ಪ್ರತಿಯೊಬ್ಬ ಮನುಷ್ಯನ ಬದುಕು ಪಂಚಮಹಾಭೂತಗಳಲ್ಲಿ ಒಂದಾದ ಭೂಮಿಯೊಂದಿಗೆ ಬೆಸೆದುಕೊಂಡಿದೆ.
ಭೂಮಿಯಿಲ್ಲದೆ ಬದುಕಿಲ್ಲ ಎಂಬುದನ್ನು ಒಪ್ಪುವುದಾದರೆ ಕನಿಷ್ಠ ಪಕ್ಷ ನಮ್ಮ ಉಳಿವಿಗಾದರೂ ನಾವು ಭೂಮಿಯನ್ನು ಉಳಿಸಲೇಬೇಕಾಗುತ್ತದೆ…!
ಪ್ರತಿ ವ್ಯಕ್ತಿ, ವಸ್ತು, ಪ್ರಾಣಿಗೆ ತನ್ನದೇ ಆದ ವಿಶೇಷ ದಿನವಿರುವಂತೆ, ಕೋಟ್ಯಾನುಕೋಟಿ ಜೀವ ರಾಶಿಗಳಿಗೆ ಜನ್ಮ ಮತ್ತು ಆಶ್ರಯ ನೀಡಿರುವ ಮಾತೃ ಹಾಗೂ ದೈವ ಸ್ವರೂಪಿಯಾದ ಭೂಮಿಗೂ ಒಂದು ವಿಶೇಷ ದಿನವಿದೆ, ಅದುವೇ ಏಪ್ರಿಲ್-22. ಪರಿಸರದ ಕುರಿತು ಜಾಗೃತಿ ಮತ್ತು ಅದರ ಸಂರಕ್ಷಣೆಯ ದೃಷ್ಟಿಯಿಂದ ಪ್ರತಿ ವರ್ಷ ಏಪ್ರಿಲ್-22 ರಂದು ವಿಶ್ವಮಟ್ಟದಲ್ಲಿ ಭೂ ದಿನವನ್ನು ಆಚರಿಸಲಾಗುತ್ತಿದೆ. ಏಪ್ರಿಲ್ -22, 1970 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸುವ ಪರಿಪಾಠ ಜಾರಿಗೆ ಬಂದಿತು. ಇದೀಗ ವಿಶ್ವದ 192ಕ್ಕೂ ಅಧಿಕ ರಾಷ್ಟ್ರಗಳು ಭೂ ದಿನವನ್ನು ಆಚರಿಸುತ್ತಿವೆ.
ಸುಸ್ಥಿರ ಮತ್ತು ಆರೋಗ್ಯಕರ ವಾತಾವರಣದಲ್ಲಿ ಕೆಲಸ ಮಾಡುವುದು, ಪರಿಸರದ ಮೇಲೆ ಉಂಟಾಗುವ ಹಾನಿಕಾರಕ ಅಂಶಗಳ ಬಗ್ಗೆ ಅರಿವು ಮೂಡಿಸುವುದು, ಮರು ಬಳಕೆ ಮಾಡಬಹುದಾದ ಕೆಲವು ವಸ್ತುಗಳನ್ನು ವ್ಯರ್ಥ ಮಾಡದೆ ಸದ್ಭಳಕೆ ಮಾಡಿಕೊಳ್ಳುವುದು ಈ ದಿನದ ಆಚರಣೆಯ ಉದ್ದೇಶ.
ಭೂಮಿಯು ಸುಂದರವಾದ ವಧುವಿನಂತೆ, ಅವಳ ಸುಂದರತೆಯನ್ನು ಹೆಚ್ಚಿಸಲು ಮಾನವ ನಿರ್ಮಿತ ಆಭರಣಗಳ ಅಗತ್ಯವಿಲ್ಲ. ಈ ಭೂಮಿಯನ್ನು ಪ್ರೀತಿಸಿ. ಭೂಮಿ ಇರುವುದು ನಿಮಗೆ ಮಾತ್ರವಲ್ಲ, ನಿಮ್ಮ ಮಕ್ಕಳಿಗೂ ಇದೆ ಎಂಬ ವಾಸ್ತವ ಸತ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ಇದರ ಆಚರಣೆಯ ವಿಶೇಷತೆ.
ಈ ವರ್ಷದ ಭೂ ದಿನದ ಮುಖ್ಯಉದ್ದೇಶ `ನಮ್ಮ ಭೂಮಿಯನ್ನು ಪುನಃಸ್ಥಾಪಿಸುವುದು (restore our earth). ಜನರು ವರ್ಷದಲ್ಲಿ ಭೂ ದಿನದಂದು ಮಾತ್ರ ಅದರ ಬಗ್ಗೆ ಕಾಳಜಿ ವಹಿಸಿ ಮಿಕ್ಕೆಲ್ಲಾ ದಿನಗಳಲ್ಲಿ ನಿರ್ಲಕ್ಷಿಸುವವರೇ ಹೆಚ್ಚು. ಭೂಮಿಯನ್ನು ಹೆತ್ತ ತಾಯಿಗೆ ಹೋಲಿಸುವರು. ಭೂಮಿ ನಮಗೆ ಜೀವ ಉಳಿಸಿಕೊಳ್ಳಲು ಅಗತ್ಯವಾಗಿ ಬೇಕಾದ ಗಾಳಿ, ನೀರು, ಆಹಾರವನ್ನು ನೀಡುತ್ತಿದೆ, ಇದರ ನಂತರದ್ದೇ ಜೀವನ. ಮಾನವ ತನ್ನ ಐಷಾರಾಮಿ ಜೀವನಕ್ಕಾಗಿ ಹಾಗೂ ಸರ್ಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ಮನಬಂದಂತೆ ನಾಶ ಮಾಡುತ್ತಿದ್ದು, ಇದರ ಪರಿಣಾಮವಾಗಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಇದಲ್ಲದೆ ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕ್ಷೀಣಿಸಿ ಎಲ್ಲೆಡೆ ನೀರಿಗೆ ಬರ ಉಂಟಾಗುತ್ತಿದೆ. ಇದರಿಂದ ನೀರಿಲ್ಲದೆ ಜಲಚರ ಪ್ರಾಣಿಗಳು ನಶಿಸಿ ಹೋಗುತ್ತಿವೆ, ಮರಗಳನ್ನು ಕಡಿಯುವುದರಿಂದ ಮತ್ತು ಕಾರ್ಖಾನೆಗಳು ಹೊಗೆ ಉಗುಳುವುದರಿಂದ ಹಾಗೂ ಜಲ ತ್ಯಾಜ್ಯದಿಂದಾಗಿ ಹಲವು ತರಹದ ಮಾಲಿನ್ಯಗಳು ಉಂಟಾಗುತ್ತಿವೆ. ಇದಲ್ಲದೆ ಉಷ್ಣತೆಯ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದರಿಂದ ಹಿಮಗಡ್ಡೆಗಳು ಕರಗಿ ನೀರಾಗಿ ಪ್ರವಾಹ ಉಂಟಾಗುತ್ತಿದೆ, ಅತಿಯಾದ ಶಾಖದಿಂದ ಓಜೋನ್ ಪದರಕ್ಕೆ ಧಕ್ಕೆಯಾಗುತ್ತಿದೆ. ಶುದ್ಧ ಗಾಳಿಯ ಪ್ರಮಾಣ ಕಡಿಮೆಯಾಗಿ ಉಸಿರಾಡಲೂ ಕಷ್ಟಪಡಬೇಕಾಗಿದೆ. ಗಣಿಗಾರಿಕೆಯಿಂದ ಸಸ್ಯ ಸಂಪತ್ತು ನಶಿಸಿ ಹೋಗುತ್ತಿದೆ ಹಾಗೂ ಭೂ ಕಂಪನದಂತಹ ಪ್ರಕೃತಿ ವಿಕೋಪಗಳು ಜರುಗುತ್ತಿವೆ. ವಾಯು, ಜಲ, ಶಬ್ಧ ಮತ್ತು ರಾಸಾಯನಿಕ ಮಾಲಿನ್ಯಗಳು ಹೆಚ್ಚಾಗುತ್ತಿವೆ. ಇದರಿಂದ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟೆಲ್ಲಾ ಅನಾಹುತಗಳಿಗೆ ಮಾನವ ನೇರವಾಗಿ ಕಾರಣನಾಗಿದ್ದಾನೆ. ಅವನು ಭೂಮಿಯ ಮೇಲೆ ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಇವುಗಳಿಗೆ ಕಡಿವಾಣ ಹಾಕದಿದ್ದರೆ ಪ್ರಕೃತಿಯೇ ಅವನಿಗೆ ಸರಿಯಾದ ಪಾಠ ಕಲಿಸುತ್ತದೆ, ಭೂಮಿಯನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬುದು ಪ್ರತೀತಿ. ಜಗತ್ತಿಗೆ ಇರುವುದೊಂದೇ ಭೂಮಿ. ಅದನ್ನು ಅತ್ಯಂತ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕೆಂಬ ವಾಸ್ತವ ಸತ್ಯವನ್ನು ಎಲ್ಲರೂ ಅರಿಯಬೇಕು. ಇರುವ ಭೂಮಿ ಬಿಟ್ಟು ಮತ್ತೆಲ್ಲೋ ಅನ್ಯಗ್ರಹಗಳಲ್ಲಿ ಭೂಮಿ ಹುಡುಕಾಟ ನಡೆಸುವುದು ಅಸಂಬದ್ಧ, ಇರುವುದನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕೇ ವಿನಃ ಕಳೆದುಕೊಳ್ಳಬಾರದು. ಇದನ್ನರಿತು ಇಡೀ ಭೂ ಪ್ರದೇಶ ಒಳಗೊಂಡಿರುವ ಪರಿಸರ ಮತ್ತು ಪ್ರಕೃತಿಯನ್ನು ಈಗಿರುವಂತೆ ಮುಂದಿನ ಪೀಳಿಗೆಗೆ ಸಂರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಕೆಲವು ಮಾರ್ಗಗಳನ್ನು ಕುರಿತು ಭೂ ದಿನದಂದು ಪ್ರತಿಯೊಬ್ಬ ನಾಗರಿಕನು ಚಿಂತಿಸಬೇಕು. ಆ ಮಾರ್ಗಗಳು ಹೀಗಿವೆ :
* ಮನೆಯ ಸುತ್ತಮುತ್ತ ಪ್ಲಾಸ್ಟಿಕ್ ಚೀಲಗಳು ಕಂಡಲ್ಲಿ ಎತ್ತಿ ಸೂಕ್ತ ಸ್ಥಳದಲ್ಲಿ ಶೇಖರಿಸಿಡುವುದು.
* ಅಡುಗೆ ಮನೆಯಲ್ಲಿ ಹೆಚ್ಚಿದ ಹಣ್ಣು, ತರಕಾರಿ ಸಿಪ್ಪೆಗಳನ್ನು ಹೊರಗೆ ಎಸೆಯದೆ ತಮ್ಮ ಕೈದೋಟದಲ್ಲಿ ಕಾಂಪೋಸ್ಟ್ ಗೊಬ್ಬರವಾಗಿ ತಯಾರಿಸಲು ಬಳಸುವುದು.
* ಕೈದೋಟ, ಹೊಲಗದ್ದೆಗಳಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ ಬದಲಾಗಿ ಸಾವಯವ ಗೊಬ್ಬರಗಳನ್ನು ಬಳಸುವುದು.
* ನೀರಿನ ಮಿತ ಬಳಕೆ ಮಾಡುವುದು.
* ಮನೆಯ ಮುಂದೆ ಜಾಗವಿದ್ದಲ್ಲಿ ಉಪಯೋಗಕ್ಕೆ ಬರುವ ಹಣ್ಣು, ಹೂವಿನ ಗಿಡಗಳನ್ನು ನೆಡುವುದು.
* ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕಗೊಳಿಸಿ ಪೌರ ಕಾರ್ಮಿಕರಿಗೆ ನೀಡುವುದು.
* ಮಾರ್ಕೆಟ್ಗೆ ಹೋಗುವಾಗ ಬಟ್ಟೆಯಿಂದ ತಯಾರಿಸಿದ ಕೈಚೀಲವನ್ನೇ ಒಯ್ಯುವುದು.
* ಖಾಲಿ ನಿವೇಶನಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು.
* ಒಣ ತ್ಯಾಜ್ಯವನ್ನು ಸುಡಬಾರದು.
* ಮಳೆಯ ನೀರು ವ್ಯರ್ಥವಾಗದಿರಲು ಪ್ರತಿ ಮನೆಯಲ್ಲೂ ಇಂಗು ಗುಂಡಿಯನ್ನು ತೋಡಿಸುವುದು.
* ಪರಿಸರಕ್ಕೆ ಮಾರಕವಾಗದಿರುವ ಇಂಧನವನ್ನು ಬಳಸುವುದು.
* ಮನೆಯಲ್ಲಿ ಸೋಲಾರ್ ಲೈಟುಗಳ ಬಳಕೆ ಮಾಡುವುದು.
* ಮನೆಯ ಮುಂದೆ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳುವುದು.
* ಪುನರ್ಬಳಕೆ ಮಾಡಬಹುದಾದ ವಸ್ತುಗಳನ್ನು ಹೆಚ್ಚು ಬಳಸುವುದು.
* ಶುಚಿತ್ವದ ಕಡೆ ಆದ್ಯ ಗಮನ ಹರಿಸುವುದು.
* ಸಂಚಾರಕ್ಕೆ ಬ್ಯಾಟರಿ ಚಾಲಿತ ವಾಹನವನ್ನು ಬಳಸುವುದು.
* ಊರಿಗೊಂದು ವನ ಬೆಳೆಸುವುದು.
* ಬೆಳೆದ ಗಿಡಮರಗಳನ್ನು ಯಾರೂ ಕಡಿಯದಂತೆ ನೋಡಿಕೊಳ್ಳುವುದು.
* ಪರಿಸರಕ್ಕೆ ಸಂಬಂಧಿಸಿದ ಜಾಗೃತಿ ಶಿಬಿರಗಳನ್ನು ಏರ್ಪಡಿಸುವುದು.
* ಭೂ ಸಾರವನ್ನು ಸಂರಕ್ಷಿಸಲು ಹೊಲ, ಗದ್ದೆಗಳಲ್ಲಿ ಒಡ್ಡುಗಳನ್ನು ನಿರ್ಮಿಸುವುದು.
* ಮಳೆಯ ನೀರು ವ್ಯರ್ಥವಾಗಿ ಪೋಲಾಗದಂತೆ ತಡೆಯಲು ಚೆಕ್ ಡ್ಯಾಮ್ಗಳನ್ನು ನಿರ್ಮಿಸುವುದು.
* ಆಗಾಗ್ಗೆ ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸುವುದು.
ಭೂ ದಿನದ ಆಚರಣೆಯ ಸುಸಂದರ್ಭದಲ್ಲಿ ಈ ಎಲ್ಲಾ ಅಂಶಗಳ ಕುರಿತು ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸಗಳಾಗಬೇಕು, ತನ್ಮೂಲಕ ಆಚರಣೆಯ ಉದ್ದೇಶ ಸಾರ್ಥಕ್ಯದಿಂದ ಕೂಡಿರಬೇಕು.
ಡಾ. ಶಿವಯ್ಯ ಎಸ್.
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ
[email protected]