ಮತ್ತೆ ಬಂದಿದೆ ಕೋವಿಡ್‌-19 : ಎಚ್ಚರ…

ಕಳೆದ ವರ್ಷ ರಣಕಹಳೆ ಊದುತ್ತಾ ಬಂದಿದ್ದ ಕೋವಿಡ್‌-19 ಎಂಬ ಕಾಯಿಲೆ ಮಾನವನ ಮೇಲೆ ಮರಣ ಮೃದಂಗವನ್ನೇ ನುಡಿಸಿತ್ತು. ಅಬ್ಬಬ್ಬಾ ಎಷ್ಟೊಂದು ನರಳಾಟ, ಎಷ್ಟೊಂದು ಸಾವು-ನೋವು, ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ, ವೆಂಟಿಲೇಟರ್‌ ದೊರೆಯದೆ ಸತ್ತವರೆಷ್ಟೋ, ನರಳಿ ನರಳಿ ಸಾವಿನ ದವಡೆಯಿಂದ ಪಾರಾಗಿ ಬಂದವರೆಷ್ಟೋ. ತನ್ನ ಅಟ್ಟಹಾಸದಿಂದ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿ ಆತನ ಜಂಘಾಬಲವನ್ನೇ ಕುಗ್ಗಿಸಿದ ಬೀಭತ್ಸ ಕೊರೊನಾ ಇನ್ನೇನು ಹೋಗೇಬಿಟ್ಟಿತ್ತೆಂದು ನಾವೆಲ್ಲ ನಿರಾಳವಾಗಿ ನಿಟ್ಟುಸಿರು ಬಿಡುತ್ತಾ ಕೂತಿರುವಾಗ `ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ’ ಎಂದು ಅಣಕಿಸುತ್ತಿದೆ. ಮನುಷ್ಯನ ಮರೆವು ಸ್ವಾಭಾವಿಕ, ಆದರೆ ಈ ವಿಷಯದಲ್ಲಿ ನಾವು ಎಚ್ಚೆತ್ತುಕೊಳ್ಳಬೇಕು. ನಾವು ಉಂಟಾದ ಅವಘಡವನ್ನು ಮರೆತು, ಸಹಜ ಜೀವನದತ್ತ ವಾಲುತ್ತಿದ್ದೇವೆ.

ಹೀಗಿರುವಾಗ ಕೊರೊನಾದ ಎರಡನೇ ಅಲೆ ಮತ್ತೆ ಮಾನವನನ್ನು ನಿಧಾನವಾಗಿ ಮುಸುರಿಕೊಳ್ಳಲಾರಂಭಿಸಿದೆ. ಹೀಗಾಗಿ ನಮಗೆ ಕೊರೊನಾದ ಎರಡನೇ ಅಲೆ ಹೇಗಿರುತ್ತದೆಯೋ, ಏನೋ ಎಂಬ ಭಯ ಕಾಡಹತ್ತಿದೆ. ಇದು ಹಿಂದಿನ ಅಲೆಗಿಂತ ಬಹಳ ಭೀಕರವಾಗಿರಲೂಬಹುದು. ಮತ್ತೆ ಮತ್ತೆ ಮರುಕಳಿಸುತ್ತಲೂ ಸಾಗಬಹುದು. ಪುನಃ ಪುನಃ ವರ್ಷವಿಡೀ ಅವತರಿಸಲೂ ಬಹುದು, ಜನರನ್ನು ಕಾಡಲೂಬಹುದು. ಈ ರೋಗವು ಮುಂದಿನ ದಿನಗಳಲ್ಲಿ ಡೆಂಗ್ಯೂ, ಹೆಚ್‌1ಎನ್‌1 ಮತ್ತು ಫ್ಲೂ ತರಹ ಕಮ್ಯುನಿಟಿಯಲ್ಲಿ ಉಳಿಯಬಹುದು. ಹೀಗಾಗಿ ನಾವೆಲ್ಲಾ ಕೋವಿಡ್‌ ಜೊತೆ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಅನಿವಾರ್ಯವಾಗಲೂಬಹುದು. ಈ ಬಗ್ಗೆ ನಾವು ಎಷ್ಟು ಜಾಗೃತರಾಗಿದ್ದರೂ ಸಾಲದು.

ಕಾಯಿಲೆಯನ್ನು ಮಣಿಸುವ ಲಸಿಕೆಯೇನೋ ಬಂದುಬಿಟ್ಟಿದೆ. ದೇಶದಾದ್ಯಂತ ಎಲ್ಲೆಲ್ಲೂ ಜನರಿಗೆ ಲಸಿಕೆ ಕೊಡಲಾಗುತ್ತಿದೆ. ಲಸಿಕೆ ಬಗ್ಗೆ ಇದರ ಅಡ್ಡ-ಉದ್ದ ಪರಿಣಾಮಗಳ ಬಗ್ಗೆ ಕಿಂಚಿತ್ತೂ ಹೆದರಿಕೆ ಬೇಡ. ಇದು ಜೀವ ಉಳಿಸುವ, ಅಭಯ ನೀಡುವ ಸುರಕ್ಷಿತ ಲಸಿಕೆ. ಎಲ್ಲರೂ ಲಸಿಕೆ ತೆಗೆದುಕೊಳ್ಳುವುದು ಕ್ಷೇಮ. ಇದುವರೆಗೆ ಲಸಿಕೆ ತೆಗೆದುಕೊಳ್ಳದ ಎಲ್ಲರೂ ಹಿಂದುಮುಂದು ನೋಡದೆ ಇಂದೇ ಲಸಿಕೆ ತೆಗೆದುಕೊಳ್ಳುವುದು ಅತಿ ಮುಖ್ಯ. ಬಹಳ ಜನರು ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದಾಗ, ಅದರ ಬಗ್ಗೆ ಸುಮಾರು ಮರುಪ್ರಶ್ನೆಗಳನ್ನು ಕೇಳುತ್ತಾರೆ. ಈ ಲಸಿಕೆಯಿಂದ ಯಾವ ಅಡ್ಡಪರಿಣಾಮಗಳೂ ಆಗುವುದಿಲ್ಲ. ಇದರ ಬಗ್ಗೆ ಚಿಂತೆ ಬೇಡ.

ಎರಡನೆ ಕೊರೊನಾ ಅಲೆಯಲ್ಲಿ ಆರಂಭದಲ್ಲಿ ಕೆಮ್ಮು, ಜ್ವರ, ಕೀಲು ನೋವು, ಗಂಟಲು ನೋವು, ರುಚಿ-ವಾಸನೆ ಗ್ರಹಿಸದಿರುವುದು ಇತ್ಯಾದಿ ಲಕ್ಷಣಗಳು ಕಾಣದೇ ಇರಬಹುದು. ತಕ್ಷಣ ಇದು ಶ್ವಾಸಕೋಶವನ್ನು ಹಾಳುಮಾಡಬಹುದು.

ಕೊರೊನಾ ವೈರಸ್‌ಗಳು ನೇರವಾಗಿ ನಮ್ಮ ಶ್ವಾಸಕೋಶವನ್ನೇ ಮುಸುರುತ್ತವೆ. ಉಸಿರಾಡುವ ವ್ಯವಸ್ಥೆಗೇ ಮುತ್ತಿಗೆ ಹಾಕುತ್ತವೆ. ಉಸಿರಾಟ ನಡೆಯುವ ಮೂಲ ಹಾದಿಯನ್ನೇ ಹಾಳುಗೆಡುವುತ್ತವೆ. ಪ್ರಾರಂಭದಲ್ಲಿ ವೆಂಟಿಲೇಟರ್‌ ಅವಲಂಬಿತವಾಗಿ ಚಿಕಿತ್ಸೆ ನೀಡಬಹುದು. ಆದರೆ ರೋಗ ಮುಂದುವರೆದರೆ ಶ್ವಾಸಕೋಶವು ಸಹ ಉಸಿರಾಡಲು ವಿಫಲವಾಗುತ್ತದೆ. ದೇಹಕ್ಕೆ ಪ್ರಾಣವಾಯು ದೊರೆಯದೆ ಅತೀವ ಸಂಕಷ್ಟ ಒದಗುತ್ತದೆ. ಹೀಗೆ ಸಾವಿನಂಚಿಗೆ ತಲುಪಿ ದವರನ್ನು ಆಸ್ಪತ್ರೆಗಳಿಂದಾಗಲೀ, ವೈದ್ಯರಿಂ ದಾಗಲೀ, ವೆಂಟಿಲೇಟರ್‌ಗಳಿಂದಾಗಲೀ ಬದುಕುಳಿಸು ವುದು ಸುಲಭ ಸಾಧ್ಯವಲ್ಲ. ಹೀಗೆ ಸಾವಿನಂಚಿಗೆ ಹೋಗಿ ಹೆಣಗಾಟ ನಡೆಸುವು ದಕ್ಕಿಂತಾ ಅತೀ ಪ್ರಾರಂಭದ ಹಂತದಲ್ಲಿಯೇ ವೈದ್ಯರ ಬಳಿ ಹೋದರೆ ತಕ್ಕ ಮದ್ದು ಸಿಕ್ಕೀತು. ಸಾಯುವವರು ಬದುಕುಳಿಯಬಹುದು.

ಕೋವಿಡ್‌-19 ವೈರಸ್‌ ಶ್ವಾಸಕೋಶವನ್ನು ಹೊಕ್ಕ ನಂತರ ಮೂರು ಹಂತಗಳಲ್ಲಿ ಸೋಂಕನ್ನು ತೀವ್ರಗೊಳಿಸುತ್ತದೆ.

1. ಎಕ್ಸೂಡೇಟಿವ್‌ ಫೇಸ್‌ : ಅಂದರೆ ಪ್ರಾರಂಭದಲ್ಲಿ ಶ್ವಾಸಕೋಶದ ನಂಜು ಉಂಟಾದಾಗ ಶ್ವಾಸಕೋಶದಲ್ಲಿ ರಕ್ತ ಮತ್ತು ಹೊರ ಸೂಸುವ ದ್ರವ ಇರುತ್ತದೆ. ಚಿಕಿತ್ಸೆಯನ್ನು ಬೇಗ ಮುಂದುವರೆಸಿದರೆ ಈ ಹಂತದಲ್ಲಿ ಬಹುತೇಕ ಚಿಕಿತ್ಸೆ ಸಫಲವಾಗುತ್ತದೆ. ಅಲ್ವಿಯೋಲಾರ್‌ ಹಾನಿ ಮತ್ತು ಎಂಡೋಥಿಲಿಯಲ್‌ ಗಾಯವನ್ನು ಹರಡುತ್ತದೆ.

2. ಪ್ರೊಲಿಪರೇಟಿವ್‌ ಫೇಸ್‌ : ಇದು ಎರಡನೇ ಹಂತವಾಗಿರುತ್ತದೆ. ಸೋಂಕು ಹೆಚ್ಚಾದರೆ ಮತ್ತು ಚಿಕಿತ್ಸೆ ಇಲ್ಲದಿದ್ದರೆ ಈ ಹಂತಕ್ಕೆ ಹೋಗುತ್ತದೆ. ಈ ಹಂತದಲ್ಲಿ ಜೀವಕೋಶ ನಾಶವಾಗುತ್ತದೆ. ಸೋಂಕಿನ ನಂತರ ಈ ಹಂತ 7-14 ದಿನಗಳಲ್ಲಿ ಬರುತ್ತದೆ. ಈ ಹಂತದಲ್ಲಿ ದೇಹ ಶ್ವಾಸಕೋಶಗಳನ್ನು ದುರಸ್ತಿ ಮಾಡುವಲ್ಲಿ ಪ್ರಯತ್ನ ಮಾಡುತ್ತದೆ. ಈ ಹಂತಕ್ಕೆ ಹೋದರೆ ವೆಂಟಿಲೇಟರ್‌ ಬೇಕಾಗುತ್ತದೆ. ರೋಗಿ ತೀವ್ರ ಉಸಿರಾಟ ತೊಂದರೆಯಲ್ಲಿರುತ್ತಾನೆ. ಈ ಹಂತದವರೆಗೆ ಕಾಯಿಲೆಯನ್ನು ವಾಸಿ ಮಾಡುವ ಬಹುತೇಕ ಪ್ರಯತ್ನಗಳನ್ನು ಮಾಡಬಹುದು.

3. ಫೈಬ್ರೊಟಿಕ್‌ ಫೇಸ್‌ : ಈ ಹಂತದಲ್ಲಿ ಸೋಂಕು ಸುಮಾರು 3 ವಾರಗಳಾದ ಮೇಲೆ ಇದು ಉಂಟಾಗುತ್ತದೆ. ಸೋಂಕಿನ ಪ್ರಮಾಣ ತೀವ್ರತೆಯಲ್ಲಿರುತ್ತದೆ. ಪ್ರಾಣವಾಯು ರಕ್ತಕ್ಕೆ ಹೋಗುವುದು ಕಡಿಮೆಯಾಗಿರುತ್ತದೆ. ಬೇರೆ ಅಂಗಾಂಗಗಳು ವೈಫಲ್ಯವಾಗಿರುತ್ತವೆ. ಈ ಹಂತ ಆಕ್ಸಿಜನ್‌ ಅವಲಂಬಿತ ಹಂತವಾಗಿ ರುತ್ತದೆ ಹಾಗೂ ವೆಂಟಿಲೇಟರ್‌ ಇಲ್ಲದೆ ರೋಗಿ ಬದುಕುಳಿಯುವುದು ಅಸಾಧ್ಯ.

ಮಾಸ್ಕ್‌, ಅಂತರ, ಸ್ಯಾನಿಟೈಜರ್‌, ಕೈ ತೊಳೆದುಕೊಳ್ಳುವುದು ಜೀವನದ ಅವಿಭಾಜ್ಯ ಅಂಗವೆಂದೇ ತಿಳಿಯಬೇಕು, ತಿಳಿದು ಪಾಲಿಸಬೇಕು. ಲಸಿಕೆ ಪಡೆದವರಿಗೂ ಸಹಾ ಈ ಮಂತ್ರ ಅತ್ಯಗತ್ಯ ಮತ್ತು ಅನಿವಾರ್ಯ. ಕೋವಿಡ್‌ ಎಂಬ ಯಮಧೂತನೊಂದಿಗೆ ಹುಡುಗಾಟ ಬೇಡ. ಜಾಗೃತಿಯೊಂದೇ ಕೋವಿಡ್‌ನಿಂದ ರಕ್ಷಣೆ ಪಡೆವ ಏಕೈಕ ಮಾರ್ಗ.


ಮತ್ತೆ ಬಂದಿದೆ ಕೋವಿಡ್‌-19 : ಎಚ್ಚರ... - Janathavaniಡಾ|| ರವಿ ಆರ್‌.
ಕಾರ್ಡಿಯಾಕ್‌ ಅನಸ್ತೇಸಿಯಾ
ಕ್ರಿಟಿಕಲ್‌ ಕೇರ್‌ ಮೆಡಿಸಿನ್‌
ಪ್ರೊಫೆಸರ್‌ ಮತ್ತು ಹೆಡ್‌ ಅನಸ್ತೇಸಿಯಾ ಮತ್ತು ತುರ್ತು
ಚಿಕಿತ್ಸಾ ವಿಭಾಗ, ಜೆ.ಜೆ.ಎಂ. ಮೆಡಿಕಲ್‌ ಕಾಲೇಜು, ದಾವಣಗೆರೆ.

 

error: Content is protected !!