ದುಃಖಿತರ ದುಃಖ ಹೆಚ್ಚಿಸದೆ ನಿವಾರಿಸೋಣ

`ಜಾತಸ್ಯ ಮರಣಂ ಧ್ರುವಂ’. ಮನುಷ್ಯ ಹುಟ್ಟಿದ ಕ್ಷಣದಿಂದ ಸಾಗುವುದೇ ಮರಣದ ಕಡೆಗೆ. ಭೂಮಿಯ ಮೇಲೆ ಹುಟ್ಟಿದವರೆಲ್ಲ ಒಂದಲ್ಲಾ ಒಂದು ದಿನ ಸಾಯುವುದು ನಿಶ್ಚಿತ. ಆದರೆ, ಜೀವನದಲ್ಲಿ ಇನ್ನೂ ಏನೇನೋ ಆಸೆ, ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದು, ಇತ್ತೀಚೆಗೆ ಧಾರವಾಡದ ಸಮೀಪ ಶುಕ್ರವಾರ ರಸ್ತೆ ಅಪಘಾತದಲ್ಲಿ ದಾವಣಗೆರೆ ನಗರದ 12 ಕುಟುಂಬಗಳ 45ರ ಆಸು ಪಾಸಿನ ಪ್ರೀತಿ ರವಿಕುಮಾರ್, ಪರಂಜ್ಯೋತಿ, ವರ್ಷಿತಾ, ಮಂಜುಳಾ, ರಾಜೇಶ್ವರಿ, ಡಾ. ವೀಣಾ ಪ್ರಕಾಶ್, ಕ್ಷರಾ, ಹೇಮಲತಾ, ಯಶ್ಮತಾ ಮುಂತಾದ ಮಹಿಳೆಯರು ಮತ್ತು ಇಬ್ಬರು ಪುರುಷರು ದುರ್ಮರಣ ಹೊಂದಿರುವುದು ನಗರಕ್ಕೆ ಬರಸಿಡಿಲು ಬಡಿದಂತಾಗಿದೆ. ಇಂತಹ ಘೋರ ಅಪಘಾತ, ಆಘಾತ ಯಾರಿಗೂ ಆಗಬಾರದು. 12 ಮನೆಗಳ ಲಕ್ಷ್ಮಿಯರು ತಮ್ಮ ಕುಟುಂಬಗಳನ್ನು ಅಗಲಿ 14 ಕುಟುಂಬಗಳನ್ನು ಅನಾಥವಾಗಿ ಮಾಡಿರುವುದು ನೋವಿನ ಸಂಗತಿ. 

ಒಂದು ಮನೆಗೆ ಹೆಣ್ಣಿನ ಮಹತ್ವ ಎಷ್ಟಿದೆ ಎಂದು ಎಲ್ಲರಿಗೂ ತಿಳಿದೇ ಇದೆ. `ಹೆಣ್ಣಿಂದ ಇಹವು, ಹೆಣ್ಣಿಂದ ಪರವು, ಹೆಣ್ಣೇ ಸಂಪದವು ಲೋಕಕೆ ಹೆಣ್ಣಿಲ್ಲದ ಬಾಳು ಬಾಳಲ್ಲ ಸರ್ವಜ್ಞ’ ಎನ್ನುವಂತೆ ಒಂದು ಕುಟುಂಬದ ನಿರ್ವಹಣೆಗೆ ಸ್ತ್ರೀ ಪಾತ್ರ ಅಪಾರ. ಆಕೆ ನಿಜವಾದ ಕುಟುಂಬದ ಆಧಾರ. ತಮ್ಮ ತಾಯಿಯನ್ನು ಕಳೆದುಕೊಂಡು ಮಕ್ಕಳು ಹಾಗೂ ಗಂಡಂದಿರು ಅನಾಥರಾಗಿದ್ದಾರೆ. 

ಆದರೆ, ಕೆಲವೊಂದು ಘಟನೆಗಳು ನಮ್ಮ ಕೈ ಮೀರಿ ನಡೆದೇ ಹೋಗುತ್ತವೆ. ಅದಕ್ಕೆ ಸುಮ್ಮನೆ ದೂಷಣೆ, ವಿಶ್ಲೇಷಣೆ, ಸರಿ – ತಪ್ಪುಗಳ ವಿಮರ್ಶೆ ಮಾಡುವುದು ಒಳ್ಳೆಯದಲ್ಲ, ಪ್ರಯೋಜನವೂ ಅಲ್ಲ. ಅವರು ಗೋವಾಕ್ಕೆ ಹೋಗಬಾರದಿತ್ತು, ಬೆಳಗಿನ ಜಾವ ಹೋಗಬಾರದಿತ್ತು, ಬರೀ ಹೆಣ್ಣು ಮಕ್ಕಳೇ ಹೋಗಿದ್ದಾರೆ. ಡ್ರೈವರ್ ಸರಿ ಇರಲಿಲ್ಲ, ಗಾಡಿ ಸರಿ ಇರಲಿಲ್ಲ, ಅಂದು ಕರಿ ನೆರಳಿತ್ತು, ಶಿವಲಿಂಗದ ಮೇಲೆ ಸೂರ್ಯಕಿರಣ ಬೀಳಲಿಲ್ಲ, ಅದಕ್ಕೆ ಈಗಾಯಿತು. ಇಂತಹ ಅವೈಜ್ಞಾನಿಕ ಹಲವಾರು ಕುತರ್ಕಗಳನ್ನು ಮಾಡುತ್ತಾ, ಅವರ ಮನೆಯವರಿಗೆ ಉಪದೇಶ ಮಾಡುವುದು ಸರ್ವತಾ ಸಲ್ಲದು. ಅವರ ಪ್ರವಾಸದ ಬಗ್ಗೆ ಅನಾವಶ್ಯಕ ಚರ್ಚೆ ಮಾಡಲು ನಮಗೆ ನೈತಿಕ ಹಕ್ಕಿಲ್ಲ, ಅಧಿಕಾರವೂ ಇಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಉಪದೇಶ ಮುಖ್ಯವಲ್ಲ. ಸಾಂತ್ವನ, ಸಹಕಾರ, ಪ್ರೀತಿ, ಕರುಣೆ ಮುಖ್ಯ. ಈಗ ಅವರ ಕುಟುಂಬಗಳ ದುಃಖ ನಿವಾರಿಸೋಣ, ಹೆಚ್ಚಿಸುವುದು ಬೇಡ. ಗುಂಡಪ್ಪನವರು ಹೇಳುವಂತೆ

ಎಲ್ಲರಿಗಮಾಗಿ ತಾನ್, ಎಲ್ಲರುಂ ತನಗಾಗಿ|
ನಿಲ್ಲುವೇಕಾತ್ಮತೆಯ ಬಾಳ್ವೆಯಿಂ ಕಲಿಯಲ್ ||
ಸಲ್ಲುವು ಪಕರಣಗಳು ಮನೆ ರಾಜ್ಯ ಸಂಸಾರ |

ವಲ್ಲಗಳೆಯದಿರವನು – ಮಂಕುತಿಮ್ಮ. ನಾವು ಎಲ್ಲರಿಗೋಸ್ಕರ ಬಾಳಬೇಕು. ದಾವಣಗೆರೆ ಒಂದು ಕುಟುಂಬವಿದ್ದಂತೆ. ಕುಟುಂಬದ ಶ್ರೇಯಸ್ಸಿಗಾಗಿ ನಾವು ಬದುಕಲೇ ಬೇಕು.

ಈ ಘಟನೆ ಈಗಾಗಲೇ ನಡೆದು ಹೋಗಿದೆ. ಅದರ ಬಗ್ಗೆಯೇ ಚಿಂತಿಸಿ ಕೂರುತ್ತಾ ಕೊರಗುವುದಲ್ಲ. ಭವಿಷ್ಯದ ಕಡೆ ಹೆಜ್ಜೆ ಹಾಕಲೇ ಬೇಕು. 

ಇಂದು ಮದುವೆಯ ಹಬ್ಬ : ನಾಳೆ ವೈಕುಂಠ ತಿಥಿ|
ಇಂದು ಮೃಷ್ಟಾನ್ನ ಸುಖ, ನಾಳೆ ಭಿಕ್ಷಾನ್ನ||
ಇಂದು ಬರಿಯುಪವಾಸ, ನಾಳೆ ಪಾರಣೆ-ಯಿಂತು|
ಸಂದಿರುವುದು ಅನ್ನ ಋಣ- ಮಂಕುತಿಮ್ಮ||

ಈವತ್ತು ಮದುವೆಯ ಊಟ, ನಾಳೆ ಯಾರೋ ಒಬ್ಬರ ವೈಕುಂಠ ಸಮಾರಾಧನೆಯ ಊಟ. ಒಂದು ಮನಸ್ಸಿಗೆ ಹಿತವಾದದ್ದೂ; ಇನ್ನೊಂದು ಅಹಿತವಾದದ್ದು ಹೀಗೆಯೇ ಸುಖ-ದುಃಖಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಒಂದರ ಹಿಂದೆ ಒಂದು ಬಂದೇ ಬರುತ್ತವೆ. ನಾವು ಒಳ್ಳೆಯದನ್ನು ಸ್ವೀಕರಿಸಲು ಕಾತುರದಿಂದ ಇರುತ್ತೇವೆ. ಅಹಿತವಾದದ್ದನ್ನು ಕುರಿತು ದುಃಖಿಸುತ್ತೇವೆ. ಸುಖದಂತೆ ದುಃಖವನ್ನೂ ಸಹ ಒಪ್ಪಿಕೊಳ್ಳುವುದು ಅನಿವಾರ್ಯ.

`ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು
ಮದುವೆಗೋ, ಮಸಣಕೊ ಹೋಗೆಂದ ಕಡೆಗೊಡು
ಪದಖುಷಿಯೇ ನೆಲವಿಹುದು ಮಂಕುತಿಮ್ಮ’

ನಮ್ಮ ಕೈಲಿ ಏನೂ ಇಲ್ಲ. ಅನಿರೀಕ್ಷತ ದುರ್ಘಟನೆಗಳು ಆಗುತ್ತಿರುತ್ತವೆ. ಕೊರೊನಾ ಬರಬೇಕೆಂದು ನಾವ್ಯಾರು ಬಯಸಿರಲಿಲ್ಲ. ಆದರೆ, 1 ವರ್ಷಗಳ ಕಾಲ ಕೊರೊನಾದ ಭಯದಲ್ಲೇ ಮುಳುಗಿದ್ದೆವು. ಗೋವಾ ಪ್ರವಾಸ ಮಾಡಲು ಸಂತೋಷದಿಂದ ತೆರಳುತ್ತಿದ್ದ ಇವರಿಗೆ ಕೆಲವೇ ಕ್ಷಣಗಳಲ್ಲಿ ತಮ್ಮ ಅಮೂಲ್ಯ ಪ್ರಾಣಗಳನ್ನು ಕಳೆದುಕೊಳ್ಳುತ್ತೇವೆ ಎನ್ನುವ ಕಲ್ಪನೆಯೂ ಸಹ ಇರಲಿಲ್ಲ. 

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ|
ಕೊರತೆಯೊಂದನು ನೀನು ನೆನೆನೆನೆದು ಕೆರಳಿ||
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ|
ನರಳುವುದು ಬದುಕೇನೊ? – ಮಂಕುತಿಮ್ಮ||

ನಿಜವಾಗಲು ಈ ಘಟನೆ ದೊಡ್ಡಗಾಯವೇ ಸರಿ. ಆದರೆ, ಇದನ್ನು ಪದೇ ಪದೇ ನೆನೆದು ಮನಸ್ಸಿಗೆ ಘಾಸಿ ಕೊಳ್ಳಿಸಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ. ಆದಷ್ಟು ಬೇಗ ಈ ದುಃಖದಿಂದ ಸ್ವಲ್ಪ ಸ್ವಲ್ಪವೇ ಹೊರಬಂದು ಭವಿಷ್ಯದ ಜೀವನವನ್ನು ನಿರ್ಮಾಣ ಮಾಡಿಕೊಳ್ಳಬೇ ಕಾಗಿದೆ. ಅದರ ಬಗ್ಗೆಯೇ ನೆನೆದು ಕೊರಗುತ್ತಿದ್ದರೆ ತಮ್ಮ ಮಕ್ಕಳ ಭವಿಷ್ಯವನ್ನು ನೋಡಬೇಕಲ್ಲವೆ. ಈ ದುರ್ಮರಣಕ್ಕೀಡಾದ ಎಲ್ಲಾ ಕುಟುಂಬಗಳಿಗೆ ಅವರ ಅಗಲಿಕೆಯ ನೋವು ಭರಿಸುವಂತೆ ಪ್ರಕೃತಿಮಾತೆ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. 

ಇಂತಹ ದುರ್ಘಟನೆಗಳಿಗೆ ಮುಖ್ಯ ಕಾರಣ ರಸ್ತೆಗಳ ಸರಿಯಾದ ನಿರ್ಮಾಣವಾಗದಿರುವುದು. ದಯವಿಟ್ಟು ಸರ್ಕಾರಗಳು ಇದರ ಬಗ್ಗೆ ಗಮನ ಹರಿಸಬೇಕು. ಹಿಂದೆ ಇದೇ ಜಾಗದಲ್ಲಿ ಎಷ್ಟೋ ಅಪಘಾತಗಳಾಗಿವೆ. ಆದರೂ ಕ್ರಮಕೈಗೊಳ್ಳದಿರುವುದು ಶೋಚನೀಯ. ಜನರೂ ಸಹ ಎಚ್ಚೆತ್ತುಕೊಳ್ಳಬೇಕು ಆದಷ್ಟು ದೂರದ ಪ್ರಯಾಣಕ್ಕೆ ಸಾರ್ವಜನಿಕ ವಾಹನಗಳನ್ನು ಬಳಸಬೇಕು ಬೆಳಿಗ್ಗೆ 5 ಗಂಟೆಯ ನಂತರ ರಾತ್ರಿ 10 ಗಂಟೆಯ ಒಳಗೆ ಪ್ರಯಾಣಿಸುವುದು ಸುರಕ್ಷಿತ. ಭಾರತ ದೇಶದಲ್ಲಿ ಅತೀ ಹೆಚ್ಚು ಸಾವುಗಳಾಗುವುದು ಹೃದಯಾಘಾತ, ಕ್ಯಾನ್ಸರ್ ಮತ್ತು ಅಪಘಾತಗಳಿಂದ. ಅಮೇರಿಕಾದಂತಹ ಅಭಿವೃದ್ಧಿ ರಾಷ್ಟ್ರಗಳಲ್ಲಿ ಅಪಘಾತಗಳಾಗುವುದು ಕಡಿಮೆ. ಏಕೆಂದರೆ ಅಲ್ಲಿನ ರಸ್ತೆಗಳು ಸುವ್ಯವಸ್ಥಿತವಾಗಿರುತ್ತವೆ. ಆದರೆ, ನಮ್ಮ ಭಾರತ ದೇಶದ ರಸ್ತೆಗಳ ಸ್ಥಿತಿ ಹೇಳತೀರದು. ಜೊತೆಗೆ ಸವಾರರಲ್ಲಿ ಚಾಲನಾ ಪ್ರಜ್ಞೆ ಹಾಗೂ ಕಾನೂನುಗಳ ಬಿಗಿ ಹಿಡಿತ ತುಂಬಾ ಸುವ್ಯವಸ್ಥಿತವಾಗಿದೆ. ಉದಾ ಯುರೋಪ್‍ನಲ್ಲಿ ರಾತ್ರಿ 8 ಗಂಟೆಯ ನಂತರ ಪ್ರಯಾಣಿಸುವಂತಿಲ್ಲ.

ದಾವಣಗೆರೆ ಇತಿಹಾಸದಲ್ಲಿ ಬಹಳ ವರ್ಷಗಳ ಹಿಂದೆ ಭಾನುವಳ್ಳಿಯಲ್ಲಿ ಹೊಳೆಗೆ ಬಸ್ಸು ಬಿದ್ದು, ಮತ್ತು ಚಿತ್ರದುರ್ಗ ಹಾಗೂ ಉಚ್ಚಂಗಿ ದುರ್ಗದಲ್ಲಿ ಹೊಂಡಕ್ಕೆ ಬಸ್ಸು ಬಿದ್ದು ಬಹಳಷ್ಟು ಜನ ದುರ್ಮರಣ ಹೊಂದಿದ್ದರು. ಈಗ ನೇರ ಡಿಕ್ಕಿಯಲ್ಲಿ ಶುಕ್ರವಾರ ನಡೆದ ಘಟನೆಯಲ್ಲಿ 14 ಜನ ದುರ್ಮರಣ ಹೊಂದಿರುವುದು ದುಃಖಕರ. 

ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಒಬ್ಬರಾದ ಶ್ರೀಮತಿ ಪ್ರೀತಿ ರವಿಕುಮಾರ್‍ರವರು ಕರುಣಾ ಟ್ರಸ್ಟಿನ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ಟ್ರಸ್ಟಿನ ಸಮಾಜ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಜೊತೆಗೆ ದಾನವಿತ್ತು ಸಹಕರಿಸುತ್ತಿದ್ದರು. ಹಾಗೆಯೇ ಡಾ. ವೀಣಾ ಮತ್ತಿಹಳ್ಳಿ ಪ್ರಕಾಶ್‍ರವರೂ ಸಹ ದಾನವನ್ನು ನೀಡುವುದರ ಜೊತೆಗೆ ಟ್ರಸ್ಟ್ ಶಾಲಾ-ಕಾಲೇಜುಗಳಲ್ಲಿ ನಡೆಸುತ್ತಿದ್ದ ಹದಿಹರೆಯದ ಹೆಣ್ಣುಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಸತತವಾಗಿ ಭಾಗವಹಿಸುತ್ತಾ ಸದಾ ಸಮಾಜ ಸೇವೆಗೆ ಮುಂದಾಗುತ್ತಿದ್ದರು. ಇಬ್ಬರೂ ಹಸನ್ಮುಖಿಗಳು, ಸದ್‍ವ್ಯಕ್ತಿಗಳು, ಸಹೃದಯಿಗಳು, ಸಹಕಾರ ಮನೋಭಾವದವರಾಗಿದ್ದರು. ಇವರಿಬ್ಬರಿಗೂ ಕರುಣಾ ಟ್ರಸ್ಟ್ ವಿಶೇಷವಾಗಿ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. 

ಒಟ್ಟಿನಲ್ಲಿ ಆ ಕುಟುಂಬಗಳು, ಅವರ ಸಂಬಂಧಿಕರು ಹಾಗೂ ನಗರ ಈ ದುರ್ಘಟನೆಯಿಂದ ಬೇಗ ಚೇತರಿಸಿ ಕೊಂಡು ಸಹಜ ಸ್ಥತಿಗೆ ಮರಳಲಿ. ಇನ್ನು ಮುಂದಾದರೂ ಇಂತಹ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಛರಿಕೆ ವಹಿಸುವುದು ನಮ್ಮೆಲ್ಲರ ಕರ್ತವ್ಯ.


– ಶಿವನಕೆರೆ ಬಸವಲಿಂಗಪ್ಪ
ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.
[email protected]

error: Content is protected !!