ವಿಧಿಯ ಆಟದಲ್ಲಿ ಗೆದ್ದವರು, ಸೋತವರು…

ವಿಧಿಯ ಆಟದಲ್ಲಿ ಗೆದ್ದವರು, ಸೋತವರು…

ಜನವರಿ 15, 2021ರ ಬೆಳಗ್ಗೆ, ದಾವಣಗೆರೆಯ ಹತ್ತಾರು ಮನೆಗಳಲ್ಲಿ ಸಿಡಿಲೆರಗಿದಂತೆ ಸುದ್ದಿಗಳು ಬಂದವು. ಗೋವಾಗೆಂದು ಪ್ರವಾಸ ಕೈಗೊಂಡಿದ್ದ ಹೆಣ್ಣು ಮಕ್ಕಳು ಹುಬ್ಬಳ್ಳಿ – ಧಾರವಾಡ ಬೈಪಾಸ್ ರಸ್ತೆಯಲ್ಲಿ ಬೆಳಗ್ಗೆ ಸುಮಾರು 6.45ಕ್ಕೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತಪಟ್ಟ 12 ಜನರಲ್ಲಿ, 8 ಜನ ತಾಯಂದಿರು – ಮಾನಸಿ, ಮಂಜುಳಾ ನಟೇಶ್, ಪರಂಜ್ಯೋತಿ ಶಶಿಧರ್, ಪ್ರೀತಿ ರವಿಕುಮಾರ್, ರಾಜೇಶ್ವರಿ ಶಿವಕುಮಾರ್, ವರ್ಷಿತಾ ವೀರೇಶ್ (ಶಕ್ಕು), ಡಾ|| ವೀಣಾ  ಪ್ರಕಾಶ್, ವೇದ ಮಂಜುನಾಥ್, ಇಬ್ಬರು ಮಕ್ಕಳಾದ – ಕ್ಷೀರ (ಚಿನ್ನಿ), ಯಶ್ಮಿತಾ, ಡ್ರೈವರ್ – ಮಲ್ಲಿಕಾರ್ಜುನ, ಕ್ಲೀನರ್ – ರಾಜ. ವೇದ ಅವರು ಕೆಲ ದಿನಗಳ ಕಾಲ ವಿಧಿಯೊಂದಿಗೆ ಹೋರಾಡಿ ಸೋಲನ್ನೊಪ್ಪಿಕೊಂಡರೂ, ಅವರ ಅಂಗಾಂಗಗಳನ್ನು ದಾನ ಮಾಡಿದ್ದನ್ನು ನಾವು ಮರೆಯುವಂತಿಲ್ಲ.

ಇವರೆಲ್ಲರೂ ದಾವಣಗೆರೆಯ ಮಡಿಲಲ್ಲಿ ಬೆಳೆದು, ಸೇಂಟ್ ಫಾಲ್ಸ್‌ ಕಾನ್ವೆಂಟ್‌ನಲ್ಲಿ ಓದಿದವರು. ಶಾಲೆಯಲ್ಲಿ ಚಿಗುರಿದ ಇವರ ಸ್ನೇಹವು ಹೆಮ್ಮರವಾಗಿ ಬೆಳೆದಿತ್ತು. ಎಲ್ಲರೂ ತಮ್ಮ ವೈಯಕ್ತಿಕ ವೃತ್ತಿಪರ ಜೀವನದಲ್ಲಿ ನಿರತರಾಗಿದ್ದರೂ ಆಗಾಗ ಭೇಟಿಯಾಗುತ್ತಿದ್ದರು. ಅಂತೆಯೇ ಅವರು ಗೋವಾ ಪ್ರವಾಸ ಕೈಗೊಂಡಿದ್ದರು. ಮಕರ ಸಂಕ್ರಾಂತಿ ಹಬ್ಬದ ಮರುದಿನ ಪ್ರವಾಸಕ್ಕೆಂದು ಹೊರಟವರ ಹಣೇಬರಹವನ್ನು ವಿಧಿಯು ಬೇರೆಯೇ ರೀತಿಯಲ್ಲಿ ಬರೆದಂತಿತ್ತು.

ಈ ದುರಂತದ ಸುದ್ದಿಯನ್ನು ಕೇಳಿ ಕುಟುಂಬ ಸದಸ್ಯರು ರೋಧಿಸಿದರೆ, ದಾವಣಗೆರೆಯ ಜನರಿಗೆ ಸಿಡಿಲು ಬಡಿದಂತಾಗಿತ್ತು. 32 ಕಿ. ಮೀ.ನಷ್ಟಿರುವ ಹುಬ್ಬಳ್ಳಿ – ಧಾರವಾಡ ಏಕ – ಪಥ, ಇಕ್ಕಟ್ಟಾದ ಬೈಪಾಸ್ ರಸ್ತೆಯು ಈ ಅಪಘಾತಕ್ಕೆ ಒಂದು ಕಾರಣ. ಈ ದುರಂತಕ್ಕೆ ಪ್ರಧಾನಿ ಮೋದಿಯವರೂ ಸಹ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದರು. ಈಗ ಬೈಪಾಸ್ ರಸ್ತೆಯ ಅಗಲೀಕರಣ ಭರದಲ್ಲಿ ಸಾಗಿದೆ.

ನನ್ನ ಅಕ್ಕನಾದ ಡಾ|| ವೀಣಾ ಪ್ರಕಾಶ್ ಮಡಿದವರಲ್ಲಿ ಒಬ್ಬಳು. ಅವಳ ಅಗಲಿಕೆಯು ತುಂಬಲಾರದ ನಷ್ಟವಾಗಿದ್ದರೂ, ಬಂದದ್ದನ್ನು ಧೈರ್ಯವಾಗಿ ಎದುರಿಸಬೇಕೆಂದು ಜೀವನದಲ್ಲಿ ಮುನ್ನಡೆಯುತ್ತಿದ್ದೇವೆ. ಬದುಕುಳಿದ ಆರು ಜನ ಸ್ನೇಹಿತರನ್ನು ಕಂಡಾಗ “ಇವರು ಅದೃಷ್ಟವಂತರು” ಎಂದು ಮನ ತುಂಬಿ ಬರುತ್ತದೆ. ಇವರನ್ನು ಭೇಟಿಯಾಗಿ ಅವರೊಂದಿಗೆ ನಡೆಸಿದ ಮಾತು-ಕತೆಯನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ.

* ಈ ನಾಲ್ಕು ವರ್ಷಗಳಲ್ಲಿ ಜೀವನ ಹೇಗೆ ಸಾಗಿದೆ ನಿಮ್ಮ ಗೆಳತಿಯರಿಲ್ಲದೆ ?

ಆಶಾ ಜಗದೀಶ್ – ನಮ್ಮ ಸ್ನೇಹಿತರ ಅಗಲಿಕೆ ಬಹಳವಾಗಿ ಕಾಡುತ್ತದೆ. ಜೀವನದ ಬಗ್ಗೆ ಅವರ ಆಸೆಗಳು, ನಿರೀಕ್ಷೆಗಳು, ನಮ್ಮಲ್ಲಿ ಇನ್ನೂ ಜೀವಂತವಾಗಿವೆ.

ಚಿಟ್ಟಿ (ಪೊರಾಳ್ ಪೂರ್ಣಿಮಾ ಸುರೇಶಬಾಬು) – ನನ್ನ ಒಬ್ಬಳೇ ಮಗಳು ಚಿನ್ನಿಯನ್ನು (ಕ್ಷೀರ), ನನ್ನ ಸ್ನೇಹಿತರನ್ನು ಕಳೆದುಕೊಂಡ ನನಗೆ ಬದುಕೇ ಶೂನ್ಯ ಎನಿಸುತ್ತದೆ. ಬದುಕಿನಲ್ಲಿ ಇನ್ನೇನೂ ಉಳಿದಿಲ್ಲ.

ನಿರ್ಮಲ ಚಂದ್ರಶೇಖರ್ – ನನ್ನ ಉಳಿದ ಸ್ನೇಹಿತರೊಂದಿಗೆ ಬಾಂಧವ್ಯ ಇನ್ನೂ ಗಟ್ಟಿಯಾಗಿದೆ. ನಾವುಗಳು ಸ್ನೇಹಿತರು ಸೇರಿಕೊಂಡಾಗ ಕಳೆದುಹೋದ ಸ್ನೇಹಿತರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇವೆ.

ರಜನಿ – ಸ್ನೇಹಿತರೊಂದಿಗೆ ಕಳೆದ ಆ ಮಧುರ ಕ್ಷಣಗಳೇ ನಮಗೆ ಇಂದಿಗೂ ಸ್ಫೂರ್ತಿದಾಯಕ.

ಉಷಾ ರಮೇಶ್ – ಈ ಘಟನೆಯ ನಂತರದ ಶಸ್ತ್ರಚಿಕಿತ್ಸೆ ನನ್ನಲ್ಲಿ ಒಂದು ವಿಧವಾದ ನೋವನ್ನು ಉಳಿಸಿಬಿಟ್ಟಿದೆ. ಹಬ್ಬದ ದಿನಗಳಲ್ಲಿ ನನ್ನ ಸ್ನೇಹಿತರ ಮಕ್ಕಳನ್ನು ನೆನೆಸಿಕೊಂಡರೆ ತುಂಬಾ ದುಃಖವಾಗುತ್ತದೆ.

* ನಿಮ್ಮ ಗೆಳೆತಿಯರಿಗಿಂತ ನೀವು ಅದೃಷ್ಟವಂತರು. ನಿಮ್ಮ ಅನಿಸಿಕೆ ?

ಆಶಾ – “ಅದೃಷ್ಟವಂತರು” ಹೌದು. ಆದರೇ ಅಷ್ಟೊಂದು ಸ್ನೇಹಿತರನ್ನು ಕಳೆದುಕೊಂಡ ನಾವು ದುರಾದೃಷ್ಟವಂತರು. ಶ್ರೇಷ್ಠ ಹೂವುಗಳು ದೇವರಿಗೆ ಬಲು ಪ್ರಿಯ ಅಂತೆಯೇ ನನ್ನ ಸ್ನೇಹಿತರು ಆ ಸಾಲಿಗೆ ಸೇರಿದ್ದಾರೆ. ನನಗಿರುವ ಈ ಅದೃಷ್ಟ ನನ್ನ ಪ್ರೀತಿಯ ಸ್ನೇಹಿತರಿಗೂ ಇರಬೇಕಿತ್ತು.

ಚಿಟ್ಟಿ – ನಾನು ಬಹಳ ದುರದೃಷ್ಟವಂತಳು. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡು ಇಡೀ ಜೀವನವೇ ನುಚ್ಚು ನೂರಾಗಿದೆ. ಜೀವನದಲ್ಲಿ ಯಾವ ಆಸೆ – ಆಕಾಂಕ್ಷೆಗಳೂ ಉಳಿದಿಲ್ಲ.

ನಿರ್ಮಲ – “ಅದೃಷ್ಟವಂತರು” – ಇದು ಉಚಿತ ಪದವಲ್ಲ. ನನ್ನ ಸ್ನೇಹಿತರ ಕುಟುಂಬದವರೊಂದಿಗೆ, ಅವರ ಮಕ್ಕಳೊಡನೆ ಮಾತನಾಡಲು ಧೈರ್ಯ ಬರುವುದಿಲ್ಲ. ಏನೋ ಅಪರಾಧಿ ಪ್ರಜ್ಞೆ ಕಾಡುತ್ತದೆ.

ರಜನಿ – ನನ್ನ ಈ ಮರುಜನ್ಮಕ್ಕೆ ನಾನು ಎಂದೆಂದಿಗೂ ದೇವರಿಗೆ ಚಿರಋಣಿ.

ಉಷಾ – ನನ್ನ ಸ್ನೇಹಿತರನ್ನು ಕಳೆದುಕೊಂಡು, ಅವರ ಕುಟುಂಬದವರನ್ನು ಎದುರಿಸಲು ಧೈರ್ಯ ಸಾಲದು.

* ಜೀವನದ ಬಗ್ಗೆ ಈ ನಾಲ್ಕು ವರ್ಷಗಳಲ್ಲಿ ನಿಮ್ಮ ದೃಷ್ಟಿಕೋನ ಬದಲಾಗಿದೆಯೇ ?

ಆಶಾ – ಪಾಲಿಗೆ ಬಂದದ್ದನ್ನು ಅನುಭವಿಸಲೇಬೇಕು. ಜೀವನವು ಅತ್ಯಮೂಲ್ಯವಾದುದು. ಇದನ್ನು ನಾನು ಚೆನ್ನಾಗಿ ಮನಗಂಡಿದ್ದೇನೆ. ನಾನು ಮಾಡುತ್ತಿರುವ ಸಮಾಜ ಸೇವೆಯಲ್ಲಿ ನನ್ನ ಸ್ನೇಹಿತರನ್ನು ಪ್ರತ್ಯಕ್ಷವಾಗಿ ಕಾಣುವ ಪ್ರಯತ್ನ ಮಾಡುತ್ತಿದ್ದೇನೆ.

ಚಿಟ್ಟೆ – ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನಮ್ಮ ಜೀವನವೇ ಬದಲಾಗುತ್ತದೆ. ನನ್ನ ಬಳಿಯಿರುವುದೆಲ್ಲವೂ ನೀರಿನ ಮೇಲಿನ ಗುಳ್ಳೆಯಂತೆ ಮಾಯವಾಗಿಬಿಟ್ಟಿತು. ನನ್ನ ಬದುಕಿನ ಶೂನ್ಯತೆಗೆ, ಕತ್ತಲೆಗೆ ಪರಿಹಾರವೇ ಇಲ್ಲವೇನೋ ಅನಿಸುತ್ತದೆ.

ನಿರ್ಮಲ – ಸಾವನ್ನು ಅಷ್ಟು ಹತ್ತಿರದಿಂದ ನೋಡಿ, 8 ತಿಂಗಳ ಕಾಲ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡ ನನಗೆ ಈಗ ಯಾವುದರ ಬಗ್ಗೆಯೂ ಹೆದರಿಕೆಯಿಲ್ಲ. ಜೀವನ ಬಂದಂತೆ ಎದುರಿಸಲು ಸಿದ್ಧಳಿದ್ದೇನೆ. ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಆಸೆಯಿದೆ.

ರಜನಿ – ಒಂದು ಕ್ಷಣದಲ್ಲಿ ನಮ್ಮ ಜೀವನವೇ ಅಲ್ಲೋಲಕಲ್ಲೋಲವಾಗಬಹುದು. ಹಾಗಾಗಿ ಜೀವನದ ಪ್ರತೀ ಕ್ಷಣವನ್ನು ಅನುಭವಿಸಿ ಜೀವಿಸುವುದನ್ನು ಕಲಿತಿದ್ದೇನೆ.

ಉಷಾ – ನಾನು ಮೊದಲಿಗಿಂತಲೂ ನೇರವಾಗಿ, ಮುಕ್ತವಾಗಿ ಮಾತನಾಡುವುದನ್ನು ರೂಢಿಸಿಕೊಂಡಿದ್ದೇನೆ.

* ದೇವರು ನಿಮ್ಮನ್ನು ನಾಲ್ಕು ವರ್ಷಗಳ ಹಿಂದಕ್ಕೆ ಕರೆದೊಯ್ದರೆ, ನೀವು ಆ ದಿನವನ್ನು ಹೀಗೆ ಬದಲಾಯಿಸಲು ಇಚ್ಚಿಸುವಿರಿ ?

ಆಶಾ – ಇದು ಸಾಧ್ಯವಾದರೆ ನಾವು ಬಹಳ ಅದೃಷ್ಟವಂತರು. ಈ ಪ್ರವಾಸವನ್ನು ನಾವು ಕೈಗೊಳ್ಳುತ್ತಿರಲಿಲ್ಲ. ದಾವಣಗೆರೆಯಲ್ಲಿಯೇ ಜೊತೆಯಾಗಿ ಕಾಲ ಕಳೆಯುತ್ತಿದ್ದೆವು.

ಚಿಟ್ಟಿ – ಈ ಪ್ರವಾಸವನ್ನೇ ಕ್ಯಾನ್ಸಲ್‌ ಮಾಡುತ್ತಿದ್ದೆವು.

ನಿರ್ಮಲ – ಈ ಅಪಘಾತವನ್ನು ತಡೆಯುತ್ತಿದ್ದೆ.

ರಜನಿ – ನಮ್ಮೆಲ್ಲರ ಹಣೆ ಬರಹವನ್ನೇ ಬದಲಾಯಿಸುತ್ತಿದ್ದೆನೇನೋ.

ಉಷಾ – ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಡುವ ಬದಲು ಸ್ವಲ್ಪ ತಡವಾಗಿ ಹೋರಡಲು ಸ್ನೇಹಿತರಿಗೆ ಒತ್ತಾಯಿಸುತ್ತಿದ್ದೆ.

* ಈ ಅಪಘಾತದ ಕುರಿತು ನೀವು ಸಮಾಜಕ್ಕೆ ಏನನ್ನಾದರೂ ಹೇಳಲು ಬಯಸುತ್ತೀರಾ ?

ಆಶಾ – ಯಾವುದೇ ದುರ್ಘಟನೆ ಸಂಭವಿಸಿದರೆ, ಇಲ್ಲ- ಸಲ್ಲದ ಮಾತುಗಳನ್ನಾಡಿ, ಸಂಬಂಧಪಟ್ಟವರಿಗೆ ನೋವುಂಟು ಮಾಡಬೇಡಿ. ನಾವೆಲ್ಲರೂ ಗೌರವಾನ್ವಿತ ಕುಟುಂಬದಿಂದ ಬಂದವರು. ಬದುಕಿದ್ದಾಗಲೂ, ಸಾವಿನ ನಂತರವೂ ಎಲ್ಲರಿಗೂ ಆತ್ಮಗೌರವ ಇರುತ್ತದೆ. ಇದರ ಬಗ್ಗೆ ಕಾಳಜಿ ವಹಿಸಿ.

ಚಿಟ್ಟಿ – ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡದಿರಿ, ಅವರ ತೀರ್ಪುಗಾರರಾಗಬೇಡಿ. Live and let live.

ನಿರ್ಮಲ – ನಾವು ಧರ್ಮಸ್ಥಳಕ್ಕೋ, ತಿರುಪತಿಗೋ ಹೋಗುವಾಗ ಇಂತಹ ಘಟನೆ ನಡೆದಿದ್ದರೆ, ನಮ್ಮ ಬಗ್ಗೆ ಸಹಾನುಭೂತಿ ಇರುತ್ತಿತ್ತು. ಗೋವಾಕ್ಕೆ ಹೊರಟಿದ್ದರಿಂದ ಎಂತೆಂತಹ ಮಾತುಗಳು ಕೇಳಬೇಕಾಯಿತು. ನಾವು ಹೋಗುವ ಊರಿನಿಂದ ನಮ್ಮ ನಡತೆಯನ್ನು ಅಳೆಯಬಾರದು.

ರಜನಿ – ಇಂತಹ ಘಟನೆಗಳು ನಡೆದಾಗ ಸಂಬಂಧಪಟ್ಟವರೊಂದಿಗೆ ವ್ಯಂಗ್ಯ ಬಿಟ್ಟು ಸಕಾರಾತ್ಮಕವಾಗಿ ನಡೆದುಕೊಳ್ಳಿ. ರಸ್ತೆ ಸುರಕ್ಷತೆಯನ್ನು ತಪ್ಪದೇ ಪಾಲಿಸಿ.

ಉಷಾ – ಅಪಘಾತಕ್ಕೊಳಗಾದವರು ಹಾಗೂ ಅವರ ಕುಟುಂಬದವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಡಿ. ಇದು ನೀವು ಅವರಿಗೆ ಮಾಡುವ ಬಹು ದೊಡ್ಡ ಉಪಕಾರ ವಾಗುತ್ತದೆ. ತೀರಾ ಅವಶ್ಯಕತೆ (ತುರ್ತು ಪರಿಸ್ಥಿತಿ) ಇದ್ದರೆ ಮಾತ್ರ ರಾತ್ರಿ ಹೊತ್ತು ಪ್ರಯಾಣ ಮಾಡಿ. `Drive safe’.

ಈ ಎಲ್ಲಾ ಅದೃಷ್ಟವಂತ ಸ್ನೇಹಿತರು ತಮ್ಮ ಮರು ಜನ್ಮದ ನಾಲ್ಕನೆಯ ವರ್ಷವನ್ನು ಕಳೆದಿದ್ದಾರೆ. ತಮ್ಮ ಕುಟುಂಬದವರೊಂದಿಗೆ ಚರ್ಚಿಸಿಯೇ ಪ್ರವಾಸವನ್ನು ಕೈಗೊಂಡಿದ್ದರು. ಸಮಾಜದಲ್ಲಿ ಮಗಳು, ಸಹೋದರಿ, ಹೆಂಡತಿ, ತಾಯಿ ಹೀಗೆ ಹಲವಾರು ಪಾತ್ರವನ್ನು ನಿಭಾಯಿಸುವ ಹೆಣ್ಣು ಮಕ್ಕಳಿಗೂ ವಿಶ್ರಾಂತಿಯ ಅವಶ್ಯಕತೆಯಿದೆ. ಹೆದ್ದಾರಿಗಳು, ಅವುಗಳ ಅಗಲೀಕರಣ – ಇವೆಲ್ಲವೂ ಇರುವುದು ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಭಾಯಿಸಲು. ಪ್ರಯಾಣಿಕರ ಹೆಚ್ಚುತ್ತಿರುವ ವೇಗವನ್ನು ನಿಭಾಯಿಸಲು ಅಲ್ಲ. ಇದೆಲ್ಲವನ್ನು ಈ ಸಮಾಜ ಅರಿಯಬೇಕಿದೆ.


ಉಮಾ ಬಿ.ಆರ್.
ದಾವಣಗೆರೆ.
ಫೋ. : 98864 97404

error: Content is protected !!