ನಿತ್ಯ ನೂತನ ಪ್ರೇಮಿಗಳಿವರು… !

ಅವಳು ನೋಡುತ್ತಾಳೆ ನಗುವುದಿಲ್ಲ
ನಗುತ್ತಾಳೆ ಮಾತನಾಡುವುದಿಲ್ಲ
ಮಾತನಾಡುತ್ತಾಳೆ ಪ್ರೀತಿಸುವುದಿಲ್ಲ
ಪ್ರೀತಿಸುತ್ತಾಳೆ ಆದರೆ ಹೇಳುವುದಿಲ್ಲ…..!

ಪ್ರೇಮಿಗಳ ದಿನವೆಂದರೆ ಪ್ರೇಮ ನಿವೇದನೆಗೆ ಗುಲಾಬಿ ಹೂ, ಚಾಕಲೇಟ್, ಗ್ರೀಟಿಂಗ್ಸ್, ಗಿಪ್ಟ್ ಬಾಕ್ಸ್‍ಗಳನ್ನು ಹಿಡಿದು ಹಿಡಿ ಜಗತ್ತು ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿರುತ್ತದೆ.  ಎಲ್ಲೆಡೆಯಲ್ಲಿಯೂ ಪ್ರೇಮಾಂಕುರ, ಪ್ರೇಮಸ್ವರ ರಿಂಗಣಿಸುವುದು.  ಗುಪ್ತಗಾಮಿನಿಯಂತೆ ಹರಿಯುವ ಪ್ರೀತಿ ವಿಶೇಷವಾಗಿ ಪ್ರೇಮಿಗಳ ದಿನ ಕಂಡುಬರುತ್ತದೆ.

 ಪ್ರೇಮಿಗಳ   ದಿನವೆಂದರೆ ಅದು ಒಂದು ದಿನದ್ದಲ್ಲ.  ಪ್ರೀತಿ ಸಾಗರದಂತೆ, ಪ್ರೀತಿಯನ್ನು ಗೆಲ್ಲಲು ದುಬಾರಿ ಗಿಪ್ಟ್ ಕೊಟ್ಟರೆ ಸಾಲದು, ಭಾವನೆಗಳ ಸ್ಪಂದನೆಯ ಗಿಫ್ಟ್ ಕೊಡಬೇಕು, ಪ್ರೇಮವನ್ನು ಪೋಷಿಸಬೇಕು. ಅವರಿಗಿಷ್ಟವಾದ ಪ್ರೀತಿಯ ಸಂಕೇತಗಳನ್ನೋ, ಮೆಚ್ಚಿನ ಉಡುಗೊರೆಯನ್ನೋ, ಕೊಟ್ಟು ನಿಮ್ಮ ಸಂಗಾತಿಗೊಂದು ಗುಲಾಬಿ ನೀಡಿ ಮುತ್ತಿಡಬೇಕು. ಪ್ರೀತಿಯನ್ನು ಗೆಲ್ಲಲು ಶ್ರಮ ಪಡುವ ಅಗತ್ಯವಿಲ್ಲ  ಪ್ರೀತಿ, ನಂಬಿಕೆ ಬಲವಾಗಿದ್ದರೆ ಸಾಕು. ಪ್ರೇಮಿಗಳ ದಿನದ ಆಚರಣೆ ಆಡಂಬರದಿಂದ ಕೂಡಿರಬಾರದು. ಸಹಜವಾದ ನೈಜ ಪ್ರೀತಿ ಇರಬೇಕು. ತನ್ನ ಪ್ರಿಯತಮೆಗಾಗಿ ಒಂದಿಷ್ಟು ಸಮಯ ಮೀಸಲಿಡುವುದು, ಬೇಕು ಬೇಡಗಳನ್ನು ಅರಿಯುವುದು, ಆಕೆಯ ಮಾತುಗಳನ್ನು ಗಮನವಿಟ್ಟು ಆಲಿಸುವುದು. ಆಕೆಗೆ ಕೊಡುವ ಗೌರವ ಮಹತ್ವ. ಪ್ರೇಮಿಗಳಿಬ್ಬರಲ್ಲಿ ಯಾರೂ ಹೆಚ್ಚಲ್ಲ ಕಡಿಮೆಯಲ್ಲ, ಪ್ರೀತಿಯನ್ನು ಉಳಿಸಿಕೊಳ್ಳಲು ನಿರಂತರ ಶ್ರಮ ಅಗತ್ಯ. ಹೆಣ್ಣನ್ನು ಅರ್ಥಮಾಡಿಕೊಂಡರೆ ಆಕೆಯ ಕಣ್ಣೀರು ಅರ್ಥವಾಗುತ್ತದೆ. ಪ್ರೀತಿ ಮುಗಿಯದ ಪಯಣ. `ಪ್ರೀತಿ ಮಧುರ ಪ್ರೇಮ ಅಮರ.’

`ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು
ಅದಕು ಇದಕು ಎದಕು’

ದ.ರಾ.ಬೇಂದ್ರೆಯವರ ಕಾವ್ಯ ದಾಂಪತ್ಯ ಬದುಕನ್ನು ಗಟ್ಟಿಗೊಳಿಸುತ್ತದೆ. ಶ್ರೀಮಂತಿಕೆಯಿದ್ದರೆ ಮಾತ್ರ ಬದುಕು ಸುಖವನ್ನು ನೀಡುವುದಿಲ್ಲ. ದಂಪತಿಗಳು ಎಲ್ಲದಕ್ಕೂ  ಪ್ರೀತಿಯನ್ನು ಹಂಚಿಕೊಂಡು ಪರಸ್ಪರ ಒಬ್ಬರನ್ನೊಬ್ಬರು ಅರಿತು  ಪ್ರೀತಿಯಿಂದ ಬಳಿದರೆ ಮಾತ್ರ ಸುಖೀ ದಾಂಪತ್ಯ.  

ಮದುವೆಗೆ ಮೊದಲಿದ್ದ ಪ್ರೀತಿ ಮದುವೆಯಾದಾಕ್ಷಣ  ಮಾಸಬಾರದು.  ಪ್ರೀತಿ ಸದೃಢವಾಗಬೇಕು. ತಪ್ಪು ಯಾರೆ ಮಾಡಿದರೂ ಆ ತಪ್ಪನ್ನು ಒಬ್ಬರ ಮೇಲೆ ಒಬ್ಬರು ಹಾಕಬಾರದು. ನಿಮ್ಮ ಮಾತುಗಳಿಂದ  ಆಕಷ್ಮಾತ್ ತಪ್ಪಾಗಿದ್ದರೆ ಕ್ಷಮೆ ಕೇಳಬೇಕು.   ಯಾರೂ ಯಾರ ಮೇಲೂ ಕೋಪಗೊಳ್ಳಬಾರದು. ಮನೆಯ ಆದಾಯ-ಖರ್ಚುಗಳ ಬಗ್ಗೆ ಪರಸ್ಪರ ಚರ್ಚಿಸಿ ಸರಿದೂಗಿಸಬೇಕು.  ಬೇರೆ ಮನೆಯ ದಂಪತಿಗಳನ್ನು  ಹೋಲಿಸಿ ನೊವುಂಟು ಮಾಡಬಾರದು. ಗಂಡನ ಮಾನಸಿಕ ಸದೃಢತೆಯನ್ನು ಗಟ್ಟಿಗೊಳಿಸಲು ಹೆಂಡತಿಯಿಂದ ಮಾತ್ರ ಸಾಧ್ಯ. ದಂಪತಿಗಳು ಪರಸ್ಪರ ಸಂಶಯ ಪಡಬಾರದು.

ಅನೇಕ ದಂಪತಿಗಳು ಕೇವಲ ರೂಂಮೇಟ್‍ಗಳಂತೆ ಜೀವಿಸುತ್ತಿದ್ದು, ಅವರವರಿಗೆ ಇಷ್ಟವಾಗುವ ಹಾಗೆ ಬದುಕುತ್ತಿದ್ದಾರೆ. ಇತ್ತಿಚೆಗೆ ನವ ಜೋಡಿ ಹಕ್ಕಿಗಳು ಗಂಡನನ್ನು ಬಿಟ್ಟು ಅವಳ ಸ್ನೇಹಿತರ ಜೊತೆ ಅವಳು, ಹೆಂಡತಿಯನ್ನು ಬಿಟ್ಟು ಇವನ ಸ್ನೇಹಿತರ ಜೊತೆ ಇವನು ಸುತ್ತಾಡಿ ಬರುವುದು ಸಾಮಾನ್ಯವಾಗಿದೆ.   ಇದು ತಪ್ಪಲ್ಲ ಆದರೆ ಗಂಡ ಹೆಂಡತಿ ಜೊತೆಯಲ್ಲಿ ಇದ್ದರೆ ಆ ಮಧುರ ಕ್ಷಣಗಳನ್ನು ಮರೆಯಲು ಸಾಧ್ಯವೆ?

`ಬೆಚ್ಚನೆಯಾ ಮನೆಯಿರಲು
ವೆಚ್ಚಕ್ಕೆ ಹೊನ್ನಿರಲು

ಇಚ್ಛೆಯನರಿವ ಸತಿ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’

ಪತಿ-ಪತ್ನಿ ನಡುವಿನ ಸಂಬಂಧ ಮಧುರವಾಗಿದ್ದರೆ ಆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ನೆಲೆಸಿರುತ್ತೆ.  ದಾಂಪತ್ಯ  ಜೀವನದ ದೀರ್ಘ ಪಯಣದಲ್ಲಿ ಆಗಾಗ ಜಗಳ, ಹುಸಿಮುನಿಸು ಎಲ್ಲವೂ ಕಾಮನ್. ಯಾಕಂದ್ರೆ ಜಗಳವಾಡದ ಗಂಡ ಹೆಂಡತಿ ಇಲ್ಲವೆ ಇಲ್ಲ. ಒಂದು ವೇಳೆ ಜಗಳವೇ ಆಡಿಲ್ಲವೆಂದರೆ `ಗಂಡ ಕಿವುಡನಿರಬೇಕು,  ಇಲ್ಲ ಹೆಂಡತಿ ಮೂಕಿ ಇರಬೇಕು.’  ಜಗಳ ಮಿತಿಯೊಳಗಿದ್ದರೆ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಇಲ್ಲದಿದ್ದರೆ ಮನಸ್ಸಿನ ನೆಮ್ಮದಿ ಹಾಳಾಗಬಹುದು. ದಾಂಪತ್ಯ ಜೀವನ ಸುಮಧುರವಾಗಿ, ಶಾಂತಿ, ನೆಮ್ಮದಿ ಎಲ್ಲವೂ ನೆಲೆಸಲು,  ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಗೌರವಾದರದ’ ಭಾವನೆಗಳನ್ನು ಹಂಚಿಕೊಂಡು ಬಾಳಿದರೆ ಸ್ವರ್ಗ ಸುಖ. ದಂಪತಿಗಳೆ ನಿತ್ಯ ನೂತನ ನಿಜ ಪ್ರೇಮಿಗಳು.


 ನಿತ್ಯ ನೂತನ ಪ್ರೇಮಿಗಳಿವರು... ! - Janathavaniಹೆಚ್.ಮಲ್ಲಿಕಾರ್ಜುನ 
`ಉತ್ತಮ ಉಪನ್ಯಾಸಕ’ ರಾಜ್ಯ ಪ್ರಶಸ್ತಿ ಪುರಸ್ಕೃತರು, ಹರಪನಹಳ್ಳಿ.
[email protected]

error: Content is protected !!