ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರ ವಾರ…

ಗುಡ್‍ಫ್ರೈಡೆ ದಿನ ನನಗೊಂದು ಮೆಸೇಜ್ ಬಂತು. Happy Good Friday ಒಂದು ಕ್ಷಣ ಮನಸ್ಸು ವಿಚಲಿತವಾಯಿತು. ಮೆಸೇಜ್ ಮಾಡಿದವರಿಗೆ ಅದೊಂದು ಹಬ್ಬ… ಸಂಭ್ರಮದ ದಿನ ಎಂಬ ಭಾವನೆ ಇರಬಹುದು. ವಾಸ್ತವವಾಗಿ ಗುಡ್‍ಫ್ರೈಡೆ ಒಂದು ಶೋಕದ ದಿನ. ಏಸು ಮರಣ ದಂಡನೆಗೆ ಗುರಿಯಾಗಿ ಶಿಲುಬೆಯಲ್ಲಿ ಪ್ರಾಣಬಿಟ್ಟ ದಿನ. ವಿಶ್ವದಾದ್ಯಂತ ಕ್ರೈಸ್ತರಿಗೆ ಇದು ದುಃಖದ ದಿನ.

ಗುಡ್‍ಫ್ರೈಡೆ ಆಚರಣೆ ಹಿಂದೆ ನಲವತ್ತು ದಿನಗಳ ತಪಸ್ಸು ಕಾಲ  ಇರುತ್ತದೆ. ಬೂದಿ ಬುಧವಾರದಿಂದ ಪ್ರಾರಂಭವಾಗುವ ಈ ತಪಸ್ಸು ಕಾಲ ಪಾಸ್ಕ ಹಬ್ಬ Easter ದಲ್ಲಿ ಕೊನೆಗೊಳ್ಳುತ್ತದೆ. ಈಸ್ಟರ್ ಹಬ್ಬ ಭಾನುವಾರ ಬರುವುದರಿಂದ ಕ್ರೈಸ್ತರಲ್ಲದವರಿಗೆ ಈ ಹಬ್ಬದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗುಡ್‍ಫ್ರೈಡೆ ಸರ್ಕಾರಿ ರಜೆ ಆದ ಕಾರಣ ಇದನ್ನು ಕ್ರೈಸ್ತರ ಸಂಭ್ರಮದ ಹಬ್ಬವೆಂದೇ ಜನ ತಿಳಿದಿದ್ದಾರೆ. ಮಹಮ್ಮದೀಯರು ರಂಜಾನ್ (ಈದ್-ಉಲ್-ಫಿತರ್) ಕಾಲದಲ್ಲಿ ಆಚರಿಸುವ ತಪಸ್ಸಿಗೆ ಹೋಲಿಕೆಯಾಗಿ, ಹಿಂದೂಗಳು ಅಯ್ಯಪ್ಪ ಸ್ವಾಮಿಯ ಮಾಲಾಧಾರಣೆಯ ಸಂದರ್ಭದಲ್ಲಿ ಪಾಲಿಸುವ ನಿಯಮಾವಳಿಗಳಂತೆ ಕ್ರೈಸ್ತರೂ ಕೂಡ ಪ್ರತಿ ವರ್ಷ 40 ದಿನಗಳ ಕಾಲ ವೈಭವದ ಜೀವನ ಮತ್ತು ಶುಭ ಸಮಾರಂಭಗಳಿಂದ ವಿಮುಖರಾಗಿ ಸರಳ, ಸಾತ್ವಿಕ ಜೀವನ ನಡೆಸುತ್ತಾ ಜಪತಪಗಳಲ್ಲಿ ಮಗ್ನರಾಗಿ ಏಸುವಿಗೆ ಪ್ರಿಯರಾಗುತ್ತಾರೆ. ಏಕಾಂಗಿಯಾಗಿ ಮರುಭೂಮಿಯಲ್ಲಿ ಧ್ಯಾನ ಮಗ್ನರಾದ ಏಸು 40 ದಿನಗಳ ಉಪವಾಸದಲ್ಲಿ ಪರಿಪರಿಯಾದ ಶೋಧನೆಗಳಿಂದ ಮುಕ್ತರಾಗುವ ವಿಧಾನಗಳನ್ನು ಈ ದಿನಗಳಲ್ಲಿ ಅನುಕರಿಸುತ್ತಾರೆ.

ಬೂದಿ ಬುಧವಾರ Ash Wednesday ತಪಸ್ಸಿನ  ಸಿದ್ಧತೆಯ ದಿನ. ಮನುಷ್ಯನ ಜೀವನ ನಶ್ವರ, ಮಣ್ಣಿಂದ ಮಣ್ಣಿಗೆ ಹೋಗುವ ತಾರ್ಕಿಕ ಸಿದ್ಧಾಂತವನ್ನು ಮನನ ಮಾಡಿಕೊಳ್ಳುವ ದಿನ. ಹಣೆಯ ಮೇಲೆ ತಾಳೆಗರಿ ಸುಟ್ಟ ಬೂದಿಯ ಶಿಲುಬೆಯನ್ನು ಸಾಂಕೇತಿಕವಾಗಿ ಬರೆಯುತ್ತಾರೆ. ತಾಳೆಗರಿ ಸಿಗದಿದ್ದಲ್ಲಿ ತೆಂಗಿನ ಗರಿ ಉಪಯೋಗಿಸಿ ಶಿಲುಬೆಯಾಕಾರ ಮಾಡಿ ಚರ್ಚಿನಲ್ಲಿ ಪಡೆದು ಮನೆಯಲ್ಲಿ ಮುಂದಿನ ವರ್ಷದವರೆಗೆ ಕಾಪಾಡುತ್ತಾರೆ. ಒಣಗರಿಗಳನ್ನು ಸುಟ್ಟು ಬೂದಿಗೆ ಆಲಿವ್ ಎಣ್ಣೆ ಬೆರೆಸಿ ಹಣೆಗೆ ಹಚ್ಚುತ್ತಾರೆ. ವಾಸ್ತವವಾಗಿ ಆ ದಿನ ಗೋಣಿ ನಾರಿನಿಂದ ಹೊಲಿದ ಬಟ್ಟೆ ಧರಿಸಿ ಮೈ ಮೇಲೆ ಬೂದಿ ಸಿಂಪಡಿಸುವ ಪದ್ಧತಿ ಇತ್ತು. ವೈರಾಗ್ಯದ ಸಂಕೇತ ಬೂದಿ. ವಿಭೂತಿ ಧಾರಣೆಯನ್ನು ಹೋಲುವ ಈ ಆಚರಣೆ ಮನುಷ್ಯನಿಗೆ ಪ್ರಾಪಂಚಿಕ ಆಸೆಗಳನ್ನು ತ್ಯಾಗ ಮಾಡುವಂತೆ ಪ್ರೇರೇಪಿಸುತ್ತದೆ. 

ಪಾಸ್ಕ ಹಬ್ಬದ ಹಿಂದಿನ ಭಾನುವಾರ ಗರಿಗಳ ಹಬ್ಬ Palm Sunday ಪವಿತ್ರ ವಾರ. ಇದು ಏಸು ಜೆರುಸಲೇಂ ಪ್ರವೇಶಿಸುವ ದಿನ. ತಪಶ್ಯಕ್ತಿಯನ್ನು ಪಡೆದು ವಿನಮ್ರವಾಗಿ ಪುರಪ್ರವೇಶ ಮಾಡುವ ದಿನ. ವಿಜಯೀ ವೀರನಂತೆ ಕುದುರೆ ಏರಿ ಬರದೆ ದೀನನಾಗಿ ಕತ್ತೆಯ ಮೇಲೆ ಆಸೀನನಾದ ಏಸುವನ್ನು ಪುರ ಜನರು ತಾಳೆ ಗರಿಗಳನ್ನು ಹಾಸಿ, ತಾಳೆಗರಿಗಳನ್ನು ಚಾಮರದಂತೆ ಬೀಸಿ ರಾಜ ಮರ್ಯಾದೆಯಿಂದ ಬರಮಾಡಿಕೊಳ್ಳುತ್ತಾರೆ. ಇದನ್ನು ಕಂಡ ಆಳರಸರ ಮನಸ್ಸಿನಲ್ಲಿ ಈರ್ಷ್ಯೆ ಹುಟ್ಟಿ, ಆತನ ಮೇಲೆ ಅಪವಾದ ಹೊರಿಸಿ ಮರಣ ದಂಡನೆಗೆ ಗುರಿಪಡಿಸುತ್ತಾರೆ.

ತಾನು ಮರಣ ದಂಡನೆಗೆ ಗುರಿಯಾಗುವ ವಿಷಯ ಮತ್ತು ತಮ್ಮ ಹನ್ನೆರಡು ಶಿಷ್ಯರಲ್ಲಿ ಜೂದಾಸನೆಂಬುವನು ತಮ್ಮನ್ನು ಹಿಡಿದುಕೊಡಲಿದ್ದಾನೆ ಎಂದು ತಿಳಿದಿದ್ದರೂ ಏಸು ಹನ್ನೆರಡೂ ಜನರ ಪಾದಗಳನ್ನು ತೊಳೆದು ಅವರನ್ನು ಪಾಪ ಮುಕ್ತರನ್ನಾಗಿಸುತ್ತಾರೆ. ಗುಡ್‍ಫ್ರೈಡೆಯ ಹಿಂದಿನ ದಿನವನ್ನು ಪವಿತ್ರ ಗುರುವಾರವೆಂದು ಕರೆಯಲಾಗುತ್ತದೆ. ಶಿಷ್ಯರ ಪಾದ ತೊಳೆದು ಅವರೊಡನೆ ಕೊನೆಯ ಭೋಜನ ಮಾಡುವ ಏಸು ಎಲ್ಲ ಶಿಷ್ಯರ ಪಾಪಗಳನ್ನು ಪವಿತ್ರ ಗುರುವಾರದಂದು ಕ್ಷಮಿಸುತ್ತಾರೆ. ತಮ್ಮ ಉಪದೇಶಗಳನ್ನು ಮುಂದುವರೆಸಲು ಆಶೀರ್ವದಿಸುತ್ತಾರೆ.

ಗುಡ್‍ಫ್ರೈಡೆ – ಕ್ರೈಸ್ತರಿಗೆ ಕರಾಳ ದಿನ. ಆ ದಿನ ಏಸುವನ್ನು ಮರಣ ದಂಡನೆಗೆ ಗುರಿಪಡಿಸುವ ದಿನ. ಶಿಲುಬೆಯಲ್ಲಿ ಮೊಳೆ ಜಡಿದು ಬಲಿ ಪಡೆದ ದಿನ! ಕಲ್ವಾರಿ ಬೆಟ್ಟದ ಮೇಲೆ ಭಾರವಾದ ಶಿಲುಬೆ ಹೊತ್ತು ನಡೆಯುವ ಏಸುವಿಗೆ ಅಡಿಗಡಿಗೆ ಬಡಿವ ಛಡಿ ಏಟು ರಕ್ತ ಒಸರುವಂತೆ ಮಾಡುತ್ತದೆ. ಮುಳ್ಳಿನ ಕಿರೀಟದಿಂದ ಧಾರೆ – ಧಾರೆಯಾಗಿ ರಕ್ತ ಬಸಿಯುತ್ತದೆ. ವಸ್ತ್ರಗಳನ್ನು ಕಿತ್ತು ಬಿಸಾಡಿ ಅವಮಾನಿಸಿದ, ಕಳ್ಳರೊಡನೆ ಶಿಲುಬೆಗೇರುವ ದಾರುಣವಾದ ಹೀನ ಶಿಕ್ಷೆಗೊಳಪಟ್ಟ ದಿನ. ಈ ದಿನ ಕ್ರೈಸ್ತರು ಏಸುವಿನ ಹಿಂಸೆಯನ್ನು 14 ಘಟ್ಟಗಳಲ್ಲಿ ಪುನರ್‍ಮನನ ಮಾಡಿಕೊಳ್ಳುತ್ತಾರೆ. ಮಂಡಿಯೂರಿ ಏಸು ಪಟ್ಟ ಯಾತನೆಯನ್ನು ಅನುಭವಿಸುತ್ತಾರೆ. ಶಿಲುಬೆ ಹೊತ್ತು ಚೂಪಾದ ಕಲ್ಲುಗಳಿಂದ ಕೂಡಿದ ಕಲ್ವಾರಿ (ಗೊಲ್ಗೊಥಾ) ಬೆಟ್ಟದ ಮೇಲೆ ಬಾಯಾರಿದ ಏಸುವಿನ ಬಾಯಿಗೆ ಹನಿ ನೀರು ಕೊಡದ ಕ್ರೂರಿಗಳ ಕೈಯಲ್ಲಿ ದೇವಪುತ್ರ ಹತನಾದ ದಟ್ಟ ದರಿದ್ರ ದಿನವಿದು! ಈ ದುರಂತ ದಿನವನ್ನು `ಶುಭ ಶುಕ್ರವಾರ’ ವೆಂದು ಕರೆದರು. 

ಏಸುವನ್ನು ಪವಿತ್ರ ಶಿಲುಬೆಯಿಂದ ಕೆಳಗಿಳಿಸಿ ಸಮಾಧಿ ಮಾಡಿದ ದಿನ ಪವಿತ್ರ ಶನಿವಾರ. `ನಾನು ಪುನರುತ್ಥಾನ ಹೊಂದಿ ಬರುವೆ’ ಎಂಬ ಏಸುವಿನ ವಾಣಿಯಂತೆ ಭಾನುವಾರ ಜೀವಂತವಾಗಿ ಎದ್ದು ಬಂದರು. ಈ ದಿನವನ್ನು `ಪಾಸ್ಕ’ ಹಬ್ಬದ ರೂಪದಲ್ಲಿ ವಿಶ್ವದಾದ್ಯಂತ ವಿಜೃಂಭಣೆಯಿಂದ, ಸಂಭ್ರಮದಿಂದ ಆಚರಿಸುತ್ತಾರೆ. 40 ದಿನಗಳ ತಪಸ್ಸು ಮುಕ್ತಾಯಗೊಂಡು ಹರ್ಷದ ಹೊನಲು ಹರಿಯುತ್ತದೆ. ತ್ಯಾಗ – ಪ್ರಾರ್ಥನೆ ಮತ್ತು ದಾನ ಈ ಮೂರು ಆಚರಣೆಗಳ ಸಮ್ಮಿಲನವೇ ಪಾಸ್ಕ ಹಬ್ಬ. ಕೇವಲ ದೈಹಿಕ ದಂಡನೆ ಸಾಲದು. ಪರಿಶುದ್ಧ ಜೀವನ ಶೈಲಿಯೂ ಮುಖ್ಯವೆಂದು ಸಾರುವ `ಫಾಸ್ಕ’ ಹಬ್ಬದ ಸಂದೇಶ ಎಲ್ಲರಿಗೂ ತಲುಪಲಿ.


ಜಸ್ಟಿನ್ ಡಿ’ಸೌಜ
[email protected]

 

error: Content is protected !!