ಮೆಕ್ಯಾನಿಕಲ್ ಎಂಜಿನಿಯರ್‍ಗಳಿಗೆ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಅವಕಾಶಗಳು

ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆಗಳು, ಇಂಧನ ಅಭದ್ರತೆ ಹಾಗೂ ಪರಿಸರ ಮತ್ತು  ಹವಾಮಾನ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು, ಸಮಾಜವು ನವೀಕರಿಸಬಹುದಾದ ಶಕ್ತಿಯತ್ತ  ಸಾಗುತ್ತಿದೆ. ಇದು ಭಾರತದ ಬೆಳೆಯುತ್ತಿರುವ ಇಂಧನ ಬೇಡಿಕೆಯ ಸವಾಲುಗಳಿಗೆ ನಿರ್ಣಾಯಕ  ಪರಿಹಾರವನ್ನು ನೀಡುತ್ತದೆ. ಮುಂದಿನ ದಶಕಗಳಲ್ಲಿ ನವೀಕರಿಸಬಹುದಾದ ಶಕ್ತಿಯ (RE) ಕೊಡುಗೆ  ತುಂಬಾ ಮಹತ್ತರವಾದುದು. ನಾವು ಗ್ರಿಡ್ ಮತ್ತು ಹಸಿರು ಶಕ್ತಿಯ ವಿದ್ಯುದೀಕರಣದ  ಪರಿವರ್ತನೆಯ ಅರಂಭಿಕ ಹಂತದಲ್ಲಿದ್ದೇವೆ. 2030 ಮತ್ತು ಅದಕ್ಕೂ ನಂತರದ ದಿನಗಳಲ್ಲಿ  ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ (RET) ಬೆಳವಣಿಗೆಗೆ ಕಾರಣವಾಗುವ ಎಲ್ಲಾ  ಸೌಕರ್ಯಗಳು ಅಭಿವೃದ್ಧಿಯಾಗಲಿವೆ. ಆಟೋಮೇಷನ್ ಮತ್ತು ಕೃತಕ ಬುದ್ಧಿಮತ್ತೆಯು  (Artificial Intelligence) ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸುವರ್ಣ ಯುಗಕ್ಕೆ  ವೇದಿಕೆಯನ್ನು ಸಿದ್ಧಪಡಿಸುತ್ತಿದೆ. ಅಂತರರಾಷ್ಟ್ರಿಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಯ ಇತ್ತೀಚಿನ ವರದಿಯ ಪ್ರಕಾರ, ವಿಶ್ವದಾದ್ಯಂತ ನವೀಕರಿಸಬಹುದಾದ ಇಂಧನ  ವಲಯದಲ್ಲಿ ಕೆಲಸ ಮಾಡುವ ಜನರ ಸಂಖ್ಯೆ 2030 ರ ವೇಳೆಗೆ 24 ದಶಲಕ್ಷಕ್ಕೆ ಏರಿಕೆಯಾಗಲಿದೆ.  ಭಾರತದಲ್ಲಿ ಇಲ್ಲಿಯವರೆಗೆ 45000 ಕ್ಕಿಂತಲೂ ಹೆಚ್ಚು ತಂತ್ರಜ್ಞರಿಗೆ RE ಕ್ಷೇತ್ರದಲ್ಲಿ ಪೂರ್ಣ  ಸಮಯದ ಉದ್ಯೋಗಗಳು ದೊರೆತಿವೆ. ಬಿಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ್, 3,00,000 ಕ್ಕಿಂತ  ಹೆಚ್ಚು ಹೊಸ ಕೆಲಸಗಾರರು ಬೇಕಾಗಿದ್ದಾರೆ. ಇದರಲ್ಲಿ, ಪವನ ಶಕ್ತಿ ಕ್ಷೇತ್ರದಲ್ಲಿ 34600 ಉದ್ಯೋಗಗಳು ಮತ್ತು ಸೌರಶಕ್ತಿ ಕ್ಷೇತ್ರದಲ್ಲಿ 26,65,400 ಉದ್ಯೋಗಗಳು ಮುಂದಿನ ದಿನಗಳಲ್ಲಿ ಸೃಷ್ಟಿಯಾಗಲಿವೆ. ಎಂಜಿನಿಯರಿಂಗ್ ಪದವೀಧರರು ಶುದ್ಧ ಇಂಧನ ಮೂಲಗಳಾದ ಸೌರಶಕ್ತಿ,  ಪವನ ಶಕ್ತಿ ಮುಂತಾದವುಗಳ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸಲು ಬಹುರಾಷ್ಟ್ರೀಯ ಮತ್ತು ಇತರೆ  ಕಂಪನಿಗಳಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಇದಕ್ಕಾಗಿ ವಿದ್ಯಾರ್ಥಿಗಳು ಯಾಂತ್ರಿಕ, ವಿದ್ಯುತ್  ಶಕ್ತಿ ಇತ್ಯಾದಿ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.  

ವಿವಿಧ ಎಂಜಿನಿಯರಿಂಗ್ ಪದವೀಧರರು ಅದರಲ್ಲೂ ವಿಶೇಷವಾಗಿ ಮೆಕ್ಯಾನಿಕಲ್ ಎಂಜಿ ನಿಯರ್‌ಗಳು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮತ್ತು ವಿತರಣೆಯ ಪ್ರತಿ ಯೊಂದು ಹಂತದಲ್ಲೂ  ಕೆಲಸ ನಿರ್ವಹಿಸಲು ಯೋಗ್ಯರಾಗಿ ರುತ್ತಾರೆ. ಮೆಕ್ಯಾನಿಕಲ್ ಎಂಜಿನಿಯರ್‍ಗಳು ನವೀಕರಿಸಬಹುದಾದ  ಇಂಧನ ಮೂಲ ಸೌಕರ್ಯದ ವೆಚ್ಚವನ್ನು ಕಡಿಮೆ ಮಾಡಲು ಮತ್ತು ವಿದ್ಯುತ್ ಉತ್ಪಾದನೆಯಲ್ಲಿ  ಪ್ರಗತಿ ಸಾಧಿಸಲು ಕೆಳಕಂಡ ಅಗತ್ಯ ಮಾರ್ಗಗಳನ್ನು ಅನುಸರಿಸಬೇಕು. 

* ಅಸ್ತಿತ್ವದಲ್ಲಿರುವ ನವೀಕರಿಸಬಹುದಾದ ಇಂಧನ ತಂತ್ರಜ್ಞಾನವನ್ನು ಉತ್ತಮಗೊಳಿಸಿ, ಇದರಿಂದ ಸಂಬಂಧಿತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಹಕರಿಸಿ, ಅದನ್ನು  ಲಾಭದಾಯಕ ಉದ್ಯಮವನ್ನಾಗಿ ಬೆಳೆಸುವುದು.  

* ವಿನೂತನ ಗಣಿತದ ಮಾದರಿ, ಸಿಮ್ಯುಲೇಶನ್ ಮತ್ತು ವಿಶ್ಲೇಷಣೆಯನ್ನು ಬಳಸಿಕೊಂಡು  ವಿವಿಧ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ವ್ಯವಸ್ಥೆಗಳ ಏಕೀಕರಣದತ್ತ  ಗಮನಹರಿಸುವುದು.  

* ನವೀಕರಿಸಬಹುದಾದ ಶಕ್ತಿಯ ಬಳಕೆಗಾಗಿ ವಿವಿಧ ವಸ್ತುಗಳನ್ನು ಸಂಶೋಧಿಸಿ ಮತ್ತು ವಸ್ತು  ಸಂವಹನಗಳನ್ನು ಅಧ್ಯಯನ ಮಾಡಿ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆಗಾಗಿ ಹೊಸ  ವ್ಯವಸ್ಥೆಗಳ, ತಂತ್ರಜ್ಞಾನಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು  ಗಮನಹರಿಸಬೇಕು.  

* ವಿವಿಧ ಭೂಗೋಳಕ್ಕಾಗಿ ನವೀಕರಿಸ ಬಹುದಾದ ಇಂಧನ ಮೂಲಸೌಕರ್ಯ ಮತ್ತು ವ್ಯವಸ್ಥೆಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲು ಮತ್ತು ಉತ್ತಮಗೊಳಿಸಲು ಎಂಜಿನಿಯರ್‌ಗಳು ಮತ್ತು ಸಂಶೋಧಕರ ತಂಡಗಳನ್ನು ರೂಪಿಸುವುದರ ಕಡೆಗೆ ಗಮನಹರಿಸುವುದು.  

* ಸ್ಥಳೀಯವಾಗಿ ಉತ್ಪಾದಿಸಿ ಮತ್ತು ಜೋಡಣೆ ಮಾಡುವ RE ಸಾಧನಗಳ ವಿವಿಧ ಘಟಕಗಳ  ತಯಾರಿಕೆಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಹಾಗೂ ದೂರದ  ಸ್ಥಳಗಳಲ್ಲಿಯೂ ನವೀಕರಿಸಬಹುದಾದ ಇಂಧನ ವಲಯದ ಬೆಳವಣಿಗೆಯನ್ನು  ಉತ್ತೇಜಿಸುವುದು ಪ್ರಮುಖ ಗುರಿಯಾಗಿದೆ.


 ಡಾ. ರಾಜಕುಮಾರ್ ಡಿ.ಜಿ.  
ಪ್ರೊಫೆಸರ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ, ಜಿ.ಎಂ.ಐ.ಟಿ, ದಾವಣಗೆರೆ. 

 

error: Content is protected !!