ಆತ್ಮಸ್ಥೈರ್ಯದ ಬೆಳಕು ತೋರಿಸಿದ 2020…

2020 ತನ್ನ ಪಯಣಕ್ಕೆ ವಿದಾಯ ಹೇಳಿ, 2021ಕ್ಕೆ ಸ್ವಾಗತ ಕೋರಿದೆ. ಈ ಸಂದರ್ಭದಲ್ಲಿ 2020 ರ ಇಸವಿಯು ಜಾಗತಿಕ ಇತಿಹಾಸದಲ್ಲಿ ಮಾನವ ಕುಲಕ್ಕೆ ಕೆಲವೊಂದಿಷ್ಟು ಜೀವನದ ಪಾಠಗಳನ್ನು ಕಲಿಸಿ, ಮಾನವರ ತಪ್ಪುಗಳನ್ನು ತಿದ್ದಿ ತೀಡಿದೆ.

2020ರ ಇಸವಿಯೇ ಒಂಥರಾ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಾವಳಿಗಳ ಪ್ರತಿಯೊಂದು ಓವರ್‌ನ ಎಸೆತ, ರನ್, ಬೌಂಡರಿ, ಸಿಕ್ಸರ್, ವೈಡ್, ನೋಬಾಲ್, ಬೌನ್ಸರ್, ಫ್ರೀ ಹಿಟ್, ರನೌಟ್, ಹಿಟ್ ವಿಕೆಟ್, ಸ್ಟ್ರ್ಯಾಟಿಜಿಕ್‌ ಟೈಂ ಔಟ್, ಸೂಪರ್ ಓವರ್ ರೀತಿಯಲ್ಲಿಯೇ ರೋಚಕ, ಕುತೂಹಲದಿಂದ ಕೂಡಿದ ವರ್ಷವಾಗಿತ್ತು.

2020ರ ಆರಂಭದಲ್ಲಿಯೇ ಜಗತ್ತಿನಾದ್ಯಂತ ಕೊರೊನಾ ಎಂಬ ವೈರಸ್ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಲು ಸಜ್ಜಾಗಿ ನಿಂತಿತ್ತು. 2020ರ ಇಸವಿಯು “ಪ್ರಕೃತಿಯ ಕೂಸಾದರೂ, ಇಡೀ ಪ್ರಕೃತಿಯನ್ನು ತನ್ನ ದುರಾಸೆಯಿಂದ ಹಾಳು ಮಾಡುತ್ತಿದ್ದಂತಹ ಜಗತ್ತಿನ ಬುದ್ಧಿಜೀವಿ ಎನಿಸಿಕೊಂಡ ಮಾನವರಿಗೆ” ತನ್ನದೇಯಾದ 20 ಬುದ್ಧಿಯ ಪಾಠಗಳನ್ನು ಕಲಿಸಿ, ತನ್ನ ಪಯಣಕ್ಕೆ ನಾಂದಿ ಹಾಡಿತು.

ಈ ವರ್ಷವು ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದಂತಹ ವರ್ಷವಾಗಿ ಅಚ್ಚಳಿಯದೆ ಉಳಿಯುತ್ತದೆಂದು ಹೇಳಬಹುದು. ಈ ವರ್ಷವು ಮಾನವರಿಗೆ ಕಲಿಸಿದ ಜೀವನ ಪಾಠಗಳನ್ನು ನೋಡುವುದಾದರೆ…

ಮನೆಯೇ ಮಂತ್ರಾಲಯ : 2020 ಮಾನವರಿಗೆ ಕಲಿಸಿದ ಮೊದಲ ಪಾಠವಿದೆಂದು ಹೇಳಬಹುದು. ಮನೆಯಿಂದ ಹೊರಗೆ ಯಾವಾಗಲೂ ತಿರುಗಾಡುತ್ತಿದ್ದ ಮಾನವರಿಗೆ ಕೊರೊನಾ ವೈರಸ್ ಬಂದಾದ ಮೇಲೆ ಮನೆಯೊಳಗಿದ್ದರೆ ಸ್ವರ್ಗ, ಹೊರಗಡೆ ಕಾಲಿಟ್ಟರೆ ನರಕವೆಂದು ತಿಳಿಸಿ, ಜೀವ ರಕ್ಷಣೆಗೆ ಮನೆಯೇ ಮಂತ್ರಾಲಯ, ಮನಸ್ಸೇ ದೇವಾಲಯವೆಂದು ಸಾರಿ ಸಾರಿ ಹೇಳಿತು.

ಪ್ರಕೃತಿಯಾಟದ ಮುಂದೆ ಮಾನವರದು ದೊಂಬರಾಟ : ಮಹಾತ್ಮ ಗಾಂಧಿಯವರು ಹೇಳುವಂತೆ “ಪ್ರಕೃತಿ ಮಾನವರ ಆಸೆಗಳನ್ನು ಮಾತ್ರ ಪೂರೈಸುವುದೇ ವಿನಃ ದುರಾಸೆಗಳನ್ನಲ್ಲ”. ನಗರೀಕರಣ, ಜಾಗತೀಕರಣಗಳಿಂದಾಗಿ ಮಾನವರು ಪ್ರಕೃತಿಯನ್ನು ಹಾಳುಗೆಡುವುತ್ತಿದ್ದಾರೆ. ಆದರೆ ಪ್ರಕೃತಿಯ ಮುಂದೆ ಮಾನವರು ಕುಬ್ಜರು, ಪ್ರಕೃತಿಯಾಟದ ಮುಂದೆ ಮಾನವರದು ದೊಂಬರಾಟ ಎಂದು ಈ ವರ್ಷ ಹೇಳಿಕೊಟ್ಟಿತು.

ಕಾಣದ ಕಡಲಿಗೆ ಹಂಬಲಿಸಿದವರು ಮರಳಿ ಗೂಡಿಗೆ : ಹುಟ್ಟಿ ಬೆಳೆದ ಮಾತೃಭೂಮಿ, ಜನ್ಮದಾತರು, ಧರ್ಮ, ಸಂಸ್ಕೃತಿ ಮರೆತು ವಿದ್ಯಾಭ್ಯಾಸ, ದುಡಿಮೆಗೆಂದು ವಿದೇಶಗಳಿಗೆ ಹಾರಿ ಹೋಗುತ್ತಿದ್ದಂತಹವರಿಗೆ ವಿದೇಶಗಳಲ್ಲಿ ಪರದೇಶಿಗಳಾಗಿ ಸಂಕಷ್ಟಕ್ಕೊಳಗಾಗಿ ಮರಳಿ ಗೂಡಿಗೆ ಬರಲು ಹಾತೊರೆಯುವಂತೆ ಈ ವರ್ಷ ಮಾಡಿತು.

ಸ್ವಚ್ಚತೆಯ ಪಾಠ : ಬುದ್ಧಿವಂತ ಜೀವಿಯಾದರೂ ಕೂಡ ಮಾನವರು ಸ್ವಚ್ಛತೆಯ ವಿಷಯದಲ್ಲಿ ಅವಿವೇಕಿಗಳಂತೆ ವರ್ತಿಸುತ್ತಿದ್ದರು. ಆದರೆ ಈ ವರ್ಷವು ಮಾನವರಿಗೆ ಪ್ರತಿಕ್ಷಣವೂ ತಮ್ಮ ಮನೆ, ನೆರೆಹೊರೆ, ನಗರ, ರಾಜ್ಯ, ದೇಶದ ಸ್ವಚ್ಛತೆಯ ಬಗ್ಗೆ ಹಾಗೂ ಪದೇ ಪದೇ ಕೈ ತೊಳೆಯುವ, ಮುಖವಸ್ತ್ರದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿತು.

ಬಂಧನ ಸ್ವಾತಂತ್ರ್ಯದ ಅರ್ಥ : ಪ್ರಾಣಿ, ಪಕ್ಷಿಗಳನ್ನು ಬಂಧನದಲ್ಲಿಟ್ಟು ಮಜಾ ನೋಡುತ್ತಾ,  ಸದಾ ಸ್ವೇಚ್ಛೆಯಿಂದ ಹಾರಾಡುತ್ತಿದ್ದ ಮಾನವರಿಗೆ ಲಾಕ್ ಡೌನ್ ದಿಗ್ಬಂಧನವು ಪ್ರಾಣಿ ಪಕ್ಷಿಗಳ ಬಂಧನದ ಹಿಂಸೆಯ ನೋವುಗಳನ್ನು ತಿಳಿಸಿ, ಸ್ವಾತಂತ್ರ್ಯದ ಅರ್ಥವನ್ನು ಸ್ಪಷ್ಟವಾಗಿ ಅರ್ಥೈಯಿಸಿತು‌.

ಹಾಸಿಗೆಯಿದ್ದಷ್ಟು ಕಾಲು ಚಾಚು :  ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆಯೇತಕೆ ಎಂದು ಯಾವಾಗಲೂ ಕೂಡಿಟ್ಟು, ಇರೋದರಲ್ಲಿ ಜೀವನ ಸಾಗಿಸದೇ, ದುಂದುವೆಚ್ಚ ಮಾಡಿ ಜೀವನ ಸಾಗಿಸುತ್ತಿದ್ದವರಿಗೆ ಹಾಸಿಗೆಯಿದ್ದಷ್ಟು ಕಾಲು ಚಾಚಬೇಕೆಂಬ ಹಿರಿಯರ ಮಾತನ್ನು ನೆನಪಿಸಿತು.

ಆಹಾರದ ಮಿತ ಬಳಕೆ ಮಹತ್ವ : 2020ರಲ್ಲಿ ಆಹಾರವನ್ನು ವ್ಯರ್ಥವಾಗಿ ಚೆಲ್ಲದೇ, ಮಾನವರು ಆಹಾರವನ್ನು ಹಿತಮಿತವಾಗಿ ಬಳಸುವುದನ್ನು, ಹಂಚಿಕೊಂಡು ತಿನ್ನಬೇಕೆಂಬುದನ್ನು ಕಲಿಸಿತು.

ಹಣಕ್ಕಿಂತ ಪ್ರಾಣ ಮುಖ್ಯ : ಸಾವಿರಾರು ಕೋಟಿ ರೂಪಾಯಿಗಳನ್ನು ಸಂಪಾದಿಸಿದರೇನು, ಜೀವ ಹೋಗುವ ಸಮಯದಲ್ಲಿ ಪ್ರಯೋಜನಕ್ಕೆ ಬಾರದ ಹಣಕ್ಕಿಂತ ಪ್ರಾಣವೇ ಮುಖ್ಯವೆಂದು ತಿಳಿ ಹೇಳಿತು.

ಉಳಿತಾಯ ಶಿಕ್ಷಣ : ಇರುವುದರಲ್ಲಿ ಜೀವನ ಸಾಗಿಸುವುದರ ಜೊತೆಗೆ, ಭವಿಷ್ಯದ ದೃಷ್ಟಿಯಿಂದ ದುಡಿದ ಹಣ, ಆಹಾರ ಸಾಮಗ್ರಿಗಳನ್ನು ಕೂಡಿಡಬೇಕೆಂಬುವ ಉಳಿತಾಯ ಶಿಕ್ಷಣವನ್ನು ಕಲಿಸಿತು.

ಸಹಬಾಳ್ವೆ ಜೀವನ : ದೇಶ, ಧರ್ಮ, ಜಾತಿ, ಸಂಸ್ಕೃತಿ, ಭಾಷೆಗಳ ವಿಚಾರದಲ್ಲಿ ಸದಾ ಕಚ್ಚಾಡುತ್ತಿದ್ದ ಜನರಲ್ಲಿ ಸಹಬಾಳ್ವೆಯ ಮನೋಭಾವನೆಯನ್ನು ಮೂಡಿಸಿತು. ಕಷ್ಟಕಾಲದಲ್ಲಿ ನಮ್ಮ ನೆರವಿಗೆ ಬರುವವರು ನಮ್ಮ ನೆರೆಹೊರೆಯವರೆಂಬುದನ್ನು ಸಾರಿ ಸಾರಿ ಹೇಳಿತು.

ಸರಳ ಸಮಾರಂಭಗಳು : ಅಪಾರ ಹಣ ಖರ್ಚು ಮಾಡಿ, ದಾಂ ಧೂಂ ಅಂತ ಮಾಡುತ್ತಿದ್ದ ಗೃಹ ಪ್ರವೇಶ, ಮದುವೆ, ಹುಟ್ಟು ಹಬ್ಬ, ಜಾತ್ರೆ ಮುಂತಾದ ಸಮಾರಂಭಗಳನ್ನು ಸರಳವಾಗಿ ಕೂಡ ಮಾಡಬಹುದೆಂಬುದನ್ನು ಕಲಿಸಿತು.

ಪಾಲಿಗೆ ಬಂದದ್ದು ಪಂಚಾಮೃತ : ತಾವು ಗಳಿಸಿದ ವಿದ್ಯಾರ್ಹತೆ, ಅನುಭವಕ್ಕಿಂತ ಜೀವನ ನಿರ್ವಹಣೆಗೆ ಸಿಗುವ ಕೆಲಸಗಳನ್ನು ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದು ಮಾಡಲೇಬೇಕೆಂದು ಹೇಳಿಕೊಟ್ಟಿತು. ಸಾವಿರ, ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದವರೆಲ್ಲ, ಕೆಲಸವಿಲ್ಲದೆ ಬೀದಿ ಪಾಲಾದಾಗ ಅವರಿಗೆ ಯಾವ ಕೆಲಸವೂ ಕೀಳಲ್ಲವೆಂದು ಬುದ್ಧಿ ಹೇಳಿ, ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಸಿಗುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕೆಂದು ಕಲಿಸಿತು.

ಮನೆಯಡುಗೆ ಮಹತ್ವ : ಬಾಯಿ ರುಚಿಗಾಗಿ, ಕಡಿಮೆ ವೆಚ್ಚದ, ಫಾಸ್ಟ್ ಫುಡ್‌ಗಳನ್ನು ತಿಂದು ದೇಹದ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದವರಿಗೆ ಮನೆಯಡುಗೆಯ ಶುಚಿ ರುಚಿಯ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದೆಂದು ಸಾರಿ ಹೇಳಿತು.

 

ಪಟ್ಟಣದಿಂದ ಹಳ್ಳಿಕಡೆಗೆ : ಜೀವನ ನಿರ್ವಹಣೆಗಾಗಿ ದುಡಿಯಲು ಹಳ್ಳಿ ಬಿಟ್ಟು ಪಟ್ಟಣ ಸೇರಿದ ಲಕ್ಷಾಂತರ ಜನಕ್ಕೆ ಕೊರೊನಾ ವೈರಸ್ ಆರ್ಭಟದಿಂದ ಪಟ್ಟಣದಲ್ಲಿ ಉದ್ಯೋಗವಿಲ್ಲದೆ ಒಂದ್ಹೊತ್ತಿನ ಊಟಕ್ಕೂ ಗತಿಯಿಲ್ಲದಂತಾಗಿ, ಮತ್ತೆ ಹಳ್ಳಿಯ ಜೀವನವೇ ಉತ್ತಮವೆಂದು ತಿಳಿದು ಹಳ್ಳಿಗೆ ಮರಳಿ, ಮಣ್ಣಿನ ಮಕ್ಕಳಾಗುವಂತೆ ಮಾಡಿತು. ಅಲ್ಲದೇ ಕಲುಷಿತ ಗಾಳಿ, ನೀರಿನ ಪಟ್ಟಣಕ್ಕಿಂತ ಪರಿಶುದ್ಧ ಗಾಳಿ, ನೀರಿನ ವಾತಾವರಣದ ಹಳ್ಳಿಯೇ ಉತ್ತಮವೆಂದು ಅರಿವು ಮೂಡಿಸಿತು‌.

ಸಂಬಂಧಗಳ ಬೆಲೆ : ಯಾವಾಗಲೂ ಹಣ, ಆಸ್ತಿ, ಅಂತಸ್ತು ಅಂತಾನೇ ರಕ್ತ ಸಂಬಂಧಗಳ ಮರೆತು ಹೋಗಿದ್ದವರಿಗೆ ಸಂಬಂಧಗಳ ಬೆಲೆಯೇನೆಂಬುದನ್ನು ಅರ್ಥಮಾಡಿಸಿತು. ತಂದೆ ತಾಯಿ, ಬಂಧು ಬಳಗದವರ ಜೊತೆ ಕೂಡಿ ಬಾಳುವುದನ್ನು ಕಲಿಸಿತು.

ಯುದ್ಧೋನ್ಮಾದ ಅಡಗಿಸಿತು: ದೇಶ- ದೇಶಗಳ ನಡುವೆ ರಾಜಕೀಯ, ಆರ್ಥಿಕ ವಿಚಾರಗಳಲ್ಲಿದ್ದ ಯುದ್ಧೋನ್ಮಾದವನ್ನು ಮದ್ದು ಗುಂಡುಗಳಿಲ್ಲದೇ ಸದ್ದು ಅಡಗಿಸಿತು.

ನಿಜವಾದ ದೇವರುಗಳ ದರ್ಶನ :  ಕಣ್ಣಿಗೆ ಕಾಣದ ವೈರಸ್ಸೊಂದು ಗುಡಿ, ಚರ್ಚ್, ಮಸೀದಿ, ಗುರುದ್ವಾರ, ಬಸದಿಗಳಲ್ಲಿ ಪೂಜಿಸಲ್ಪಡುತ್ತಿದ್ದ ದೇವರುಗಳ ಜೊತೆಗೆ ವೈದ್ಯರು, ಶುಶ್ರೂಷಕರು, ಪೌರ ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರು, ಸೈನಿಕರು, ಆರಕ್ಷಕರನ್ನು ನಿಜವಾದ ದೇವರಗಳೆಂದು ಸಾರಿ ಹೇಳಿತು.

ಮನೆಯೇ ಗ್ರಂಥಾಲಯ, ಚಿತ್ರಮಂದಿರ : ಲಾಕ್ ಡೌನ್ ದಿಗ್ಬಂಧನದ ಸಮಯದಲ್ಲಿ ಮನೆಯೊಳಗೆ ಬಂಧಿಯಾಗಿದ್ದ ಜನತೆಗೆ ಓದುವ, ಸೃಜನಾತ್ಮಕ ಆಲೋಚನೆ, ಮನೋರಂಜನೆಯನ್ನು ಕುಟುಂಬದ ಸದಸ್ಯರ ಜೊತೆಯಲ್ಲಿ ಕಂಡುಕೊಳ್ಳುವುದನ್ನು ಕಲಿಸಿತು.

ಹಳೆ ಬೇರು, ಹೊಸ ಚಿಗುರು ಸಮ್ಮಿಲನ : ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗಿ, ಅಜ್ಜ-ಅಜ್ಜಿಯರ ಸಂಪರ್ಕದಿಂದ ದೂರವಾಗಿದ್ದ ಮಕ್ಕಳನ್ನು ಮತ್ತೆ ಒಂದಾಗುವಂತೆ ಮಾಡಿ, ಹಳೆ ಬೇರು ಹೊಸ ಚಿಗುರು ಸಮ್ಮಿಲನವಾಗಿಸಿ, ಕೂಡಿ ಬಾಳುವ ಆನಂದವನ್ನು ಕಲಿಸಿತು. ಇದರೊಡನೆ ಶಿಕ್ಷಣ, ಔದ್ಯೋಗಿಕ ಕ್ಷೇತ್ರದಲ್ಲೂ ಸಹ ಸಾಂಪ್ರದಾಯಿಕ ಪದ್ಧತಿಯ ಜೊತೆಗೆ ನವೀನ ಮಾದರಿಯ ಶಿಕ್ಷಣ, ಔದ್ಯೋಗಿಕ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಿತು‌.

ನಮ್ಮ ನಮ್ಮ ಸಾಮರ್ಥ್ಯವೇನೆಂಬುದನರಿವಾಗಿಸಿದ್ದು : 2020 ಕಲಿಸಿದ ಅತಿಮುಖ್ಯವಾದ ಪಾಠ ಜೀವನದಲ್ಲಿ ಬರುವ ಪ್ರತಿಯೊಂದು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವು ನಮ್ಮೊಳಗಿದೆ ಎಂಬುದನ್ನು ಜಾಗೃತಗೊಳಿಸಿ, ಸಮಸ್ಯೆ, ಸವಾಲುಗಳೆದುರು ಹೋರಾಡುವ ಮನೋಸ್ಥೈರ್ಯವನ್ನು ತುಂಬಿ, ಬದುಕುವ ಕಲೆಯನ್ನು ಕಲಿಸಿತು. ಭಯದ ವಾತಾವರಣದ ಕಗ್ಗತ್ತಲನ್ನು ಆತ್ಮಸ್ಥೈರ್ಯದ ಬೆಳಕು ದೂರ ಮಾಡುವುದೆಂಬುದನ್ನು ತಿಳಿಸಿಕೊಟ್ಟಿತು.

ಒಟ್ಟಿನಲ್ಲಿ 2020ರ ಇಸವಿಯು ಕಲಿಸಿದ ಪ್ರತಿಯೊಂದು ಪಾಠಗಳು ಮನುಕುಲಕ್ಕೆ ದಾರಿದೀಪವಾಗಿ, ಮುಂದಿನ ದಿನಗಳಲ್ಲಿ ಹೇಗೆ ಬಾಳಬೇಕೆಂಬುದನ್ನು ಅರ್ಥಮಾಡಿಸಿದೆ ಎನ್ನಬಹುದು.


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
[email protected]

error: Content is protected !!