ನವ ಆಲೋಚನೆಗಳ ಕಾಲವೆಂದರೆ ಇಂದಿನ ಆಧುನಿಕ ಕಾಲ ಎನ್ನಬಹುದು. ಎಲ್ಲ ಜನರು ಇಂದಿನ ನವ ಕಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಹೊಂದಾಣಿಕೆ ಮಾಡಿಕೊಂಡು ಬಾಳುತ್ತಿದ್ದಾರೆ.
ಜೀವ ವಿಕಾಸ ಸಿದ್ಧಾಂತದ ಪಿತಾಮಹ “ಚಾರ್ಲ್ಸ್ ಡಾರ್ವಿನ್” ಅವರು ಬದುಕಿನ ಬಗ್ಗೆ ಒಂದು ಒಳ್ಳೆಯ ನುಡಿಮುತ್ತಿನ ಸಾರವನ್ನು ಹೇಳಿದ್ದಾರೆ. ಅದೇನೆಂದರೆ “ಬದುಕುಳಿಯುವುದು ಅತ್ಯಂತ ಬಲಿಷ್ಠ ಪ್ರಾಣಿಯೂ ಅಲ್ಲ, ಅತ್ಯಂತ ಬುದ್ಧಿವಂತ ಪ್ರಾಣಿಯೂ ಅಲ್ಲ. ಬದಲಿಗೆ ಬದಲಾವಣೆಗೆ ಒಗ್ಗಿಕೊಳ್ಳುವ ಶಕ್ತಿಯುಳ್ಳ ಪ್ರಾಣಿಗಳು”. ಈ ಸಾರ ನಮ್ಮ ಆಧುನಿಕ ಕಾಲದಲ್ಲಿ ನೋಡಿದ್ದೇವೆ. ನಾವು ಕೂಡ ಅನುಭವಿಸಿದ್ದೇವೆ. ನಾವು ಈಗಿನ ಕಾಲವನ್ನು ನವ ಕಾಲ ಎಂದು ಕರೆಯಲು ಮುಖ್ಯ ಕಾರಣ ಈಗಿನ ಜಗತ್ತಿನ ಜನರ ನವ ಆಲೋಚನೆಗಳಿಂದ.
ಈಗಿನ ತಂತ್ರಜ್ಞಾನ, ಔದ್ಯಮಿಕ ಮತ್ತು ಆರ್ಥಿಕತೆಯ ಜಗತ್ತನ್ನು ನೋಡಿ ಅದನ್ನು ಅರ್ಥ ಮಾಡಿಕೊಂಡು ಮುಂದಿನ ಜಗತ್ತು ಹೇಗೆ ಇರಬಹುದು. ಅದು ಹೀಗೆಯೇ ಇರುತ್ತದೆಂದು ಈಗಿನ ಕೋಟ್ಯಾಧೀಶರು, ಉತ್ತಮ ಕಂಪನಿಯ ಸಿಇಓಗಳು ಹಾಗೆಯೇ ಅವರ ನವ ಆಲೋಚನೆಗಳನ್ನು ಹೂಡಿದ್ದಾರೆ.
ಉದಾಹರಣೆಗೆ ನಾನು ಜಗತ್ತಿಗಾಗಿ ಮಾಡಬಲ್ಲೆ ಎಂದು ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆ ಹೇಳಿದರೆ. ನಾನು ಜಗತ್ತಿಗಾಗಿ ಮಾರಬಲ್ಲೆ ಎಂದು ಇನ್ ಮೊಬಿ ಕಂಪನಿಯನ್ನು ಸೃಷ್ಟಿಸಿದ ಮಹಾಶಯ ಹೇಳುತ್ತಾನೆ. ಇದು ಈಗಿನ ಜನರ ಆಲೋಚನೆ.
ನಾನು ಹಲವಾರು ಜನರನ್ನು ಟಿವಿಯಲ್ಲಿ ಅವರ ಜೀವನ ಚರಿತ್ರೆ ನೋಡಿದ್ದೇನೆ. ಅನೇಕರು ತಮ್ಮ ಕಷ್ಟಗಳನ್ನೆದುರಿಸಿ ಯಶಸ್ಸು ಕಂಡಿದ್ದಾರೆ. ಆಗ ಕೆಲಸಕ್ಕಾಗಿ ಅಲೆದಾಡುವ ಯುವಕರಿದ್ದರು. ಈಗ ಕೆಲಸಕ್ಕಾಗಿ ಅಲೆಯುವ ಬದಲಾಗಿ, ಕೆಲಸಗಳನ್ನು ಸೃಷ್ಟಿಸುತ್ತೇವೆನ್ನುವ ಯುವಕರಿದ್ದಾರೆ.
ಈಗಿನ ಕಾಲದಲ್ಲಿ ಆಲೋಚನೆ ಬಹಳ ಬದಲಾಗಿದೆ. ತಂತ್ರಜ್ಞಾನದಲ್ಲಿ ತಮಗೆ ಗೊತ್ತಿರುವ ವಿಷಯದಲ್ಲಿ ಉದ್ಯಮವನ್ನು ಸ್ಥಾಪಿಸಿ, ಅದರ ಆನ್ಲೈನ್ ಸ್ವರೂಪವನ್ನು ಯಾವ ರೀತಿ ಕಟ್ಟುತ್ತಾರೆಂದರೆ ಬೇರೆಯವರು ತಮ್ಮ ಉದ್ಯಮವನ್ನು ಬೆಳೆಸಲು ನಮ್ಮ ಉದ್ಯಮವನ್ನು ಬಳಸಿಕೊಳ್ಳುತ್ತಾರೆ. ಅಂದರೆ ಅವರು ಮಾಡುವ ಕೆಲಸ ಯಾವುದೇ ಆದರೂ ಮಾಹಿತಿ ತಂತ್ರಜ್ಞಾನದ ಬೆನ್ನೆಲುಬಿರದಿದ್ದರೆ ಆ ಕೆಲಸ ಇತರೆ ಕೆಲಸಗಳಿಗಿಂತ ಮಂಕಾಗುತ್ತದೆ.
ಈಗಿನ ತಂತ್ರಜ್ಞಾನ ಮತ್ತು ಔದ್ಯಮಿಕ ಜಗತ್ತಿನಲ್ಲಿ ತುಂಬಾ ಆಲೋಚನೆಗಳು ಬದಲಾಗುತ್ತಿವೆ. ಅಂದರೆ ಉದಾಹರಣೆಗೆ ಕೆಲ ವರ್ಷಗಳ ಕೆಳಗಿನ ಪರಿಸ್ಥಿತಿಯಲ್ಲಿ ಕ್ಯಾಬ್ ಡ್ರೈವರ್ಸ್‌ಗಳು ಎಷ್ಟು ಸಂಪಾದಿಸುತ್ತಿರಬಹುದು? 10 ರಿಂದ 20 ಸಾವಿರವಿತ್ತು. ಆದರೆ ಈಗ ತಿಂಗಳಿಗೆ ಲಕ್ಷ ಗಳಿಸುತ್ತಿದ್ದಾರೆ. ಇನ್ನೊಂದು ಉದಾಹರಣೆ.. ಮುಂಚೆ ಜನರು ಉದ್ಯೋಗ ಪಡೆದರೆ ಫೋನನ್ನು ತೆಗೆದುಕೊಳ್ಳುತ್ತಿದ್ದರು. ಈಗ ತಮ್ಮ ಸ್ಮಾರ್ಟ್ ಫೋನ್ನೇ ವೃತ್ತಿಯ ಆಧಾರವಾಗಿಸಿಕೊಂಡಿದ್ದಾರೆ. ಇದೆಲ್ಲವು ಈಗಿನ ಜನರ ನವ ಆಲೋಚನೆಗಳು ಹಾಗೂ ಅವರು ಅರ್ಥ ಮಾಡಿಕೊಂಡ ತಂತ್ರಜ್ಞಾನ ಮತ್ತು ಔದ್ಯಮಿಕ ಜೀವನ ಎನ್ನಬಹುದು.
ಇದೇ ರೀತಿ ನಾವು ಇನ್ನೊಬ್ಬ ಮಹಾಪುರುಷನ ವ್ಯಕ್ತಿತ್ವವನ್ನು, ಅವನ ಆಲೋಚನೆ ನೋಡಿದರೆ ನೀವು ಅಚ್ಚರಿಗೊಳ್ಳುತ್ತಿರೀ. ಬೇರೆಯವರಿಗೆ ಹುಚ್ಚು ಎಂದೆನಿಸುವ ಕನಸುಗಳನ್ನು ಕಂಡು ಅವುಗಳನ್ನು ನನಸು ಮಾಡುತ್ತಿದ್ದಾನೆ.
ಆತನ ಹೆಸರು ಇಲಾನ್ ಮಸ್ಕ್. ಈತ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ, ತನ್ನ ತಾಯ್ತಂದೆಯ ಜೊತೆಗೆ ಕೆನಡಾಗೆ ವಲಸೆ ಬಂದವನು. ಈತನಿಗೆ ತನ್ನ ತಾಯಿಯೇ ತನಗೆ ರೋಲ್ ಮಾಡೆಲ್ . ತನ್ನ 9ನೇ ವಯಸ್ಸಿಗೆ ಇಡೀ ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾವನ್ನು ಓದಿ ಮುಗಿಸಿದ್ದಾನೆ. 12ನೇ ವಯಸ್ಸಿಗೆ ಕಂಪ್ಯೂಟರ್ ಕೋಡಿಂಗ್ ಬರೆದನು. ಬ್ಲಾಸ್ಟರ್ ಎನ್ನುವ ವಿಡಿಯೋ ಗೇಮ್ ಸೃಷ್ಟಿಸಿ 500 ಡಾಲರ್ಗೆ ಮಾರಾಟ ಮಾಡಿದ. ಬಾಲ್ಯದಲ್ಲಿ ಕುಸ್ತಿ, ಕರಾಟೆ, ಜುಡೋ ಕಲಿತವನು. ಈತನಿಗೆ ಈಗ 49 ವರ್ಷ. ಇವನು 12 ಕ್ಕೂ ಹೆಚ್ಚು ಕಂಪನಿಯೊಡೆಯ. ಇನ್ವೋಟಿವ್ ಲೀಡರ್, ಗೇಮ್ ಚೇಂಜರ್, ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೀಮಂತರಲ್ಲಿ ಈತನೂ ಕೂಡ ಒಬ್ಬ.
ಈತನ ನವ ಆಲೋಚನೆ ಮತ್ತು ಗುರಿ ಏನೆಂದರೆ ಮಂಗಳನ ಅಂಗಳದಲ್ಲಿ ಮನುಷ್ಯನ ವಾಸಕ್ಕೆ ನೆಲೆ ಕಲ್ಪಿಸುವುದೇ ಇವನ ಹೆಗ್ಗುರಿ. ತನ್ನದೆಯಾದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಿ, ಬೆಂಗಳೂರಿನಿಂದ ಮೈಸೂರಿಗೆ ಕೆಎಸ್ಸಾರ್ಟಿಸಿ ಬಸ್ ಸಂಚರಿಸುವ ರೀತಿಯಲ್ಲಿ ಪ್ರಯಾಣಿಕರನ್ನು ರಾಕೆಟ್ ನಲ್ಲಿ ಬಾಹ್ಯಾಕಾಶ ಪ್ರವಾಸ ಮಾಡಿಸುವುದು ಇವನ ಹೆಬ್ಬಯಕೆ.
ಇನ್ನು ಮತ್ತೊಂದು ಆಲೋಚನೆಯ ಕನಸಿನ ಹತ್ತಿರ ಬಂದೇ ಬಿಟ್ಟಿದ್ದಾನೆ. ದಿ/30/05/2020 ರಂದು ಫ್ಲಾರಿಡಾದ ನಾಸಾದ ಕೆನಡಿ ಕೇಂದ್ರದಿಂದ ಮಸ್ಕನ ಸ್ಪೇಸ್ ಎಕ್ಸ್ ಕಂಪನಿಯ ಫಾಲ್ಕನ್-9, ರಾಕೆಟ್, ಬಾಬ್ ಬೆಹ್ನಕೆನ್ ಮತ್ತು ಡೌಗ್ ಹರ್ಲೆ ಎಂಬ ವ್ಯೋಮಯಾನಿಗಳನ್ನು ಹೊತ್ತು ಆಕಾಶಕ್ಕೆ ಜಿಗಿಯಿತು. ಇದು ಯಶಸ್ವಿಯಾಗಿ ಕಕ್ಷೆಗೆ ಸೇರಿತು. ಇದು ಖಾಸಗಿ ಕಂಪನಿಯೊಂದರ ಮಾಂತ್ರಿಕ ಸಾಧನೆ. ಕೋವಿಡ್ -19ರ ಭಯವನ್ನು ನಿರ್ಲಕ್ಷಿಸಿ ಒಂದೂವರೆ ಲಕ್ಷ ಮಂದಿ ಈ ಮಹಾ ಜಿಗಿತವನ್ನು ಕಣ್ತುಂಬಿಕೊಂಡರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
ಸೆಕೆಂಡಿಗೆ ಏಳೂವರೆ ಕಿಲೋ ಮೀಟರ್ ವೇಗದಲ್ಲಿ ಭೂಮಿಯಿಂದ ನಾಲ್ಕು ನೂರು ಕಿಲೋ ಮೀಟರ್ ಎತ್ತರದಲ್ಲಿ ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ತಂಗುದಾಣಕ್ಕೆ ಯಾನಿಗಳ ಸಮೇತ ಕ್ಯೂ ಡ್ರ್ಯಾಗನ್ ಜೋಡಣೆಗೊಂಡಿತು. ಲಾಂಚ್ ವೆಹಿಕಲ್ ಫಾಲ್ಕನ್-9 ಬೂಸ್ಟರ್ ಮರಳಿ ಫ್ಲಾರಿಡಾಗೆ ವಾಪಾಸ್ ಬಂದಿತು.
ಮುಂದಿನ ವರ್ಷ 55 ಮಿಲಿಯನ್ ಡಾಲರ್ ವೆಚ್ಚದಲ್ಲಿ ಬಾಹ್ಯಾಕಾಶ ಯಾನ ಮಾಡಿಸುತ್ತೇವೆಂದು ಸ್ಪೇಸ್ ಎಕ್ಸ್ ಹೇಳಿಕೊಂಡಿದೆ. ಇವನಿಗೆ ಸ್ಪೀಡ್ ಎಂದು ಕರೆಯುತ್ತಾರೆ. ಜಿಪ್-2 ಎನ್ನುವ ತಂತ್ರಾಂಶ ಕಂಪನಿಯನ್ನು ಸ್ಥಾಪಿಸುವ ಮೂಲಕ 27ನೇ ವರ್ಷಕ್ಕೆ ಬಿಲಿಯನೇರ್ ಆದ. ಇವನ ಆಲೋಚನೆ ಎಂತದ್ದು ಎಂದರೆ ಸಂಚಾರ ದಟ್ಟಣೆಯಿಂದ ಬೇಸರಗೊಂಡು ಸುರಂಗ ಸಾರಿಗೆಯ ಪರ್ಯಾಯ ಯೋಜನೆಯನ್ನು ರೂಪಿಸಿದವನು. ಇದಕ್ಕಾಗಿ ಬೋರಿಂಗ್ ಎನ್ನುವ ಕಂಪನಿ ಸ್ಥಾಪಿಸಿದ. ಇವನು ನ್ಯೂಯಾರ್ಕ್‌ನಿಂದ ವಾಷಿಂಗ್ಟನ್ ಡಿಸಿಗೆ 370 ಕಿಮೀ ದೂರವನ್ನು ಸುರಂಗ ಮಾರ್ಗದ ಮೂಲಕ ಕೇವಲ 29 ನಿಮಿಷಗಳಲ್ಲಿ ತಲುಪುವ ಯೋಜನೆಯನ್ನು ಮುಂದಿನ ವರ್ಷ ನನಸು ಮಾಡುತ್ತಿದ್ದಾನೆ.
ಮಸ್ಕನ ಮಗದೊಂದು ಅದ್ಭುತ ಆಲೋಚನೆ ಹೈಪರ್ ಲೂಪ್ ಎಂಬ ಕೊಳವೆ ಮಾರ್ಗದ ಯೋಜನೆ. ಇದರ ಮೂಲಕ ಕ್ಯಾಪ್ಗೂಲ್‌ಗಳೂ ಅಸಾಧ್ಯ ವೇಗದಲ್ಲಿ ಚಲಿಸುತ್ತವೆ. ಈ ಎಲ್ಲ ಕಾಮಗಾರಿಗಳ ಫಲ ಒಂದೆರಡು ವರ್ಷಗಳಲ್ಲಿ ಜನರಿಗೆ ಸಿಗಲಿದೆ. ಕೃತಕ ಬುದ್ಧಿಮತ್ತೆ, ಅನ್ವಯಿಕ ವಲಯಗಳನ್ನು ಶೋಧಿಸಲು ಓಪರ್ ಎಐ ಎನ್ನುವ ಕಂಪನಿಯನ್ನು ಸಹ ಸ್ಥಾಪಿಸಲಿದ್ದಾನೆ.
ಇವನ ನವ ಆಲೋಚನೆಗಳನ್ನು ಕೇಳಿದರೆ ನಮಗೆಲ್ಲ ಒಂದು ನವೋಲ್ಲಾಸ ಮೂಡುತ್ತದೆ. ಅದನ್ನು ನೋಡಿದರೆ ಇನ್ನು ನವೋಲ್ಲಾಸ ಹೆಚ್ಚಾಗುತ್ತದೆ. ಇದೆಲ್ಲವನ್ನೂ ಗಮನಿಸಿದಾಗ ಈತನೊಬ್ಬ ಉತ್ತಮ ಹಾಗೂ ಉತ್ತುಂಗ ಆಲೋಚನೆಗಾರ.
ತನ್ನ ಆಲೋಚನೆ ಹಾಗೂ ನವೋಲ್ಲಾಸದಿಂದ ಅವನು 25 ಮಂದಿ ಜಗದೇಕ ವೀರರ ಸಾಲಿನಲ್ಲಿ ಮಸ್ಕ್ ಇದ್ದಾನೆ. ತಮ್ಮದೇ ದಾರಿ ಮತ್ತು ಗುರಿಗಳನ್ನು ಬೆನ್ನತ್ತಿ ಹೋಗುವ ಧೈರ್ಯಶಾಲಿಗಳಿಗೆ ರೋಲ್ ಮಾಡೆಲ್ ಆಗಿದ್ದಾನೆ. ಈಗಿನ ಜಗತ್ತಿನಲ್ಲಿ ಇದನ್ನೆಲ್ಲ ನೋಡಿದರೆ “ನಾವು ಇಂದಿನ ಜಗತ್ತಿಗೆ ಒಗ್ಗಿಕೊಂಡು, ಪ್ರಯೋಜ ನಾಶೀಲತೆಯನ್ನು ಕಲಿತುಕೊಂಡು, ಹೊಸ ಆಲೋಚನೆಗಳಿಂದ ಜನರ ನವೋಲ್ಲಾಸ ಕಂಡು ಯಶಸ್ಸನ್ನು” ಕಾಣಬಹುದು.
ಅನಘ.ಎನ್.ಪಿ., 9ನೇ ತರಗತಿ
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.