ಸ್ಮಾರ್ಟ್ ಸಿಟಿಯ ಸೈಕಲ್ ಶೇರಿಂಗ್ ದಾವಣಗೆರೆಯಲ್ಲಿ ಆರಂಭವಾಯಿತು ಎಂಬ ಸುದ್ದಿ ಓದಿದ ತಕ್ಷಣ, ಒಂದು ರೂಪಾಯಿ ಕೊಟ್ಟು ಬಾಡಿಗೆ ಸೈಕಲ್ ಹೊತ್ತು ತರುತ್ತಿದ್ದ §ಆ ದಿನಗಳು’ ನೆನಪಾದವು. ಮಾನ ವೀಯ ನೆಲೆಗಟ್ಟಿನ ಮುಖಾಮುಖಿ ಸಂಬಂಧದ ಆಧಾರದ ಮೇಲೆ ಸೈಕಲ್ ಬಾಡಿಗೆ ತರುತ್ತಿದ್ದ ದಿನಗಳು ಹೋಗಿ, ಮುಖವೇ ಕಾಣದೇ ಆಧಾರ್ನ ಆಧಾರದ ಮೇಲೆ ಸೈಕಲ್ ಬಾಡಿಗೆ ಪಡೆಯುವ §ಇ-ದಿನ’ಗಳೀಗ ಬಂದಿವೆ.
ಆದರೆ, ಸೈಕಲ್‌ಗಳು ಈಗಿನ ಬದಲಾದ ಕಾಲಕ್ಕೆ ಹೊಂದಿಕೊಳ್ಳುತ್ತ ವೆಯೇ? ಇಪ್ಪತ್ತು ವರ್ಷಗಳ ಹಿಂದೆ ಕಾಲೇಜಿಗೆ ಹೋಗುವಾಗ ಸೈಕಲ್ ಸ್ಟ್ಯಾಂಡ್ ಇತ್ತು. ಲೆಕ್ಚರರ್ಗಳನ್ನು ಹೊರತುಪಡಿಸಿದರೆ ಉಳಿದೆಲ್ಲರೂ ವರ್ಗಭೇದವಿಲ್ಲದೇ ಸೈಕಲ್ ಸವಾರರೇ. ನನ್ನ ಸ್ನೇಹಿತರಲ್ಲಿ ಓರ್ವ ಮಾತ್ರ ಲೂನಾ ಸ್ಕೂಟರ್ ಓನರ್ ಆಗಿದ್ದ. ಕೆಲವೇ ದಿನಗಳಲ್ಲಿ ನಮ್ಮ ಜೊತೆ ಸ್ಕೂಟರ್ನಲ್ಲಿ ಬರುವ ಸಾಹಸ ಬಿಟ್ಟು ತಾನೂ ಸೈಕಲ್ ಹಿಡಿದ. ಹೀಗೆ ಸೈಕಲ್‌ಗಳು ರಸ್ತೆ ತುಂಬಾ ತುಂಬಿದ್ದ ಕಾಲವದು.
ಆದರೆ, ಸ್ಕೂಟರ್ ಹಾಗೂ ಕಾರುಗಳ ದರ್ಬಾರು ರಸ್ತೆಯಲ್ಲಿ ಹೆಚ್ಚಾದಂತೆ ಸೈಕಲ್ ಸವಾರಿ ಕಷ್ಟದಾಯಕವಷ್ಟೇ ಅಲ್ಲದೇ ಅಪಾಯ ಕಾರಿಯೂ ಆಯಿತು. ನಗರದಲ್ಲಿ ಫುಟ್ಪಾತ್ ಎಲ್ಲಿದೆ ಎಂಬುದನ್ನು ಭೂತಕನ್ನಡಿ ಇಟ್ಟುಕೊಂಡು ಹುಡುಕಬೇಕಾದ ಪರಿಸ್ಥಿತಿಯಾಗಿ, ಕೊನೆಗೆ ಸೈಕಲ್‌ಗೆ ನನ್ನಂತೆ ಸಾಕಷ್ಟು ಜನರು ವಿದಾಯ ಹೇಳಿದರು. ಪೆಟ್ರೋಲ್ ಬೆಲೆ 100 ರೂ.ಗಳಾಗುವ ಹಂತದಲ್ಲಿದ್ದರೂ ಬೈದುಕೊಂಡೇ ಬೈಕ್ ಓಡಿಸುತ್ತಿದ್ದಾರೆಯೇ ಹೊರತು ಸೈಕಲ್ ಸಹವಾಸಕ್ಕೆ ಹೋಗುವವರು ಕಡಿಮೆ.
ಏಕೆ ಇಂತಹ ಪರಿಸ್ಥಿತಿ? ದಾವಣಗೆರೆಯು ಮ್ಯಾಂಚೆಸ್ಟರ್ ಆಗಿದ್ದ ಕಾಲದಲ್ಲಿ ಸಾವಿರಾರು ಜನರು ಸೈಕಲ್ ಮೇಲೇ ಹತ್ತಾರು ಕಿ.ಮೀ. ಸವಾರಿ ಮಾಡುತ್ತಿದ್ದರು. ಆಗ ಮೋಟಾರು ವಾಹನಗಳ ಸಂಖ್ಯೆ ನಗಣ್ಯ ಎಂಬಂತಿತ್ತು. ಸೈಕಲ್ ಹಿತಕಾರಿಯಾಗಿತ್ತು. ಈಗ ಸೈಕಲ್ ಅಪಾಯಕಾರಿಯಾಗಿ ಪರಿವರ್ತನೆಯಾಗಿದೆ.
ಈ ಪರಿಸ್ಥಿತಿ ಬದಲಿಸಿ, ಸೈಕಲ್ ಸವಾರರಿಗೆ ಟ್ರ್ಯಾಕ್ ರೂಪಿಸಲು ಪುಣೆ ನಗರ ಕಳೆದ ಎರಡು ದಶಕಗಳಿಂದ ಪ್ರಯತ್ನ ನಡೆಸುತ್ತಿದೆ. ನೂರಾರು ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಸೈಕಲ್ ಬಾಡಿಗೆ ನೀಡುವ ಕೆಲ ಕಂಪನಿಗಳೂ ಕಾರ್ಯಾರಂಭ ಮಾಡಿದವು. ಆದರೆ, ಆರಂಭದಲ್ಲಿ ಸೈಕಲ್‌ಗೆ ಪ್ರತ್ಯೇಕ ಟ್ರ್ಯಾಕ್ ಇರಲಿಲ್ಲ ಹೀಗಾಗಿ ಸಮಸ್ಯೆಯಾಯಿತು. ಚಂದದ ಟ್ರ್ಯಾಕ್ ಮಾಡಿದ ಮೇಲೆ, ಅಲ್ಲಿ ಬೀದಿ ವ್ಯಾಪಾರಿಗಳು ಬಂದು ಕುಳಿತರು ಮತ್ತೆ ಸಮಸ್ಯೆಯಾಯಿತು! ಅಲ್ಲದೇ ಪುಣೆ ನಗರ ಪಾಲಿಕೆಯು ಸೈಕಲ್ ಟ್ರ್ಯಾಕ್ ನಿರ್ಮಾಣದ ಕಾರ್ಯ ವಿಳಂಬ ಮಾಡಿತು. ಅಂತಿಮವಾಗಿ ಒಂದರ ಹಿಂದೊಂದರಂತೆ ಎಲ್ಲ ಸೈಕಲ್ ಬಾಡಿಗೆ ನೀಡುವ ಕಂಪನಿಗಳು ನಗರಕ್ಕೆ ವಿದಾಯ ಹೇಳಿದವು.
ಇನ್ನೊಂದು ಉದಾಹರಣೆ ದೂರದ ಚೀನಾದ್ದು. ಚೀನಾದ ಮಹಾ ನಗರಗಳಲ್ಲಿ ಸೈಕಲ್ ಬಾಡಿಗೆಗೆ ನೀಡಲು ಹತ್ತಾರು ಕಂಪನಿಗಳು ಹುಟ್ಟಿ ಕೊಂಡವು. ಬೇಕಾದಾಗ ಸೈಕಲ್ ಪಡೆಯಿರಿ, ಬೇಕೆಂದಲ್ಲಿ ನಿಲ್ಲಿಸಿ ಎಂಬ ಸೂತ್ರ ನೀಡಿದವು. ಜನರೋ ಎಲ್ಲೆಂದರಲ್ಲಿ ಸೈಕಲ್ ಬಿಸಾಕಲು ಆರಂಭಿಸಿ ದರು. ಸೈಕಲ್ ಯಾವ ರೀತಿ ಬಿಸಾಕಿದರು ಎಂದರೆ ಅಡ್ಡಡ್ಡ ಮಲಗಿಸಿದ ಸೈಕಲ್‌ಗಳೇ 8 ಅಡಿ ಎತ್ತರದ ರಾಶಿಗಳಾದವು. ಕೊನೆಗೆ ಸರ್ಕಾರ ಸೈಕಲ್ ಪಾರ್ಕಿಂಗ್ ಹೊಣೆ ಕಂಪನಿಗಳದ್ದು ಎಂದು ಹೇಳಿತು. ಅಂದದ್ದೇ ತಡ, ಸೈಕಲ್ ಪಾರ್ಕಿಂಗ್ ನಿರ್ವಹಿಸಲಾಗದೇ ಕಂಪನಿಗಳು ಮುಚ್ಚಿಕೊಂಡವು. ಸೈಕಲ್‌ಗಳು ರಾಶಿಗಳಾಗಿ ಸೇರಿದವು. ಈಗ ಇಂಟರ್‌ನೆಟ್‌ನಲ್ಲಿ ಚೀನಾ ಸೈಕಲ್ ಗ್ರೇವ್‌ಯಾರ್ಡ್ ಎಂದು ಹುಡುಕಿದರೆ ಬಣ್ಣ ಬಣ್ಣದ ಸೈಕಲ್‌ಗಳನ್ನು ರಾಶಿಯಾಗಿಟ್ಟಿರುವ ಅಚ್ಚರಿಯ ಹಾಗೂ ವಿಷಾದದ ಚಿತ್ರಗಳನ್ನು ನೋಡಬಹುದು.
ಭಾರತದಲ್ಲಿ ಯುವಕರೇ ಹೆಚ್ಚಾಗಿದ್ದಾರೆ, ಅವರು ಸೈಕಲ್ ತುಳಿಯಬಲ್ಲರು. ಆದರೆ, ಸೈಕಲ್ ಕೊಟ್ಟರಷ್ಟೇ ಸಾಲದು, ಸಮರ್ಪಕವಾದ ಸೈಕಲ್ ಕಾರಿಡಾರ್ ಬೇಕು. ಕಾರಿಡಾರ್ ನಂತರ ಅವುಗಳ ನಿರ್ವಹಣೆ ಬೇಕು. ಸೈಕಲ್ ಮತ್ತೆ ತುಳಿಯಲು ಜನರು ಮನಸ್ಸು ಮಾಡುವಂತಹ ಉತ್ತೇಜಕಗಳು ಹಾಗೂ ಮನೋಭಾವ ಬೇಕು. ಇದ್ಯಾವುದೂ ಇಲ್ಲದೇ ಸೈಕಲ್ ಏರಿ ಎಂದರೆ ಅದು ಸ್ಮಾರ್ಟ್ ಯೋಚನೆಯಾಗದು.
ಕೊರೊನಾ ಕಾಲದಲ್ಲಿ ಜನರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದರು. ಪರಿಸರ ನೈರ್ಮಲ್ಯವಾಗಿರುವುದನ್ನು ಅನುಭವಿಸಿದರು. ಹೀಗಾಗಿ ಪರಿಸರ ಸ್ನೇಹಿ ಸೈಕಲ್ ಹಾಗೂ ಸೈಕಲ್ ಪಾತ್‌ಗೆ ಹೊಸ ಅವಕಾಶ ಸಿಕ್ಕಿತು ಎಂಬ ಭಾವನೆಗಳು ಎಲ್ಲೆಡೆ ಕೇಳಿ ಬಂದವು. ಆದರೆ, ಕೊರೊನಾ ಕರಗಿದಂತೆ ಈ ಮನೋಭಾವವೂ ಕರಗುತ್ತಾ ಬಂದಿದೆ. ತೈಲ ಬೇಡಿಕೆ ಹೆಚ್ಚಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ದಾಖಲೆ ಹಂತಕ್ಕೆ ತಲುಪಿವೆ. ಇಷ್ಟಾದರೂ, ಸೈಕಲ್ ಎಂಬುದು ಬಡವರ ಹಾಗೂ 18 ವರ್ಷವಾಗಿಲ್ಲ ಎಂಬ ಕಾರಣಕ್ಕೆ ಡಿ.ಎಲ್. ಸಿಗದು ಎಂದು ಅನಿವಾರ್ಯವಾಗಿ ಸೈಕಲ್ ಹಿಡಿಯುವ ಹದಿ ಹರೆಯದ ಪೀಳಿಗೆಗೆ ಹೆಚ್ಚಾಗಿ ಸೀಮಿತವಾಗಿದೆ.
ನಗರದಲ್ಲಿ ಆರಂಭವಾಗಿರುವ ಸ್ಮಾರ್ಟ್ ಸಿಟಿಯ ಯೋಜನೆಯೂ ಈ ಎಲ್ಲ ತೊಡಕುಗಳನ್ನು ಎದುರಿಸಬೇಕಿದೆ. ಮೊನ್ನೆ ವಿದ್ಯಾನಗರದ ಪಾರ್ಕ್‌ನಲ್ಲಿರುವ §ಸ್ಮಾರ್ಟ್’ ಶೌಚಾಲಯ ಬಳಸಲು ಹೋದಾಗ ಅದು ನನ್ನ ಎಂಟು ರೂ.ಗಳ ನಾಣ್ಯವನ್ನು ನುಂಗಿತೇ ಹೊರತು, ಸುತಾರಾಂ ಬಾಗಿಲು ತೆರೆಯಲಿಲ್ಲ. ಮೊಬೈಲ್‌ಗೆ ಆಪ್, ಆಪ್‌ಗೆ ಕರೆನ್ಸಿ, ತಿಂಗಳಿಗೆ ಮೆಂಬರ್‌ಶಿಪ್ ಬಾಡಿಗೆ ಕೊಟ್ಟು ನಿಗದಿತ ಜಾಗಕ್ಕೆ ಕಾಲ್ನಡಿಗೆ ತೆರಳಿ ಸೈಕಲ್ ತುಳಿಯುವ ಸಾಹಸಿಗಳು ಸೈಕಲ್ ಯೋಜನೆ ಯಶಸ್ವಿಗೊಳಿಸಲಿದ್ದಾರೆಯೇ ಅಥವಾ ಸ್ಮಾರ್ಟ್ ಶೌಚಾಲಯದಂತೆ ಸೈಕಲ್‌ಗಳೂ §ಸ್ಮಾರ್ಟ್’ ಆಗುತ್ತವೆಯೇ ಎಂಬುದು ಒಂದೆರಡು ತಿಂಗಳಲ್ಲೇ ನಿರ್ಧಾರವಾಗಲಿದೆ.
ಎಸ್.ಎ. ಶ್ರೀನಿವಾಸ್
[email protected]