ಜನವರಿ 12 – ರಾಷ್ಟ್ರೀಯ ಯುವ ದಿನಾಚರಣೆ

`ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ಘೋಷಿಸಿದ ಸನ್ಯಾಸಿ ಮತ್ತಾರೂ ಅಲ್ಲ ಅವರೇ ಸ್ವಾಮಿ ವಿವೇಕಾನಂದರು. ಪ್ರತಿ ವರ್ಷ ಜನವರಿ 12 ರಂದು ವಿವೇಕಾನಂದರ ಜಯಂತಿಯನ್ನು ದೇಶಾದ್ಯಂತ `ರಾಷ್ಟ್ರೀಯ ಯುವ ದಿನ’ ವನ್ನಾಗಿ ಆಚರಿಸಲಾಗುತ್ತದೆ.

ವಿಶ್ವನಾಥದತ್ತ ಮತ್ತು ಭುವನೇಶ್ವರಿ ದೇವಿಯ ಸುಪುತ್ರರು ಮತ್ತು ತಾಯ್ನಾಡಿನ ಹೆಮ್ಮೆಯ ಪುತ್ರರಾಗಿ,  ರಾಮಕೃಷ್ಣ  ಪರಮಹಂಸರ ನೆಚ್ಚಿನ ಶಿಷ್ಯರಾಗಿ, ಮಹಾನ್ ಮಾನವತಾವಾದಿ ಮತ್ತು ಸನ್ಯಾಸಿಯಾಗಿ ಇಡೀ ಜಗತ್ತೇ ಬೆಕ್ಕಸ ಬೆರಗಾಗುವಂತೆ ಮಾಡಿದ ಚೇತನ ಸ್ವಾಮಿ ವಿವೇಕಾನಂದರು. ಚಿಕಾಗೋದಲ್ಲಿ ನಡೆದ ವಿಶ್ವ  ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ತಮಗೆ ದೊರೆತ ಅಲ್ಪ ಅವಕಾಶವನ್ನು ಬಳಸಿಕೊಂಡು ಭಾರತದ ಸನಾತನ ಸಂಸ್ಕೃತಿ, ಧರ್ಮ, ಸಂಪ್ರದಾಯಗಳ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಧೀಮಂತ ಶಕ್ತಿ ಇವರು. ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯರು ಇಂಗ್ಲಿಷರಿಗೆ ಗುಲಾಮರಾಗಿ ತಮ್ಮತನವನ್ನು ಮರೆತಿದ್ದರಿಂದ ಅವರ ಮಹತ್ವವನ್ನು ತೋರಿಸಿ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟ ಮಹನೀಯರು.  ದೀನ, ದಲಿತರ ನೋವು ಸಂಕಟಗಳಲ್ಲಿ ತಾವೂ ಭಾಗಿಯಾಗಿ ಅವರ ಶ್ರೇಯೋಭಿವೃದ್ಧಿಗಾಗಿ ಕೊನೆಯ ಕ್ಷಣದವರೆಗೂ ಶ್ರಮಿಸಿದರು. ಇವರು ಕೇವಲ 39 ವರ್ಷಗಳು ಮಾತ್ರ ಬದುಕಿದ್ದು, ಇಷ್ಟು ಅಲ್ಪಾವಧಿಯಲ್ಲಿಯೇ ಮಾಡಿದ ಸಾಧನೆ ಇಡೀ ಜಗತ್ತೇ  ಮೆಚ್ಚುವಂಥದ್ದು.

ಯುವಕರು ದೇಶದ ಸಂಪತ್ತು ಎಂದು ವಿವೇಕಾನಂದರು ಭಾವಿಸಿದ್ದರು. ಅವರ ಶಕ್ತಿಯ ಅಪವ್ಯಯ ಆಗುವುದನ್ನು ಅರಿತು ಅವರಿಗೆ ಕೆಲ ಕಿವಿ ಮಾತುಗಳನ್ನು ಹೇಳಿದರು. ಗಿಳಿಯಂತೆ ಮಾತನಾಡುವುದು ನಮ್ಮ ಬಾಳಿನ ಚಾಳಿಯಾಗಿದೆ, ಏನನ್ನೂ ಅನುಷ್ಠಾನಕ್ಕೆ ತರುವುದಿಲ್ಲ. ಇದಕ್ಕೆ ಕಾರಣ ಶಾರೀರಿಕ ದುರ್ಬಲತೆ. ಮೊದಲು ನಮ್ಮ ತರುಣರು ಬಲಿಷ್ಠರಾಗಬೇಕು . ಪ್ರಪಂಚ ಇರುವುದು ಹೇಡಿಗಳಿಗಲ್ಲ ; ಜೀವನದಲ್ಲಿ ಎದುರಾಗುವ ಸಕಲ ಸೋಲು -ಗೆಲುವುಗಳಿಗೆ ಬಗ್ಗದಿರಿ, ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಾರ್ಥರಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಯಾವಾಗಲೂ ನಮ್ಮ ದೃಷ್ಟಿ ಮತ್ತು ಗುರಿ ಎರಡೂ ಎತ್ತರಕ್ಕಿದ್ದರೆ ಆಗ ನಾವು ತಲುಪಬೇಕಾದ ಅತ್ಯುನ್ನತ ಗುರಿಯನ್ನು ತಲುಪೇ ತಲುಪುತ್ತೇವೆ. ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದರೆ ಸಂತೋಷಪಡಿ ಸೋತರೆ ಅದರಿಂದ ಪಡೆದ ಅನುಭವವನ್ನು ತಮ್ಮದಾಗಿಸಿ ಕೊಳ್ಳಿ. ನಿಮ್ಮ ಹೃದಯ ಮತ್ತು ಮನಸ್ಸಿನ ನಡುವೆ ಸಂಘರ್ಷ ಉಂಟಾದಾಗ ಹೃದಯ ಏನನ್ನು ಹೇಳುತ್ತದೋ ಅದನ್ನು ಮಾಡಿ. ಹಣವಂತರ ಜೊತೆ ನೂರಾರು ವರ್ಷ ಬದುಕುವುದಕ್ಕಿಂತಲೂ ಹೃದಯವಂತರ ಜೊತೆ ಮೂರು ದಿನ ಬದುಕಿ ಜೀವನ ಸಾರ್ಥಕಪಡಿಸಿಕೊಳ್ಳಿ. 

ನೀವು ಜ್ಞಾನ ಸಂಪಾದಿಸಬೇಕೆಂದರೆ ಇರುವ ಏಕೈಕ ಮಾರ್ಗ ಅದುವೆ ಏಕಾಗ್ರತೆ . ತಮ್ಮಲ್ಲಿ ಏಕಾಗ್ರತೆಯ ಶಕ್ತಿ ಹೆಚ್ಚಿದಷ್ಟು ಜ್ಞಾನಾರ್ಜನೆಯೂ ಅಧಿಕಗೊಳ್ಳುವುದು. ನೀವು ಮಾಡುವ ಯಾವುದೇ ಕೆಲಸದ ಮೇಲೆ ಸಂಪೂರ್ಣ ಏಕಾಗ್ರತೆಯನ್ನು  ತೊಡಗಿಸಿಕೊಳ್ಳಿ. ಗುರಿಯ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸಿ, ಆಗ ಯಶಸ್ಸು ನಿಮ್ಮದಾಗುತ್ತದೆ. ಹೆದರಿಸುವವರನ್ನು ಎದುರಿಸಿ ನಿಲ್ಲಿ. ನಿಮ್ಮ ಆತ್ಮ ವಿಶ್ವಾಸಕ್ಕಿಂತ  ದೊಡ್ಡ ಗೆಳೆಯ ಬೇರಾರೂ  ಇಲ್ಲ. ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ. ಹೀಗೆ ಹತ್ತಾರು ವಿಷಯಗಳನ್ನು ಮುಂದಿಡುತ್ತಾ ಯುವಕರನ್ನು ಹುರಿದುಂಬಿಸಿದರು. ಯುವ ಜನರಲ್ಲಿ ಸಾಮಾಜಿಕ ಸೇವಾ ಮನೋಭಾವನೆಯನ್ನು ಉಂಟುಮಾಡಲು ಉತ್ತಮನಾಗು – ಉಪಕಾರಿಯಾಗು “(be good, do good )ಎಂಬ ಜೀವನ ಸಂದೇಶವನ್ನು ವಿವೇಕಾನಂದರು ಸಾರಿದರು. ಸ್ವಾವಲಂಬನೆ ಮತ್ತು ಸ್ವಾಭಿಮಾನ ಎಲ್ಲಾ ಯುವಕರಲ್ಲಿರಬೇಕೆಂದು ತಿಳಿಸಿದರು. 

ಒಮ್ಮೆ ವಿವೇಕಾನಂದರು ದೇವಾಲಯಕ್ಕೆ ಹೋಗಿ ಮರಳುವಾಗ ಅವರಿಗೆ ಕೋತಿಗಳ ಗುಂಪು ಎದುರಾಯಿ ತು. ಅವು ಸುಮ್ಮನಿರದೆ ಇವರ ಮೇಲೆ ಎರಗಲು ಪ್ರಾರಂಭಿ ಸಿದವು. ಅವುಗಳಿಂದ ತಪ್ಪಿಸಿಕೊಳ್ಳಲು ಓಡತೊಡಗಿದರು. ಇದೆಲ್ಲವನ್ನು ಮನೆಯ ಮಹಡಿಯ ಮೇಲೆ ನಿಂತು ಗಮನಿಸುತ್ತಿದ್ದ ವ್ಯಕ್ತಿಯು ನೀವು ಓಡದಿರಿ ಕೋತಿಗಳನ್ನು ಎದುರಿಸಿ ಎಂದಾಗ ಅವರಾಡಿದ ಮಾತು ಇವರ ಮೇಲೆ ಪರಿಣಾಮ ಬೀರಿತು. ಓಡುತ್ತಿದ್ದ ವಿವೇಕಾನಂದರು ಗಟ್ಟಿಯಾಗಿ ಕೋತಿಗಳ ಎದುರು   ನಿಂತು ಅವುಗಳನ್ನು ಧೈರ್ಯದಿಂದ ಎದುರಿಸಿ, ಅವುಗಳಿಂದ ಪಾರಾದರು. ಇದರಿಂದ ಅವರು ನಕಾರಾತ್ಮಕ ಚಿಂತನೆ, ಅಪನಂಬಿಕೆ, ಸಮಸ್ಯೆಗಳು ಬದುಕಿನಲ್ಲಿ ಬಂದು ಹೋಗುತ್ತವೆ. ಆದರೆ ಅವುಗಳಿಗೆ ಹೆದರಿ ಪಲಾಯನ ಮಾಡಬಾರದೆಂಬ ಸತ್ಯವ ನ್ನು ಸ್ವತಃ ಅರಿತು ಅದನ್ನು ಯುವಕರಿಗೂ ತಿಳಿಹೇಳಿದರು.

ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಅತ್ಯಂತ ಪ್ರಮುಖ ಘಟನೆ ಎಂದರೆ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು. ಕ್ರಿ. ಶ. 1893, ಸೆಪ್ಟೆಂಬರ್ 11ರಂದು ಅಮೆರಿಕಾದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದ ಸನಾತನ ಧರ್ಮ ಮತ್ತು ಸಂಸ್ಕೃತಿಯ ಮೌಲ್ಯವನ್ನು ಎಳೆ ಎಳೆಯಾಗಿ ಬಿಡಿಸಿ ವಿಶ್ವದ ಮುಂದೆ ಪ್ರತಿಪಾದಿಸಿದರು. “ಯಾವ ಧರ್ಮವೂ ಮತ್ತೊಂದು ಧರ್ಮಕ್ಕೆ ಶ್ರೇಷ್ಠವಲ್ಲ; ಎಲ್ಲಾ ಧರ್ಮಗಳೂ ಮಹಾನ್ ಪುರುಷರಿಗೆ ಜನ್ಮ ನೀಡಿವೆ ಎಂದು ಹೇಳಿ ಪರಸ್ಪರರನ್ನು ಅರಿಯಿರಿ, ಅಪ್ಪಿಕೊಳ್ಳಿರಿ” ಎಂಬ ಸರಳ ಸಾರ್ವತ್ರಿಕ ಸಂದೇಶವನ್ನು ಸಾರಿದರು. ಇದೇ ಹಿಂದೂ ಧರ್ಮದ ಮತ್ತು ಭಾರತೀಯ ಸಂಸ್ಕೃತಿಯ ಸಾರ ಎಂದು ಬಣ್ಣಿಸಿ ದರು. ಈ ಘಟನೆ ಜಗದ್ವಿಖ್ಯಾತಿಯನ್ನು ಪಡೆಯಿತು.

ಭಾರತದಲ್ಲಿ ಮನೆ ಮಾಡಿದ್ದ ಬಡತನ, ದಾರಿದ್ರ್ಯ, ಅಂಧಾನುಕರಣೆಗಳನ್ನು ಕಂಡು ವಿಚಲಿತರಾಗಿ, ಜೀವಮಾನವಿಡೀ ಅವುಗಳ ವಿರುದ್ಧ ಹೋರಾಟ ನಡೆಸಿದರು. ಕ್ರಿ. ಶ. 1897 ರಲ್ಲಿ ದೇಶದ ಜನರ ದಾರಿದ್ರ್ಯವನ್ನು ಅಳಿಸಲು ರಾಮಕೃಷ್ಣ ಮಿಷನ್, ಕ್ರಿ. ಶ. 1899 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ವೇದಾಂತ ಸಮಾಜವನ್ನು ಸ್ಥಾಪಿಸಿದರು. ಉಚಿತ ಮತ್ತು ಕಡ್ಡಾಯ ಸಮೂಹ ಶಿಕ್ಷಣ, ಮಹಿಳಾ ಶಿಕ್ಷಣ ಹಾಗೂ ರಾಷ್ಟ್ರೀಯ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಆತ್ಮ ವಿಶ್ವಾಸ ಮತ್ತು ಆತ್ಮ ಸಾಕ್ಷಾತ್ಕಾರ, ಶೀಲ ಸಂವರ್ಧನೆ, ಸೇವಾ ಮನೋಭಾವನೆ, ಹೊಂದಾಣಿಕೆ , ಸ್ವಾವಲಂಬನೆ, ತ್ಯಾಗ ಭಾವನೆ ಇವೆಲ್ಲವೂ ಶಿಕ್ಷಣದ ಗುರಿಗಳಾಗಬೇಕೆಂದು ಬಯಸಿದರು. ಎಲ್ಲಾ ಶಿಕ್ಷಣದ ಅಂತಿಮ ಗುರಿ ಮಾನವತೆಯ ನಿರ್ಮಾಣವೇ ಆಗಿದೆ. ಇತರರ ಒಳಿತಿನಲ್ಲಿ ನನ್ನ ಒಳಿತಿದೆ, ಜನ ಸೇವೆಯೇ ಜನಾರ್ಧನ ಸೇವೆ ಎಂಬ ಹತ್ತಾರು ವಿಚಾರಗಳನ್ನು ಶಿಕ್ಷಣದ ಮೂಲಕ ನೀಡಬೇಕೆಂದರು.  ಶಿಕ್ಷಣವೆಂದರೆ `ಮಾನವನಲ್ಲಿ ಸುಪ್ತವಾಗಿ ಅಡಗಿರುವ ದೈವದತ್ತ ಗುಣಗಳನ್ನು ಪ್ರಕಟಗೊಳಿಸುವುದು ‘ ಎಂದು ಅಭಿಪ್ರಾಯಪಟ್ಟರು.

ವಿವೇಕಾನಂದರು ರಚಿಸಿದ ‘song of sanyacin   ಕೃತಿಯಲ್ಲಿ ಬರೆದ ಸಾಲುಗಳನ್ನು ರಾಷ್ಟ್ರ ಕವಿ ಕುವೆಂಪು ರವರು ಕನ್ನಡಕ್ಕೆ ಅನುವಾದಿಸಿದ್ದಾರೆ :

ಗಗನವೇ ಮನೆ, ಹಸುರೇ ಹಾಸಿಗೆ,
ಮನೆಯು ಸಾಲ್ವುದೆ ಚಾಗಿಗೆ, ಹಸಿಯೋ ಬಿಸಿಯೋ
ಬೀದಿಯು ಕೊಟ್ಟಾಹಾರವನ್ನವು ಯೋಗಿಗೆ ‘.

ವಿವೇಕಾನಂದರನ್ನು ಕುರಿತು  ಎಷ್ಟು ಹೇಳಿದರೂ ಕಡಿಮೆಯೇ. ವಿವೇಕಾನಂದರಂತಹ  ಶಿಷ್ಯರು ಎಲ್ಲಾ ಗುರುಗಳಿಗೂ ಸಿಕ್ಕರೆ ಈ ನಾಡು ಬೆಳೆದೀತು, ಪಾವನ ವಾದೀತು, ಅಭಿವೃದ್ಧಿ ಹೊಂದೀತು. ರಾಮ ಕೃಷ್ಣರಂತ ಗುರುಗಳು ವಿವೇಕಾನಂದರಂಥ ಶಿಷ್ಯರು ಈ ನಾಡಿನಲ್ಲಿ ವಿಫುಲವಾಗಿ ಜನಿಸಲಿ, ತನ್ಮೂಲಕ ಭಾರತಾಂಬೆಯ ಹೆಸರು ವಿಶ್ವದ ಮೂಲೆ ಮೂಲೆಗೂ ತಲುಪುವಂತಾಗಲಿ ಎಂಬುದು ನಮ್ಮಗಳ ಬಯಕೆ. ಯುವಕರಿಗೆ ಅವರು ನೀಡಿದ ಸಂದೇಶವನ್ನು ಪ್ರತಿ ಕ್ಷಣವೂ ಮನನ ಮಾಡಿಕೊ ಳ್ಳುತ್ತಾ, ಅವರು ಹಾಕಿಕೊಟ್ಟ ಮಾರ್ಗಗಳಲ್ಲಿ ಪ್ರತಿಯೊ ಬ್ಬರೂ ನಡೆದರೆ  ವಿವೇಕಾನಂದರ ಜಯಂತಿಯನ್ನು ಆಚರಿಸಿದ್ದಕ್ಕೆ ಒಂದು ಸಾರ್ಥಕ ಭಾವ ಉಂಟಾಗುವುದು.


ಡಾ. ಶಿವಯ್ಯ ಎಸ್. 
ವಿಶ್ರಾಂತ ಪ್ರಾಧ್ಯಾಪಕರು  ದಾವಣಗೆರೆ.
98804 66996

 

error: Content is protected !!