ಸದೃಢ ಭಾರತದ ಅಂತಃಶಕ್ತಿಯೇ ಯುವಜನತೆ

ಸನಾತನ ಧರ್ಮದ ನೆಲೆವೀಡು, ಸರ್ವಧರ್ಮಿಗಳ ಸಹಬಾಳ್ವೆಯ ಗೂಡು, ಯುಗಯುಗಗಳೇ ಕಳೆದರೂ ಅಳಿಯದೇ ಉಳಿಯುವ ಚೈತನ್ಯದ ಬೀಡು, ದೇಶಕ್ಕಾಗಿ ತನು-ಮನ-ಧನವ ಅರ್ಪಣೆಗೈಯುವರ ದೇಶಾಭಿಮಾನಿಗಳ ನಾಡು, ಜ್ಞಾನ-ವಿಜ್ಞಾನ ತಂತ್ರಜ್ಞಾನ ನಿಪುಣರ‌ ಜನ್ಮಭೂಮಿ ನಮ್ಮ ‌ಭಾರತ ದೇಶ. 

ಭಾರತವು 130 ಕೋಟಿಗೂ ಅಧಿಕ ಜನಸಂಖ್ಯೆಯ ತುಂಬು ಕುಟುಂಬವು. ಜಗತ್ತಿನಲ್ಲೇ ಅತಿ ಹೆಚ್ಚು ಯುವ ಸಮುದಾಯ ಹೊಂದಿರುವ ಭಾರತದ ಅಂತಃಶಕ್ತಿಯೇ ಯುವಜನತೆ. ದೇಶದ ಜನಸಂಖ್ಯೆಯಲ್ಲಿ 40 ಕೋಟಿಗೂ ಹೆಚ್ಚು ಯುವ ಜನತೆಯಿದ್ದು, ದೇಶದ ಆಗುಹೋಗುಗಳ ಬಗ್ಗೆ ಸದಾ ಚಿಂತಿಸಬೇಕಾದವರೇ ಇಂದು ದುಶ್ಚಟಗಳ ಮಾಯಾಂಗನೆಯ ದಾಸರಾಗಿರುವುದು ದುರಂತವೇ ಸರಿ. 

ಆದರೂ ಸಹ ಯುವ ಜನತೆಯ ದೇಶಾಭಿಮಾನವೆಂಬುದು ಎಂದಿಗೂ ಬರಡಾಗುವುದಿಲ್ಲ. ಬರಡು ನೆಲದಂತಾಗಿರುವ ಯುವಜನತೆಯನ್ನು ತಿದ್ದಿ ತೀಡಿ ಫಲವತ್ತತೆಯ ಬಂಗಾರದ ಭೂಮಿಗಳಾಗಿಸಲು ಕೆಲಸವನ್ನು ನಮ್ಮ ಹಿರಿಯರು, ಶಿಕ್ಷಣ ವ್ಯವಸ್ಥೆ, ಸಮೂಹ ಮಾಧ್ಯಮಗಳು ಪ್ರಯತ್ನಿಸಬೇಕಾಗಿದೆ. ಒಮ್ಮೆ ಈ ಕೆಲಸಗಳು ಆರಂಭವಾದರೆ ಸಾಕು ಭಾರತವನ್ನು ವಿಶ್ವಗುರುವನ್ನಾಗಿಸುವ ಶಕ್ತಿಯು ನಮ್ಮ ಯುವಜನತೆಯಲ್ಲಿದೆ. 

ಭಾರತ ದೇಶದ ಆತ್ಮಬಲವೇ ನಮ್ಮ ಯುವಜನತೆ. ನಮ್ಮ ಯುವಜನತೆಯು ತಾವು ಹುಟ್ಟಿ ಬೆಳೆದ ದೇಶಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ದೇಶದ ಸರ್ವರಂಗಗಳಲ್ಲಿಯೂ ಯುವ ಸಮುದಾಯವೇ ಮುನ್ನೆಲೆಗೆ ಬರಬೇಕು. ದೇಶಾಭಿಮಾನ ಕೇವಲ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ತೋರಿಸದೇ ದೇಶದ ಸಂಕಷ್ಟ ಸಮಯದಲ್ಲಿಯೂ ತೋರಿಸಬೇಕು. 

ಚುನಾವಣೆ ಸಂದರ್ಭದಲ್ಲಿ ಸಮರ್ಥ ನಾಯಕರನ್ನು ಆಯ್ಕೆ ಮಾಡುವ, ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ, ನಾಗರಿಕ ಅಪರಾಧಗಳು ಕಂಡಾಗ ಮುಲಾಜಿಲ್ಲದೆ ಖಂಡಿಸುವ ಹಾಗೂ ಸರಿಪಡಿಸುವ, ಪ್ರಾಕೃತಿಕ ವಿಕೋಪಗಳು, ಸಾಮಾಜಿಕ ದುರ್ಘಟನೆಗಳು ಸಂಭವಿಸಿದಾಗ ಮಾನವೀಯತೆ ನೆರವು ನೀಡುವ, ಬಡವರು, ಅನಾಥರು, ವೃದ್ಧರು, ಅಬಲೆಯರು, ಮಕ್ಕಳು, ವಿಕಲಚೇತನರು ಕಂಡಾಗ ಸಹಾಯ ಮಾಡುವ, ಸರ್ವಧರ್ಮಗಳ ಜನರನ್ನು ಸೋದರತ್ವ ಭಾವದಿಂದ ಕಾಣುವ, ಜಾತಿ ಭಾಷೆ ಪಂಥ ಪ್ರಾಂತ್ಯ ಮುಂತಾದ ವಿಷವರ್ತುಲದಿಂದ ಹೊರಬಂದು ನಿಲ್ಲುವ, ದೇಶ ವಿರೋಧಿ ಕೃತ್ಯಗಳ ನಡೆಸುವರನ್ನು ಸದೆ ಬಡಿಯುವ, ಸಾಮಾಜಿಕ ಸ್ವಾಸ್ಥ್ಯ ಕದಡುವರನನ್ನು ಮಟ್ಟಹಾಕುವ, ಜನನಿ ಜನ್ಮಭೂಮಿಯು ಸ್ವರ್ಗ ಸಮಾನವೆಂದು ತಿಳಿಯುವ, ಧಾರ್ಮಿಕ ಕಂದಾಚಾರ ಮೌಢ್ಯತೆಗಳಿಂದ ಹೊರಬರುವ, ವೈಜ್ಞಾನಿಕ ವೈಚಾರಿಕ ಪ್ರಜ್ಞೆ ಹೊಂದುವ, ದೇಶ ದಾಸ್ಯ ವಿಮೋಚನೆಗಾಗಿ ಹೋರಾಡಿ ಮಡಿದ ಮಹಾನೀಯರ ಸ್ಮರಿಸುವ, ಅನ್ನದಾತ ಕೃಷಿಕರು, ಜ್ಞಾನದಾತ ಶಿಕ್ಷಕರು, ದೇಶ ರಕ್ಷಕ ಸೈನಿಕರು, ದೇಶ ಕಟ್ಟುವ ಕಾರ್ಮಿಕರನು ಗೌರವಿಸುವ, ಯಾವುದೇ ವೃತ್ತಿಯಾದರು ಪ್ರಾಮಾಣಿಕವಾಗಿ ದುಡಿಯುವ, ದೇಶದ ಐತಿಹಾಸಿಕ ಚರಿತ್ರೆ ಅರಿಯುವ, ಸದಾ ಕಾಲ ದೇಶದ ಉನ್ನತಿಗಾಗಿ ಶ್ರಮಿಸುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಬೆಳಗಿಸುವ ನಿಟ್ಟಿನಲ್ಲಿ ನಮ್ಮ ಯುವಜನತೆ ಮುಂದಾದರೆ ಭಾರತ ದೇಶವು ಜಗತ್ತಿನ ಸಾರ್ವಭೌಮ, ವಿಶ್ವಗುರುವಾಗುವ ಸಮಯವು ದೂರವಿರದು. 

ಪುಣ್ಯಭೂಮಿ, ಕರ್ಮಭೂಮಿ, ಧರ್ಮಭೂಮಿ, ತಪೋಭೂಮಿ ನಮ್ಮ ಭಾರತವು ಸದೃಢ ರಾಷ್ಟ್ರಭೂಮಿಯಾಗಿ ನಿಲ್ಲಲು, ಶ್ರವಣಕುಮಾರ, ವಿವೇಕಾನಂದರು, ಸುಭಾಷರು, ಭಗತರಂತಹ ವೀರಪುರುಷರು ಮತ್ತೆ ನಮ್ಮ ಯುವ ಸಮುದಾಯದಲ್ಲಿ ನೇತಾರರಾಗಿ ಹುಟ್ಟಿ ಬರುವರು. ಭಾರತವು ಬಲಾಢ್ಯ ರಾಷ್ಟ್ರಗಳ ನಾಯಕನಾಗಿ ಮುಂಚೂಣಿಯಲ್ಲಿ ನಿಲ್ಲುವಂತಾಗಲು ಯುವಜನತೆ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಬೇಕು. ಜೈ ಹಿಂದ್, ವಂದೇ ಮಾತರಂ…


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
[email protected]

error: Content is protected !!