2019ರ ಡಿಸೆಂಬರ್ ತಿಂಗಳಲ್ಲಿಯೇ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಮೊದಲ ಕೊರೊನಾ ವೈರಸ್ ರೋಗಕ್ಕೆ ಈಗ ಒಂದು ವರ್ಷ. ವರ್ಷವಿಡೀ ಆಟವಾಡಿದ `20-20′ ಇಸವಿಗೆ ವಿದಾಯ ಹೇಳುವ ಕಾಲವೂ ಆಗಿದೆ.
ವೈದ್ಯಕೀಯ ಕ್ಷೇತ್ರಕ್ಕೂ ಸವಾಲೆನಿಸಿದ ಕೋವಿಡ್-19, ಜನರನ್ನು ಎಂದೂ ಕಂಡರಿಯದ ಭೀತಿಗೆ ಒಳಪಡಿಸಿ ಪ್ಲೇಗು, ಕಾಲರಾ, ದಡಾರ, ಮಲೇರಿಯಾ, ಚಿಕನ್ ಗುನ್ಯಾ, ಹಕ್ಕಿಜ್ವರ, ಇತ್ಯಾದಿ ಮಾರಕ ರೋಗಗಳ ಸಾಲಿಗೆ ಹೊಸ ಸೇರ್ಪಡೆ ಆಗಿರುವ ಕೊರೊನಾ ಸೋಂಕು ಹೊಸದೇನೂ ಅಲ್ಲ, ಎರಡು ದಶಕಗಳ ಹಿಂದೆ ಎಲ್ಲೆಡೆ ಹಬ್ಬಿ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ `ಸಾರ್ಸ್’ನ ಹೊಸ ರೂಪವೆಂದು ಹೇಳಲಾಗುತ್ತದೆ.
ಈ ಮಧ್ಯೆ ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ಹೊಸ ರೂಪಾಂತರ ಸೋಂಕು ಮತ್ತೆ ವಿಶ್ವದ ಜನತೆ ಮತ್ತು ಅಲ್ಲಿನ ಆಡಳಿತ ಯಂತ್ರಗಳ ನಿದ್ದೆಗೆಡಿಸಿದೆ. ಈ ಎರಡರ ಲಕ್ಷಣ ಒಂದೇ ಆಗಿದ್ದರೂ `ಬ್ರಿಟನ್ ವೈರಸ್’ ವೇಗವಾಗಿ ಹರಡುತ್ತದೆ ಆದರೆ ತೀವ್ರತೆ ಕಡಿಮೆ ಇರುತ್ತದೆ ಎನ್ನುತ್ತಾರೆ ತಜ್ಞರು.
ಚೀನಾದಲ್ಲಿ 2019 ರಲ್ಲಿಯೇ ವೈರಸ್ ಪತ್ತೆಯಾಗಿ ಸಾವು-ನೋವುಗಳಿಗೆ ಕಾರಣವಾಗಿದ್ದರೂ ಸಹ, ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ವೈರಸ್ ಬಗ್ಗೆ `ಕೋವಿಡ್ -19′ ಹೆಸರಿಸಿ, ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು 2020ರ ಮಾರ್ಚ್ 11ರಂದು. ವಿಶ್ವಸಂಸ್ಥೆಯ ಈ ನಡೆಗೆ ಅನೇಕ ದೇಶಗಳು ಅಸಮಾಧಾನ ವ್ಯಕ್ತಪಡಿಸಿದವು.
ಅಮೆರಿಕ ಕೆಂಡಾಮಂಡಲವಾಗಿ ವಿಶ್ವಸಂಸ್ಥೆಗೆ ಅನುದಾನ ನೀಡಿಕೆಯನ್ನೇ ಸ್ಥಗಿತಗೊಳಿಸಿತು. ವಿಶ್ವಸಂಸ್ಥೆ ಚೀನಾದ ಕೈಗೊಂಬೆ ಆಗಿದೆ ಎಂದು ಅಮೆರಿಕ ಅಧ್ಯಕ್ಷರು ನೇರವಾಗಿಯೇ ಟೀಕಿಸಿದರು.
ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹೀಗೆ ಎಲ್ಲಾ ರಂಗಗಳೂ ನೆಲಕಚ್ಚಿದ ಕಾರಣ ಹಿನ್ನಡೆ ಅನುಭವಿಸಿವೆ.
ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇರುವುದು. ಈ ಸಂಬಂಧ ಸರ್ಕಾರಗಳು ಪ್ರಜಾಹಿತ ದೃಷ್ಟಿಯಿಂದ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳಿಂದ ನೋವುಗಳು, ಕಷ್ಟ-ನಷ್ಟಗಳನ್ನು ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.
ಭಾರತದಲ್ಲಿ 2020ರ ಜನವರಿ 30ರಂದು ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ನಂತರದ 10 ತಿಂಗಳಲ್ಲಿ ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಸೋಂಕು ಪೀಡಿತ ರಾಷ್ಟ್ರವೆನಿಸಿತು. 1.5 ಲಕ್ಷ ಸಾವು ಸಂಭವಿಸಿದ್ದು, 28 ರಾಜ್ಯಗಳು, ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಕೋಟಿಗೂ ಮೀರಿ ಪ್ರಕರಣಗಳು ದಾಖಲಾದವು.
ಪ್ರಕರಣಗಳ ತೀವ್ರತೆ ಹೆಚ್ಚಾದಾಗ ಮಾರ್ಚ್ 22 ರಂದು ಒಂದು ದಿನ ಸ್ವಯಂ ಕರ್ಫ್ಯೂವಿಗೆ ಒಳಗಾಗುವಂತೆ ದೇಶವಾಸಿಗಳಿಗೆ ಪ್ರಧಾನಿ ಮನವಿ ಮಾಡಿದರು. ಅದು ಯಶಸ್ವಿ ಕೂಡ ಆಯಿತು. ನಂತರ ಮನೆ ಮುಂದೆ ದೀಪ ಬೆಳಗಿಸುವ ಪ್ರಧಾನಿಯವರ ಇನ್ನೊಂದು ಮನವಿಗೂ ಸಹ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಆದರೆ ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಲೇ ಇತ್ತು. ಮಾರ್ಚ್ 24 ರಿಂದ 21 ದಿನಗಳ ಲಾಕ್‌ಡೌನ್ ಘೋಷಿಸಲಾಯಿತು. ಏಪ್ರಿಲ್ 14 ರಿಂದ ಮೇ 3ರವರೆಗೆ ಮತ್ತೆ ಅದನ್ನು ವಿಸ್ತರಿಸಲಾಯಿತು ಮತ್ತೆ ಎರಡು ವಾರ ವಿಸ್ತರಿಸಿ ಮೇ 17ರಂದು ಲಾಕ್‌ಡೌನ್ ಸಡಿಲಿಸಲಾಯಿತು. ಸಂಚಾರಕ್ಕೆ ಇದ್ದ ನಿರ್ಬಂಧವನ್ನು ರದ್ದು ಪಡಿಸಲು ಮುಂದಾಗಿದ್ದೇ ತಡ ರಾಜ್ಯಗಳಿಂದ ರಾಜ್ಯಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿ ದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಯಿತು.
ಜೂನ್ ಒಂದರಿಂದ ಹಂತ ಹಂತವಾಗಿ ಆರ್ಥಿಕತೆ ಚಾಲನೆಗೆ ಒತ್ತು ನೀಡುವತ್ತ ಮುಂದಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ನಿರುದ್ಯೋಗಿಗಳು ಮತ್ತು ದೇಶದಲ್ಲಿ ತೊಂದರೆಗೆ ಒಳಗಾದ ನಾಗರಿಕರಿಗೆ ರಿಯಾಯಿತಿ, ಆರ್ಥಿಕ ನೆರವು ಇತ್ಯಾದಿಗಳನ್ನು ಘೋಷಿಸಲು ಮುಂದಾದವು.
ಈ ಲಾಕ್‌ಡೌನ್ ಅವಧಿ ದೇಶವಾಸಿಗಳನ್ನೇ ಒಂದು ರೀತಿ ಕಷ್ಟಕ್ಕೀಡು ಮಾಡಿತು. ಪ್ರವಾಸ ಹೊರಟಿದ್ದವರು, ಸಂಬಂಧಿಕರ ಮನೆಗೆ ತೆರಳಿದ್ದವರು, ಪುಟ್ಟ ಪುಟ್ಟ ಮಕ್ಕಳನ್ನು ಊರಲ್ಲಿ ಬಿಟ್ಟು ತವರಿಗೆ ಬಂದ ತಾಯಂದಿರು ಪರಿತಪಿಸುವಂತಾಯಿತು. ಪಟ್ಟಣ ಪ್ರದೇಶಗಳಿಗೆ ತೆರಳಿ ದಿನಗೂಲಿ ಮಾಡುವ ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡುವಂತಾಯಿತು. ಒಬ್ಬೊಬ್ಬರದೂ ಒಂದು ಕಥೆ-ವ್ಯಥೆ, ಅಚ್ಚರಿ, ಅನುಮಾನ, ಭಯ, ನಿರಾಸೆ ಗಾಢವಾಗಿ ಕಾಡಿದ ದಿನಗಳವು.
ಸದಾ ಗಿಜಿಗಿಡುತ್ತಿದ್ದ ದಾವಣಗೆರೆ ಗಾಂಧಿ ಸರ್ಕಲ್ ರಸ್ತೆಗಳು ಮೇ 24 ಭಾನುವಾರ ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿರುವುದು…
2020-ನೋವೆಲ್ ಕೊರೊನಾ ಮಹಾಮಾರಿ ಸಾಂಕ್ರಾಮಿಕದಿಂದ ಜಗತ್ತು ತಲ್ಲಣಿಸಿದ ವರ್ಷ…
ಅಮೆರಿಕ, ಬ್ರಿಟನ್, ರಷ್ಯಾ, ಇಟಲಿ, ಇರಾನ್ ಅಷ್ಟೇ ಏಕೆ ನಮ್ಮ ಭಾರತವೂ ಸಹ ಸೇರಿದಂತೆ
ನೂರಕ್ಕೂ ಹೆಚ್ಚು ರಾಷ್ಟ್ರಗಳು ಇದರ ಬಾಧೆಗೆ ಸಿಲುಕಿ ನರಳುತ್ತಿವೆ.
ಬಲಿಯಾದವರು:
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಕೇಂದ್ರ ಸಚಿವ ಸುರೇಶ್ ಅಂಗಡಿ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ, ಖ್ಯಾತ ಹಿನ್ನೆಲೆಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ, ಹೆಸರಾಂತ ಪತ್ರಕರ್ತ ಗುಲ್ಶನ್ ನಿಶಿಕಾಂತ್ ಕಾಮತ್ ಮತ್ತಿತರೆ ಅನೇಕ ಗಣ್ಯರು ಜೀವ ಕಳೆದುಕೊಳ್ಳಬೇಕಾಯಿತು.
ಕರ್ನಾಟಕದಲ್ಲಿ :
ಮಾರ್ಚ್ 1 ರಂದು ಅಮೆರಿಕದಿಂದ ಕರ್ನಾಟಕಕ್ಕೆ ಹಿಂತಿರುಗಿದ 40 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಲ್ಲಿ ಪ್ರಪ್ರಥಮವಾಗಿ ಕೋವಿಡ್ ಪ್ರಕರಣ ಪತ್ತೆಯಾಯಿತು. ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಬಿ.ಸಿ. ಪಾಟೀಲ್ ಡಾ. ಸುಧಾಕರ್, ಆನಂದ ಸಿಂಗ್, ಸಿ.ಟಿ. ರವಿ ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ವಿವಿಧ ಕ್ಷೇತ್ರಗಳ ಗಣ್ಯರು ಸಹ ಸೋಂಕಿತರಾಗಿ ಗುಣಮುಖರಾಗಿದ್ದಾರೆ. ತಮಿಳುನಾಡು ರಾಜ್ಯಪಾಲ ಭನ್ವರಿ ಲಾಲ್ ಪುರೋಹಿತ್, ಕೇಂದ್ರ ಸಚಿವೆ ಕಮಲ್ ರಾಣಿ ವರುಣ್, ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಸೇರಿದಂತೆ ದೇಶದ ಅನೇಕ ರಾಜ್ಯಗಳ ರಾಜಕಾರಣಿಗಳು ಸೋಂಕಿಗೊಳಗಾಗಿ ಚೇತರಿಸಿಕೊಂಡಿದ್ದಾರೆ.
ದಾವಣಗೆರೆಯಲ್ಲಿ
ಕಲೆ ಮಾಸುವ ಮುನ್ನವೇ…
ಮಾರ್ಚ್ ತಿಂಗಳಲ್ಲಿ ಜರುಗಿದ ನಗರದೇವತೆ ದುಗ್ಗಮ್ಮನ ಜಾತ್ರೆಯ ಚರುಗದ ಕಲೆ ಮಾಸುವ ಮುನ್ನವೇ, ಜಾತ್ರೆಯ ಸಡಗರವನ್ನು ಭಕ್ತರು ಸಂಭ್ರಮಿಸುವ ಹೊತ್ತಿನಲ್ಲೇ ಬಂದ ಕೊರೊನಾ ಮಾರಿಯನ್ನು ತಹಬಂದಿಗೆ ತರಲು ಜಿಲ್ಲಾಡಳಿತದ ಕಠಿಣ ಕ್ರಮಗಳಿಂದಾಗಿ ಎಲ್ಲೆಡೆ ಸೀಲ್ ಡೌನ್, ಕಂಟೈನ್‌ಮೆಂಟ್ ಏರಿಯಾ, ಬಫರ್ ಜೋನ್ ಹೆಚ್ಚಾಗತೊಡಗಿದವು.
ಇಲ್ಲಿಯೂ ವಿದೇಶದಿಂದ ಬಂದವರಲ್ಲಿಯೇ ಸೋಂಕು ಪತ್ತೆಯಾಗಿತ್ತು. ಹಸಿರು ವಲಯದಲ್ಲಿದ್ದ ದಾವಣಗೆರೆಯಲ್ಲಿ ಒಮ್ಮೆಲೇ 22 ಪ್ರಕರಣಗಳು ಪತ್ತೆಯಾದಾಗ ಇಡೀ ನಗರವೇ ಬೆಚ್ಚಿಬಿದ್ದಿತ್ತು. ನಂತರದ ದಿನಗಳಲ್ಲಿ ದಿನಕ್ಕೆ ನೂರಾರು ಪ್ರಕರಣಗಳು ಪತ್ತೆಯಾಗತೊಡಗಿದವು. ಒಮ್ಮೆ 400ರ ಗಡಿಯನ್ನು ದಾಟಿದಾಗ ದಾವಣಗೆರೆ ಜನತೆ ನಿಜಕ್ಕೂ ಭಯಭೀತರಾಗಿದ್ದರು.
ಇದೀಗ ದಾವಣಗೆರೆ ಚೇತರಿಕೆಯತ್ತ ಸಾಗಿದ್ದು, ಜಿಲ್ಲಾಡಳಿತದ ಕಠಿಣ ಕಾರ್ಯನಿರ್ವಹಣೆ ಫಲ ನೀಡಿದೆ.
ಲಸಿಕೆ :
ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳು ಕೊರೊನಾ ಲಸಿಕೆಯನ್ನು ಕಂಡುಹಿಡಿದಿದ್ದು, ಅದನ್ನು ನೀಡುವ ಕೆಲಸಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ ಆಂಧ್ರಪ್ರದೇಶ, ಗುಜರಾತ್, ಪಂಜಾಬ್, ಅಸ್ಸಾಂ ರಾಜ್ಯಗಳಲ್ಲಿ ಲಸಿಕೆ ವಿತರಣೆಗೆ ಅಣಕು ಪ್ರಯೋಗಗಳು ನಡೆದಿವೆ. 2021ರ ಜನವರಿಯಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ.
ಉತ್ತಂಗಿ ಕೊಟ್ರೇಶ್
[email protected]