ಮಗಳೆಂದರೆ ಅಪ್ಪನಿಗೆ ಜೀವ, ಅಪ್ಪ ಎಂದರೆ ಮಗಳಿಗೆ ಪ್ರಪಂಚ. ಮಗಳು ಅಂದರೆ ಸಂತೋಷ, ದೇವತೆ, ಉಸಿರು, ಹಸಿರು, ಅನುರಾಗ, ಭಾವನೆಗಳ ಮೊತ್ತ, ಸಮೃದ್ಧಿಯ ಸಂಕೇತ, ವಾತ್ಸಲ್ಯದ ಪ್ರತಿರೂಪ, ಮಮತೆಯ ದನಿ, ಮರ್ಯಾದೆಯ ಪರಮಾವಧಿ, ಸಾಂತ್ವನದ ಗಣಿ, ಧನ್ಯತಾ ಭಾವದ ಅನುಭವ, ಐಶ್ವರ್ಯದ ಧ್ಯೋತಕ, ಮಧುರ ಮನಸ್ಸು, ನೊಂದ ಜೀವಕ್ಕೆ ತಂಪು, ಸೌಂದರ್ಯಕ್ಕೆ ಪರ್ಯಾಯ ಪದ, ಸೃಷ್ಠಿಯ ಚಿಹ್ನೆ, ಕಿಸ್ಮತ್ತಿನ ಹೆಮ್ಮೆ, ಹೃದಯದ ಮಿಡಿತ, ಬೆಳಕಿನ ಸಂಕೇತ, ಭಾವುಕತೆಯ ಅಂತರಂಗ, ಆತ್ಮಸಾಕ್ಷಿಯ ಸಂಸ್ಕಾರ, ಸಂಸ್ಕೃತಿ, ಸಂಸಾರದ ಜೀವನದಿ, ಬದುಕಿನ ನೆಮ್ಮದಿ….
ಮಗಳು ಅಂದರೆ ಯಾಕೆ ವಿಶೇಷ ಗೊತ್ತಾ? ಮಗಳು- ಪದದಲ್ಲಿ ಮಗನೂ ಇದ್ದಾನೆ. ಅದಕ್ಕೆ ಮಗಳನ್ನು ಸಂಬೋಧಿಸುವಾಗ ಮಗನೇ ಅನ್ನುತ್ತೇವೆ. ಆದರೆ ಮಗ ಪದದಲ್ಲಿ ಮಗಳು ಇಲ್ಲ. ಅದಕ್ಕೆ ಮಗನನ್ನು ಮಗಳೇ ಎಂದು ಕರೆಯುವುದಿಲ್ಲ.
ಮನೆಯಲ್ಲಿ ಮಗಳ ಮಾತು ಗಿಳಿಯಂತೆ, ಗೆಜ್ಜೆ ಹಾಕಿದ ಕಾಲುಗಳು ಓಡಾಡಿದರೆ ನವಿಲಿನ ನರ್ತನದಂತೆ…
ಮಗಳ ಪುಟ್ಟ ಪುಟ್ಟ ಆಸೆಗಳಿಗೋಸ್ಕರ ತಂದೆ ತನ್ನ ದೊಡ್ಡ ದೊಡ್ಡ ಕನಸುಗಳನ್ನು ದೂರವಿರಿಸಿ, ಅವಳಿಗೇನು ಕಮ್ಮಿ ಇಲ್ಲದೇ ಬೆಳೆಸಿ, ಕರುಳಿನ ಜೊತೆ ದೊಡ್ಡ ಸಂಬಂಧ ಬೆಸೆಯುತ್ತಾನೆ.
ತಾಯಿ ಮಗಳ ಹಾಡು,
ತಾಳ ಬಾರಿಸಿದಂಗ
ಜೋಡಿ ಕಿನ್ನರಿ ನುಡಿದಂಗ
ಜೋಡಿ ಕಿನ್ನರಿ ನುಡಿದಂಗ, ಹಲಸಂಗಿ
ಹೊತ್ತೇರಿ ತಾಸೆ ಬಡಿದಂಗ
ಎಂತಹ ಅದ್ಭುತ ಅನುಬಂಧ ನಮ್ಮ ಜಾನಪದ ಸಾಹಿತ್ಯದಲ್ಲಿ. ತನ್ನ ಮಗಳು ಮನೆಯಲ್ಲಿ ಇದ್ದರೆ, ಒಬ್ಬ ತಾಯಿಯ ಮಾತು ಹೇಗಿರುತ್ತೆ ಎಂದರೆ, ಹೆಣ್ಣು ಇದ್ದ ಮನೆಗೆ ಕನ್ನಡಿ ಯಾತಕ? ಹೆಣ್ಣು ಮಗು ಒಳಗಿರಲು ನನ್ನ ಮಗಳು ಕನ್ನಡಿ ಹಂಗ ಹೊಳೆಯುವಳು ಅಂತಾಳೆ.
ಮಗಳು ಈ ಹೆಸರಲ್ಲಿ ಎಂತ ಸುಖ, ಎಂತಹ ಅದ್ಭುತ ಜೀವನ ರಹಸ್ಯವೆಂದರೆ, ದೇವರು ಯಾವಾಗ ತನ್ನ ಭಕ್ತನ ಮೇಲೆ ತುಂಬಾ ಹೆಚ್ಚು ಸಂತೃಪ್ತಗೊಂಡಾಗ, ಅತೀ ಸಂತೋಷಗೊಂಡಾಗ, ಭಕ್ತನಿಗೆ ಮಗಳನ್ನು ಪಡೆಯುವ ಸಂತಾನ ಭಾಗ್ಯದ ವರ ಕೊಡುತ್ತಾನೆ. ಅಮ್ಮ ಅಮ್ಮ ಎಂದು ಮನೆ ತುಂಬಾ ಓಡಾಡುತ್ತಾ, ಚಿಕ್ಕ ಚಿಕ್ಕ ಮಾತಿಗೆ ಅಳುವ, ಸಹೋದರ, ಸ್ನೇಹಿತರ ಜೊತೆ ಜಗಳ ಕಾಯುವ ಮಗಳು ಮನೆಯಲ್ಲಿ ನಿಲ್ಲದ ಸಂಗೀತ
ಹೆಣ್ಣು ಮಗುವಿನ ತಂದೆ – ತಾಯಿ ಅನಿಸಿಕೊಳ್ಳುವುದೇ ಒಂದು ಹೆಮ್ಮೆ. ಹೇಗೆ ಅಂತೀರಾ?
ಮನೆಯಲ್ಲಿ ಹೆಣ್ಣು ಮಗು ಕೊಡುವ ಖುಷಿಯೇ ಬೇರೆ. ಆ ಸಂತೋಷದ ಅನುಭವ ಅನುಭವಿಸಲೇ ಬೇಕು. ತಂದೆ ತಾಯಿಗಳ ಆರೋಗ್ಯ ವೃದ್ಧಿಸುತ್ತಂತೆ. ಅಧ್ಯಯನದ ಪ್ರಕಾರ ಮಗಳು ಹುಟ್ಟಿದ ಕ್ಷಣದಿಂದಲೇ ಅವರ ಮೈಮನದಲ್ಲಿ ಸಂತೋಷದ ಬುಗ್ಗೆ ಉಕ್ಕುತ್ತಂತೆ.
ನೋಡು ನೋಡುತ್ತಲೇ, ದಿನದಿಂದ ದಿನಕ್ಕೆ ಬೆಳೆದು ದೊಡ್ಡವಳಾಗಿ, ಇನ್ನೊಂದು ಮನೆಯನ್ನು ಬೆಳಗುವ ನಂದಾದೀಪವಾಗುತ್ತಾಳೆ. ತಾಯಿಯ ಸೆರಗಿನಲ್ಲಿ ಅಡಗಿಕೊಳ್ಳುತ್ತಿದ್ದವಳು, ತನ್ನ ನೋವನ್ನು ಸೆರಗಿನಲ್ಲಿ ಮುಚ್ಚಿಡುವ ರಹಸ್ಯವಾಗಿಬಿಡುತ್ತಾಳೆ. ಒಂದು ಚೂರು ಬೆರಳಿಗೆ ಬಿಸಿ ತಾಗಿದರೆ ಇಡೀ ದಿನ ಅಳುವ ಮಗಳು, ಕೈ ಸುಟ್ಟುಕೊಂಡರೂ ಅಡುಗೆ ಮಾಡುವ ಅನ್ನಪೂರ್ಣೆಯಾಗುವಳು. ಚಿಕ್ಕ ಚಿಕ್ಕ ಮಾತಿಗೆ ಕೋಪಿಸಿಕೊಳ್ಳುವ ಮಗಳು ಮುಂದೆ, ದೊಡ್ಡ ದೊಡ್ಡ ಮಾತುಗಳನ್ನು ಹೃದಯದಲ್ಲಿ ಮುಚ್ಚಿಕೊಳ್ಳುವ ಮಹಾತಾಯಿಯಾಗುವಳು. 10 ಗಂಟೆಯಾದರೂ ಏಳದ ಮಗಳು, ಈಗ 6 ಗಂಟೆಗೆ ಎದ್ದರೂ ತಡವಾಯಿತೇನೋ ಎನ್ನುವಾಗ ಅವಳ ಕರ್ತವ್ಯದ ಮುಖ ಕಾಣಿಸುತ್ತದೆ. ಒಂದು ಪರೀಕ್ಷೆಗೋಸ್ಕರ ಇಡೀ ವರ್ಷ ಓದುತ್ತಿದ್ದ ಮಗಳು, ಈಗ ಅಣಿಯಾಗದೇ, ಪ್ರತಿದಿನ ಪರೀಕ್ಷೆ ಎದುರಿಸುತ್ತಾಳೆ. ಎಂತಹ ವೇದನೆ ತನ್ನೊಳಗೆ ಬಚ್ಚಿಟ್ಟುಕೊಂಡ ಸಹನಾ ಮೂರ್ತಿ ಮಗಳಲ್ಲವೇ…?
ಈ ಮನೆಯ ಎಲ್ಲರ ಮುದ್ದಿನ ಮಗಳು ಯಾವಾಗ ತಾಯಿಯಾದಳೋ, ಯಾವಾಗ ಮಗಳ ಪಯಣ ತಾಯಿಯ ಪಯಣದಲ್ಲಿ ಬದಲಾಯಿತೋ ಗೊತ್ತಿಲ್ಲ. ಯಾವಾಗ ಮಗಳು ದೊಡ್ಡವಳಾಗಿ ಬಿಟ್ಟಳೋ ಗೊತ್ತಾಗುವುದೇ ಇಲ್ಲ…
ಅದಕ್ಕೇ ಹೇಳೋದು…
ಮಗಳೆಂದರೆ ವರ್ತಮಾನ, ಮಗಳೆಂದರೆ ಭವಿಷ್ಯ ಮಗಳು ಎಂದರೆ ಬೆಲೆ ಕಟ್ಟಲಾಗದ ದೇವರ ಸೃಷ್ಠಿ.
ಮಗಳು ಎಂದರೆ ಮುಗ್ಧೆ, ಮಗಳು ಎಂದರೆ ಪ್ರೀತಿ, ಇಷ್ಟೆಲ್ಲಾ ಇದ್ದರೂ ಏಕೆ ಈಗಿನವರಿಗೆಲ್ಲಾ ಭಾರ ಎಂದು ಅನಿಸುತ್ತಾಳೆ? ಹೆಣ್ಣು ಭ್ರೂಣ ಹತ್ಯೆಯನ್ನು ಈಗಲೂ ಕಾಣುತ್ತಿದ್ದೇವೆ ಅಲ್ಲವೇ? ಮಗಳೇ ಅಲ್ಲವೇ ದೇವೀರೂಪದಲ್ಲಿ ಪೂಜಿಸೋದ… ಮಗಳೇ ಅಲ್ಲವೇ ನಮ್ಮ ಮಹಾತ್ಮರ, ಪ್ರವಾದಿಗಳ, ಸಮಾಜ ಸುಧಾರಕರ, ರಾಷ್ಟ್ರ ನಾಯಕರ, ಶರಣರ ವಂಶವನ್ನು ಬೆಳೆಸಲು ಕಾರಣವಾದದ್ದು.
ತಂದೆಯ ನಿಜವಾದ ಆಪತ್ಬಾಂಧವಳು ಈ ಮಗಳು. ಅದಕ್ಕೆ ಮಗಳು ಭಾರ ಅಲ್ಲ. Tension ಅಲ್ಲವೇ ಅಲ್ಲ… Ten Son ಗೆ ಸಮ. ಮಗಳು ಮನೆಯ ಲಕ್ಷ್ಮಿ, ಮನೆಯ ಸಮೃದ್ಧಿ, ಕಾರುಣ್ಯ… ಮಗಳಿಗೆ ಗೌರವ ಕೊಡಿ. ಮುದ್ದಿಸಿ… ಮಮತೆಯಿಂದ ಪ್ರೀತಿಸಿ… ಒಬ್ಬ ಮಗಳು ಸಾವಿರಾರು ನಕ್ಷತ್ರಗಳಿಗೆ ಸಮ.
ಡಾ. ಅನಿತಾ ಹೆಚ್. ದೊಡ್ಡಗೌಡರ್
ಸಹಾಯಕ ಪ್ರಾಧ್ಯಾಪಕರು, ಎಸ್.ಎಸ್.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯ, ದಾವಣಗೆರೆ. 99021 98655
ನಮ್ಮ ಸುತ್ತಲಿನ ಮನಸ್ಸುಗಳನ್ನು ಪಕ್ವ ಮಾಡುವತ್ತ ನಮ್ಮ ಪ್ರಯತ್ನ ಇರಬೇಕೇ ವಿನಃ ಒಂದು ದುರ್ಘಟನೆಗೆ ಕಾದು ಕೂತವರ ಹಾಗೆ ಎಲ್ಲವನ್ನೂ ನಮ್ಮ ಮಾತಿನಿಂದ ಧ್ವಂಸ ಮಾಡುವುದು ಬೇಡ. ಇದು ಕಳಕಳಿಯ ಮನವಿ ಮತ್ತು ಹಿಂದಿರುಗದಿರುವಷ್ಟು ನಮ್ಮಿಂದ ದೂರ ಹೋದವರಿಗೆ, ನಮ್ಮನ್ನು ಬೆಳೆಸಿದ ಸಮಾಜಕ್ಕೆ ನಾವು ಸಲ್ಲಿಸಬಹುದಾದ ಗೌರವ.
ಪ್ರಶ್ನೆ: `ಅವರು ಸಂಕ್ರಾಂತಿ ಮಾರನೇ ದಿನವೇ ಯಾಕೆ ಹೋಗ್ಬೇಕಿತ್ತು?’
ಉತ್ತರ: ಯಾಕೆ ಅಂದರೆ ಆ ದಿನ ಅವರಿಗೆ ಪ್ಲಾನ್ ಮಾಡಿಕೊಳ್ಳಲು ಅನುಕೂಲವಾಗಿತ್ತು. ಆವತ್ತು ಸಾವಿರಾರು ಜನ ಲಕ್ಷಾಂತರ ಜನ ಭೂಮಿಯ ಎಷ್ಟೆಲ್ಲಾ ರಸ್ತೆಗಳ ಮೇಲೆ ಓಡಾಡಿದಾರೆ. ಬಹುತೇಕ ಎಲ್ಲರೂ ತಂತಮ್ಮ ಮನೆ/ಗುರಿ ಸೇರಿದರು. ನಮ್ಮ ಹೆಣ್ಣು ಮಕ್ಕಳಿದ್ದ ಬಸ್ ಅಪಘಾತ ಆಗಲಿಕ್ಕೆ ಸಾವಿರಾರು ಕಾರಣ ಇರಬೇಕು. ರಸ್ತೆ ಸುರಕ್ಷತಾ ಕ್ರಮ ಅಥವಾ ಚಾಲಕನ ನಿದ್ದೆಯ ಕೊರತೆಯಿಂದಾಗಿ ಕಣ್ಣಿಗೆ ಕಣ್ಣು ಹತ್ತಿರಬಹುದು, ಅಥವಾ ಟಿಪ್ಪರ್ ಚಾಲಕನಿಗೆ ಬಸ್ಸಿನ ಹಾರ್ನೇ ಕೇಳದೆ ಹೋಗಿದ್ದು – ಏನಾದರೂ ಇದ್ದೀತು. ಇದನ್ನೊಂದು `ಬೇಕಂತಲೇ ಮಾಡಿದ ಉದ್ಧಟತನ’ ಅನ್ನುವ ಹಾಗೆ ಮಾತನಾಡಬಾರದು.
ನಾವು ಭಾರತೀಯರು ತುಂಬಾ ಫ್ಲೆಕ್ಸಿಬಲ್ ಜನ. ಅನುಕೂಲ ಇದ್ದಾಗ ಪಂಚಾಗವನ್ನೂ/ಮುಹೂರ್ತವನ್ನೂ ತುರ್ತು ಇದ್ದಾಗ ವಿಜ್ಞಾನವನ್ನೂ/ತರ್ಕವನ್ನೂ ನಂಬುವಂಥವರು. ಎರಡೂ ತಪ್ಪಲ್ಲ. ಆದರೆ ಏನೋ ಒಂದು ಘಟಿಸಿದಾಗ ಮಾತ್ರ ಅದನ್ನೊಂದು ’ನಿಯಮ’ ಅಥವಾ ’ನೀತಿ ಪಾಠ’ ಎನ್ನುವಂತೆ ಮಾತನಾಡುವುದು ಸೂಕ್ತವಲ್ಲ.
ಹೊರಟವರು ಹೋದರು. ಅವರ ಮನೆಯವರ ನೋವು ನಿರಂತರ. ಹೋದವರಿಗೂ ಹೋಗಬೇಕೆಂಬ ಗುರಿ ಇರಲಿಲ್ಲ. ಅತ್ಯಂತ ದುರಂತದ ಸಾವು ಇವು. ಎಲ್ಲರೂ ಸಮುದ್ರದ ನೊರೆಯಲ್ಲಿ ಕಾಲು ಇಳಿಬಿಟ್ಟುಕೊಂಡು ಖುಷಿಯಾಗಿ ’ನಾಳೆ ತಿಂಡಿ ಏನಮ್ಮ’ ಎನ್ನುವ ಪ್ರಶ್ನೆಯನ್ನು ಸ್ವಲ್ಪ ದಿನವಾದರೂ ಎದುರಿಸದೆ, ಬೇಕಾದದ್ದು ಆರ್ಡರ್ ಮಾಡಿ ಸೂರ್ಯಾಸ್ತ/ಸೂರ್ಯೋದಯ ನೋಡುತ್ತಾ ಸೆಲ್ಫಿಗಳನ್ನು ತೆಗೆದುಕೊಂಡು ತಂದು ಮನೆಯಲ್ಲಿ ಎಲ್ಲರಿಗೂ ತೋರಿಸಿ…ಒಳಗೊಳಗೇ ಪುಳಕಗೊಳ್ಳುತ್ತಾ ಮತ್ತೊಂದು ಟ್ರಿಪ್ ಕನಸು ಕಾಣುತ್ತಾ ಇರುತ್ತಿದ್ದರೇನೋ.
ಹೋದ ಹೆಣ್ಣುಮಕ್ಕಳ ಬಗ್ಗೆ ಇಲ್ಲಸಲ್ಲದ ಮಾತು, ಇರುವ ಹೆಣ್ಣೂ ಮಕ್ಕಳ ಸಂತೋಷ ಕಸಿಯುವಷ್ಟು ಕೆಟ್ಟ ಉದಾಹರಣೆಗಳನ್ನು ಕೊಡುತ್ತಾ ಮತ್ತೆ ಅಂಧಕಾರದತ್ತ, ಸಂವೇದನಾ ರಹಿತ ನಡವಳಿಕೆಯತ್ತ ಹೋಗಬಾರದು. ದುಃಖದಲ್ಲಿ ಮುಳುಗಿರುವ ಮನೆಯವರಿಗೆ ಇನ್ನು ಬೇಕಾದಷ್ಟು ಸಲಹೆಗಳು, ಮನೆಯ ದಿಕ್ಕಿನ ಬಗ್ಗೆ, ಇನ್ಯಾವುದೋ ದುಷ್ಟ ಶಕ್ತಿಯ ಬಗ್ಗೆ ಧಾರಾಳವಾಗಿ ಹರಿದು ಬರಬಹುದು.
ಹದಿಮೂರು ವರ್ಷಗಳ ಹಿಂದೆ ನನ್ನ ಅಕ್ಕ ತನ್ನ ಎಳೆಯ ಮಗಳನ್ನು ಬಿಟ್ಟು ಇದ್ದಕ್ಕಿದ್ದ ಹಾಗೆ ಕ್ಯಾನ್ಸರ್ ರೋಗಕ್ಕೆ ಬಲಿಯಾದಳು. ಆಗ ಯಾರೊ ಅಪ್ಪಾಜಿಯ (ನನ್ನ ಅಪ್ಪ ಧರಾಮ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ ಜಿ ನಾಗರಾಜ್/ ಬಿಜಿಎನ್) ಹಿತೈಷಿಗಳು ಮನೆಯ ದಿಕ್ಕಿನ ಬಗ್ಗೆ ಹೇಳಿ ಇದನ್ನ ಬದಲಾಯಿಸಿ ಸರ್ ಅಂತ ಸಲಹೆ ಕೊಟ್ಟರು. ಮಗಳನ್ನು ಕಳೆದುಕೊಂಡ ಅಂಥಾ ದುರ್ಭರ ದಿನಗಳಲ್ಲೂ ಅಪ್ಪಾಜಿ ಮತ್ತು ಅಮ್ಮನ ಮಾತು, ನಂಬಿಕೆಗಳು ಶಿಫ್ಟ್ ಆಗಿರಲಿಲ್ಲ. `ನೀ ಹೇಳತೀ ಅಂತ ಕೇಳತಿನಪ. ತಪ್ಪೇನಿಲ್ಲ. ಆದರೆ ನನಿಗೆ ಏನನಸತತಿ ಗ್ವತ್ತಾ? ಈವತ್ತು ಅಕಿ ಇಲ್ಲ ಅಂತ ದಿಕ್ಕು ದೆಸೆ ಅಂತಿವಿ. ಇಷ್ಟು ವರ್ಷ ಇದೇ ಮನೆಯಾಗೇ ಬಾಳಿದ್ಲಲ್ಲಪ? ಆವಾಗ ಎಲ್ಲಾದೂ ಹಿಂಗೇ ಇತ್ತಲ? ಹೋಗಲಿ ಬಿಡು ಅಕಿ ಇಷ್ಟೇ ದಿವ್ಸ ಪಡಕಂಬಂದಿದ್ದು ಅಂತ ಸುಮ್ಮನಾಗನ’ ಅಂದರು. ಈ ಸಂದರ್ಭದಲ್ಲಿ ಅವರಿಬ್ಬರ ಒಂದು ಮನೋಬಲ ಒಬ್ಬಂಟಿ ಮಗಳಾಗಿ ಉಳಿದಿದ್ದ ನನಗೆ ಎಂಥಾ ದಿಕ್ಕು ತೋರಿತು ಎನ್ನುವುದನ್ನು ಮಾತಿನಲ್ಲಿ ಹೇಳಲಾರೆ.
ಸರ್ಕಾರ ಈ ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿ ಕೈ ತೊಳೆದುಕೊಂಡು ಬಿಟ್ಟಿತು. ರಸ್ತೆ ಅಪಘಾತಕ್ಕೆ ಪರಿಹಾರ ಘೋಷಣೆ ಕೂಡ ಮಾಡಲಿಲ್ಲ. ಅಮ್ಮಂದಿರು-ಮಕ್ಕಳ ಸಾವಿಗೆ ಜೊತೆಯಾಗಿ ಡ್ರೈವರ್ ಮತ್ತು ಕ್ಲೀನರ್ ಕೂಡ ಹೋಗಿಬಿಟ್ಟರು. ಅವರ ಸಂಸಾರಗಳು ಅತಂತ್ರವಾಗಿವೆ. ಅದರ ಬಗ್ಗೆ ಕೂಡ ಸರ್ಕಾರ ಗಮನ ಹರಿಸುವಂತೆ ಆಗಬೇಕಿದೆ.
ಪ್ರೀತಿ ನಾಗರಾಜ, ದ್ವಿ-ಭಾಷಾ ಪತ್ರಕರ್ತೆ, ರಾಜಕೀಯ ವಿಶ್ಲೇಷಕಿ. ದಾವಣಗೆರೆ ಮೂಲದವರು. ಸದ್ಯ ಮೈಸೂರು ವಾಸಿ.
[email protected]