“ಮಕ್ಕಳು ಎಳೆತನದಿಂದಲೇ ಬಣ್ಣಗಳೆಡೆಗೆ ಸೆಳೆಯಲ್ಪಡು ತ್ತಾರೆ. ಪೋಷಕರು ತುಸು ಪ್ರೋತ್ಸಾಹವಿತ್ತರೆ ಸಾಕು, ನಮ್ಮ ನೆಲದಲ್ಲಿ ಮತ್ತೊಬ್ಬ ರವಿವರ್ಮನೋ, ಪ್ಯಾಬ್ಲೋ ಪಿಕಾಸೋ ಜನ್ಮ ತಳೆಯಬಹುದು” ಎಂಬ ಆಶಾ ಭಾವನೆ ವ್ಯಕ್ತಪಡಿಸುತ್ತಾರೆ ಚಿತ್ರ ಕಲಾವಿದ ಎ. ಮಹಾಲಿಂಗಪ್ಪ. ಮಿತ್ರ ವಲಯದಲ್ಲಿ ಮಾಲೀ ಎಂದೇ ಜನಜನಿತರಾಗಿರುವ ನಾಡು ಕಂಡ ಅಪ್ರತಿಮ ಚಿತ್ರಕಾರರಲ್ಲಿ ದಾವಣಗೆರೆಯ ಮಹಾಲಿಂಗಪ್ಪನವರು ಮೊದಲ ಸಾಲಿನಲ್ಲಿ ಬರುತ್ತಾರೆ. ಎಪ್ಪತ್ತರ ಈ ವಯಸ್ಸಿನಲ್ಲಿಯೂ ಇಪ್ಪತ್ತರ ಯುವಕರು ನಾಚುವ ಉತ್ಸಾಹದ ಮಾಲೀ ಇಂದಿಗೂ ವಿದ್ಯಾನಗರದ ತಮ್ಮ ಕಲಾ ಪರಿಷತ್ನಲ್ಲಿ ಎಳೆಯರೊಂದಿಗೆ ಬಣ್ಣದಲ್ಲಿ ವಿಹರಿಸುವುದಕ್ಕೇ ಆದ್ಯತೆ ನೀಡುತ್ತಾರೆ. ಅವರು ರಚಿಸಿದ ಕಲಾಕೃತಿಗಳ ಪ್ರದರ್ಶನ ಸಹಾ ನಡೆಯುತ್ತಿದ್ದು, ಇದೇ ಆರರ ರಾತ್ರಿ ಸಮಾರೋಪ ಗೊಳ್ಳಲಿದೆ.
“ಏನ್ ಬೇಕಾದ್ರೂ ಮಾಡ್ತೀನಿ, ಆದ್ರೆ ಈ ಚಿತ್ರ ಬರೆಯೋ ಕಿರಿಕಿರಿ ಮಾತ್ರ ಬೇಡ” ಎಂದು ಶಾಲಾ ದಿನಗಳಲ್ಲಿ ಮೇಸ್ಟ್ರ ಹತ್ರ ಅಂಗಲಾಚಿದ ಬಾಲಕನೇ ಮುಂದೆ ದೇಶ – ವಿದೇಶಗಳಲ್ಲಿ ಚಿತ್ರ ಪ್ರದರ್ಶನ ಮಾಡಿ ಶಹಬ್ಭಾಶ್ ಗಿರಿ ಪಡೆದದ್ದು ಮಾಲೀ ಬದುಕಿನ ವೈಶಿಷ್ಟ್ಯ. ಅನಿವಾರ್ಯವಾಗಿ ಕುಂಚ ಹಿಡಿದ ಮಾಲೀ ಸಾಂಪ್ರದಾಯಿಕ ಪದವಿ – ಕಾನೂನು ಪದವಿಗಳೊಂದಿಗೆ ಐದು ವರ್ಷಗಳ ಡಿಪ್ಲೋಮಾವನ್ನು ಪೇಂಟಿಂಗ್ನಲ್ಲಿ ದಾವಣಗೆರೆಯ ಕಲಾ ಶಾಲೆಯಲ್ಲಿ ಪಡೆದರು. ದೆಹಲಿಯಲ್ಲಿ ಕರಕುಶಲ, ಮುಂಬೈನಲ್ಲಿ ಛಾಯಾಗ್ರಹಣ ತರಬೇತಿಯನ್ನೂ ಹೊಂದಿದರು.
ಎಪ್ಪತ್ತರ ದಶಕದ ಆರಂಭದಲ್ಲಿ ಕಲಾ ಪದವಿ ನಂತರ ವನಿತಾ ಸಮಾಜದ ಆಶ್ರಯದಲ್ಲಿ “ವನಿತಾ ಕಲಾ ನಿಕೇತನ” ವನ್ನು ಆರಂಭಿಸಿ ಮಕ್ಕಳು – ಮಹಿಳೆಯರಿಗೆ ಚಿತ್ರಕಲಾ ತರಬೇತಿ ನೀಡಿದ ಮಾಲೀ ತುಸು ಕಾಲ ತಾವು ಅಧ್ಯಯನ ಮಾಡಿದ ಕಲಾಶಾಲೆ (ಈಗ ವಿ.ವಿ.) ಯಲ್ಲಿಯೂ ಸೇವೆ ಸಲ್ಲಿಸಿದರು. ಆನಂತರದಲ್ಲಿ ಕಲಾವಿದ ಹಾಗೂ ಛಾಯಾಗ್ರಾಹಕನಾಗಿ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಇದೀಗ ದಾವಣಗೆರೆ ವಿದ್ಯಾನಗರದ ಬಾತಿ ರೇವಣಸಿದ್ದಪ್ಪ ಪಾರ್ಕ್ ಎದುರಿನ ತಮ್ಮ ಮನೆಯಲ್ಲಿ ಲಲಿತ ಕಲೆಗಳ ಶ್ರೇಯೋಭಿವೃದ್ಧಿಗಾಗಿ “ದಾವಣಗೆರೆ ಕಲಾ ಪರಿಷತ್ತು” ಮೂಲಕ, ವಿಶೇಷವಾಗಿ ಎಳೆಯರಲ್ಲಿ ಚಿತ್ರಕಲೆಯ ಬಗ್ಗೆ ಅಭಿರುಚಿ ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲಿಯೇ, ಅಂದರೆ ಹತ್ತೊಂಬತ್ತರ ವಯಸ್ಸಿನಲ್ಲಿಯೇ ಹರಿಹರದ ಎಂ.ಕೆ.ಟಿ. ಶಾಲೆಯಲ್ಲಿ ಪ್ರಥಮವಾಗಿ ತಮ್ಮ ಏಕ ವ್ಯಕ್ತಿ ಚಿತ್ರ ಪ್ರದರ್ಶನ ಏರ್ಪಡಿಸಿದ್ದು ಒಂದು ಹೆಗ್ಗಳಿಕೆಯಾದರೆ, ಅದನ್ನು ಉದ್ಘಾಟಿಸಿ ಬೆನ್ನು ತಟ್ಟಿದ್ದು ಗಾನಲೋಕದ ಗಾರುಡಿಗ ದ.ರಾ.ಬೇಂದ್ರೆ !! ಮುಂದಿನ ದಿನಗಳಲ್ಲಿ ದಾವಣಗೆರೆಯ ಕಾನೂನು ಕಾಲೇಜಿನಲ್ಲಿ ಪ್ರದರ್ಶನ ನಡೆಸಿ, ಬಂದ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದು ಮತ್ತೊಂದು ಹೆಗ್ಗಳಿಕೆ.
ಚಿತ್ರಕಲಾ ಪಯಣವನ್ನು ಮುಂದುವರೆಸಿದ ಮಾಲೀ ಹಿಂದಿರುಗಿ ನೋಡಲಿಲ್ಲ! ಬೆಂಗಳೂರು, ದೆಹಲಿ, ಮುಂಬೈ, ಗೋವಾ ಮಾತ್ರವಲ್ಲದೆ, ಅಮೇರಿಕಾದಲ್ಲಿಯೂ ಚಿತ್ರ ಪ್ರದರ್ಶನ – ಕಲಾಕೃತಿಗಳ ಮಾರಾಟವನ್ನು ಯಶಸ್ವಿಯಾಗಿ ಮಾಡಿರುವ ಮಾಲೀ ಲಂಡನ್ನ ನ್ಯಾಷನಲ್ ಆರ್ಟ್ ಗ್ಯಾಲರಿಯಲ್ಲಿಯೂ ಅಧ್ಯಯನ ಮಾಡಿದ ಹೆಗ್ಗಳಿಕೆಗೂ ಪಾತ್ರರಾದವರು. ಕಳೆದ ಐವತ್ತು ವರ್ಷಗಳಲ್ಲಿ ನೂರಾರು ಪ್ರಾತ್ಯಕ್ಷಿಕೆಗಳು, ಪ್ರದರ್ಶನಗಳು, ಲಲಿತ ಕಲಾ ಅಕಾಡೆಮಿಯ ಸದಸ್ಯನಾಗಿ… ಹೀಗೆ ಸಲ್ಲಿಸಿದ ಸೇವೆ – ಪಡೆದ ಪ್ರಶಸ್ತಿಗಳನ್ನು ಜೋಡಿಸಿಡಲು ಅವರ ಮನೆಯಲ್ಲಿ ಜಾಗವೇ ಸಾಲುತ್ತಿಲ್ಲ !
ಮಾಲೀ ಕೇವಲ ಚಿತ್ರಗಾರ ಮಾತ್ರರಲ್ಲ. ಛಾಯಾಗ್ರಾಹಕ, ಬೋಧಕ, ಸಾಹಿತಿ, ಸಂಘಟಕ ….ಇತ್ಯಾದಿ ಎಲ್ಲವೂ !! ಯೌವ್ವನದಲ್ಲಿ ರೋಟರಾಕ್ಟ್ ಕ್ಲಬ್ನಲ್ಲಿ ಜನ ಸೇವೆ ಶುರು ಮಾಡಿದ ಮಾಲೀ ಆನಂತರ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಕಮೀಷನರ್ ಆಗಿದ್ದರು. ಜಿಲ್ಲಾ ಹೋಂ ಗಾರ್ಡ್ಸ್ ಕಮಾಂಡೆಂಟ್ ಆಗಿ ಜನ ಮೆಚ್ಚುವ ಸೇವೆ ಸಲ್ಲಿಸಿದ ಮಾಲೀಯವರು ತಮ್ಮ ಅಧಿಕಾರಾವಧಿಯಲ್ಲಿ ಸಂಸ್ಥೆಗೆ ಹತ್ತು ಎಕರೆ ಜಮೀನನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು. ರಾಷ್ಟ್ರಪತಿಗಳ ಸೇವಾ ಪದಕ, ಮುಖ್ಯಮಂತ್ರಿಗಳ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿರುವ ಮಾಲೀ ಐದು ದಶಕಗಳಲ್ಲಿ ಹತ್ತು ಹಲವು ಸಂಘಟನೆಗಳ ಸಾಮೀಪ್ಯ ಹೊಂದಿದವರು.
ಪ್ರಸ್ತುತ ಜನವರಿ 30 ರಿಂದ ಫೆ.6ರ ವರೆಗೂ ನಡೆಯುತ್ತಿರುವ ಪ್ರದರ್ಶನದಲ್ಲಿ ನಲ್ವತ್ತಕ್ಕೂ ಹೆಚ್ಚಿನ ವೈವಿಧ್ಯ ಕಲಾಕೃತಿಗಳಿವೆ. ಹಳೆಬೇರು, ಹೊಸ ಚಿಗುರು …ಎಂಬಂತೆ ಹಳೆತನ ಬಿಡದೆ, ಹೊಸತನಕ್ಕೆ ತುಡಿಯುತ್ತಿರುವ ನೈಜ ಶೈಲಿಯ ನೃತ್ಯಗಾತಿ, ಮೇಘದೂತ, ರಾಧಾಕೃಷ್ಣ, ಪ್ರಣಯಿಗಳು… ಹೀಗೆ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ನೋಡುಗರಿಗೆ ಹೊಸ ಅನುಭವ ಉಂಟುಮಾಡುತ್ತವೆ. ಆಕ್ರಲಿಕ್ ಮಾಧ್ಯಮದ ಮೂಲಕ ಚಿತ್ರಿತವಾಗಿರುವ “ದಿ ಪವರ್ ಆಫ್ ಮೈಂಡ್” “ಹ್ಯಾಪಿನೆಸ್” “ಟ್ಯೂನಿಂಗ್ ದ ಮೈಂಡ್” “ಅವೇರ್ನೆಸ್ ಆಕ್ಷನ್”… ಮೊದಲಾದವು ಸಾಮಾನ್ಯರ ಮನಕ್ಕೆ ತಲುಪಲು ವಿವರಣೆ ತೀರಾ ಅಗತ್ಯವಾಗಿದ್ದು, ಅಡಿ ಶೀರ್ಷಿಕೆ ಇದ್ದಿದ್ದರೆ ಸಹಾಯಕವಾಗುತ್ತಿತ್ತು.
ವಾಸ್ತವ ಶೈಲಿಯಲ್ಲಿ ಇದ್ದುದನ್ನು ಹಾಗೆಯೇ ತೆರೆದಿರಿಸಿದರೆ, ನೈಜ ಶೈಲಿಯಲ್ಲಿ ಹೊರಗಿನ ಪ್ರೇರಣೆ, ಸ್ಪೂರ್ತಿಗಳಿಂದ ಪ್ರಭಾವಿತನಾಗಿ ಚಿತ್ರಕಾರ ವೈವಿಧ್ಯಮಯ, ಭಿನ್ನ ಕೃತಿಗಳನ್ನು ಅವಿರ್ಭವಿಸುತ್ತಾನೆ. ಆರಂಭದಲ್ಲಿ ವಚನಾಧಾರಿತ ಚಿತ್ರಗಳಲ್ಲಿ ಒಲವಿದ್ದ ಮಾಲೀ ಆನಂತರದಲ್ಲಿ ಅಮೂರ್ತದೆಡೆಗೆ ವಾಲಿರುವುದು ಕಾಣಬರುತ್ತದೆ.
“ಮಕ್ಕಳು ಡಾಕ್ಟರೋ, ಇಂಜಿನಿಯರೋ ಆಗಿ ಡಾಲರ್ ಗಳಿಸಿದರೆ ಸಾಕೆಂಬ ಪೋಷಕರ ಹಂಬಲ, ಎಳೆಯರ ಮನದ ಅಂಚಿನಲ್ಲಿರುವ ಬಣ್ಣದ ಬಗೆಗಿನ ಆಶಯವನ್ನು ಮುರುಟಿಹಾಕುತ್ತಿದೆ” ಎಂಬ ಆತಂಕ ವ್ಯಕ್ತಪಡಿಸುವ ಮಾಲೀ “ಬಣ್ಣ ಮಕ್ಕಳ ಮಾನಸಿಕ – ಬೌದ್ಧಿಕ ಔನ್ನತ್ಯಕ್ಕೂ ಪ್ರೇರಕವಾಗುತ್ತದೆ. ಮಾತ್ರವಲ್ಲ ಒಬ್ಬ ಸಮರ್ಥ ಕಲಾವಿದನಾಗಿ ರೂಪುಗೊಂಡರೆ ದೇಶ – ವಿದೇಶಗಳಲ್ಲಿ ಹೆಸರನ್ನೂ ಗಳಿಸಬಹುದು. ಒಂದೊಂದು ಕಲಾಕೃತಿಯೂ ಲಕ್ಷದ ಲೆಕ್ಕದಲ್ಲಿ ಬಿಕರಿಯಾಗುವ ಅವಕಾಶವೂ ಇರುವುದರಿಂದ ಡಾಲರ್ಗಳೂ ಬರುತ್ತವೆ” ಎಂದು ಕಿವಿಮಾತು ಹೇಳಲು ಮರೆಯುವುದಿಲ್ಲ.
ಸನ್ಮಾನ – ಪ್ರಶಸ್ತಿಗಳ ಹೊರೆ ಹೊತ್ತು ನಿಂತಿರುವ ಮಾಲಿಗೆ ಇನ್ನೂ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕದಿರುವುದು ವಿಪರ್ಯಾಸವೇ ಸೈ ! ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಮಾಲೀ “ಮಕ್ಕಳಲ್ಲಿ ಕುಂಚ ಪ್ರೀತಿ ಮೂಡಿಸಬೇಕು. ಈ ದಿಸೆಯಲ್ಲಿ ನಮ್ಮ, ದೃಶ್ಯ ಕಲಾ ವಿಶ್ವವಿದ್ಯಾಲಯದ ಪಾತ್ರವೂ ಇದೆ. ಜೊತೆಗೆ ಸಮಾಜದ್ದೂ ಸಹಾ!” ಎನ್ನುತ್ತಾರೆ. ಮಹಾಲಿಂಗಪ್ಪನವರ ಕಲಾ ಯಾತ್ರೆ ಮುಂದುವರೆಯಲಿ.
ಹಳೇಬೀಡು ರಾಮ ಪ್ರಸಾದ್
ದಾವಣಗೆರೆ.
[email protected]