ಚಂದವಿರುವುದನ್ನು ಚಂದ ಎಂದು ಹೇಳುವಲ್ಲಿನ ಸೊಗಸು…

ಮೊನ್ನೆ ನಾನು ಮತ್ತು ಗೆಳತಿ ಇನ್ನೊಬ್ಬ  ಗೆಳತಿಯ ಮನೆಗೆ ಹೋಗಿದ್ದೆವು. ಅವರೇನು ನನಗೆ ಆಪ್ತರಲ್ಲ. ನನ್ನ ಗೆಳತಿಗೆ ಆಪ್ತ ಗೆಳತಿ. ಅವರ ಮಗನ ಹುಟ್ಟು ಹಬ್ಬಕ್ಕೆ ಆಹ್ವಾನಿಸಿದ್ದರು. ಅದರ ನಿಮಿತ್ತ ನಮಗೆ ಕೇಕು, ಖಾರ, ಬಿಸ್ಕತ್ತು ನೀಡಿದರು. ಕೇಕು  ತುಂಬಾ ಚೆನ್ನಾಗಿದೆ ಮೇಡಂ ಅಂದೆ.. ಅವರ ಮುಖ ಹೂವಿನಂತೆ ಅರಳಿತು. ಇನ್ನೊಂದು ತುಂಡು  ನೀಡಲು ಬಂದರು. ನಗುಮೊಗದಿಂದಲೇ  ನಿರಾಕರಿಸಿದೆ. ದಾರಿಯಲ್ಲಿ ಬರುವಾಗ ನೀನು ಎಲ್ಲಾನೂ  ಚೆನ್ನಾಗಿದೆ ಅಂತೀಯಾ… ಅದೇನ್ ಚೆನಾಗಿತ್ತು?? ನನಗಂತೂ ಅದರ ಫ್ಲೇವರ್ ಸ್ವಲ್ಪವೂ ಹಿಡಿಸಲಿಲ್ಲ ಅಂದರು ನನ್ನ ಗೆಳತಿ. ಹೌದಾ…  ನನಗಂತೂ ತುಂಬಾ ರುಚಿಯಾಗಿತ್ತು, ನಾನು ಹಾಗೆ  ಹೇಳಿದ ಕೂಡಲೇ ಅವರ ಮುಖದಲ್ಲಿ ಖುಷಿ ನೋಡಿದ್ರ?? ಎಷ್ಟು ಅಗಲವಾಗಿ ಅರಳಿ  ಬಿಟ್ಟಿತು  ಅವರ ಮುಖ.. ಅಂದೆ. ನನ್ನ ಮಾತು ಕೇಳಿ ನಿಮ್ಮದೇ ಒಂತರ…. ಅಂತ ಮುಖ ಸಿಂಡರಿಸಿಕೊಂಡರು. ಆದರೆ ನಿಜಕ್ಕೂ ಕೇಕು ರುಚಿಯಾಗಿತ್ತು.

ವಸ್ತುವೊಂದೇ.. ಭಾವಿಸಿದ ರೀತಿ ಬೇರೆ ಬೇರೆ. ಚಂದ ಎಂಬುದು ನಿಜಕ್ಕೂ ವಸ್ತುವಿನದೋ  ಅಥವಾ ನೋಡುವ ಕಣ್ಣಿನದೋ??  Beauty lies   in the eyes of the be holder ಎಂದು Keats  ಹೇಳಿರುವುದು ಸತ್ಯವೆನಿಸುತ್ತದೆ. ನೋಡುವ ದೃಷ್ಟಿಯಲ್ಲಿ ದೋಷವಿದ್ದರೆ ತಾಜ್‌ಮಹಲ್‌ ಕೂಡ ಯಕಶ್ಚಿತ್ ಸುಣ್ಣದ ಕಟ್ಟಡವಾಗಿ ಕಾಣಬಹುದು. ಸ್ವಿಟ್ಜರ್ಲ್ಯಾಂಡ್  ಕೂಡ ನಮ್ಮ ಪಕ್ಕದ ಏರಿಯಾದ  ಪಾರ್ಕಿಗಿಂತ ಹೆಚ್ಚೇನು  ಸುಂದರ ಆಗಿರಲಾರದು..

ಚಂದ ಆಗಿರುವುದನ್ನು ಚಂದ  ಎಂದು ಹೇಳುವಲ್ಲಿ ಒಂದು ಸೊಗಸಿದೆ. ಅದು ಆರೋಗ್ಯಕರ ಮನಸಿನ ಲಕ್ಷಣವೂ ಹೌದು. ನಮ್ಮ ಜೊತೆ ನಿತ್ಯ ಕೆಲಸಮಾಡುವವರ, ನಮ್ಮೊಡನೆ ನಿತ್ಯ ಬಸ್ಸಲ್ಲಿ ಸಂಚರಿಸುವವರಿಗೆ  ಇಂಥದ್ದೊಂದು ಆರೋಗ್ಯಯುತ ಕಾಂಪ್ಲಿಮೆಂಟ್ ಕೊಟ್ಟು ನೋಡಿ.. ಮೇಡಂ ನಿಮ್ಮ ಸೀರೆಯ ಬಣ್ಣ ಚೆನ್ನಾಗಿದೆ, ಎಲ್ಲಿ ತಗೊಂಡಿರಿ, ಇವತ್ತು ಏನೋ  ವಿಶೇಷವಾಗಿ ಕಾಣ್ತಿದ್ದೀರಿ,  ಏನ್  ಸರ್ ಇಷ್ಟು ಖುಷಿಯಾಗಿ ಇದ್ದೀರಿ, ಸರ್ ಇವತ್ತೇನು ಸ್ಪೆಷಲ್ ಆಗಿ ಕಾಣುತ್ತೀರಿ, ಏನ್  ಫ್ಯಾಬ್ರಿಕ್.. ಸಖತ್ತಾಗಿದೆ ಸರ್, ಏನ್ ಟೇಸ್ಟ್ ಸರ್ ನಿಮ್ದು… ಹೀಗೆ.

ನಮ್ಮ ಬೀದಿಯ ಕಸ ಕೊಂಡೊಯ್ಯಲು ಬರುವ  ಆಟೋ ಚಾಲಕನಿಗೆ ಹೇಳಿದೆ.. ಏನ್ ಟೇಸ್ಟ್ ಸರ್.. ಎಂಥ ಸೆಲೆಕ್ಟೆಡ್ ಸಾಂಗ್ಸ್ ಹಾಕ್ತೀರಿ?? ನಮ್ ಮೂಡ್ ಎಲ್ಲಾ ಫ್ರೆಶ್ ಆಗ್ಬಿಡುತ್ತೆ ನೀವು ಹಾಕುವ ಹಾಡು ಕೇಳಿ  ಅಂದೆ… ಅವರ ಮುಖದಲ್ಲಿ ಮೂಡಿದ ಖುಷಿ ನೋಡ್ಬೇಕಿತ್ತು. ನಾನೊಂದಿಷ್ಟು ಹಾಡು ಆಯ್ಕೆಮಾಡಿಕೊಡುವೆ  ಅವನ್ನೂ  ಹಾಕಿ ಅಂದೆ.. ಖಂಡಿತ ಮೇಡಂ ಕೊಡಿ ಅಂದ್ರು. ಕಸ ಹಾಕೋದು ಇರ್ಲಿ, ಬಿಡ್ಲಿ ಅವರು ಆಟೋ ನಿಲ್ಲಿಸಿ ನಿಂತಾಗ ಒಂದು ಮುಗುಳ್ನಗೆ ಬೀರಿದರೂ ಸಾಕು. ಅದೇ ಅವರಿಗೆ ಒಂದು ಕಾಂಪ್ಲಿಮೆಂಟ್ ನೀಡಿದಂತೆ..

ಸುಖಾಸುಮ್ಮನೆ ಎಲ್ಲವನ್ನೂ  ಚಂದ ಚಂದ ಎಂದರೆ ಇವರಿಗೆಲ್ಲೋ  ತಿಕ್ಕಲು ಎಂದಾರು. ಚಂದವಿಲ್ಲ ಅನಿಸಿದಾಗ ಏನು ಹೇಳದೆ ಸುಮ್ಮನಿದ್ದರೆ ಆಯ್ತು. ಕೆಲವರಿಗೆ ಅದೊಂದು ಅಭ್ಯಾಸ. ಮುಖಕ್ಕೆ ರಾಚುವಂತೆ ಹೇಳುವುದು.. ಅಯ್ಯೋ    ಸೀರೆ design ಒಂಚೂರು ಚೆನ್ನಾಗಿಲ್ಲ..

ಇದೇನ್ ಬಣ್ಣ… ನಿಂಗಂತೂ ಸೂಟ್ ಆಗ್ತಿಲ್ಲ ಬಿಡು..  ಏನ್ ಕ್ವಾಲಿಟಿ ಅಂತ ತಗೊಂಡ್ರಿ ಸರ್, road  side ತಗೊಂಡಗಿದೆ.. ನಿಮ್ದು  ಒಂದು ಟೇಸ್ಟಾ… ಅಯ್ಯೋ ಇಂಥದ್ದು ತರೋಕೆ ಅಲ್ಲಿಗೊಗ್ಬೇಕಿತ್ತಾ… ಹೀಗೆ.. ಒಬ್ಬರಂತೂ  ನನ್ನ ಕಣ್ಣೆದುರಿಗೆ ನನ್ನ ಗೆಳತಿಯ ಕಣ್ಣಲ್ಲಿ ನೀರು ತುಂಬಿ ಕೊಳ್ಳುವಂತಹ ಕಾಮೆಂಟನ್ನು ಕೊಟ್ಟುಬಿಟ್ಟರು….ಇಂಥವರು ನಾವು ನೇರವಾದಿಗಳು, ನಿಷ್ಠುರವಾದಿಗಳು ಎಂದು ಸಮರ್ಥಿಸಿಕೊಳ್ಳುವುದೂ  ಇದೆ. ಆದರೆ ಹೇಳಿದ ಸತ್ಯದಿಂದ ಅಥವಾ ಹೇಳುವ ಸತ್ಯದಿಂದ ನಮಗೋ  ಎದುರಿಗಿದ್ದವರಿಗೋ  ಅಥವಾ ಸಮಾಜಕ್ಕೋ  ಆಗುವ ಲಾಭವೇನು? ನಷ್ಟವೇನು? ಎಂದು ಯೋಚಿಸಬೇಕಿದೆ. ಜೊತೆಯಲ್ಲಿದ್ದವನ ಕಾನ್ಫಿಡೆನ್ಸ್ ಹಾಳುಮಾಡುವ ಕಾಮೆಂಟ್  ಕೊಟ್ಟು ನಿಷ್ಠುರವಾದಿ ಪಟ್ಟ ಕಟ್ಟಿಕೊಳ್ಳುವ ಔಚಿತ್ಯ  ನಮಗಿರುವುದೇ … ಒಂದು ಒಳ್ಳೆಯ ಅಭಿನಂದನೆ ಅವರ ವಿಶ್ವಾಸ ಹೆಚ್ಚಿಸುತ್ತದೆ, ದಿನವಿಡೀ  ಲವಲವಿಕೆಯಿಂದ ಕೆಲಸ ಮಾಡಲು ಉತ್ಸಾಹ ನೀಡುತ್ತದೆ ಅಲ್ಲವೇ..?

ಮನೆಯಲ್ಲಾದರೂ ಹಾಗೆಯೇ.. ಗಂಡ-ಹೆಂಡತಿಗೆ, ಹೆಂಡತಿ ಗಂಡನಿಗೆ, ಇಬ್ಬರೂ  ತಮ್ಮ ಮಕ್ಕಳಿಗೆ, ಮಕ್ಕಳು ತಂದೆ ತಾಯಿಗೆ, ಮನೆಯಲ್ಲಿ ನಮ್ಮೊಡನಿರುವ ಅಜ್ಜಿ ತಾತನಿಗೆ ಮಾಡಿದ, ಕೊಡಿಸಿದ ತಿಂಡಿ ರುಚಿಯಾಗಿದೆ… ಒಂದು ವಾರ ಈ ರುಚಿನ ಮರೆಯೋಕಾಗಲ್ಲ.. ಇಂತಹ ರುಚಿ ಎಲ್ಲೂ  ಸಿಗಲ್ಲ, ನಮ್ಮಮ್ಮ  ಹಾಕೋ  ಉಪ್ಪಿನಕಾಯಿ  ತರ ಯಾರೂ  ಹಾಕಲ್ಲ.  ನನ್ನ ಅಕ್ಕ ಮಾಡುವ  ಕಡುಬಿನ ರುಚಿಯೇ ಬೇರೆ… ಅಪ್ಪಾ ನಿನ್ ಹೇರ್ ಸ್ಟೈಲ್  ನಿಂಗೆ ಎಷ್ಟು ಒಪ್ಪುತ್ತೆ ಗೊತ್ತಾ…? ನನ್ ತಮ್ಮ ನನಗಿಂತ handsome… ನನ್ ತಂಗಿ ಟೈಮ್ pick up ಮಾಡೋ ಹಾಗೇ ಯಾರೂ ಮಾಡಲ್ಲ.. ಹೀಗೆ ಪರಸ್ಪರ compliment ಕೊಟ್ಟುಕೊಳ್ಳುವುದು ಬದುಕಿನ ಇನ್ನೊಂದು ಮಗ್ಗುಲಿನ ಸೌಂದರ್ಯ..

ಇದಕ್ಕೇನು ಕಾಸು ಖರ್ಚಾಯಿತೇ..?  ಶ್ರಮ ಬೇಕೇ? ಅಥವಾ ಸಮಯ ಹೋಗುತ್ಯೆ?? ಇಲ್ಲವಲ್ಲ.. ಆದರೆ ಇದು ಸಂಬಂಧವನ್ನು ಮತ್ತಷ್ಟು ನವಿರಾಗಿಸುತ್ತೆ.. ಬಾಂಧವ್ಯವನ್ನು ಗಟ್ಟಿಗೊಳಿಸುತ್ತೆ. ನಾವು ಎಂದಾದರೂ ಸಿಟ್ಟಿನಲ್ಲಿ ಮಾಡಿಬಿಡುವ ಅವಾಂತರಗಳ ಕಲೆಗಳನ್ನು  ತೊಳೆದುಕೊಳ್ಳುವ ರಹಸ್ಯವೂ ಹೌದು! ಮಾಡುವ ಕೆಲಸದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ನೀಡುವ ವಸ್ತು ಮತ್ತು ಸೇವೆಯ ಗುಣಮಟ್ಟ ಹೆಚ್ಚಿಸುತ್ತದೆ.

ಇದು ಕೇವಲ ಮನೆ ಮತ್ತು ಕೆಲಸ ಮಾಡುವ ಜಾಗಕಷ್ಟೇ  ಸೀಮಿತವಾಗಿರಬಾರದು. ಹೋಟೆಲಿಗೆ ಹೋದಾಗ ನೀರು ತಂದಿಡುವ   ಹುಡುಗ, ಊಟವಾದ ಮೇಲೆ ಟೇಬಲ್ clean ಮಾಡಲು ಬರುವ ಅಜ್ಜ,  ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಜೆಂಟಲ್ ಮ್ಯಾನ್, ಕ್ಷಣ  ನಿಂತು ಪೇಪರ್ ಎಸೆದು ಬರನೇ ಸೈಕಲ್ನಲ್ಲಿ ಹೋಗಿಬಿಡುವ ಪುಟ್ಟು ಬಾರವ್ವ ಮಾರು 30 ಎಂದು ಹೂ ಅಳೆದು ಕೊಡುವ ಆಂಟಿ,  ತರಕಾರಿ ತೂಗಿ ಕೊಡುವ ತಾಯಂದಿರು, ಬಸ್ ಸ್ಟಾಂಡ್ ಶೌಚಾಲಯದಲ್ಲಿ ಐದು ರೂಪಾಯಿ ಇಸ್ಕೊಂಡು ಒಳ ಬಿಡುವ ಎಲೆ ಅಡಿಕೆ ಜಗಿಯುತ್ತಾ ಕೂತಿರುವ ಕಾಳಮ್ಮ, ಸಮಯಕ್ಕೆ ಸರಿಯಾಗಿ ಕೆಲಸದ ಊರಿಗೆ ತಂದು ಬಿಡುವ ಡ್ರೈವರ್, ಎಷ್ಟೇ ರಶ್  ಇದ್ದರೂ ಚಿಲ್ಲರೆ  ಸರಿಯಾಗಿ ಹಿಂದಿರುಗಿಸುವ ಕಂಡಕ್ಟರ್, ನಮ್ಮ ಕಚೇರಿ ಗುಡಿಸಲು ಬರುವ ರತ್ನಮ್ಮ, ಕರಾರುವಕ್ಕಾಗಿ ಸಂಬಳದ ಬಿಲ್ಲು ತೆಗೆಯುವ ನಮ್ಮ ಕ್ಲರ್ಕ್ ರಫಿಕ್… ಎಲ್ಲರೂ ಅಭಿನಂದನಾರ್ಹರೇ..

ಅಭಿನಂದನೆಯು ವಸುದೈವ ಕುಟುಂಬಕಮ್ ಪರಿಕಲ್ಪನೆಯ ಗುಡಿ ಸೇರುವ ಒಂದು ಮೆಟ್ಟಿಲು ಎಂದು ಭಾವಿಸಬಹುದು. ಆದರೆ  ಅಭಿನಂದನೆಯ ಮುಖಸ್ತುತಿ ಆಗದಿರಲಿ. ಕೆಲಸ ಮಾಡಿಸಿಕೊಳ್ಳಲು ಕೊಡುವ ಲಂಚ ವಾಗದಿರಲಿ. ಮುಂದೆ  ಅಭಿನಂದಿಸಿ ಪಕ್ಕದವರ ಕೈ ಚಿವುಟಿ  ಮಜಾ ತೆಗೆದುಕೊಳ್ಳುವ ನಾಟಕವಾಗದಿರಲಿ.. ಬದಲಿಗೆ ಬೆಳಕಿನ ಹಾಡಿಗೆ ಕಣ್ರೆಪ್ಪೆ  ತೆರೆಯುವ ಹೂಗಳಂತೆ, ಕೊಂಬೆ ಮೇಲಿಂದ ರೆಪ್ಪೆ ಬಡಿದು ಪುರನೆ ಹಾರುವ ಗುಬ್ಬಿಯಂತೆ ಮಳೆ ಬಿಸಿಲು ಕೂಡುವ ಸಮಯ ನೋಡಿಕೊಂಡು ಮೆಲ್ಲಗೆ ಮೂಡುವ ಕಾಮನಬಿಲ್ಲಿನಂತೆ….ಸಹಜವಾಗಿರಲಿ.

ಚಂದವಾಗಿರುವುದನ್ನು ಚಂದವೆಂದು ಹೇಳುವುದು ಎಷ್ಟು  ಸೊಗಸೆಂದು ಆಗ ಅರಿವಾಗುವುದು.. ಈ ಸಮಯಕ್ಕೆ ಷೇಕ್ಸ್  ಪಿಯರ್ ಕರುಣೆ ಬಗ್ಗೆ ಹೇಳಿದ  ಮಾತೊಂದು ನೆನಪಾಗುತ್ತಿದೆ.. Mercy.. It is twice blest : It blesseth him that gives, and him that takes… ಹಾಗೆಯೇ.. Compliment blesseth him that gives and him that takes….


ಚಂದವಿರುವುದನ್ನು ಚಂದ ಎಂದು ಹೇಳುವಲ್ಲಿನ ಸೊಗಸು... - Janathavani

ಮಮತಾ ಪ್ರಭು 
ಹಾಸನ.
[email protected]

error: Content is protected !!