ಜಲ ಜೀವನಾಧಾರ… ವಿಜ್ಞಾನಿಗಳು ಬೇರೆ ಗ್ರಹಗಳಲ್ಲಿ ಜೀವಿಗಳಿವೆಯೇ ಎಂದು ಹುಡುಕಲು ಹೊರಟಾಗ ಮೊದಲು ಹುಡುಕುವುದೇ ನೀರನ್ನು. ನೀರಿರುವುದರಿಂದಲೇ ಭೂಗೋಳ ಜೀವಗೋಳವಾಗಿರುವುದು.
ಜಲ ಜೀವನಾಧಾರ… ವಿಜ್ಞಾನಿಗಳು ಬೇರೆ ಗ್ರಹಗಳಲ್ಲಿ ಜೀವಿಗಳಿವೆಯೇ ಎಂದು ಹುಡುಕಲು ಹೊರಟಾಗ ಮೊದಲು ಹುಡುಕುವುದೇ ನೀರನ್ನು. ನೀರಿರುವುದರಿಂದಲೇ ಭೂಗೋಳ ಜೀವಗೋಳವಾಗಿರುವುದು. ದಾವಣಗೆರೆಯ ಹದಡಿ ಕೆರೆಯಲ್ಲಿನ ನೀರು ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಒಂದು ಜೈವಿಕ ಲೋಕವೇ ಅನಾವರಣಗೊಳ್ಳುತ್ತಿದೆ. ಸ್ವಲ್ಪ ನೀರಿರುವ ಜಾಗದ ಸುತ್ತ ಬೆಳೆಯುತ್ತಿರುವ ಹುಲ್ಲು ಮತ್ತು ಜೊಂಡು ಸಸ್ಯಗಳು. ಅವುಗಳ ನಡುವೆ ಇರುವ ಕೀಟಗಳು. ಕೆಸರಿನಲ್ಲಿರುವ ಹುಳುಗಳು. ನೀರು ಕಡಿಮೆಯಾದೊಡನೆ ಸುಲಭವಾಗಿ ಸಿಗುವ ಮೀನುಗಳು. ಇವೆಲ್ಲವನ್ನು ಮುಕ್ಕಲು ಬರುವ ಅಕರ್ಷಕ ಹಕ್ಕಿಗಳು. ಚಿತ್ರದಲ್ಲಿ ಕಾಣುತ್ತಿರುವುದು ಸ್ಥಳೀಯವಾಗಿರುವ ನೇರಳೆ ಜಂಬುಕೋಳಿಗಳು, ನದಿ ರೀವ, ಚುಕ್ಕೆ ಕೊಕ್ಕಿನ ಬಾತುಗಳು, ಬಾಯ್ಕಳಕಗಳು, ಮರಗಾಲು ಹಕ್ಕಿಗಳು, ಅಲ್ಲದೆ ಯೂರೋಪಿನಿಂದ ಚಳಿಗಾಲಕ್ಕೆ ವಲಸೆಗಾರರಾಗಿ ಬಂದಿರುವ ಕಂದು ಬಾತುಗಳು, ಗುಂಪಾಗಿ ನಿಂತಿರುವ ಸಣ್ಣ ಕಡಲಉಲ್ಲಂಕಿ ಮುಂತಾದವುಗಳು ಸೇರಿ ಮಧ್ಯದಲ್ಲಿ ಒಂಟಿಯಾಗಿ ನಿಂತಿರುವ ನೀರು ಕಾಗೆಯ ಜೊತೆಗೆ ಸಂವಾದ ನಡೆಸುತ್ತಿವೆ. ಜೊತೆಗೆ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು. ದೇಶಿ-ವಿದೇಶಿ ಜೀವಿಗಳಿಂದಾದ ಆಹಾರ ಸರಪಳಿಯ ಪ್ರತಿಯೊಂದು ಕೊಂಡಿಯ ಸ್ಪಷ್ಟ ಉದಾಹರಣೆ ಇಲ್ಲಿ ಲಭ್ಯ. ಇಂತಹ ಅದ್ಭುತ ದೃಶ್ಯಕಾವ್ಯವನ್ನು ಅನುಭವಿಸಲು ಸಂವೇದನಾಶೀಲತೆ ಅವಶ್ಯಕ. ವಿವಿಧ ಪ್ರಭೇದಗಳು ಸೇರಿದ್ದರೂ ಸಾಮರಸ್ಯದ ಜೀವನ ನಡೆಸಿರುತ್ತಿರುವ ಇವುಗಳಿಂದ ಕಲಿಯುವನೇ ಮನುಜ ಜಾತ್ಯತೀತತೆಯ ಪಾಠ?
– ಡಾ. ಎಸ್. ಶಿಶುಪಾಲ,
ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ, ದಾವಣಗೆರೆ.
[email protected]