ಡಾ. ಮುರುಘಾ ಶರಣರ ಕನಸಿನ ಕೂಸು… `ಮುರುಘಾಶ್ರೀ ಮ್ಯೂಜಿಯಂ’

ಬರೀ ನುಡಿ ಶೂರರಾಗದೇ ನಡೆ ವೀರರಾದವರು. ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠವನ್ನು ಪ್ರಾರಂಭಿಸಿ, ಆಗಲೇ ಮಠದ ಆಶ್ರಯದಲ್ಲಿದ್ದ ಹತ್ತಾರು ಶಾಲಾ-ಕಾಲೇಜುಗಳ ಜೊತೆಗೆ, ಎಸ್.ಜೆ.ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾರಂಭಿಸಿ, ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಬೇಕೆಂಬ ಕನಸನ್ನು ಕಂಡವರು. ಆ ಕನಸನ್ನು ನನಸು ಮಾಡಲು ಶೂನ್ಯಪೀಠವನ್ನೇರಿದವರು ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳವರು. ಅವರು “ಕಾವಿಯೊಳಗಿನ ಕ್ರಾಂತಿಕಾರಿಗಳು” ಸಮಾಜದಲ್ಲಿ ಬೇರೂರಿದ್ದ ಮೌಢ್ಯ, ಅಜ್ಞಾನ, ಅಂಧಕಾರ, ಕಂದಾಚಾರ, ಮೂಢ ನಂಬಿಕೆಗಳನ್ನು ಒದ್ದೋಡಿಸುವುದರಲ್ಲಿ ಮುಂಚೂಣಿಯಲ್ಲಿರುವ ಮಹಾನ್ ಚೇತನ ಅವರು. ಬಸವಣ್ಣನನ್ನೇ ಹಾಸಿಕೊಂಡು, ಬಸವಣ್ಣನನ್ನೇ ಹೊದ್ದುಕೊಂಡು, ಬಸವನಾಮವನ್ನೇ ಉಸಿರಾಡುತ್ತಾ “ಬಸವ ಪಥ-ಮುಕ್ತಿ ಪಥ” ಎಂಬುದನ್ನರಿತು, ಯಾವುದೇ ಟೀಕೆ ಟಿಪ್ಪಣೆಗಳಿಗೆ ಅಂಜದೇ, ಅಳುಕದೇ ದಿಟ್ಟವಾದ ಹೆಜ್ಜೆಗಳನ್ನಿಡುತ್ತಾ ಸಾಗುತ್ತಲಿರುವವರು.

ಬಸವ ತತ್ವವನ್ನು ಸಾಗರದಾಚೆಗೆ ಕೊಡೊಯ್ದವರು, ಬಸವಣ್ಣನವರು ದಯಪಾಲಿಸಿದ ಇಷ್ಟ ಲಿಂಗವನ್ನು, ಆಸಕ್ತರೆಲ್ಲರಿಗೂ ನೀಡಿ, ಶಿವಯೋಗದ ಮಹತ್ವವನ್ನು ಬಹಿರಂಗವಾಗಿ ತಿಳಿಸುತ್ತಿರುವ ಶಿವಯೋಗಿಗಳು, ಮನೆಯಲ್ಲಿ ಮಹಾಮನೆ, ಶರಣ ಸಂಗಮ, ಬಸವ ತತ್ವದಂತೆ ಸರಳ-ಸಹಜ ಕಲ್ಯಾಣ ಮಹೋತ್ಸವದ ರೂವಾರಿ, ಬಸವಣ್ಣ ಕಂಡ “ಸಮ ಸಮಾಜದ” ಕನಸನ್ನು ನನಸು ಮಾಡುವಲ್ಲಿ ಅಹರ್ನಿಷಿ ದುಡಿಯುತ್ತಿರುವವರು.

ಶೂನ್ಯಪೀಠದ ಪರಂಪರೆಯಲ್ಲಿ ಉದಯಿಸಿದ ರವಿಯವರು” ಅವರು. ಕೇವಲ ನುಡಿ ಶೂರರಾಗದೇ, ನುಡಿದಂತೆ ನಡೆ ಇದೇ ಜನ್ಮ ಕಡೆ ಎಂದು, ಬಸವಾದಿ ಶರಣ-ಶರಣೆಯರ ಕಲ್ಯಾಣ ರಾಜ್ಯದ ಆಶಯದ ನುಡಿಗಳನ್ನು ನುಡಿಯುತ್ತಾ, ಆ ದಾರಿಯಲ್ಲಿ ಸಾಗುತ್ತಾ ಇದ್ದಾರೆ.

“ಭಾರತದ ಮಿಸೈಲ್ ಮ್ಯಾನ್ ಎಂದು ಖ್ಯಾತರಾಗಿರುವ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ರವರ ಮಾತಿನಂತೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳಿ ಹಾಗೂ ಕಂಡಂತಹ ಕನಸುಗಳನ್ನು ನನಸು ಮಾಡಿಕೊಳ್ಳಿ, ನಿದ್ರೆಯಲ್ಲಿ ಕಂಡಂತಹ ಕನಸನ್ನು ನನಸು ಮಾಡಿಕೊಳ್ಳಿ, ನಿದ್ರೆಯಲ್ಲಿ ಕಂಡಂತಹ ಕನಸನ್ನು ನನಸಾಗಿಸಲು ನಿದ್ರೆಯನ್ನು ಕೆಡಿಸಿಕೊಳ್ಳಿ, ಸಿಗುವ ಸಮಯವನ್ನು ಸಾರ್ಥಕವಾಗಿ ಬಳಸಿಕೊಳ್ಳಿ” ಎಂಬುದನ್ನು ಅರಿತು ಆಚರಣೆಯಲ್ಲಿ ತಂದವರು ಡಾ|| ಶಿವಮೂರ್ತಿ ಮುರುಘಾ ಶರಣರು.

ವಿಶ್ವದಾದ್ಯಂತ ಹರಡಿದ “Covid-19 ತನ್ನ ಕಬಂಧ ಬಾಹುಗಳನ್ನು ಚಾಚಿದಂತಹ ವಿಷಯ ಸಂದರ್ಭದಲ್ಲಿ ಮುರುಘಾ ಶರಣರು ಚಿಂತಿಸಿ, ಕಂಡ ಕನಸನ್ನು ನನಸು ಮಾಡುವಲ್ಲಿ ಶ್ರಮಿಸಿದ ಫಲವೇ “ಮುರುಘಾಶ್ರೀ ಮ್ಯೂಸಿಯಂ”

ಪ್ರತಿ ದಿವಸ ಲಾಕ್‌ಡೌನ್, ಸೀಲ್‌ಡೌನ್‌ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ಹೇರಿದಾಗ, ಮಠದಲ್ಲಿ ತ್ರಿಕಾಲ ಪೂಜೆ, ಪ್ರಸಾದ, ಅಧ್ಯಯನ, ಅಧ್ಯಾಪನಕಷ್ಟೇ ತಮ್ಮನ್ನು ತೊಡಗಿಸಿಕೊಳ್ಳದೇ, ಮಠದಲ್ಲಿ ಸಂಗ್ರಹಿಸಲ್ಪಟ್ಟಿದ್ದ, ವಚನದ ಕಟ್ಟುಗಳು, ಹಳೆಯ ಕಾಲದ ನಾಣ್ಯಗಳು, ಸ್ಟಾಂಪ್‌ಗಳು ಮತ್ತು ಮನೆಯಲ್ಲಿ ಉಪಯೋಗಿಸುತ್ತಿದ್ದ ಮಣ್ಣಿನ, ಹಿತ್ತಾಳೆಯ, ಕಂಚಿನ ಪಾತ್ರೆ, ಪಡಗಗಳು ವಿವಿಧ ನಮೂನೆಯ ಗಡಿಯಾರಗಳು, ಬೆರಳಚ್ಚು ಯಂತ್ರಗಳು, ಕ್ಯಾಮೆರಾಗಳು, ಬೀಗ, ಬೀಗದ ಕೈಗಳು, ದೀಪಸ್ಥಂಭಗಳು, ಕತ್ತಿ, ಗುರಾಣಿ, ಶಿರಸ್ತ್ರಾಣ ಇತ್ಯಾದಿ ಯುದ್ದೋಪಯೋಗಿ ಸಾಮಗ್ರಿಗಳು.

ದೊಡ್ಡದೊಡ್ಡ ಹಂಡೆ-ಕೊಡಪಾನಗಳು, ಬಾಂಡಲಿಗಳು, ಲೋಟ, ಚಮಚೆಗಳು ಕಲ್ಲಿನ, ಮರದ, ಲೋಹದ ಶಿಲ್ಪಗಳು, ಅಮೃತ ಶಿಲೆಯ ಕುಶಲ ಕುಸುರಿ ಕೆಲಸದ ವಸ್ತುಗಳು ಬಗೆಬಗೆಯ ಚಿತ್ತಾರ, ಚಿತ್ತಾರದ ಬೊಂಬುಗಳು, ತಪ್ಪಲೆಗಳು, ಆನೆ, ಕುದುರೆ, ಒಂಟೆ, ನಾಯಿ ಇತ್ಯಾದಿ ಲೋಹದ ಶಿಲ್ಪಕಲೆಯ ವಸ್ತುಗಳು.

ಶ್ರೀಮಠದ ಮೇನಾ, ರಜತ ಸಿಂಹಾಸನ, ಬಗೆಬಗೆಯ ಕುರ್ಚಿ, ಮೇಜುಗಳು, ಗಂಟೆ-ಜಾಗಟೆಗಳು, ಗೆಜ್ಜೆ ಸರಗಳು, ಅಲಂಕಾರಿಕ ವಸ್ತುಗಳು ಅಪರೂಪದ ಪೇಂಟಿಂಗ್‌ಗಳು, ಗೃಹೋಪಯೋಗಿ ಹಿತ್ತಾಳೆಯ ಸ್ಟೋವ್‌ಗಳು, ಒಲೆಗಳು, ಬಾಂಡಲಿಗಳು, ದೊಡ್ಡ ದೊಡ್ಡ ಹಂಡೆಗಳು, ಕಲ್ಲಿನ ದೊಡ್ಡ ದೊಡ್ಡ ಬಾನಿಗಳು, ವೀರಗಲ್ಲುಗಳು, ಮಾಸ್ತಿ ಕಲ್ಲುಗಳು, ಬೃಹತ್ ಗಾತ್ರದ ಬೀಸುವ ಕಲ್ಲುಗಳು, ಮುದ್ರಣ ಸಾಮಗ್ರಿಗಳು, ಹೊಲಿಗೆ ಯಂತ್ರಗಳು, ಕತ್ತಿ-ಗುರಾಣಿ, ಶಿರಸ್ತ್ರಾಣಗಳು.

ಮಠ ನಡೆದು ಬಂದ ದಾರಿಯ ಅನೇಕ ಚಿತ್ರಗಳು, ಮಠಾಧಿಪತಿಗಳಿಗೆ ಸಲ್ಲಿಸಿದ ನೂರಾರು ಬಿನ್ನಹ ಪತ್ರಗಳು, ಮಠದ ಪ್ರಕಟಣೆಗಳು ಇತ್ಯಾದಿ. ಸುಂದರ ಹಚ್ಚ ಹಸಿರಿನ ನೆಲಹಾಸಿನ ಮೇಲೆ ಎರಡು ಅಂತಸ್ತುಗಳಲ್ಲಿರುವ ಈ ಮ್ಯೂಜಿಯಂನ ಪ್ರವೇಶ ದ್ವಾರದಲ್ಲಿಯೇ, ಬೃಹತ್‌ ಗೌತ್ರದ ಫಿರಂಗಿಗಳು, ವೀರಗಲ್ಲುಗಳು, ಮಾಸ್ತಿ ಕಲ್ಲುಗಳು, ಶೂರಗಲ್ಲುಗಳು ಕಲ್ಲಿನ ಆನೆಗಳು ಸ್ವಾಗತಿಸುತ್ತವೆ.

ಚಿತ್ತಾರದ ಬಾಗಿಲನ್ನು ದಾಟಿ ಒಳ ನಡೆದೊಡೆ ತಟ್ಟನೆ ಕಣ್ಣಿಗೆ ಬೀಳುವುದು, “ಸರ್ವಾಲಂಕರಗೊಂಡ ಪಲ್ಲಕ್ಕಿ, ಪಲ್ಲಕ್ಕಿಯನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಆನಂದ,  ಜೊತೆಗೆ ಛತ್ರಿ, ಚಾಮರಗಳು, ಪಟಗಳು ಇತ್ಯಾದಿ.

ಅರಿದೊಡೆ ಶರಣ, ಮರೆದೊಡೆ ಮಾನವ
ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ,
ದಯೆ, ಕಾಯಕ, ದಾಸೋಹ, ಅರಿವು
ಸಮಾನತೆ ಶಿವಯೋಗ ಎನ್ನುವ ಬಿರುದಾವಳಿಗಳ ಪಟಗಳು ಫಳಫಳ ಹೊಳೆಯುತ್ತಾ ಹೊಚ್ಚ ಹೊಸದಾಗಿ ಕಾಣುತ್ತದೆ.

ವಸ್ತು ಸಂಗ್ರಹಾಲಯಗಳು ಅಂದರೆ ಕಲೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವ  ದೊಡ್ಡ ಉಗ್ರಾಣಗಳು. “ಶ್ರೀ ಮಠದ ಆವರಣದಲ್ಲಿರುವ ಮುರುಘಾ ವನಕ್ಕೆ ಕಿರೀಟ ಪ್ರಾಯವಾಗಿ ಮುರುಘಾ ಶ್ರೀ ಮ್ಯೂಜಿಯಂ ಕಂಗೊಳಿಸುತ್ತಿದೆ.” “ಚಿತ್ರದುರ್ಗದ ಪ್ರವಾಸ ಅಂದರೆ ಪ್ರಾಚೀನ ಕೋಟೆ-ಕೊತ್ತಲಗಳು, ನವೀಕೃತಗೊಂಡ ಮುರುಘಾ ಮಠ, ಮುರುಘಾ ವನ ಮತ್ತು ಮುರುಘಾಶ್ರೀ ಮ್ಯೂಜಿಯಂ ಎಂಬುದು ಅತಿಶಯೋಕ್ತಿ ಮಾತಲ್ಲ”. ಒಂದೇ ಎರಡೇ ಒಪ್ಪವಾಗಿ ಚೊಕ್ಕವಾಗಿ ಜೋಡಿಸಿರುವ ವಸ್ತುಗಳನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ.

“ಕಂಗಳು ತುಂಬಿದ ಬಳಿಕ ನೋಡಲಿಲ್ಲ” ಎನ್ನುವಂತೆ ಕಣ್ಣಿದ್ದಾಗ ನೋಡಿ ಕಣ್ಣಿನ ಸೂತಕವನ್ನು ಕಳೆದುಕೊಳ್ಳುವ ಒಂದು ಸುವರ್ಣಾವಕಾಶವನ್ನು ಮುರುಘಾ ಶ್ರೀಗಳು ಕರುಣಿಸಿದ್ದಾರೆ.

ಮೂಗೂರು ಮಲ್ಲಪ್ಪನವರು ಜೋಗದ ವೈಭವ ಕುರಿತು ಹೇಳುವಂತೆ ಸಾಯುವುದರೊಳಗೆ ನೋಡು ಒಮ್ಮೆ ಮುರುಘಾಶ್ರೀ ಮ್ಯೂಸಿಯಂ ಅನ್ನು, ಮುರುಘಾ ವನವನ್ನು, ಮುರುಘಾಮಠದ ಪ್ರಶಾಂತ ವಾತಾವರಣವನ್ನು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರು ಹೇಳುವಂತೆ ಸ್ವಚ್ಛ ಅಭಿಯಾನ, ಸ್ವಚ್ಛ ಪರಿಸರ, ಸ್ವಚ್ಛ ಭಾರತ್ ಇಲ್ಲಿ ಅನಾವರಣಗೊಂಡಿದೆ.

“ಕಾವೇರಿ ರಂಗನ ನೋಡದ ಕಂಗಳಿದ್ಯಾಕೋ” ಎಂಬ ದಾಸವಾಣಿಯಂತೆ, ಮುರುಘಾಮಠದ ಚೆಲುವು ನೋಡದ ಕಂಗಳಿದ್ಯಾತಕೋ ಎಂದು ಘಂಟಾಘೋಷವಾಗಿ ಹೇಳಬಹುದು.


ಎಂ.ಕೆ. ಬಕ್ಕಪ್ಪ
ಸಹ ಕಾರ್ಯದರ್ಶಿ, ಶ್ರೀ ಜಗದ್ಗುರು ಮುರುಘರಾಜೇಂದ್ರ
ಶಿವಯೋಗಾಶ್ರಮ ಟ್ರಸ್ಟ್ (ರಿ.), ದಾವಣಗೆರೆ.

error: Content is protected !!