ಸುಬ್ಬರಾವ್ (ತ.ರಾ.ಸು) ನಮ್ಮೂರ ಸಾಹಿತಿ

ತಂದೆ ಟಿ.ಎಸ್. ರಾಮಸ್ವಾಮಯ್ಯ, ತಾಯಿ ಸೀತಮ್ಮ. 21 ಏಪ್ರಿಲ್ 1920 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಗ್ರಾಮದಲ್ಲಿ ಜನಿಸಿದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮ ವಂಶಸ್ಥರ ಸ್ಥಳವಾಗಿದೆ. ಪ್ರಸಿದ್ಧ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಟಿ.ಎಸ್. ವೆಂಕಣ್ಣಯ್ಯನವರೂ ಹಾಗೂ ಅವರ ಸಹೋದರ ಪ್ರಸಿದ್ಧ ಸಾಹಿತಿ ಶ್ರೀ ತ.ಸು. ಶಾಮರಾವ್‍ರಾಯರು ತ.ರಾ.ಸು ರವರಿಗೆ ಕ್ರಮವಾಗಿ ದೊಡ್ಡಪ್ಪ, ಚಿಕ್ಕಪ್ಪಂದಿರು. ಹೀಗೆಯೇ ಬೆಳಗೆರೆ ಮನೆತನದ ಸಾಹಿತಿಗಳೂ ಇವರ ಬಂಧು ವರ್ಗದವರೇ ಆಗಿದ್ದಾರೆ.

ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ಗುಬ್ಬಿ ಈ ಊರುಗಳಲ್ಲಿ ಪ್ರಾರಂಭಿಕ ಶಿಕ್ಷಣ, ಇಂಟರ್ ಮೀಡಿಯೇಟ್‍ವರೆಗೆ ವಿದ್ಯಾಭ್ಯಾಸ, ಪತ್ರಕರ್ತರಾಗಿ ಪತ್ರಿಕೆಗಳಲ್ಲಿ ದುಡಿದಿದ್ದಾರೆ. ಪಶ್ಚಿಮ ಜರ್ಮನಿ ರಷ್ಯಾ ಪ್ರವಾಸ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಧ್ವಜ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಚಲೇಜಾವ್ ಚಳವಳಿ, ಜವಾಬ್ದಾರಿ ಸರ್ಕಾರದ ಚಳವಳಿ ಇವುಗಳಲ್ಲಿ ಭಾಗವಹಿಸಿ, ಒಂದೆರಡು ಸಲ ಸೆರೆವಾಸವನ್ನೂ ಅನುಭವಿಸಿದರು. (1937-47). 

ಪ್ರಗತಿಶೀಲ ಸಾಹಿತ್ಯದ ಚಳುವಳಿ, ಕನ್ನಡ ಚಳುವಳಿಗಳಲ್ಲಿಯೂ ಉತ್ಸಾಹದಿಂದ ಭಾಗವಹಿಸಿ ದರು. ತಮ್ಮ ಸ್ಪೂರ್ತಿಯುತ ಭಾಷಣಗಳಿಂದಲೂ, ಸಂಭಾಷಣೆಗಳಿಂದಲೂ ಅನೇಕ ತರುಣ ಕಾರ್ಯ ಕರ್ತರನ್ನು ಹುರಿದುಂಬಿಸಿದರು.

ಮೈಸೂರು ಪುರಸಭೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು. ತಮ್ಮ ಸಾಹಿತ್ಯಿಕ ಸಾಧನೆಗಳಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪುರಸ್ಕಾರ, ವಿದ್ಯಾವಾರಿಧಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (ದುರ್ಗಾಸ್ತಮಾನ ಕಾದಂಬರಿಗೆ, 1985ರಲ್ಲಿ) ಮೊದಲಾದವು ಪ್ರಾಪ್ತವಾಗಿವೆ.

ತ.ರಾ.ಸು ತಮ್ಮ 50ರ ವಯಸ್ಸಿನಲ್ಲಿಯೇ ಸಾರ್ವಜನಿಕ ಸನ್ಮಾನಕ್ಕೆ ಪಾತ್ರರಾದ ಮೇಲೆ (1970), ಕನ್ನಡ ಸಾಹಿತ್ಯ ಪರಿಷತ್ತಿನ ಸ್ವರ್ಣ ಮಹೋತ್ಸವದಲ್ಲಿ ಶ್ರೇಷ್ಠ ಕಾದಂಬರಿಕಾರ ಪ್ರಶಸ್ತಿ (1970), ರಾಜ್ಯ ಸಾಹಿತ್ಯ ಪರಿಷತ್ತಿನ ಸ್ವರ್ಣ ಮಹೋತ್ಸವದಲ್ಲಿ ಶ್ರೇಷ್ಠ ಕಾದಂಬರಿಕಾರ ಪ್ರಶಸ್ತಿ (1970), ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (1974), ಚಿತ್ರದುರ್ಗದಲ್ಲಿ ಸಾರ್ವಜನಿಕ ಸನ್ಮಾನ (1978) ಮತ್ತು ಅಲ್ಲಿಯೇ ನಡೆದ ಭಾರತೀಯ ಧರ್ಮ ಸಮ್ಮೇಳನದಲ್ಲಿ ಸಾಹಿತ್ಯ ರತ್ನ ಪ್ರಶಸ್ತಿ (1981) ಲಭಿಸಿದವು. ಅಭಿಮಾನಿಗಳು 1982ರಲ್ಲಿ ಅವರಿಗೆ ಗಿರಿಮಲ್ಲಿಗೆ ಎಂಬ ಗೌರವ ಗ್ರಂಥವನ್ನು ಅರ್ಪಿಸಿ ಸನ್ಮಾನಿಸಿದರು.

ತ.ರಾ.ಸು ಕನ್ನಡ ಕಾದಂಬರಿಕಾರರಾಗಿ, ಕನ್ನಡ ಚಳುವಳಿಯ ಹೋರಾಟಗಾರರಾಗಿ, ಮೇಲ್ಮಟ್ಟದ ವಾಗ್ಮಿಗಳಾಗಿ ಖ್ಯಾತರಾಗಿದ್ದರು, ಅನಕೃ, ಸಿದ್ದವ್ವನಹಳ್ಳಿ ಕೃಷ್ಣಶರ್ಮ, ನಿರಂಜನ, ಬಸವರಾಜ ಕಟ್ಟೀಮನಿ ಮೊದಲಾದವರ ನಿಕಟವರ್ತಿಗಳು. ಸಾಹಿತ್ಯ ರಚನೆಗೆ ಪ್ರೊ. ಟಿ.ಎಸ್. ವೆಂಕಣ್ಣಯ್ಯನವರು ಮೊದಲ ಸ್ಪೂರ್ತಿಯಾದರೆ, ಹುಲ್ಲೂರು ಶ್ರೀನಿವಾಸ ಜೋಯಿಸರು ಕೋಟೆ ಕುರಿತ ಸಾಹಿತ್ಯ ರಚನೆಗೆ ಎರಡನೇ ಸ್ಪೂರ್ತಿಯಾಗಿದ್ದರು. ಸುಮಾರು 100 ಪುಸ್ತಕಗಳ ಕರ್ತೃ, ಇವುಗಳಲ್ಲಿ 53 ಸಾಮಾಜಿಕ ಕಾದಂಬರಿಗಳು (ಮನೆಗೆ ಬಂದ ಮಹಾಲಕ್ಷ್ಮಿ, ರಕ್ತ ತರ್ಪಣ, ಮಸಣದ ಹೂವು, ಚಂದನದ ಗೊಂಬೆ, ಚಕ್ರತೀರ್ಥ, ನಾಗರಹಾವು, ಹಂಸಗೀತೆ, ಚಂದವಳ್ಳಿಯ ತೋಟ ಇತ್ಯಾದಿ) 15 ಐತಿಹಾಸಿಕ ಕಾದಂಬರಿಗಳು (ನೃಪತುಂಗ, ಸಿಡಿಲ ಮೊಗ್ಗು, ಕಂಬನಿಯ ಉಯಿಲು, ರಕ್ತರಾತ್ರಿ, ತಿರುಗುಬಾಣ, ಬೆಳಕು ತಂದ ಬಾಲಕ, ದುರ್ಗಾಸ್ತಮಾನ ಇತ್ಯಾದಿ). 04 ಕಥಾ ಸಂಕಲನಗಳು (ರೂಪಸಿ, ತೊಟ್ಟಿಲು ತೂಗಿತು ಇತ್ಯಾದಿ). 04 ನಾಟಕಗಳು (ಜ್ವಾಲಾ, ಮೃತ್ಯುಸಿಂಹಾಸನ, ರೇಡಿಯೋ ನಾಟಕಗಳ ಸಂಕಲನ ಇತ್ಯಾದಿ). 09 ಅನುವಾದ ಗ್ರಂಥಗಳು (ಗಾಂಧೀಜಿ, ನಿಮ್ಮ ಆಹಾರ, ಪ್ರಥಮ ಪ್ರಣಯ ಇತ್ಯಾದಿ). 02 ಜೀವನ ಚರಿತ್ರೆಗಳು (ಅ.ನ.ಕೃ, ರೇಖಾಚಿತ್ರಗಳು). 02 ಸಂಪಾದಿತ ಕೃತಿಗಳು (ಶ್ರೀ ಜಗದ್ಗುರು, ಶ್ರೀ ಶಿವಾರ್ಪಣಂ). 01 ಸಂಶೋಧನ ಗ್ರಂಥ (ಕ್ರಿಯಾಶಕ್ತಿ ವಿದ್ಯಾರಣ್ಯ), 01 ವಯಸ್ಕರ ಸಾಹಿತ್ಯದ ಪುಸ್ತಕ (ನಾಗರ ಮರಿ) ರಚಿಸಿದ್ದಾರೆ. ಇತ್ತೀಚೆಗೆ ತ.ರಾ.ಸು ಅವರ ಆತ್ಮಕಥೆ ಮರಣೋತ್ತರ ವಾಗಿ ಪ್ರಕಟವಾಗಿದೆ. ದುರ್ಗಾಸ್ತಮಾನ ಕಾದಂಬರಿಯ ಅಂತ್ಯವನ್ನು ಕುರಿತು ನನ್ನ ದುರ್ಗದ ಅಂತ್ಯವನ್ನು ನಾನೇ ಹೇಗೆ ಚಿತ್ರಿಸಲಿ ಎಂದು ನೋವಿನಿಂದ ಬಳಲಿದ್ದರು. ಚಿತ್ರದುರ್ಗವೆಂದರೆ ಸಾಕು ಜನಮನದಲ್ಲಿ ಏಳುಸುತ್ತಿನ ಕೋಟೆ, ಅಲ್ಲಿ ಬದುಕಿದ ಪಾಳೆಗಾರರ ನೆನಪು ಗಾಢವಾಗುವಂತೆ ಮಾಡಿದುದು ತ.ರಾ.ಸು ರವರ ಕಾದಂಬರಿಗಳೆಂದರೆ ಅತಿಶಯವೇನಲ್ಲ ಎಂದು ಹಿರಿಯ ಸಾಹಿತಿ ಹೆಚ್. ಶ್ರೀಶೈಲ ಆರಾಧ್ಯ ಒಂದೆಡೆ ಉಲ್ಲೇಖಿಸಿದ್ದಾರೆ. ಇವರ ಕಾದಂಬರಿಗಳಲ್ಲಿ ಕೆಲವು ಚಲನಚಿತ್ರಗಳಾಗಿ ಜನಪ್ರಿಯತೆ ಗಳಿಸಿವೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಸಂಪಾದಿಸಿವೆ.


ಸುಬ್ಬರಾವ್ (ತ.ರಾ.ಸು) ನಮ್ಮೂರ ಸಾಹಿತಿ - Janathavaniಕೆ.ಪಿ.ಎಮ್. ಗಣೇಶಯ್ಯ 
ರಂಗ ನಿರ್ದೇಶಕರು, ಚಿತ್ರದುರ್ಗ.
[email protected]

error: Content is protected !!