ಇಂದಿನ ಪೊಲೀಸ್ ಧ್ವಜ ದಿನಾಚರಣೆಗೊಂದು ವೃತ್ತಕ

ಒಂದು ನಾಡು ನೆಮ್ಮದಿಯ ನಾಡಾಗುವಂತೆ ಮತ್ತು ಆದರ್ಶ ದೇಶವಾಗುವಂತೆ ಮಾಡಲು ಇಲಾಖಾ ಯೋಜನೆಗಳು ಪ್ರಮುಖವಾಗಿರುತ್ತವೆ. ರೀತಿ, ನೀತಿ ಹಾಗೂ ಆಡಳಿತಗಳಲ್ಲಿ ವಿಕಾಸವು ಆಗಲಿಕ್ಕೆ ಸಾಕಷ್ಟು ಅವಕಾಶವಿಲ್ಲದಿದ್ದಲ್ಲಿ ನಮ್ಮ ನಿಯಮಗಳು ಪದ್ಧತಿಗಳು ಹಾಗೂ ಕಾನೂನುಗಳು, ಧಾರ್ಮಿಕ ಕಟ್ಟಳೆಗಳು, ಶಾಸ್ತ್ರ ಗ್ರಂಥಗಳು ವಿಕಾಸದ ಬದಲು ಅಡ್ಡಿಯನ್ನುಂಟುಮಾಡುತ್ತಿದ್ದಲ್ಲಿ  ನಮ್ಮ ಆಚಾರ, ವಿಚಾರ, ನಂಬಿಕೆಗಳು ಕೇವಲ ಶುಷ್ಕವಾಗದೇ ಆಡಂಬರ ಮತ್ತು ಹುರುಳಿಲ್ಲದವುಗಳಾದಲ್ಲಿ  ವ್ಯಕ್ತಿ-ವ್ಯಕ್ತಿ, ಸಮಾಜ-ಸಮಾಜ, ಭಾಷೆ-ಭಾಷೆ ಮೊದಲಾದವುಗಳು ತಮ್ಮ ತಮ್ಮಲ್ಲಿ ಮೇಲ್ಮೆಗೆ ಬಡಿದಾಟವನ್ನು ಆರಂಭ ಮಾಡುವ ಕಾಲದಲ್ಲಿ ಮತ್ತು ಸರ್ವ ದೃಷ್ಟಿಯಿಂದ ಸರ್ವರಿಗೂ ಸಮಾನಾವಕಾಶ ದೊರೆಯದೇ ಕೆಲವರ ಹಿತಾಸಕ್ತಿಗಳೇ ಮೇಲುಗೈಯ್ಯಾಗಿ ಸಮಾಜದಲ್ಲಿ ಅಸಂತೋಷ, ಅನೈತಿಕತೆ ತಲೆದೋರಿ ಕೆಲವರನ್ನು ಇನ್ನೂ ಕೆಲವರು ಸುಲಿಗೆ ಮಾಡುವುದು ಕಂಡು ಬಂದಲ್ಲಿ ತಮ್ಮ ಜೀವನದ ಮೌಲ್ಯಗಳ ಅರಿವು ಕನಿಷ್ಟವಾಗಿ ಮೌಲ್ಯಗಳಲ್ಲದ ವುಗಳನ್ನು ಮೌಲ್ಯವೆಂದು ಭ್ರಮಿಸಿ, ತಪ್ಪು ತಿಳುವಳಿಕೆಗಳ ಬೆನ್ನು ಹತ್ತಿ ದಾರಿಗಾಣದಾದಲ್ಲಿ, ನಮ್ಮ ನೀತಿ ಹಾಗೂ ಧರ್ಮಗಳಿಗೆ ಬಲವಾದ ಪೆಟ್ಟು ಬೀಳುವಂತಹ ಕಾಲಕ್ಕೆ ಆರಕ್ಷಕ ಇಲಾಖೆ ಕೈಗೊಳ್ಳುವ ಜಾಗೃತ ಪ್ರಜ್ಞೆ ಬಹು ಪ್ರಗಲ್ಭವಾದದ್ದು. 

ಕ್ರಿ.ಶ. ಪ್ರಾರಂಭದಲ್ಲಿ ಜೋಳವಾಳಿ, ಲೆಂಕವಾಳಿ, ಗರುಡವಾಳಿ, ವೇಳವಾಳಿ, ವಾಕಿಯಾ ನವೀಸ್, ಸ್ವಾನಿಹ ನವೀಸ್, ಖುಫಿಯಾ ನವೀಸ್ ತಂಡಗಳು ಪೊಲೀಸ್ ಕಾರ್ಯಚಾರಣರಾಗಿದ್ದರು. ಮೈಸೂರನ್ನು ಆಳುತ್ತಿದ್ದ ಅರಸರ ಕಾಲದಲ್ಲಿ ತಳವಾರರು, ತೋಟಿಗಳು, ಕಾವಲುಗಾರರು, ನೀರಗಂಟಿಗಳು, ಕಟ್ಟಬಿಡಿಗಳು, ಪೇದೆಗಳು, ಉಂಬಳಿದಾರರು, ಅಮರಗಾರರು, ಹಳೇಪೈಕರು, ಹುಲ್ಲುಗಾವಲರು, ಅಂಕಮಾಲಿಗಳು, ಪಟೇಲರು, ಶಾನಭೋಗರು, ಮುಂತಾದ ನಾಮಧೇಯಗಳಿಂದ ಕರೆಯಲ್ಪಡುತ್ತಿದ್ದ ಗ್ರಾಮ ಸೇವಕರು ಪೊಲೀಸರ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದರೆಂದು ಮತ್ತು ಅಲ್ಪಸ್ವಲ್ಪ ವ್ಯತ್ಯಾಸಗೊಂಡು ಹೈದರಾಲಿ, ಟಿಪ್ಪುಸುಲ್ತಾನ್ ಪೂರ್ಣಯ್ಯನವರ ಕಾಲದಲ್ಲಿಯೂ ಮುಂದುವರೆದವು ಹಾಗೂ ಈ ಸೇವಕರು ಇನಾಂ ಭೂಮಿಯ ರೂಪದಲ್ಲಿ ರೈತರು ಕೊಡುವ ಧಾನ್ಯದ ಪಾಲಿನ ರೂಪದಲ್ಲಿ ಅಥವಾ ರಾಜ್ಯದಿಂದ ನೇರವಾಗಿ ಸಂಭಾವನೆ ಪಡೆಯುತ್ತಿದ್ದರು ಎಂದು 1838 ರಲ್ಲಿ ಸರ್ ಮಾರ್ಕ್ ಕಬ್ಬನ್ ತನ್ನ ವರದಿಯಲ್ಲಿ ಬರೆದಿದ್ದಾನೆ. 

ಗ್ರಾಮಗಳಲ್ಲಿ ಜೀವನ ಪದ್ಧತಿಯು ಬದಲಾವಣೆಯನ್ನು ಹೊಂದುತ್ತಾ ಮುನ್ನಡೆದಾಗ ಗ್ರಾಮದ ಪೊಲೀಸರನ್ನು ಕಡೆಗಣಿಸಿದ್ದರಿಂದ ಅವರ ಸ್ಥಾನದಲ್ಲಿ ಕಂದಾಚಾರಿ ಪೇದೆಗಳು ಪೂರ್ಣಯ್ಯನವರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿತು. ಇವರು ಒಂದು ರೀತಿಯ ಅನಿಯತ ಪದಾತಿ ಸೈನ್ಯವಾಗಿದ್ದರು. ಆದರೂ ಸಹ ಅಪರಾಧಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡುವುದು, ಕಾರಾಗೃಹದಲ್ಲಿ ಅವರನ್ನು ಕೂಡಿಡುವುದು, ಕೋಟೆ-ಕೊತ್ತಲ ಕಾವಲು ನಡೆಸುವುದು ಹಾಗೂ ಇತರೆ ಕೆಲವು ನಿಯಮಿತ ಕೆಲಸಗಳು ಅವರ ಪ್ರಧಾನ ಕರ್ತವ್ಯಗಳಾಗಿದ್ದವು. 

ಕಂದಾಚಾರಿ ಪೇದೆಗಳನ್ನು ಭೂ ಕಂದಾಯ ಸಂಗ್ರಹಣೆಗಾಗಿ 1934 ರಲ್ಲಿ ನೇಮಿಸಿಕೊಂಡರೂ ಪ್ರತ್ಯೇಕವಾಗಿ ಪೊಲೀಸ್ ಪೇದೆಗಳನ್ನಾಗಿ ಮಾಡಲಾಯಿತು. ಕಾಲಾಳು, ಕುದುರೆ ಸವಾರರ ದಳಗಳನ್ನು ಸ್ಥಾಪಿಸುವಲ್ಲಿ ಕಂದಾಚಾರ ಸಿಬ್ಬಂದಿಯನ್ನು ಸಹಾಯಕವಾಗಿ ನೇಮಿಸಲಾಯಿತು. ಈ ಸುಧಾರಣೆಯು ಮೊದಲ ಹೆಜ್ಜೆಯಾಗಿ ಬೆಂಗಳೂರು ಜಿಲ್ಲೆಯಲ್ಲಿ 1861 ರಲ್ಲಿ ಪೊಲೀಸ್ ಅಧಿನಿಯಮವನ್ನು 1886 ರಲ್ಲಿ ಜಾರಿಗೆ ತರುವುದರ ಮೂಲಕ ಪ್ರಭಾರ ವಹಿಸಲು ಮದ್ರಾಸ್ ಪೊಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಯಿತು. ನ್ಯಾಯಿಕ ಆಯುಕ್ತ (Judicial Commissioner) ರಾದ ಮ್ಯಾಂಗ್ಲೇಸ್‍ರವರು ಸಿದ್ಧಪಡಿಸಿದ ಯೋಜನೆಯಂತೆ ಗ್ರಾಮ ಪೊಲೀಸ್ ಪಡೆಯನ್ನು ನವೀಕರಿಸಿ ಪುನರ್‍ರಚಿಸುವ ಕಾರ್ಯವನ್ನು ಆರಂಭಿಸಿದರು.

1886 ರಲ್ಲಿ ನ್ಯಾಯಿಕ ಆಯುಕ್ತರು ಪದನಿಮಿತ್ತ ಪೊಲೀಸ್ ಇನ್ಸ್‍ಪೆಕ್ಟರ್ ಜನರಲ್‍ರಾದರು. 1873 ರಲ್ಲಿ ಇವರಿಗೆ ಸಹಾಯಕರಾಗಿ ಉಪಪೊಲೀಸ್ ಇನ್ಸ್‍ಪೆಕ್ಟರ್‍ರವರನ್ನು ನೇಮಕ ಮಾಡಲಾಯಿತು. 1875 ರಲ್ಲಿ ಈ ಹುದ್ದೆಗೆ ಸಂಬಂಧಿಸಿದಂತೆ ಕೆಲವು ಆದೇಶಗಳನ್ನು ಹೊರಡಿಸಲಾಯಿತು. 1876-78 ರಲ್ಲಿ ಬರಗಾಲದ ನಿಮಿತ್ತ ಉಪಪೊಲೀಸ್ ಇನ್ಸ್‍ಪೆಕ್ಟರ್ ಜನರಲ್ ಹುದ್ದೆಯನ್ನು ಸರ್ಕಾರಿ ನೌಕರರನ್ನು ವಜಾ ಮಾಡಲಾಯಿತು. 1879 ರಲ್ಲಿ ಮುಖ್ಯ ಆಯುಕ್ತರು, ಪೊಲೀಸ್ ಇಲಾಖೆಯ ನೇರ ನಿಯಮವನ್ನು ವಹಿಸಿಕೊಂಡರು. 1881 ರ ಜನವರಿಯಲ್ಲಿ ಪೊಲೀಸ್ ಇಲಾಖೆಯು ಪುನರ್ ಸಂಘಟನೆಯಾಗಿ ಮುಖ್ಯ ಆಯುಕ್ತರು, ಚಲಾಯಿಸುವಂತಹ ಅಧಿಕಾರದ ವ್ಯಾಪ್ತಿ ಹಾಗೂ ಕ್ಷೇತ್ರಗಳ ಸಂಬಂಧದಲ್ಲಿ ಸೂಚನೆಗಳನ್ನು ಕೊಟ್ಟು ಮುಂದುವರೆಸಲಾಯಿತು. ರಾಜಮನೆತನಕ್ಕೆ ರಾಜ್ಯ 1881 ರಲ್ಲಿ ಪ್ರಧಾನವಾದಾಗ ಪೊಲೀಸ್ ಕಾರ್ಯದರ್ಶಿಯೊಬ್ಬರ ನೇಮಕವಾಯಿತು. 1885 ರಲ್ಲಿ ಪೋಲಿಸ್ ಇನ್ಸ್‍ಪೆಕ್ಟರ್ ಜನರಲ್‍ ಅವರನ್ನು ನೇಮಿಸಲಾಯಿತು. ಇದೇ ಸಂದರ್ಭದಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಹುದ್ದೆಯನ್ನು ಹಾಗೂ ಪೊಲೀಸ್ ಸಹಾಯಕ ಕಮೀಷನರ್ ಹುದ್ದೆಗಳನ್ನು ಸೃಜಿಸಲಾಯಿತು. ಗ್ರಾಮ ಪೊಲೀಸ್ ಮತ್ತು ನಿಯತ ಪೊಲೀಸ್ ದಳಗಳು ತಮ್ಮ ತಮ್ಮ ಕಾರ್ಯಗಳನ್ನು ನಿಭಾಯಿಸುತ್ತಿದ್ದರು. 1901-02 ರಲ್ಲಿ ಪೊಲೀಸರಿಗೆ ಸೂಕ್ತ ಸಮವಸ್ತ್ರ ಹಾಗೂ ಈಟಿಗಳನ್ನು ಪ್ರಥಮ ಬಾರಿಗೆ ಒದಗಿಸಲಾಯಿತು. 

ಆಡಳಿತ ಉದ್ದೇಶಕ್ಕಾಗಿ ಪೋಲಿಸ್ ದಳಗಳಲ್ಲಿ ಪ್ರಧಾನ ಭಾಗಗಳನ್ನು ಮಾಡಲಾಯಿತು. 1) ಜಿಲ್ಲಾ ಪೊಲೀಸ್ (2) ಕೋಲಾರ ಚಿನ್ನದ ಗಣಿ ನಗರ ಪೊಲೀಸ್ ದಳ (3) ರೈಲ್ವೆ ಪೊಲೀಸ್ (4) ಅಪರಾಧ ತನಿಖಾ ಇಲಾಖೆ (5) ಪ್ರಾಂತೀಯ ಮೀಸಲು ಪೊಲೀಸ್ (6) ತರೀಕೆರೆ-ನರಸಿಂಹರಾಜಪುರ ಟ್ರಾಂವೇ ಪೋಲಿಸ್ (7) ಬೆರಳೊತ್ತು ವಿಭಾಗ (8) ಕೇಂದ್ರ ಕಛೇರಿ ತರಬೇತಿ ಶಾಲೆ ಹಾಗೂ ಎಲ್ಲಾ ಜಿಲ್ಲೆಗಳಲ್ಲೂ ಪ್ರತ್ಯೇಕವಾಗಿ ಅಭಿಯೋಗ (Prosecuting Inspector) ಅಭಿಯೋಗ ನಡೆಸುವ ಇನ್ಸ್‍ಪೆಕ್ಟರ್‍ಗಳನ್ನು, ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಯಿತು. ಹೊರದೇಶದ ಮತ್ತು ಸ್ಥಳೀಯ ಪುಂಡರ ಕಾಟಗಳನ್ನು ವೀಕ್ಷಿಸಲು ಪೊಲೀಸ್ ಬಾಹ್ಯ ಉಕ್ಕಡ (Out Post) ಗಳನ್ನು ಸ್ಥಾಪಿಸಲಾಯಿತು. ಶಿವಮೊಗ್ಗ, ಹಾಸನ, ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಪೊಲೀಸ್ ಶಾಲೆಗಳಿದ್ದು ದಂಡವಿಧಿ ಮತ್ತು ಕಾರ್ಯವಿಧಾನಗಳನ್ನು ಕಲಿಸಿಕೊಡುವುದರ ಮೂಲಕ ಅವರಿಗೆ ಕವಾಯಿತು ಮತ್ತು ಬಂದೂಕು ಬಳಸುವ ಶಿಕ್ಷಣ ನೀಡಲಾಗುತ್ತಿತ್ತು. 1892 ರಲ್ಲಿ ಬೆಂಗಳೂರಿನ ಶಾಲೆಯನ್ನು ಮತ್ತಷ್ಟು ಉತ್ತಮ ಸ್ಥಿತಿಯಲ್ಲಿಟ್ಟು, ಕೇಂದ್ರ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲಾಯಿತು ಹಾಗೂ ಈ ಶಾಲೆಗೆ ದಂಡನ್ಯಾಯ ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ವಸ್ತು ಸಂಗ್ರಹಾಲಯವನ್ನು ಸೇರಿಸಲಾಯಿತು.

ಮದ್ರಾಸ್-ಕರ್ನಾಟಕ ಪ್ರದೇಶ, ಕೊಡಗು ಪ್ರದೇಶ, ಮುಂಬೈ-ಕರ್ನಾಟಕ ಪ್ರದೇಶ, ಹೈದ್ರಾಬಾದ್-ಕರ್ನಾಟಕ ಪ್ರದೇಶಗಳಲ್ಲಿ ಆಯಾಯ ಪ್ರದೇಶಕ್ಕೆ ಸರಿಯಾಗಿ ಪೊಲೀಸ್ ಅಧಿನಿಯಮಗಳನ್ನು ಜಾರಿಗೆ ತರಲಾಯಿತು. ಏಕೀಕರಣದ ನಂತರ ಹೊಸ ಮೈಸೂರು ರಾಜ್ಯ ನಿರ್ಮಾಣವಾದಾಗ 1964 ರ ಜನವರಿ 18 ರಂದು ರಾಷ್ಟ್ರಪತಿಯವರಿಂದ ಪೊಲೀಸ್ ಆಡಳಿತ ಏಕರೂಪತೆಯ ಅಧಿನಿಯಮಕ್ಕೆ ಅನುಮೋದನೆ ದೊರೆತು 1865ನೇ ಏಪ್ರಿಲ್ 2ನೇ ದಿನಾಂಕದಂದು ಜಾರಿಗೆ ತರಲಾಯಿತು. ಈ ದಿನಾಂಕವನ್ನೇ ಪೊಲೀಸ್ ಧ್ವಜ ದಿನಾಚರಣೆ ಎಂದು ಘೋಷಿಸಲಾಯಿತು. ಈ ದಿನ ಪೊಲೀಸ್ ಧ್ವಜಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಸಂಗ್ರಹವಾದ ಹಣದಿಂದ ನಿವೃತ್ತ ಪೊಲೀಸ್ ಅಧಿಕಾರಿಗಳ ಮತ್ತು ಕುಟುಂಬದವರ ಕ್ಷೇಮಾಭಿವೃದ್ಧಿ ಹಾಗೂ ಪುನರ್‍ವಸತಿಗಾಗಿ ವಿನಿಯೋಗಿಸುವ ಕಾರ್ಯವನ್ನು ಕೈಗೊಳ್ಳಲಾಯಿತು.

ನಗರ ಸಶಸ್ತ್ರ ಮೀಸಲು ಪೊಲೀಸ್, ನಗರ ಸಂಚಾರಿ ವಿಭಾಗ, ರೈಲ್ವೆ ಪೊಲೀಸ್ 1960 ರಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಮಹಿಳಾ ಪೋಲಿಸ್, ಪೊಲೀಸ್ ನಿಸ್ತಂತು (ವೈರ್‍ಲೆಸ್), ಆಯುಧಗಳು, ಶ್ವಾನದಳ, ಬೆರಳಚ್ಚು ವಿಭಾಗ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ನಾಗರಿಕ ಕೋವಿ ತರಬೇತಿ ಕೇಂದ್ರ, ವಿಧಿವಿಜ್ಞಾನ ಪ್ರಯೋಗಾಲಯ, ಅಪರಾಧ ಮತ್ತು ವಿಶೇಷ ಶಾಖೆ, ವೈಜ್ಞಾನಿಕ ಸಹಾಯ ಘಟಕಗಳು, ಅಶ್ವಾರೋಹಿಗಳು, ಪೊಲೀಸ್ ಸಂಶೋಧನಾ ಕೇಂದ್ರ, ಪೊಲೀಸ್ ಸಾರಿಗೆ, ಪೊಲೀಸ್ ವಾದ್ಯವೃಂದ, ಆಧುನೀಕರಣ ನಾಗರಿಕ ಹಕ್ಕು ಜಾರಿ ವಿಭಾಗ, ಔದ್ಯಮಿಕ ಭದ್ರತಾ ಪಡೆ, ಗುಪ್ತಚರ ದಳ, ಎಲ್ಲಾ ವಿಭಾಗಗಳ ಪೊಲೀಸ್ ತರಬೇತಿ ಶಾಲೆಗಳು, ಗೃಹರಕ್ಷಕ ದಳ, ಅಗ್ನಿ ಶಾಮಕದಳ ಇತ್ಯಾದಿಗಳನ್ನೊಳಗೊಂಡು ಆರಕ್ಷಕ ಕೇಂದ್ರ ತನ್ನ ಕೈಂಕರ್ಯವನ್ನು ಕಿಂಕರತ್ವದಿಂದ ನಡೆದು ಬಂದಿರುವುದು ನಿಜಕ್ಕೂ ಅದ್ಭುದಾದ್ಭುತ.

ಗಮನಾರ್ಹ ವಿಷಯವೇನೆಂದರೆ, ಹಿರಿಯ ಸೇವಾ ದಕ್ಷರಿಗೂ, ಹೊಸದಾಗಿ ಸೇರಿಕೊಳ್ಳುವ ಕಿರಿಯ ಸೇವಾದಕ್ಷರಿಗೂ ವೇತನದಲ್ಲಿ ಕಂಡು ಬಂದ ಅತಿಯಾದ ವ್ಯತ್ಯಾಸ. ಸುಮಾರು ವರ್ಷಗಳ ಸೇವೆ ಸಲ್ಲಿಸಿದ ಹಿರಿಯ ಪೇದೆ, ಕಿರಿಯ ಪೇದೆಗಿಂತ ಕನಿಷ್ಟ ಮಟ್ಟದ ವೇತನ ಪಡೆಯುವುದು. ಇದರಿಂದ ಮಾನಸಿಕವಾಗಿ ಸ್ಥೈರ್ಯವನ್ನು ಕಳೆದುಕೊಂಡು ಸೇವೆಯಲ್ಲಿ ದಕ್ಕೆಯುಂಟಾಗದೇ ಖಿನ್ನತೆ ಬೆಳೆಯುತ್ತದೆ. ಬದುಕಿನ ಪಾಥೇಯಕ್ಕೆ ಆರ್ಥಿಕತೆಯೇ ಮೂಲಾಧಾರ ದಿನನಿತ್ಯದ ವ್ಯಚ್ಚಗಳನ್ನು ನಿಭಾಯಿಸಲು ಹಣವೇ ಪ್ರಮುಖ. ಆದ ಕಾರಣ ಸರ್ಕಾರ ಆದಷ್ಟು ಈ ವ್ಯತ್ಯಾಸವನ್ನು ಸರಿಪಡಿಸಿ ಪೊಲೀಸರು ಸುಶಾಂತತೆಯಿಂದ, ಸುಮಧುರತೆಯಿಂದ ಬಾಳಲು ಅನುವು ಮಾಡಿಕೊಟ್ಟರೆ ನಿಜಕ್ಕೂ ಆರೋಗ್ಯಕರ; ಇಂದಿನ ಈ ಪೊಲೀಸ್ ಧ್ವಜ ದಿನಾಚರಣೆಗೆ ಔನ್ನತ್ಯ ದೊರೆತಂತಾಗುತ್ತದೆ.


ಇಂದಿನ ಪೊಲೀಸ್ ಧ್ವಜ ದಿನಾಚರಣೆಗೊಂದು ವೃತ್ತಕ - Janathavani

ಪ್ರೊ. ಬಾತಿ ಬಸವರಾಜ್
ಶೈಕ್ಷಣಿಕ ಸಲಹೆಗಾರರು,
ದವನ ಕಾಲೇಜು, ದಾವಣಗೆರೆ.
[email protected]

error: Content is protected !!