ ಅಧ್ಯಯನ ನಡೆಸಿ, ಪ್ರಯೋಗಗಳನ್ನು ನಡೆಸಿ ಎಲ್ಲಾ ತಿಳಿದ ಮೇಲೂ ಭೂಮಿ ತಾಯಿಗೆ ವಿಷ ಉಣಿಸಿ ನಾವು ಅದನ್ನೇ ತಿನ್ನುತ್ತಿದ್ದೇವೆ.
ಮಣ್ಣಿನಲ್ಲಿ ನೈಸರ್ಗಿಕವಾಗಿಯೇ ಬೆಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ಪೂರೈಸುವ ಸೂಕ್ಷ್ಮ ಜೀವಿಗಳಿದ್ದು, ಅವುಗಳು ನಿರಂತರ ವಾಗಿ ವಾತಾವರಣದಲ್ಲಿರುವ ಸಾರಜನಕ, ಇಂಗಾಲ, ಪೋಟಾಷಿಯಂನಂತಹ ಧಾತುಗ ಳನ್ನು ಮಣ್ಣಿಗೆ ಸೇರಿಸುವ ಕೆಲಸ ಮಾಡುತ್ತಿ ರುತ್ತವೆ. ಸೂಕ್ಷ್ಮಾಣು ಜೀವಿಗಳ ಆವಾಸಕ್ಕೆ ಪೂರಕ ವಾತಾವರಣ ಸೃಷ್ಟಿಸುವುದು ನಮ್ಮ ಕರ್ತವ್ಯ. ಆದರೆ ರಾಸಾಯನಿಕ ಗೊಬ್ಬರಗಳ ಹಾಗೂ ಕೀಟನಾಶಕಗಳ ಬಳಕೆಯಿಂದ ನಾವು ಕೃತಕವಾಗಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿ ನಲ್ಲಿರುವ ಜೀವಾಮೃತಗಳು ನಾಶವಾಗುತ್ತಿವೆ.
ಇವು ಒಂದು ರೀತಿಯ ಪರಿಸರ ನಾಶಕ್ಕೆ ಕಾರಣವಾದರೆ ಅವೈಜ್ಞಾನಿಕವಾಗಿ ಬಳಸುವ ರಾಸಾಯನಿಕಗಳು ಭೂಮಿಯನ್ನು ಬರಡಾಗಿ ಸುವುದಲ್ಲದೇ ರೈತರನ್ನು ನಾಶ ಮಾಡುತ್ತಿವೆ. ನಾವು ಯಾವುದೇ ಕಾಯಿಲೆಯೆಂದು ಡಾಕ್ಟರ್ ಬಳಿ ಹೋದರೆ ಮೊದಲು ರಕ್ತ ಪರೀಕ್ಷೆ ಹಾಗೂ ಇನ್ನಿತರೆ ಪರೀಕ್ಷೆಗಳ ಹೊರತಾಗಿ ಚಿಕಿತ್ಸೆ ಆರಂಭಿಸುವುದಿಲ್ಲ. ಆದರೆ ಮಣ್ಣಿಗಿರುವ ತೊಂದರೆ ಏನು? ಕೊರೆತೆಯಾಗಿರುವ ಪೋಷಕಾಂಶಗಳು ಯಾವುವು? ಇದ್ಯಾವುದನ್ನೂ ಅರಿಯದೇ ವ್ಯಾಪಾರಿಗಳ ಜಾಹೀರಾತಿಗೆ ಮನಸೋತು ಅವರು ಹೇಳುವ ರಾಸಾಯನಿಕಗಳನ್ನು ಅಧಿಕ ದರ ಕೊಟ್ಟು ಖರೀದಿಸಿ ಭೂಮಿಯ ಫಲವತ್ತತೆಯನ್ನು ನಾಶ ಮಾಡುವುದರೊಂದಿಗೆ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ.
ಮಣ್ಣಿನ ಪರೀಕ್ಷೆ ಮಾಡಿಸಿ ಅದರ ಆಮ್ಲೀ ಯತೆ (PH Level) ಯನ್ನು ಪರೀಕ್ಷಿಸಿ, ಸೂಕ್ಷ್ಮಾಣು ಜೀವಿಗಳ ಪ್ರಮಾಣವನ್ನು ಪರೀಕ್ಷಿಸಿ ಪೋಷಕಾಂಶಗಳ (NPK) ಕೊರತೆ ಯನ್ನು ಗುರುತಿಸಿ ನಂತರವಷ್ಟೇ ಅಗತ್ಯವಿರುವ ಪೋಷಕಾಂಶಗಳನ್ನು ನೈಸರ್ಗಿಕವಾಗಿ ಮಣ್ಣಿಗೆ ಸೇರಿಸಬೇಕು. ಉದಾಹರಣೆಗೆ ಗ್ಲಿರಿಸಿಡಿಯಾ ಎಲೆಗಳಿಂದ ಸಾರಜನಕ, ಹುಣಸೆ ಎಲೆಗಳಿಂದ ಪೋಟಾಷ್ ಮತ್ತು ಜಿಂಕ್ ಎಕ್ಕೆ ಎಲೆಗಳಿಂದ ಬೋರಾನ್, ಕೊಕೊ ಎಲೆಗಳಿಂದ ಪೊಟಾಷ್, ಸೆಣಬು ಗಿಡಗಳಿಂದ ಇಂಗಾಲವನ್ನು ಪಡೆಯಬಹುದು. ಇವುಗಳನ್ನು ಭೂಮಿಯ ಮೇಲೆ ಹೊದಿಕೆ ಮಾಡಿ, ಸೂಕ್ಷ್ಮಾಣು ಜೀವಿಗಳ ಜೈವಿಕ ಕ್ರಿಯೆಗಳಿಂದಲೇ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು.
ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಗಳಿಸಲು ಅವೈಜ್ಞಾನಿಕವಾಗಿ ಯಾವುದೇ ಕೃಷಿ ತಜ್ಞರ ಸಲಹೆ ಇಲ್ಲದೆ ಭೂಮಿಯನ್ನು ಹಾಳು ಮಾಡಿಕೊಳ್ಳುವುದು ಸೂಕ್ತವಲ್ಲ. ಆರೋಗ್ಯಕರವಾದ ಮಣ್ಣಿಗಾಗಿ ನಾವು ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸಬೇಕು.
* ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ, ನಂತರವಷ್ಟೇ ಅಗತ್ಯವಾದ ಪೋಷಕಾಂಶಗಳನ್ನು ಕೃಷಿ ತಜ್ಞರ ಸಲಹೆ ಮೇರೆಗೆ ಪೂರೈಸಬೇಕು.
* ಮಣ್ಣನ್ನು ಪದೇ ಪದೇ ಉಳುವುದು, ಮೊಗಚುವುದು ಮುಂತಾದವುಗಳನ್ನು ಕಡಿಮೆಗೊಳಿಸಬೇಕು. ವಿಜ್ಞಾನಿಗಳ ಪ್ರಕಾರ ಒಂದು ಹಿಡಿ ಮಣ್ಣಿನಲ್ಲಿ ಇಡೀ ಪ್ರಪಂಚದ ಜನಸಂಖ್ಯೆಯಷ್ಟು ಸೂಕ್ಷ್ಮ ಜೀವಿಗಳಿರುತ್ತವೆ. ಅವುಗಳ ಆವಾಸಕ್ಕೆ ತೊಂದರೆಯಾಗಬಾರದು.
* ಭೂಮಿಯನ್ನು ಪೋಷಕಾಂಶ ತುಂಬಿದ ಎಲೆಗಳಿಂದ ಮುಚ್ಚಬೇಕು. ಗೋಧಿ, ಜೋಳ ಮುಂತಾದ ಬೆಳೆಗಳ ಕಟಾವಿನ ನಂತರ ತ್ಯಾಜ್ಯ ವನ್ನು ಸುಟ್ಟು ವಾತಾವರಣಕ್ಕೆ ಇಂಗಾಲವನ್ನು ಸೇರಿಸಿ ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುವ ಬದಲು ಅದನ್ನು ಭೂಮಿಗೆ ಸೇರಿಸಿ ಪೋಷಕಾಂಶವನ್ನು ಹೆಚ್ಚಿಸಬಹುದು.
* ಸೂಕ್ಷ್ಮ ಜೀವಿಗಳಿಗೆ ಪೋಷಕಾಂಶದ ಪೂರೈಕೆ : ಇಂಗ್ಲಿಷ್‌ನಲ್ಲಿ ಹೇಳಿರುವಂತೆ `we will have to feed the life, that feeds us’ ನಮಗೆ ಆಹಾರ ನೀಡುತ್ತಿರುವ ಜೀವಿಗಳಿಗೆ ನಾವು ಆಹಾರ ಒದಗಿಸಬೇಕು.
ರಾಸಾಯನಿಕಗಳ ಬಳಕೆ ನಿಲ್ಲಿಸುವುದು : ರಾಸಾಯನಿಕಗಳಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ನಾಶ, ಇದರಿಂದ ಮಣ್ಣಿನ ನಾಶ, ಮಣ್ಣಿನ ನಾಶವಾದರೆ ಜೀವ ಸಂಕುಲದ ನಾಶ ಖಚಿತ.
ಒಟ್ಟಿನಲ್ಲಿ ಸರ್ಕಾರವು ಎಚ್ಚೆತ್ತು ರೈತರಿಗೆ ಮಣ್ಣಿನ ಪರೀಕ್ಷೆಯನ್ನು ಉಚಿತ ಹಾಗೂ ಕಡ್ಡಾಯಗೊಳಿಸಬೇಕು. ಕೃಷಿ ತಜ್ಞರ ಸಲಹೆ ಇಲ್ಲದೇ ಯಾವುದೇ ರಾಸಾಯನಿಕಗಳ ಮಾರಾಟ ಮಾಡದಂತೆ ಕಾನೂನು ತರಬೇಕು. ಎಲ್ಲಾ ದೇಶಗಳಲ್ಲಿ ನಿರ್ಬಂಧಿಸಿದ ರಾಸಾಯನಿಕ ಕೀಟನಾಶಕಗಳು ಇನ್ನೂ ನಮ್ಮ ದೇಶದಲ್ಲಿ ಮಾರಾಟವಾಗುತ್ತಿವೆ. ಇದರ ಬಗ್ಗೆ ರೈತರನ್ನು ಎಚ್ಚರಿಸುವ ಜವಾಬ್ದಾರಿ ಎಲ್ಲಾ ನಾಗರಿಕರು, ಕೃಷಿ ತಜ್ಞರು ಹಾಗೂ ಸರ್ಕಾರದ ಮೇಲೆ ಇದೆ.
ಆಪ್ತ ಶೆಟ್ಟಿ
8ನೇ ತರಗತಿ
ಚೇತನಾ ಒಲಿಪಿಂಯಾಡ್ ಶಾಲೆ