ಹೊನ್ನಾಳಿ: ಕೃಷಿ ಇಲಾಖೆಯ ಮಾಹಿತಿ ಪಡೆದು ಚಿಯಾ ಸೀಡ್ಸ್ ಎಂಬ ಹೊಸ ಬೆಳೆಯನ್ನು ಬೆಳೆಯುವ ಶ್ರಮಜೀವಿಯ ಯಾವುದೇ ರೈತ ಆರ್ಥಿಕ ಚೇತರಿಕೆಯೊಂದಿಗೆ ತನ್ನ ಜೀವನ ಸುಧಾರಣೆ ಕಾಣಬಹುದೆಂಬುದಕ್ಕೆ ಸಾಕ್ಷಿಯಾಗಿ ಹೊನ್ನಾಳಿ ತಾಲ್ಲೂಕು ಹತ್ತೂರು ಗ್ರಾಮದ ರೈತ ದಂಪತಿಗಳು ಸಾಕ್ಷಿಯೊಂದಿಗೆ ಇತರರಿಗೆ ಪ್ರೇರಣೆಯಾಗಿದ್ದಾರೆ.
ಹೊನ್ನಾಳಿ ತಾಲ್ಲೂಕು ಹತ್ತೂರು ಗ್ರಾಮದ ಪುಷ್ಪ ಸೋಮಚಂದ್ರಪ್ಪ ಎಂಬ ರೈತನೇ ಈ ಬೆಳೆಯನ್ನು ಹೊನ್ನಾಳಿ ತಾಲ್ಲೂಕಿಗೆ ಪ್ರಥಮ ಬಾರಿಗೆ ಬೆಳೆದು ಪರಿಚಯಿಸಿದವರಾಗಿರುವರು.ಕೃಷಿ ಇಲಾಖೆಯ ರೈತ ಅನುವುಗಾರ ದೊಡ್ಡೇರಹಳ್ಳಿ ನಾಗರಾಜ್ ಕಡೇಮನಿ ಎಂಬುವವರ ಮಾರ್ಗದರ್ಶನ ಸಲಹೆಯೊಂದಿಗೆ ಚಿಯಾ ಸೀಡ್ಸ್ ಬೆಳೆಯನ್ನು 2024ರ ಡಿಸೆಂಬರ್ 15ರಂದು ಬೆಳೆದು ಇದೇ ಮಾರ್ಚ್ 15 ರಂದು 90 ದಿನಗಳಲ್ಲಿ ಬೆಳೆದಿದ್ದ ಬೆಳೆಯನ್ನು ಕಟಾವು ಮಾಡಿ ತಮ್ಮ ಹರ್ಷ ವ್ಯಕ್ತಪಡಿಸಿದರು.
ಈ ರೈತ ದಂಪತಿ ಬೆಂಗಳೂರಿನಲ್ಲಿ ಕೆಲವು ವರ್ಷಗಳಿದ್ದು, ಅಲ್ಲಿನ ಟ್ರಾಫಿಕ್ ಜೀವನದಿಂದ ಬೇಸತ್ತು ಇತ್ತೀಚಿಗಷ್ಟೇ ತಮ್ಮ ಗ್ರಾಮಕ್ಕೆ ಬಂದು ತಮ್ಮ ಜಮೀನಿನಲ್ಲಿ ಮನೆ ಬಳಕೆಗೆ ಬೆಳೆಯಬಹುದಾದ ಅನೇಕ ರೀತಿಯ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಶುಂಠಿ, ತರಕಾರಿ ಹಲವಾರು ಸೊಪ್ಪುಗಳು ಬೆಳೆದಿರುವರು.
ಚಿಯಾ ಬೆಳೆಯು ಕೈಗೆ ಬಂದಿದ್ದು ತಮ್ಮ ಹರ್ಷ ಇಮ್ಮಡಿಗೊಳಿಸಿದ್ದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಸ್ವಂತ ಸೋಲಾರ್ ವಿದ್ಯುತ್ ಸಹಕಾರದಿಂದ ಎರಡು ವರ್ಷದ ಅಡಿಕೆ ಸಾಲಿನ ಮಧ್ಯೆ 38 ಗುಂಟೆಯ ಜಮೀನಿನಲ್ಲಿ ನಾಟಿ ಹಾಗೂ ಸಾಲಿನಂತೆ ಬೆಳೆಯದೆ ಕೈಗಳಿಂದ ಉಗ್ಗಿ ಬೆಳೆದ ಕಾರಣ 5 ಕ್ವಿಂಟಲ್ ಬರುವ ಬೆಳೆ ನಾಲ್ಕು ಕ್ವಿಂಟಲ್ ಬರಲು ಕಾರಣ ಎಂದು ಕೃಷಿ ಇಲಾಖೆಯಿಂದ ಅಭಿಪ್ರಾಯ ವ್ಯಕ್ತವಾಗಿದ್ದು. ಚಿಯಾ ಬೆಳೆಯ ಮಧ್ಯದಲ್ಲಿ ಬೆಳೆದಿರುವ ಇತರೆ ಯಾವುದೇ ಬೆಳೆಗೂ ಹಂದಿಗಳಿಂದ ಕಾಟವಿರದು.
ಹೊನ್ನಾಳಿಗೂ ಬಂದ ಮೆಕ್ಸಿಕೋ ದೇಶದ ಸಿರಿಧಾನ್ಯ ಬೆಳೆ. ಅಲ್ಪವಧಿ ಮೂರು ತಿಂಗಳ ಬೆಳೆಯು ಯಾವುದೇ ಕಾಲಘಟ್ಟದಲ್ಲಿ ಬೆಳೆಯಬಹುದಾಗಿದೆ. ಕಡಿಮೆ ಖರ್ಚಿನೊಂದಿಗೆ ಅಧಿಕ ಲಾಭದ ಬೆಳೆಯಾಗಿದ್ದು ಕಾಡಂಚಿನಲ್ಲಿ ಬೆಳೆಯುವ ಬೆಳೆಯಾಗಿದೆ. ಮೈಸೂರು, ಚಾಮರಾಜನಗರ ಬಳ್ಳಾರಿ ಸೇರಿದಂತೆ ಐದಾರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬೆಳೆ ದಾವಣಗೆರೆ ಜಿಲ್ಲೆಗೂ ವ್ಯಾಪಿಸಿದಂತಾಗಿದೆ.
ಚಿಯಾ ಬೆಳೆಯಲು ಎರಡುವರೇ ಕೆಜಿ ಬೀಜ, ಸ್ವಲ್ಪ ರಾಸಾಯನಿಕ ಗೊಬ್ಬರ, ಲಘು ಪೋಷಕಾಂಶ ಸಿಂಪರಣೆ ಕಟಾವಿಗೆ, ನಿರ್ವಹಣೆಗೆ ಎಲ್ಲಾ ಸೇರಿ ಒಟ್ಟು 7, 000 ಖರ್ಚು ಮಾಡಿ 4 ಕ್ವಿಂಟಾಲ್ ಬೆಳೆ ಬಂದಿದ್ದು, ಕ್ವಿಂಟಾಲ್‌ಗೆ 40,000 ರೂ.ಗಳಿಸಬಹುದಾಗಿದೆ.
ಚೀಯಾ ಸೇವನೆಯ ಉಪಯೋಗ: ಈ ಬೆಳೆಯ ಸೇವನೆಯಿಂದ ಮನುಷ್ಯರಿಗಾಗುವ ಪ್ರಯೋಜನ – ಜೀರ್ಣಕ್ರಿಯೆ ಹೆಚ್ಚಿಸುವುದು, ಹೃದಯ ಸಂಬಂಧಿ ಕಾಯಿಲೆಗೆ ಪರಿಹಾರ, ಕೊಲೆಸ್ಟ್ರಾಲ್ ಕರಗಿಸುವುದು, ನಯವಾದ ಕೂದಲು ಬೆಳೆಯಲು, ಮಧುಮೇಹ ಸುಧಾರಣೆ, ಚರ್ಮದಲ್ಲಿ ಕಾಂತಿ ಸೇರಿದಂತೆ ಆರೋಗ್ಯದ ಅನೇಕ ಸುಧಾರಣೆಗಳಿಗೆ ಉಪಯುಕ್ತವಾಗಿದೆ. ವಿಶೇಷವಾಗಿ ಬಿಪಿ, ಶುಗರ್ ಇರುವವರು ರಾತ್ರಿ ಮಲಗುವಾಗ ಒಂದು ಗ್ಲಾಸಿಗೆ ಒಂದು ಚಮಚದಷ್ಟು ಬೀಜವನ್ನು ತಣ್ಣೀರಿನಲ್ಲಿ ಹಾಕಿ ಬೆಳಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿದರೆ ಬಿಪಿ ಮತ್ತು ಶುಗರ್‌ನಲ್ಲಿ ಸುಧಾರಣೆ ತರಲಿದೆ.
ಚಿಯಾ ಬೀಜಕ್ಕೆ ಇನ್ನೊಂದು ಹೆಸರು `ಕಾಮಕಸ್ತೂರಿ’ ಬೀಜ ಎಂದು ಕರೆಯುತ್ತಾರೆ. ಎಲ್ಲಾ ವಯಸ್ಸಿನವರು ಇದನ್ನು ಸೇವಿಸಬಹುದು. ಜ್ಯೂಸ್ ನಂತಹ ಸಿಹಿ ಪದಾರ್ಥಗಳಲ್ಲಿಯೂ ಬಳಕೆಮಾಡಬಹುದಾಗಿದೆ ಎಂದು ಕೃಷಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿ, ಚಿಯಾ ಸೀಡ್ಸ್ ಆರೋಗ್ಯಕರವಾದ ಸೂಪರ್ ಫುಡ್ ಆಗಿದ್ದು, ಪೋಟಾಷಿಯಂ, ಮ್ಯಗ್ನಿಷಿಯಂ, ಫೈಬರ್ ಅಂಶ ಹೊಂದಿದೆ ಎಂದು ತಿಳಿಸಿದರು. ಕೃಷಿ ಇಲಾಖೆ ಅಧಿಕಾರಿ ವಿ.ಎಸ್ ವಿಶ್ವ ನಾಥ್, ಕೃಷಿ ಅಧಿಕಾರಿ ಸಚಿನ್, ಐ.ಟಿ.ಎ.ಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಹೆಚ್.ಎಂ ಸಣ್ಣ ಗೌಡ್ರು, ಕೃಷಿ ವಿಸ್ತರಣಾಧಿಕಾರಿ ರಘುನಾಥ್ ಇನ್ನಿತರರು ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿ ಈ ಬೆಳಗೆ ರೈತರು ಇನ್ನೂ ಹೆಚ್ಚು ಆಸಕ್ತಿ ತೋರಬೇಕಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡಲು ಕೃಷಿ ಇಲಾಕೆಯು ಸಿದ್ಧವಿದೆ ಎಂಬುದಾಗಿ ಮಾಹಿತಿ ಹಂಚಿ ಕೊಂಡಿರುವರು.
ಮೃತ್ಯುಂಜಯ ಪಾಟೀಲ್
ಹೊನ್ನಾಳಿ.