ಸತ್ಯ, ಶಾಂತಿ, ಸಮಾನತೆ ಸಾರಿದ ಗಾಂಧೀಜಿ

ಗಾಂಧೀಜಿ ಹುತಾತ್ಮರಾದ ಜನವರಿ 30ನ್ನು  ಗಾಂಧೀಜಿಗೆ ಪ್ರಿಯವಾದ ಮದ್ಯ ಹಾಗೂ ತಂಬಾಕು ನಿಷೇಧದ ದಿನವನ್ನಾಗಿಯೂ ಹಾಗೂ ಸತ್ಯ, ಅಹಿಂಸೆಗಳನ್ನೇ ಅಸ್ತ್ರ ಮಾಡಿಕೊಂಡು ವಿಶ್ವದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಬಂದೂಕು, ಹಿಂಸೆಗಳಿಲ್ಲದೆ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯೂ ಗೋಡ್ಸೆಯಿಂದ ಬಂದೂಕಿನ ಹಿಂಸೆಯಿಂದಲೇ ದುರ್ಮರಣವೂ ಆದ ದಿವಸ.

ಗಾಂಧಿಯವರು ಮದ್ಯಪಾನ ಮತ್ತು ತಂಬಾಕು ಸೇವನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಸಂಪೂರ್ಣ ಇಂದ್ರಿಯ ನಿಗ್ರಹವನ್ನು ಹೊಂದಿರಬೇಕು ಎನ್ನುವ ನಿಲುವನ್ನು ಹೊಂದಿದ್ದರು. ಅವರು ಹೇಳಿದಂತೆ ಮದ್ಯಪಾನ (ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೋ) ಮುಕ್ತವಾದಾಗ ಮಾತ್ರ ಭಾರತ ಸಂಪೂರ್ಣ ಸ್ವರಾಜ್ಯವಾದಂತೆ ಎಂದು ಘೋಷಿಸಿದ್ದರು. ಬೆಂಕಿ ದೇಹವನ್ನು ನಾಶ ಮಾಡಿದರೆ, ಮದ್ಯ ಮತ್ತು ಮಾದಕ ವಸ್ತು ದೇಹ ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ ಎಂದರು. ಡಿಡಿಟಿ ವ್ಯಸನಿಗಳು ಸಾಧ್ಯವಾದಷ್ಟು ಬೇಗ ಈ ಶಾಪದಿಂದ ಹೊರಬರಬೇಕು. ದೇಶಾದ್ಯಂತ ಮದ್ಯಪಾನದ ವಿರುದ್ಧ ಜನಜಾಗೃತಿ ಮೂಡಿಸಿ, ನಿರಂತರ ಹೋರಾಟ ನಡೆಸುವುದರಿಂದ ಮದ್ಯಪಾನ ಮುಕ್ತ ದೇಶ ಮಾಡಲು ಸಾಧ್ಯ ಎಂಬುದು ಗಾಂಧೀಜಿಯವರ ಅಭಿಲಾಷೆಯಾಗಿದೆ. ಈ ಕೆಡುಕಿನ ವಿರುದ್ಧ ಎಲ್ಲರೂ ಮತ್ತೊಮ್ಮೆ ಧ್ವನಿ ಎತ್ತಬೇಕಾಗಿದೆ. `ಒಂದು ದೇಶವನ್ನು ಸಂಪೂರ್ಣ ನಾಶ ಮಾಡಲು ಅಣುಬಾಂಬ್, ನ್ಯೂಕ್ಲಿಯರ್ ಮಿಸೈಲ್, ಶತ್ರು ರಾಷ್ಟ್ರ ಯಾವುದೂ ಬೇಕಿಲ್ಲ. ಆ ದೇಶದ  ಯುವ ಜನತೆಯನ್ನು ದುಶ್ಚಟಗಳ ದಾಸರನ್ನಾಗಿ ಮಾಡಿದರಷ್ಟೇ ಸಾಕು. ಯುವಕರ ನಾಶದಿಂದ ಆ ನಾಡು ಅನಾಥ ಮಕ್ಕಳ, ವಿಧವೆಯರ, ಮುದುಕರ ಕೊಂಪೆಯಾಗುತ್ತದೆ ಎನ್ನುವುದು ಸಂಪೂರ್ಣ ಸತ್ಯ.

ಇತ್ತೀಚಿನ ದಿನಗಳಲ್ಲಿ ಯುವಕರು ಡಿಡಿಟಿ ದಾಸರಾಗಿ ಜೀವನ ಮೌಲ್ಯಗಳನ್ನೇ ಮರೆತಿದ್ದಾರೆ. 

ಗಾಂಧೀಜಿಯವರು ಯಾವುದನ್ನೇ ಸಾಧಿಸಲು ಹಿಂಸೆಯ ಮಾರ್ಗ ಸರ್ವಥಾಸಲ್ಲ.  ಅಹಿಂಸಾ ಮಾರ್ಗವೇ ಸ್ವಾತಂತ್ರ್ಯದ ನಿಜವಾದ ಮಾರ್ಗ ಹಾಗೂ ಅಹಿಂಸೆಯಿಂದಲೇ ಜೀವನದ ಗುರಿಯನ್ನು ಸಾಧಿಸಬೇಕು ಎನ್ನುವ ನಂಬಿಕೆ ಹೊಂದಿದ್ದರು. ತಮ್ಮ ಈ ಧೋರಣೆಗಳನ್ನು ತಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ, ಕ್ಷೇತ್ರಗಳಲ್ಲಿ ಅಳವಡಿಸಿಕೊಂಡಿದ್ದರು. ಅದರ ಪರಿಣಾಮ ವಾಗಿಯೇ ಅವರು ಒತ್ತಡ ರಹಿತವಾದ ನಗುವಿನ ಉಲ್ಲಾಸ, ಶಾಂತಿಯುತವಾದ ವರ್ತನೆಯ ನಿತ್ಯಜೀವನ ನಡೆಸುತ್ತಿದ್ದರು.  `ನನಗೆ ಸತ್ಯವೊಂದೇ ಸಾರ್ವಭೌಮವಾದ ತತ್ವ. ಉಳಿದೆಲ್ಲವೂ ಅದರಲ್ಲೇ ಸೇರಿವೆ’ ಎಂದಿದ್ದಾರೆ. `ನೀತಿಯ ತಳಹದಿಯ ಮೇಲೆ ಈ ಸೃಷ್ಠಿ ನಿಂತಿದೆ. ಸತ್ಯದಲ್ಲಿ ನೀತಿ ಒಳಗೊಂಡಿದೆ ಎಂದು ಚೆನ್ನಾಗಿ ಅರಿತೆ. ಸತ್ಯೋಪಾಸನೆಯೇ ನನ್ನ ಮುಖ್ಯ ಗುರಿಯಾಯಿತು. ಅದರ ಅಂತರಾರ್ಥ ವಿಸ್ತಾರವಾಗುತ್ತಲೇ ಸಾಗಿದೆ’ ಅಹಿಂಸೆ ಎನ್ನುವುದು ಭಕ್ತಿ. ಯಾವ ಜೀವಿಯನ್ನೂ ನೋಯಿಸದಿರುವುದು, ಎಲ್ಲಾ ಜೀವಿಗಳನ್ನು ತನ್ನಂತೆಯೇ ಪರಿಭಾವಿಸುವುದು ಹಾಗೂ ಅವುಗಳ ಮೂಲಭೂತ ಅವಶ್ಯಕತೆಗಳಿಗಾಗಿ ಸದಾ ಮಡಿಯುವವರೆಗೂ ದುಡಿಯುವುದು, ಯಾವ ಜೀವಿಗೂ ದೈಹಿಕ ಮತ್ತು ಮಾನಸಿಕವಾಗಿ ತೊಂದರೆ ಕೊಡದಿರುವುದು, ಅಗತ್ಯಕ್ಕಿಂತ ಹೆಚ್ಚು ವಸ್ತುಗಳ ಸಂಗ್ರಹ ಸಹ ಹಿಂಸೆಯೇ. ಸರಳ ಜೀವನವೇ ಅಹಿಂಸೆ ಎಂದಿದ್ದಾರೆ. 

ಗಾಂಧೀಜಿಯವರು ಭಾರತದಲ್ಲಿ ಪುರಾತನ ಕಾಲದಿಂದಲೂ ಪ್ರಚಲಿತದಲ್ಲಿದ್ದ ಭಕ್ತಿ, ಸರ್ವದಯೆ, ಪ್ರೇಮ ಯಾರಿಗೂ ಅಪರಿಚಿತವಲ್ಲ, ಅಸಾಧ್ಯವಲ್ಲ. ಅಹಿಂಸೆಯೇ ನನ್ನ ದೇವರು. ಇದರ ಮುಂದೆ ಯಾವ ಖಡ್ಗ, ಬಂದೂಕುಗಳು ನಿಲ್ಲುವುದಿಲ್ಲ. ಎದುರಾಳಿಯನ್ನೆದುರಿಸಲು ಹಿಂಸಾ ಪ್ರಯೋಗ ಮಾಡುವುದು ಸತ್ಯನಿಷ್ಠೆ ಎನಿಸಿಕೊಳ್ಳುವುದಿಲ್ಲ. ತಾಳ್ಮೆಯಿಂದಲೂ, ಸಹಾನು ಭೂತಿಯಿಂದಲೂ ಅವರ ತಪ್ಪಿನ ಅರಿವು ಮೂಡಿಸಿ ಬೇರೆಯವರು ಅವರನ್ನು ಮೇಲೆತ್ತಬೇಕು. ಏಕೆಂದರೆ ಒಬ್ಬರಿಗೆ ಸತ್ಯ ಎಂದು ತೋರಿದುದು ಮತ್ತೊಬ್ಬರಿಗೆ ಅಸತ್ಯ ಎನಿಸಬಹುದು. ಇಚ್ಛಾಪೂರ್ವಕ ನಾವೇ ಸಂಕಟಗಳನ್ನನುಭವಿಸ ಬೇಕಾದೀತು. ಅದನ್ನೇ ತಾಳ್ಮೆ ಎನ್ನುವುದು. ಆದ್ದರಿಂದಲೇ ಸತ್ಯಾಗ್ರಹ ಎಂದರೆ ಕಷ್ಟಧಾರಣೆಯ ದೃಢಸಂಕಲ್ಪದಿಂದ ಸತ್ಯದ ಪ್ರತಿಷ್ಠಾಪನೆ ಸಾಧ್ಯ ಎಂದಿದ್ದಾರೆ.

ಜಗತ್ತಿನ ನಾಯಕರಿಂದ ಗಾಂಧೀಜಿಯ ಮೆಚ್ಚುಗೆ :

ಐನ್‍ಸ್ಟೀನ್ : ಇಂತಹ ಒಂದು ಚೈತನ್ಯ ದೇಹಧಾರಿಯಾಗಿ ಈ ಭೂಮಿಯ ಮೇಲೆ ನಡೆದಾಡಿತ್ತು ಎಂದು ಮುಂದಿನ ಜನಾಂಗ ನಂಬಲಾರದಂತಹ ವ್ಯಕ್ತಿ ಗಾಂಧೀಜಿ.

ಮಾರ್ಟಿನ್ ಲೂಥರ್ ಕಿಂಗ್  : ಗಾಂಧಿ ಈ ಜಗತ್ತಿನ  ಜೀವಸತ್ವ. ಅವರ ತತ್ವಗಳಿಲ್ಲದೆ ಈ ಜಗತ್ತು ಉಳಿಯದು.

ಪರ್ಲ್ ಎ.ಬಕ್ ; ದುಃಖಭರಿತ ಜಗತ್ತಿಗೆ ಸುಖಶಾಂತಿಗಳ ಭರವಸೆಯ ಪ್ರತಿರೂಪ ಗಾಂಧೀಜಿ.

ಜಾನ್ ಗುಂತರ್ :  `ಬುದ್ಧನ ನಂತರ ಜಗತ್ತು ಕಂಡ ಅಪೂರ್ವ ವ್ಯಕ್ತಿ ಗಾಂಧಿ’

ಮೆಡಿಲಿನ್ ಸ್ಲೇಡ್ (ಮೀರಾಬೆಹನ್) : ಗಾಂಧಿಯವರನ್ನು ಮೊದಲ ಬಾರಿಗೆ ಕಂಡಾಗ ಅವರು ನನಗೆ ಜ್ಯೋತಿಯಂತೆ ಕಂಡರು.

ರವೀಂದ್ರನಾಥ್ ಠಾಗೂರ್ :  `ದೀನದಲಿತರ ಗುಡಿಸಲುಗಳ ಮುಂದೆ ಫಲವಾಗಿ ನಿಂತ ಮಹಾತ್ಮನೀತ’. 

ರಾಮಮನೋಹರ ಲೋಹಿಯ : `ದೇವರು ಮತ್ತು ಹೆಣ್ಣು ಇವೆರಡರ ಮಿಂಚುಗಳು ಒಟ್ಟಿಗೆ ಪ್ರಕಾಶಿಸುತ್ತಿದ್ದ ಮನುಷ್ಯ.

ಸರ್ವಧರ್ಮಗಳ ಪ್ರತಿಪಾದಕ ಗಾಂಧೀಜಿ :

ಪರಸ್ಪರರ ಧರ್ಮಗಳನ್ನು ಹಳಿಯುವುದು, ಹೊಣೆಯಿಲ್ಲದೆ ದೂಷಿಸುವುದು. ಅಸತ್ಯವನ್ನೇ ನುಡಿಯುವುದು, ಮುಗ್ಧ ಜನರನ್ನು ಕೊಲ್ಲುವುದು, ಮಂದಿರ, ಮಸೀದಿ, ಚರ್ಚುಗಳನ್ನು ನಾಶ ಮಾಡುವುದು ಇವೆಲ್ಲವೂ ಅಧರ್ಮದ ಪರಾಕಾಷ್ಠೆ- ನಾಸ್ತಿಕತೆಯ ಸಂಕೇತ. ತನ್ನ ಧರ್ಮದ ನಿಜವಾದ ಅರಿವನ್ನು ಪಡೆದು ಪರರ ಧರ್ಮಗಳನ್ನು ತನ್ನದರಂತೆಯೇ ಗೌರವಿಸುವುದು ಧಾರ್ಮಿಕ ಸಂಸ್ಕೃತಿ. ಕಟ್ಟಕಡೆಯವನಿಗೆ ನ್ಯಾಯದ ಬಲ ಒದಗಿಸಬೇಕು.  `ನಮಗಾಗಿ ನಮ್ಮ ಸುತ್ತಲ ಪ್ರಪಂಚ ಏನು ಮಾಡಬೇಕೆಂದು ಬಯಸುತ್ತೇವೋ ಅದನ್ನೇ ನಾವು ಕಟ್ಟಕಡೆಯವರಿಗೂ ಸಲ್ಲಿಸಬೇಕು. ಸರ್ವರಿಗೂ ಸಮಾಜದಲ್ಲಿ ಸಮಾನಾವಕಾಶಗಳಿರಬೇಕು. ಸರ್ವರಿಗೂ ಸಮಬಾಳು. ಸರ್ವರಿಗೂ ಸಮಪಾಲು- ಇದೇ ಶ್ರೇಷ್ಠ ಜೀವನದ ಗುರಿ’

ಈ ಸಪ್ತ ಸಾಮಾಜಿಕ ಪಾತಕಗಳಿಂದ ಸಮಾಜ ದೂರವಿರಬೇಕು. 

ನೀತಿಯಿಲ್ಲದ ವ್ಯಾಪಾರ (ವಾಣಿಜ್ಯ), ಶೀಲವಿಲ್ಲದ ಶಿಕ್ಷಣ, ಶ್ರಮವಿಲ್ಲದ ಸಂಪತ್ತು, ತ್ಯಾಗವಿಲ್ಲದ ಪೂಜೆ, ಮಾನವೀಯತೆಯಿಲ್ಲದ ವಿಜ್ಞಾನ, ತತ್ವರಹಿತ ರಾಜಕೀಯ, ಆತ್ಮಸಾಕ್ಷಿರಹಿತ ಭೋಗ ಇವುಗಳಿಂದ ಸಮಾಜ ಮುಕ್ತವಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮನಸ್ಸಿನಲ್ಲಿ, ಮಾತಿನಲ್ಲಿ, ಕೆಲಸದಲ್ಲಿ ಅತ್ಯಂತ ಋಜುವಾಗಿ, ಅತ್ಯಂತ ಸತ್ಯವಾಗಿ ಅತ್ಯಂತ ಅಹಿಂಸೆಯಿಂದ ನಡೆಯಲು ಹೋರಾಡುತ್ತಾ ನನಗೆ ಸರಿಯೆಂದು ತಿಳಿದಿರುವ ಗುರಿ ಮುಟ್ಟಲು ಹಂಬಲಿಸಿ, ಸತತವೂ ಸೋಲುತ್ತಿರುವ ನಾನು ಒಂದು ಸಾಮಾನ್ಯ ಚೇತನ. ಆ ಯಾತ್ರೆ ಕ್ಲೇಶಕರ. ಆದರೆ, ಆ ಯಾತನೆಯಲ್ಲೂ ಆನಂದವಿದೆ, ಏರುವ ಒಂದೊಂದು ಹೆಜ್ಜೆಯೂ ನನ್ನನ್ನು ಬಲಿಷ್ಠನನ್ನಾಗಿ ಮಾಡಿ ಮುಂದಣ ಹೆಜ್ಜೆಗೆ ಸಾಮರ್ಥ್ಯವೀಯುತ್ತದೆ.

ರಘುಪತಿ ರಾಘವ ರಾಜಾರಾಮ್| ಪತಿತ ಪವನ ಸೀತಾರಾಮ್

ಈಶ್ವರ ಅಲ್ಲಾ ತೇರೇ ನಾಮ್| ಸಬ್ ಕೋ ಸನ್ಮತಿ ದೇ ಭಗವಾನ್.  ಯುಗ ಯುಗಗಳ ಈ ಅಮರವಾಣಿ ಗಾಂಧೀ ಯುಗದಲ್ಲಿ ಒಂದು ಹೊಸ ಚೈತನ್ಯವನ್ನು ಮೈಗೂಡಿಸಿಕೊಂಡು ಅರಳಿ ನಿಂತಂತಿತ್ತು. ಹಿಂಸಾಮಯ ಜಗತ್ತಿಗೆ ಒಂದು ನಿಶ್ಚಿತ ತತ್ವಾಧಾರಿತ ಅಹಿಂಸಾ ಮಾರ್ಗ ಈ ಗೀತೆಯಿಂದ ಮೂಡಿ ಬಂದಿತ್ತು. 

ನೀವು ಭದ್ರವಾಗಿ ಅಂಟಿಕೊಳ್ಳಬೇಕಾದುದು ನನ್ನ ಹೆಸರಿಗಲ್ಲ, ತತ್ವಗಳಿಗೆ. ಅದರ ಅಳತೆಗೋಲಿನಿಂದ ನಿಮ್ಮ ಒಂದೊಂದು ಚಟುವಟಿಕೆಯನ್ನೂ ಅಳೆದು ಅದರಿಂದ ಎದುರಾಗುವ ಎಲ್ಲ ಸಮಸ್ಯೆಗಳನ್ನೂ ನಿರ್ಭೀತರಾಗಿ ಎದುರಿಸಿ ಎಂದಿದ್ದಾರೆ.

ಸಮಾಜದ ಅಭಿವೃದ್ಧಿ, ಶಾಂತಿ, ನೆಮ್ಮದಿಗಾಗಿ ತಮ್ಮ ಜೀವಮಾನವನ್ನು ಮುಡುಪಾಗಿಟ್ಟಿದ್ದ ಮಹಾತ್ಮಗಾಂಧಿಯವರು ಕೊನೆಯುಸಿರೆಳೆದಿರುವ ಜನವರಿ 30ರ ದಿನವನ್ನು ಡಿಡಿಟಿ (ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ) ಮುಕ್ತ ಭಾರತ ಮತ್ತು ಅಹಿಂಸಾ ದಿನಾಚರಣೆಯಾಗಿ ಆಚರಿಸೋಣ. ಅವರ ತತ್ವ ಆದರ್ಶಗಳನ್ನು ಪಾಲಿಸೋಣ. 


– ಶಿವನಕೆರೆ ಬಸವಲಿಂಗಪ್ಪ,
ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.
[email protected]

error: Content is protected !!