ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ಜಾರಿಗೆ ತಂದಿರುವ ಪರಿಸರ ಸ್ನೇಹಿ ಸೈಕಲ್ ವ್ಯವಸ್ಥೆಗೆ ಆರಂಭಿಕ ದಿನಗಳಲ್ಲಿ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ವಿದ್ಯಾರ್ಥಿಗಳೇ ಹೆಚ್ಚಿನದಾಗಿ ಸೈಕಲ್ ಬಳಕೆಗೆ ಉತ್ಸುಕತೆ ತೋರಿದ್ದಾರೆ.
ಜನವರಿ 26 ರಂದು ಬೈಸಿಕಲ್ ಶೇರಿಂಗ್ ಸಿಸ್ಟಮ್ ಉದ್ಘಾಟನೆಯಾ ಗಿತ್ತು. ಫೆ.2 ರಿಂದ ಅಧಿಕೃತವಾಗಿ ಸೇವೆ ಆರಂಭವಾಗಿತ್ತು. ಪೆಟ್ರೋಲ್, ಡೀಸೆಲ್ ದರ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪರಿಸರ ಸ್ನೇಹಿ ಸೈಕಲ್‌ಗಳು ನಗರದ ಜನತೆಗೆ ವರದಾನ ಎನ್ನಬಹುದು.
ನಗರದ ವಿವಿಧೆಡೆ ಸುಮಾರು 20 ಸ್ಥಳದಲ್ಲಿ ಈ ಸೇವೆ ಕಲ್ಪಿಸಲು ಉದ್ದೇಶಿಸಲಾಗಿತ್ತು. ಆದರೆ ಸದ್ಯ 18 ಕಡೆ ಡಾಕಿಂಗ್ ಸೆಂಟರ್ ತೆರೆಯಲಾಗಿದೆ. ಸುಮಾರು 400ಕ್ಕೂ ಹೆಚ್ಚು ಜನರು ಬೈಸಿಕಲ್ ಸೇವೆ ಪಡೆಯುವ ಸಲುವಾಗಿ ಆಪ್ ಡೌನ್ ಲೋಡ್ ಮಾಡಿಕೊಂಡಿ ದ್ದಾರೆ. 300ಕ್ಕೂ ಹೆಚ್ಚು ಜನರು ತಮ್ಮ ವ್ಯಾಲೆಟ್‌ನಲ್ಲಿ ಹಣ ಉಳಿಸಿಕೊಂಡಿ ದ್ದಾರೆ. ಬಿಐಇಟಿ ಕಾಲೇಜು, ವಿದ್ಯಾ ನಗರ ಕೊನೆಯ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಬಳಿಯ ಡಾಕಿಂಗ್ ಸೆಂಟರ್‌ನಲ್ಲಿ ಬೈಸಿಕಲ್‌ಗಳ ಬಳಕೆ ಹೆಚ್ಚಾಗಿದೆ. ಕಾಲೇಜುಗಳ ಸಮೀಪ ವಿದ್ಯಾರ್ಥಿಗಳು ಸೈಕಲ್‌ಗಳನ್ನು ಬಳಸಲಾರಂಭಿಸಿದ್ದಾರೆ.
ಅಂದಹಾಗೆ ನಗರದಲ್ಲಿ ಸದ್ಯ ಸಾಮಾನ್ಯ ಬೈಸಿಕಲ್ ಗಳು ಮಾತ್ರ ಸೇವೆಗೆ ಲಭ್ಯವಿವೆ. ಎಲೆಕ್ಟ್ರಿಕಲ್ ಬೈಸಿಕಲ್ ಸೇವೆ ಪಡೆಯಲು ಇನ್ನೂ ಒಂದು ತಿಂಗಳು ಕಾಯಬೇಕಿದೆ. ಕೊರೊನಾ ಹಿನ್ನೆಲೆಯಲ್ಲಿ ಎಲೆಕ್ಟ್ರಿಕಲ್ ಬೈಸಿಕಲ್ ತಯಾರಿಕೆಯಲ್ಲಿ ತೊಡಕಾಗಿದ್ದು, ತಡವಾಗಲು ಕಾರಣ. ಇನ್ನು ಕೆಲವೇ ದಿನಗಳಲ್ಲಿ ಅವುಗಳೂ ರಸ್ತೆಗಳಿಯಲಿವೆ.
ದಾವಣಗೆರೆಯಲ್ಲಿ `ಬೈಸಿಕಲ್ ಶೇರಿಂಗ್ ಸಿಸ್ಟಂ’ ಯೋಜನೆ ಇತ್ತೀಚೆಗಷ್ಟೇ ಆರಂಭವಾಗಿದೆ. ದಿನೇ ದಿನೇ ಇಂಧನ ದರ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂಧನ ರಹಿತ ವಾಹನಗಳಿಗೆ ಉತ್ತೇಜನ ನೀಡುತ್ತಿದೆ. ಬೈಸಿಕಲ್ ಉಪಯೋಗಿಸುವುದರಿಂದ ನಾಗರಿಕರ ಆರೋಗ್ಯವೂ ಸುಧಾರಣೆಯಾಗುವುದರಿಂದ ಜನತೆ ಈ ಯೋಜನೆ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಪ್ರೋತ್ಸಾಹಿಸಬೇಕು.
– ರವೀಂದ್ರ ಮಲ್ಲಾಪುರ, ವ್ಯವಸ್ಥಾಪಕ ನಿರ್ದೇಶಕರು, ದಾವಣಗೆರೆ ಸ್ಮಾರ್ಟ್ ಸಿಟಿ ಲಿ.,
ನಗರದಲ್ಲಿ ಒಟ್ಟು 18 ಡಾಕಿಂಗ್ ಸೆಂಟರ್
ಬಿಐಇಟಿ ಕಾಲೇಜಿನ ಮುಖ್ಯದ್ವಾರ, ಹಿಂದಿನ ದ್ವಾರ, ನೂತನ ಕಾಲೇಜು, ವಿದ್ಯಾನಗರ, ಐಟಿಐ ಕಾಲೇಜು, ಡಿಆರ್ಆರ್ ಪಾಲಿಟೆಕ್ನಿಕ್ ಕಾಲೇಜು, ಡಿಆರ್ಎಂ ಕಾಲೇಜು, ಕಾಳಿದಾಸ ಸರ್ಕಲ್, ಚಿಕ್ಕಮ್ಮಣಿ ಬಡಾವಣೆ, ರೈಲ್ವೆ ನಿಲ್ದಾಣ, ದೃಶ್ಯಕಲಾ ವಿದ್ಯಾಲಯ, ಗುಂಡಿ ಸರ್ಕಲ್, ಜಿಎಂಐಟಿ ಕಾಲೇಜು, ಜಿಲ್ಲಾಧಿಕಾರಿ ಕಚೇರಿ, ಬಿಎಸ್ಎನ್ಎಲ್ ಕಚೇರಿ, ಅಗ್ನಿಶಾಮಕ ಠಾಣೆ ಬಳಿ, ಒಳಾಂಗಣ ಕ್ರೀಡಾಂಗಣ, ರಿಂಗ್ ರಸ್ತೆ ಹೀಗೆ 18 ಕಡೆಗಳಲ್ಲಿ ಡಾಕಿಂಗ್ ಸೆಂಟ ರ್ಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಬಳಿ ಡಾಕಿಂಗ್ ಸೆಂಟರ್ಗಳು ಆರಂಭವಾಗಲಿವೆ.
ಸ್ಮಾರ್ಟ್ ಸೈಕಲ್ ಬಳಕೆ ಹೇಗೆ?
ಮೊಬೈಲ್ ಪ್ಲೇ ಸ್ಟೋರ್ನಲ್ಲಿ ಕೂ ರೈಡ್ಸ್ (Coo Rides) ಆಪ್ ಡೌನ್ ಲೋಡ್ ಮಾಡಿಕೊಂಡು ಆಧಾರ್ ಅಥವಾ ಇನ್ನಿತರೆ ಯಾವುದೇ ಸರ್ಕಾರಿ ಭಾವಚಿತ್ರವುಳ್ಳ ಗುರುತಿನ ಚೀಟಿಯೊಂದಿಗೆ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಸೈಕಲ್ ಬಳಕೆಯ ಯೋಜನೆ ಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಂಡು ವ್ಯಾಲೆಟ್‌ಗೆ ಹಣ ವರ್ಗಾಯಿಸಿಕೊಳ್ಳಬೇಕು. ನಂತರ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸೈಕಲ್ ಅನ್ ಲಾಕ್ ಮಾಡಿಕೊಂಡು ಸೈಕಲ್ ಬಳಸಬಹುದು. ಸಹಾಯ ಬೇಕಾದಲ್ಲಿ 8448449690ಗೆ ಕರೆ ಮಾಡಬಹುದು. ಅಥವಾ ವಾಟ್ಸಾಪ್ ಮಾಡಬಹುದಾಗಿದೆ.
ವಾರದ 7 ದಿನವೂ ಸೇವೆ ಲಭ್ಯ
ವಾರದ ಏಳು ದಿನ, ವರ್ಷದ 365 ದಿನವೂ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಗೆವರೆಗೆ ಸೈಕಲ್ ಸೇವೆ ಲಭ್ಯವಿರಲಿದೆ. ಸಂಜೆಯ ಬೈಸಿಕಲ್ ಸವಾರಿಗೆ ಅಥವಾ ಬೆಳಗಿನ ವ್ಯಾಯಾಮದ ದಿನಚರಿಗಾಗಿಯೂ ಸೈಕಲ್‌ಗಳನ್ನು ಉಪಯೋಗಿಸಬಹುದಾಗಿದೆ.
20 ಸೈಕಲ್‌ಗಳನ್ನು ನಿಲ್ಲಿಸಬಹುದಾದ ಒಂದು ಡಾಕಿಂಗ್ ಸೆಂಟರ್‌ನಲ್ಲಿ ಸದ್ಯ 10 ಸೈಕಲ್‌ಗಳ ಲಭ್ಯವಿರುತ್ತವೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಸೈಕಲ್‌ಗಳು ಸೇರ್ಪಡೆಗೊಳ್ಳಲಿವೆ. ಆಟೋ ಬಸ್‌ಗಳಿಗೆ ಕಾಯುವ ಬದಲು ಜನತೆ ಬೈಸಿಕಲ್ ಬಳಸಬಹುದಾಗಿದೆ. ಒಂದು ಡಾಕಿಂಗ್ ಸೆಂಟರ್‌ನಲ್ಲಿ ಬೈಸಿಕಲ್ ಪಡೆದವರು ಅದೇ ಡಾಕಿಂಗ್ ಸೆಂಟರ್ ಅಥವಾ ಬೇರೆ ಯಾವುದೇ ಡಾಕಿಂಗ್ ಸೆಂಟರ್‌ನಲ್ಲಿ ಸೈಕಲ್ ಬಿಟ್ಟು ಹೋಗಬಹುದು.
ನಗರದಲ್ಲಿ ಒಂದು ಕಡೆಯಿಂದ ಮತ್ತೊಂದೆಡೆ ತುರ್ತಾಗಿ ತೆರಳುವ ಸಂದರ್ಭದಲ್ಲಿ ಸೈಕಲ್‌ಗಳು ನೆರವಾಗುತ್ತಿವೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಹಾಯಕ ಎಂಜಿನಿಯರ್ ಪ್ರಮೋದ್.
ನಗದು ಹಣ ಬಳಕೆ ಇಲ್ಲ : ಸೈಕಲ್ ಸೇವೆಗೆ ನಗದು ಹಣ ಬಳಸಲಾಗದು. ಆಪ್ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಯುಪಿಐ ಇಲ್ಲವೇ ನೆಟ್ ಬ್ಯಾಂಕಿಂಗ್ ನಂತರ ಡಿಟಿಟಲ್ ಪಾವತಿ ವ್ಯವಸ್ಥೆ ಬಳಸಿಕೊಂಡು ವ್ಯಾಲೆಟ್‌ಗೆ ಹಣ ವರ್ಗಾಯಿಸಿಕೊಂಡು ಸೈಕಲ್ ಸೇವೆ ಪಡೆದು ಹಣ ಪಾವತಿಸಬೇಕಿದೆ.
ವ್ಯಾಲೆಟ್‌ನಲ್ಲಿ ಕನಿಷ್ಟ 50 ರೂ. ಇರಲಿ: ಸೈಕಲ್ ಸೇವೆಗೆ ಮೂವತ್ತು ದಿನಗಳಿಗೆ 100 ರೂ., 90 ದಿನಗಳಿಗೆ 250 ರೂ. ಅಥವಾ 180 ದಿನಗಳಿಗೆ 400 ರೂ. ನೀಡಿ ಚಂದಾದಾರರಾಗಲು ಅವಕಾಶಗಳಿವೆ. ನಂತರ ಪ್ರತಿ ಸೈಕಲ್ ಸವಾರಿಗೆ 30 ನಿಮಿಷ ಹಾಗೂ ಇ-ಬೈಕ್ ಸವಾರಿಗೆ 15 ನಿಮಿಷಗಳ ಸವಾರಿ ಉಚಿತವಿದೆ. ನಂತರ 30 ನಿಮಿಷಕ್ಕೆ 10 ರೂ. ಸೈಕಲ್ ಸವಾರಿಗೆ ಹಾಗೂ 15 ನಿಮಿಷಕ್ಕೆ 10 ರೂ.ಗಳಂತೆ ಇ-ಬೈಕ್ ಸವಾರಿಗೆ ಹಣ ನೀಡಬೇಕಿದೆ. ಸೈಕಲ್ ಅನ್‌ಲೈಕ್ ಮಾಡಲು ಕನಿಷ್ಟ 50 ರೂಪಾಯಿ ವಾಲೆಟ್ ಬಾಕಿ ಅಗತ್ಯವಿದೆ.
ವಾಹನ ಕಳೆದರೆ? : ಈ ಬೈಸಿಕಲ್‌ಗಳಲ್ಲಿ ಜಿಪಿಆರ್‌ಎಸ್, ಟ್ರ್ಯಾಕಿಂಗ್, ಮೊಬೈಲ್ ಅಪ್ಲಿಕೇಶನ್ ಅಳವಡಿಸಲಾಗಿದೆ. ಹಾಗಾಗಿ ಬೈಸಿಕಲ್ ಕಳವು ಮಾಡಿದರೂ ಪತ್ತೆ ಹಚ್ಚಲಾಗುತ್ತದೆ. ನೀವು ಬಳಸಲು ಪಡೆದ ಸೈಕಲ್ ಅಥವಾ ಇ-ಬೈಕ್‌ನ ಸವಾರಿ ಕೊನೆಗೊಳ್ಳುವವರೆಗೂ ಜವಾಬ್ದಾರಿ ಗ್ರಾಹಕನದ್ದೇ ಆಗಿರುತ್ತದೆ. ದುರುಪಯೋಗ ಪಡಿಸಿಕೊಂಡಿದ್ದು ಗೊತ್ತಾದರೆ ದಂಡ ತೆರಬೇಕಾಗುತ್ತದೆ.
ಮುಂದಿನ ಕೇಂದ್ರ ಖಾಲಿ ಇದೆಯೇ ತಿಳಿದುಕೊಳ್ಳಿ: ಒಂದು ಡಾಕಿಂಗ್ ಸೆಂಟರ್‌ನಿಂದ ವಾಹನ ತೆಗದೆುಕೊಂಡ ತಕ್ಷಣವೇ ಉಳಿದ ಕೇಂದ್ರಗಳಲ್ಲಿನ ಖಾಲಿ ಇರುವ ನಿಲುಗಡೆಗಳ ಸಂಖ್ಯೆಯನ್ನು ಕೂ ರೈಡ್ಸ್ ಆಪ್‌ನ ನಕ್ಷೆಯಲ್ಲಿ ತೋರಿಸುತ್ತದೆ. ತೆರಳಬೇಕಾದ ಸೆಂಟರ್‌ನಲ್ಲಿ ಖಾಲಿ ನಿಲುಗಡೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಯಾವುದಾದರೊಂದು ಕೇಂದ್ರದಲ್ಲಿ ಬೈಸಿಕಲ್ ಅಥವಾ ಇ-ಬೈಸಿಕಲ್ ಸುರಕ್ಷಿತವಾಗಿ ನಿಲ್ಲಿಸುವವರೆಗೂ ಅದರ ಜವಾಬ್ದಾರಿ ನಿಮ್ಮದೇ ಆಗಿರಲಿದೆ.
– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]