ಕೊರೊನಾ ಭೀಕರತೆ ನೋಡಿದರೆ ನಮ್ಮ ಭಾರತದಲ್ಲಿ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು ಅನ್ನಿಸುತ್ತಿದೆ… ಅಬ್ಬಬ್ಬಾ !! ಎಷ್ಟೊಂದು ಮರಣಗಳು!! ಮರಣ ಹೊಂದಿದ ಜೀವಗಳ ವಿಲೇವಾರಿಯೂ ಸಾಧ್ಯವಿಲ್ಲದ ಭೀಕರ ದುರಂತ …. !
ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕಳೆದ ವರುಷದ ಇಟಲಿ ಈ ವರ್ಷ ಭಾರತದಲ್ಲೇ ಎದುರಾಗುತ್ತದೆ. ರಸ್ತೆಯಲ್ಲೇ ಹೆಣಗಳ ರಾಶಿ ಬೀಳುತ್ತದೆ !
ಉಸಿರಾಡಲು ಆಮ್ಲಜನಕ ಇಲ್ಲದೇ ಒದ್ದಾಡುವ ಆ ನರಕ ದರ್ಶನ, ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ ನರಳಾಟ, ಸತ್ತ ಹೆಣಕ್ಕೆ ಮಣ್ಣು ಮಾಡೋ ಸಂಬಂಧಿಗಳೂ ಇಲ್ಲದ ಮರಣ !! ಕೊರೊನಾ. ಯಾಕಿಷ್ಟು ಭೀಕರವಾದೆ ? ಪ್ರಪಂಚದ ಜೀವಿಗಳಲ್ಲಿ ನಿನಗೇಕೆ ದ್ವೇಷ ??? ನಮ್ಮನ್ನು ನಮ್ಮ ಪಾಡಿಗೆ ಬಿಡು ಎಂದು ಹಲುಬುವಂತಾಗಿದೆ.
ಯೋಚಿಸಿದರೆ ತಪ್ಪು ನಮ್ಮದೇ.. ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ಕಳೆದ ವರುಷವೇ ಕೊರೊನಾ ನಮಗೆ ಬದುಕುವ ಪಾಠ ಕಲಿಸಿತ್ತು.
ನಾವು ಅದನ್ನು ಪಾಲಿಸಿದೆವು ಕೂಡ. ಆದರೇನು ? ಕೊರೊನಾ ಬಿಗಿ ಹಿಡಿತ ಸಡಿಲವಾದಂತೆ ಮತ್ತದೇ ಹಿಂದಿನ ಧಾಟಿಗೆ ಮರಳಿದೆವು.. ಅದರ ಕಡೆಗಣನೆಗೆ ಈಗ ಫಲವುಣ್ಣುತ್ತಿದ್ದೇವೆ… ಕೊರೊನಾ ಕಲಿಸಿದ ಬದುಕಿನ ಪಾಠ ಕೇವಲ ಒಂದು ವರುಷಕ್ಕೆ ಅಷ್ಟೇ ಅಲ್ಲ, ಬದುಕುಳಿಯೋವರೆಗೂ ಅಂತ ಮತ್ತೆ ಮತ್ತೆ ನೆನಪಿಸುತ್ತಿದೆ. ಮನುಜನ ಅಹಂಗೆ ಮತ್ತೆ ಮತ್ತೆ ಹೊಡೆತ ನೀಡುತ್ತಿದೆ. ಭುವಿಯ ಮೇಲಣ ಮನುಜನ ಆಟಕ್ಕೊಂದು ಕೊನೆಯಿರಲೇಬೇಕು ಎಂಬ ಸ್ಪಷ್ಟ ಸಂದೇಶ ಸಾರುತ್ತಿದೆ. ಅರ್ಥ ಮಾಡಿಕೊಳ್ಳುವುದು ಬಹಳ ಅವಶ್ಯಕ. ಸೂಕ್ಷ್ಮಾತಿಸೂಕ್ಷ್ಮ ವೈರಾಣು ಇಂದು ನಮ್ಮನ್ನು ಹೈರಾಣಾಗಿಸಿದೆ. ಸಾವಿನ ಮಾರಣ ಹೋಮಗಳು ಕಣ್ಣ ಮುಂದೆ ಕಾರಣ ನೀಡಿ ನಗುತ್ತಿವೆ.
ಹೇ ಮನುಜಾ! ತಾನು ತನ್ನದು ಎಂದು ಮೆರೆದಾಡದಿರು, ಆ ದೇವನ ಮುಂದೆ, ಅವನಾಡುವ ಆಟದ ಮುಂದೆ ಮಿಕ್ಕೆಲ್ಲವೂ ಗೌಣ. ಇನ್ನಾದರೂ ಇದನ್ನು ಅರಿತು ನಡೆಯೋಣ, ಕಾಣದ ಶಕ್ತಿಗೆ ತಲೆಬಾಗಿ ಮೊರೆಯಿಡೋಣ.
ಭೂಮಾತೆಯ ಸ್ವಚ್ಛತೆಗೆ ಮುನ್ನುಡಿ ಬರೆದು, ಒತ್ತಡದ ಬದುಕಿಗೆ ಬೀಗ ಜಡಿದು, ಅಂತರದ ಮಂತ್ರದ ಸೂತ್ರ ಬರೆದು ಜಾಗೃತರಾಗಬೇಕು, ಎಲ್ಲರನ್ನೂ ಜಾಗೃತಗೊಳಿಸಬೇಕು. ಆ ಮೂಲಕ ಕೊರೊನಾ ಮೆಟ್ಟಿ ಗೆಲ್ಲಬೇಕು. ಗೆದ್ದರೂ ಬೀಗದೇ ಅದು ಕಲಿಸಿದ ಬದುಕಿನ ಪಾಠ ವನ್ನು ಅನುಸರಿಸಬೇಕು. ಬುದ್ಧಿ ಹೀನರಾಗದೇ ಬುದ್ದಿ ಜೀವಿಗಳಾಗೋಣ. ವಿವೇಚಿಸಿ ಹೆಜ್ಜೆ ಮುಂದಿಡೋಣ.ಕಾಣದ ಕ್ರಿಮಿಯನ್ನು ಹೊಡೆದೋಡಿಸೋಣ.
ಮಂಜುಳಾ ಪ್ರಸಾದ್
ಸಹ ಶಿಕ್ಷಕಿ, ಕೆಪಿಎಸ್, ತ್ಯಾವಣಿಗೆ
9743377517