ಸ್ಮಾರ್ಟ್ ಸಿಟಿಗಳಿಗಾಗಿ ಸ್ಮಾರ್ಟ್ ಪರಿಹಾರ

ನೀರು ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೂ ಅಗತ್ಯ ವಾದ ರುಚಿ ರಹಿತ ದ್ರವವಾಗಿದ್ದು, ನಿಸರ್ಗ ದಲ್ಲಿ ನೀರಿನ ಕಣಗಳ ಸೃಷ್ಠಿ ಒಂದು ವಿಸ್ಮಯ ವೆನಿಸಿದೆ. ಇದು ಭೂಮಿಯ ಮೇಲೆ ಶೇ 70% ಭಾಗವನ್ನು ಆವರಿಸಿದ್ದು, ಜೀವಿಗಳ ಉಳಿವಿಗೆ ಕಾರಣವಾಗಿದೆ. ಆದರೆ ಕುಡಿ ಯಲು ಬಳಸಬಹುದಾದ ಶುದ್ಧ ನೀರು ಶೇ 3% ರಷ್ಟು ಮಾತ್ರ. ಭೂಮಿಯ ಮೇಲೆ ಮಾನವನ ಸಂಖ್ಯೆ ಜಾಸ್ತಿಯಾದಂತೆ ಅವನ ಅನಾಗರಿಕ ವರ್ತನೆಯಿಂದ ಶುದ್ದವಾದ ನೀರು ಹಾಗೂ ನೆಲ ಕಲುಷಿತಗೊಳ್ಳುತ್ತಿದೆ. ಕಾರ್ಖಾನೆ, ಉಷ್ಣ ಸ್ಥಾವರಗಳು, ಗಣಿಗಾರಿಕೆ, ಜೀವಂತ ತ್ಯಾಜ್ಯ, ವಿಷಕಾರಿ ತ್ಯಾಜ್ಯಗಳಿಂದ ನಗರ ಪ್ರದೇಶಗಳಲ್ಲಿ ಬೇಕಾಬಿಟ್ಟಿ ಎಸೆದ ಪ್ಲಾಸ್ಟಿಕ್, ನೀರಿನ ಬಾಟಲಿಗಳು, ಕವರ್‍ಗಳು. ಗೃಹತ್ಯಾಜ್ಯಗಳು ನೀರಿನ ಮೇಲೆ ತೇಲುತ್ತಾ ನೀರು ಕಲುಷಿತವಾಗುತ್ತಿದೆ, ಜೊತೆಯಲ್ಲೇ ನಾವು ಬದುಕುತ್ತಿರುವ ಭೂಮಿಯೂ ಸಹ. ಇದರಿಂದ ಜಲಚರ ಜೀವರಾಶಿಗಳ ಮೇಲೆ ಮತ್ತು ಭೂಮಿಯ ಮೇಲೆ ಬದುಕುತ್ತಿರುವ ಜೀವಿಗಳ ಮೇಲೆ ಪ್ರಭಾವ ಬೀರಿ ಅವುಗಳು ತಮ್ಮ ಅವನತಿಯ ಹಾದಿಯನ್ನು ಹಿಡಿಯು ತ್ತಿವೆ ಹಾಗೂ ಬಹುಮುಖ್ಯವಾಗಿ ಇಂತಹ ತ್ಯಾಜ್ಯಯುಕ್ತ ನೀರನ್ನು ಕುಡಿಯುವುದರಿಂದ ಮಾನವರೂ ಅಲ್ಲದೆ, ಪ್ರಾಣಿ, ಪಕ್ಷಿಗಳೂ ಸಹ ಅನೇಕ ರೋಗಗಳಿಗೆ ಬಲಿಯಾಗುತ್ತಿವೆ.

ಸೌರಮಂಡಲದಲ್ಲೇ 5ನೇ ದೊಡ್ಡ ಗ್ರಹವಾದ ಭೂಮಿ ತನ್ನ ಒಡಲಿನಲ್ಲಿ ಅನೇಕ ನೈಸರ್ಗಿಕ ಗುಣಗಳನ್ನು ಹೊಂದಿದ್ದು, ಬ್ರಹ್ಮಾಂಡದಲ್ಲಿ ಜೀವ ಸಂಕುಲವನ್ನು ಹೊಂದಿ ರುವ ಏಕೈಕ ಗ್ರಹವಾಗಿದೆ. ಈ ಭೂಮಿಯ ಮೇಲೆ ಮಾನವನ ಸಂಖ್ಯೆ ಹೆಚ್ಚಾದಂತೆ ಹಲವು ಸಮಸ್ಯೆಗಳು ಎದುರಾಗಿವೆ. ಅದರಲ್ಲಿ ಮುಖ್ಯವಾಗಿ ಮಾನವ ಬಳಸಿದ ವಸ್ತುಗಳ ತ್ಯಾಜ್ಯದಿಂದ ಇಂದು ನೆಲ-ಜಲಗಳು ತಮ್ಮ ಅಂದವನ್ನು ಕಳೆದುಕೊಳ್ಳುತ್ತಿವೆ. ತ್ಯಾಜ್ಯಗಳ ವಿಲೇವಾರಿ ಮಾಡುವುದು ಹೆಚ್ಚು ಜನಸಂಖ್ಯೆ ಇರುವ ದೇಶಗಳಲ್ಲಿ ತುಂಬಾ ಕಷ್ಟಕರವಾಗಿದೆ. ಮನೆಯಿಂದ, ಕಾರ್ಖಾನೆಯಿಂದ, ಹೋಟೆಲ್‍ಗಳಿಂದ, ಉದ್ಯಾನವನಗಳಿಂದ, ಹೀಗೆ ಮಾನವ ಉಪಯೋಗಿಸಿ ಬಿಟ್ಟ ವಸ್ತುಗಳನ್ನು ರಸ್ತೆಯ ಅಕ್ಕ-ಪಕ್ಕ ಹಾಕಿ ಪರಿಸರವನ್ನು ಹಾಳುಗೆಡವಲಾಗುತ್ತಿದೆ. 

ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಪ್ರಸಿದ್ದವಾದ  ಬೆಣ್ಣೆನಗರಿ ದಾವಣಗೆರೆಯು 1997ರಲ್ಲಿ ಜಿಲ್ಲೆಯಾದ ನಂತರ ಶರವೇಗದಲ್ಲಿ ಬೆಳೆದು, ಇಂದು 5 ಲಕ್ಷಕ್ಕೂ ಹೆಚ್ಚಿನ ಜನವಾಸವೆನಿಸಿ ಬೃಹತ್ ನಗರವಾಗಿ ಬೆಳೆದುದೂ ಅಲ್ಲದೆ, ಕೇಂದ್ರ ಸರ್ಕಾರದಿಂದ  ಸ್ಮಾರ್ಟ್ ಸಿಟಿ ಅನುದಾನವನ್ನು ಪಡೆದಿದೆ. ನಮ್ಮ ದಾವಣಗೆರೆಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಕುಂದವಾಡ ಕೆರೆ, ಟಿವಿ ಸ್ಟೇಷನ್ ಕೆರೆಗಳ ನೀರಿನ ಮೇಲೆ ತೇಲುವ ತ್ಯಾಜ್ಯಗಳನ್ನು ಕಡೇ ಪಕ್ಷ ಎತ್ತಿ ದೂರ ಹಾಕುವುದರಿಂದಲಾದರೂ ನಾವು ನೀರಿನ ಅಶುದ್ಧತೆಯನ್ನು ತಪ್ಪಿಸಬಹುದು ಮತ್ತು ಸ್ಮಾರ್ಟ್‍ಸಿಟಿಯ ಬಾಹ್ಯ ಸೌಂದರ್ಯ ವನ್ನೂ ಸಹ ಹೆಚ್ಚಿಸಬಹುದು. 

ಅಂದವಾದ, ಸ್ವಚ್ಛವಾದ, ತಿಳಿನೀರಿನ ಕೊಳಗಳು ಮನಸ್ಸಿಗೆ ತಂದುಕೊಡುವ ಆಹ್ಲಾ ದತೆಯನ್ನು ಅನುಭ ವಿಸಿದವರೇ ಬಲ್ಲರು!  ದಾವಣಗೆರೆ ನಗರ ವ್ಯಾಪ್ತಿಯ ಜನರು ಬಿಸಾ ಕಿದ ಕಸವು ರಸ್ತೆಗಳ ಪಕ್ಕ, ಖಾಲಿ ಜಾಗದಲ್ಲಿ ಹಾಗೂ ಎಲ್ಲೆಂದರಲ್ಲಿ ಬಿದ್ದಿರುವುದನ್ನು ನಾವು ನೋಡುತ್ತೇವೆ. ಇದನ್ನು ಕಸಮುಕ್ತ ನಗರವ ನ್ನಾಗಿ ಮಾಡಲು ನಗರಸಭೆ ಹಾಗೂ ಪೌರ ಕಾರ್ಮಿಕರು ದಿನನಿತ್ಯ ಕಷ್ಟಪಡುತ್ತಿದ್ದಾರೆ. ನನ್ನ ಈ ತ್ಯಾಜ್ಯ ಸಂಗ್ರಹ ಯಂತ್ರ ನೀರಿನ ಮೇಲಿರುವ ತ್ಯಾಜ್ಯ ಸಂಗ್ರಹಣೆಯ ಜೊತೆಗೆ ನೆಲದ ಮೇಲಿರುವ ತ್ಯಾಜ್ಯಗಳನ್ನು ಸಂಗ್ರಹಿ ಸಲು ಸಹ ಸಹಾಯಕವಾಗುತ್ತದೆ. ತ್ಯಾಜ್ಯಗಳ ಸಂಗ್ರಹ ಯಂತ್ರ ನಮ್ಮ ಜಿಲ್ಲೆಗೆ ಮಾತ್ರವಲ್ಲದೆ ಎಲ್ಲಾ ನಗರಗಳ ಸ್ವಚ್ಛತೆಗೆ ಸಹಾಯಕ ವಾಗಬಹುದು ಎಂಬ ನಂಬಿಕೆ ನನ್ನದು. 

ಇತ್ತೀಚೆಗೆ ದಿನಾಂಕ 20.02.2021 ರಂದು ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ನಾನು ತ್ಯಾಜ್ಯಗಳ ಸಂಗ್ರಹ ಯಂತ್ರದ ಈ ಮಾದರಿಯನ್ನು ತಯಾರಿಸಿ, ಪ್ರದರ್ಶಿಸಿದ್ದು, ಈ ಮಾದರಿಯು ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.  

ಥರ್ಮಲ್ ಶೀಟ್, ಗೇರ್ ಮೋಟಾರ್, ವಾಟರ್ ಬಾಟಲ್ ಕ್ಯಾಪ್, ಸೊಳ್ಳೆ ಪರದೆಯ ಬಟ್ಟೆ, ಪೆನ್ ಹಾಗೂ ಬ್ಯಾಟರಿ ಈ ವಸ್ತುಗಳ ವ್ಯವಸ್ಥಿತ ಜೋಡಣೆಯಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಯಂತ್ರವನ್ನು ನಾನು ತಯಾರಿಸಿದ್ದೇನೆ. ಈ ಯಂತ್ರ ನೀರಿನ ಮೇಲೆ ತೇಲುವ ತ್ಯಾಜ್ಯದ ವಸ್ತುಗಳನ್ನು ಬಾಚಿಕೊಂಡು, ಸೋಸಿ, ಅವುಗಳನ್ನು ಒಂದೆಡೆ ಸಂಗ್ರಹಿಸಿ ಹಾಕುತ್ತದೆ. ಇದರಲ್ಲಿ ದೋಣಿಯಂತಹ ಸ್ವಯಂ ಚಾಲಿತ ಯಂತ್ರವಿದ್ದು, ಇದರ ಮುಂಭಾಗದಲ್ಲಿ ತಿರುಗುತ್ತಿರುವ ಅಗಲವಾದ ಪಟ್ಟಿ ಇರುತ್ತದೆ. ಈ ಪಟ್ಟಿಯು ತೇಲುವ ವಸ್ತುಗಳನ್ನು ಬಾಚಿಕೊಂಡು, ತನ್ನೊಳಗೆ ಸೆಳೆದುಕೊಂಡು ಒಂದು ಕಡೆ ಸಂಗ್ರಹ ಮಾಡುತ್ತದೆ. ಕೇವಲ ನೀರು ಮಾತ್ರವಲ್ಲ ನೆಲದ ಮೇಲಿರುವ ಕಸವನ್ನು ಸಹ ಇದು ತನ್ನ ನಾಲಿಗೆಯಂತಹ ಪಟ್ಟಿಯಲ್ಲಿ ಬಾಚಿಕೊಂಡು ಒಂದು ಕಡೆ ಶೇಖರಿಸಿ ತ್ಯಾಜ್ಯವನ್ನು ಸಂಗ್ರಹ ಮಾಡುತ್ತದೆ. 

ಯಂತ್ರದ ಉಪಯೋಗ:   ಇದು ನೀರು ಹಾಗೂ ನೆಲದ ಮೇಲೆ ಬಿದ್ದಿರುವ ತ್ಯಾಜ್ಯಗಳನ್ನು ಆಯ್ದುಕೊಂಡು ಅವುಗಳ ಮೇಲ್ಮೈಯನ್ನು ಸ್ವಚ್ಚ ಮಾಡುತ್ತದೆ, ತನ್ಮೂಲಕ ನೀರಿನಿಂದ ಹಾಗೂ ನೆಲದ ಮಾಲಿನ್ಯದಿಂದ ಬರುವ ರೋಗಗಳನ್ನು ತಡೆಯುತ್ತದೆ.  ಜಲಚರ ಜೀವಿಗಳ ರಕ್ಷಣೆ ಮಾಡುತ್ತದೆ, ನೀರನ್ನು ತ್ಯಾಜ್ಯ ಮುಕ್ತ ಮಾಡಿ ಅದರ ಅಂದವನ್ನು/ಆರೋಗ್ಯವನ್ನು ಹೆಚ್ಚಿಸುತ್ತದೆ. ನೆಲವನ್ನು ಕಸಮುಕ್ತ ಮಾಡುತ್ತದೆ ಹಾಗೂ ಪರಿಸರದ ಶುಚಿತ್ವವನ್ನು ಕಾಪಾಡುತ್ತದೆ. 

ಸುಲಭವಾದ ತಯಾರಿಕಾ ವಿಧಾನ:  ತ್ಯಾಜ್ಯಗಳ ಸಂಗ್ರಹಣಾ ಯಂತ್ರವು ಸರಳ ಮತ್ತು ಸುಲಭವಾಗಿ ತಯಾರು ಮಾಡಬ ಹುದಾದ ಕಡಿಮೆ ವೆಚ್ಚದ ತಂತ್ರಜ್ಞಾನವಾಗಿದೆ. ಗ್ರಾಮೀಣ ಪ್ರದೇಶದ ಯುವಕರೇ ತಮ್ಮ ತಮ್ಮಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ ಇಂತಹ ಒಂದು ಯಂತ್ರವನ್ನು ಸರಳವಾಗಿ ವಿನ್ಯಾಸ ಮಾಡಬಹುದಾಗಿದೆ.  ನಾನು ಮಾಡಿದ ಯಂತ್ರವು ಬಹಳ ಪ್ರಾಥಮಿಕ ಮಟ್ಟದಲ್ಲಿದ್ದು, ಇದನ್ನು ಬೇಕಾದ ಹಾಗೆ ಮಾರ್ಪಾಡು ಮಾಡಿಕೊಳ್ಳಬಹುದಾಗಿದೆ. 

ಈ ಯಂತ್ರದ ತಯಾರಿಕೆಯನ್ನು ತಜ್ಞರ ಸಲಹೆಯೊಂದಿಗೆ ಉನ್ನತ ತಂತ್ರಜ್ಞಾವನ್ನು ಬಳಸಿ, ಉನ್ನತೀಕರಿಸಿ, ದೊಡ್ಡಮಟ್ಟದಲ್ಲಿ ಉತ್ಪಾದಿಸಿ, ಸರ್ಕಾರವಾಗಲೀ, ಮಾಲಿನ್ಯ ನಿಯಂತ್ರಣ ಮಂಡಳಿಯವರಾಗಲೀ ಅಥವಾ ನಗರಸಭೆಯವರೇ ಮನಸ್ಸು ಮಾಡಿದರೆ, ಸ್ಥಳೀಯ ತಂತ್ರಜ್ಞರನ್ನು ಬಳಸಿಕೊಂಡು ಈ ಯಂತ್ರವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿದ್ಧಗೊಳಿಸಬಹುದು. ಇದರಿಂದ ಕೆರೆಕಟ್ಟೆ, ಕಾಲುವೆ ನದಿಗಳು, ನಗರಗಳು ಮತ್ತು ಭೂಮಿಯನ್ನು ಸ್ವಚ್ಛ ಮಾಡುವ ಮೂಲಕ ಜಲಮಾಲಿನ್ಯ ಮತ್ತು ಭೂ ಮಾಲಿನ್ಯವನ್ನು ತಡೆಯುವಲ್ಲಿ ದೇಶಕ್ಕೇ ಮಾದರಿಯಾಗ ಬಹುದು.


ಸ್ಮಾರ್ಟ್ ಸಿಟಿಗಳಿಗಾಗಿ ಸ್ಮಾರ್ಟ್ ಪರಿಹಾರ - Janathavaniದರ್ಶನ್ ಬಿ. ಎಸ್
ಪ್ರಥಮ ಪಿ ಯು ಸಿ
ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು
ದಾವಣಗೆರೆ.
[email protected]

 

error: Content is protected !!