ದೇಶದೆಲ್ಲೆಡೆ ಜನಸಂಖ್ಯೆಗೆ ಕಡಿವಾಣ
ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಜನಸಂಖ್ಯಾ ಸ್ಫೋಟ ಕಡಿಮೆಯಾಗಿದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಇತ್ತೀಚಿನ ವರದಿಗಳ ಪ್ರಕಾರ, ಉತ್ತರದ ರಾಜ್ಯಗಳಾದ ಜಮ್ಮು ಕಾಶ್ಮೀರ, ಲಡಾಖ್, ಪಂಜಾಬ್, ಹಿಮಾಚಲ ಪ್ರದೇಶ, ದೆಹಲಿಗಳಲ್ಲೂ ಜನಸಂಖ್ಯಾ ದರ ಇಳಿಮುಖವಾಗಿದೆ.
ಪೂರ್ವ ಭಾಗದ ಒಡಿಶಾ, ಛತ್ತೀಸ್‌ಘಡ, ಪಶ್ಚಿಮ ಬಂಗಾಳ, ಈಶಾನ್ಯದ ನಾಗಾಲ್ಯಾಂಡ್, ಸಿಕ್ಕಿಂ, ಅಸ್ಸಾಂ, ತ್ರಿಪುರ, ಪೂರ್ವದ ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲೂ ಜನಸಂಖ್ಯಾ ಬೆಳವಣಿಗೆಗೆ ಕಡಿವಾಣ ಬಿದ್ದಿದೆ. ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲೂ ಇತ್ತೀಚಿನ ದಶಕಗಳಲ್ಲಿ ಜನಸಂಖ್ಯಾ ಬೆಳವಣಿಗೆ ಕಡಿಮೆಯಾಗುತ್ತಿದೆ. ಈ ರಾಜ್ಯಗಳಲ್ಲಿ ಪ್ರಸಕ್ತ ಹೆಚ್ಚಿನ ಜನಸಂಖ್ಯೆ ಇದ್ದರೂ, ಅವರು ದೇಶದೆಲ್ಲೆಡೆ ಕಡಿಮೆ ದರದಲ್ಲಿ ಕೂಲಿಗೆ ತೆರಳುತ್ತಿದ್ದಾರೆ. ಅವರ ವಲಸೆ ಬೇರೆ ರಾಜ್ಯಗಳಿಗೇ ಲಾಭ ನೀಡುತ್ತಿದೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಇತ್ತೀಚೆಗೆ ಹೇಳಿಕೆಗಳನ್ನು ನೀಡಿ, ಹೆಚ್ಚು ಮಕ್ಕಳು ಮಾಡಿಕೊಳ್ಳಲು ಕರೆ ನೀಡಿದ್ದಾರೆ.
ಜನಸಂಖ್ಯೆ ನಿಯಂತ್ರಣಕ್ಕಾಗಿ ದಶಕಗಳಿಂದ ಕರೆ ಕೇಳಿ ಬರುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿ, ಮಕ್ಕಳಿರಲಿ ಮನೆ ತುಂಬಾ ಎಂದು ರಾಜಕಾರಣಿಗಳು ಹೇಳುತ್ತಿದ್ದಾರೆ. ಹೀಗಾಗಿ ಭಾರತ ಬದಲಾಗಿದೆ ಎಂದುಕೊಳ್ಳಬಹುದು.
ಸ್ವಾರ್ಥ ಚಿಂತನೆ : ನಾಯ್ಡು ಹಾಗೂ ಸ್ಟಾಲಿನ್ ಅವರು ಜನಸಂಖ್ಯೆ ಹೆಚ್ಚಳಕ್ಕೆ ಕರೆ ನೀಡಿರುವುದು ದೇಶದ ಹಿತಕ್ಕೆ ಎನ್ನುವುದಕ್ಕಿಂತ, ತಮ್ಮ ರಾಜಕೀಯ ಬಲ ಕುಸಿಯಬಾರದು ಎಂಬ ಕಾರಣಕ್ಕಾಗಿ.
ಉತ್ತರ ಭಾರತ ಜನಸಂಖ್ಯೆ ನಿಯಂತ್ರಣದಲ್ಲಿ ಹಿಂದೆ ಬಿದ್ದಿತ್ತು. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಜನರು ಹೆಚ್ಚು ಸಹಕರಿಸಿದ್ದರು. ಹೀಗಾಗಿ ಲೋಕಸಭಾ ಸ್ಥಾನಗಳನ್ನು ಜನಸಂಖ್ಯೆ ಆಧಾರದ ಮೇಲೆ ನಿರ್ಧರಿಸಲು ಕೇಂದ್ರ ಸರ್ಕಾರ ಮುಂದಾದರೆ, ತಮ್ಮ ರಾಜ್ಯಗಳ ಹಾಗೂ ತಮ್ಮ ರಾಜಕೀಯ ಬಲ ಕ್ಷೀಣಿಸಬಹುದು ಎಂದು ದಕ್ಷಿಣದ ರಾಜ್ಯಗಳ ಉಭಯ ಮುಖ್ಯಮಂತ್ರಿಗಳು ಚಿಂತೆಗೀಡಾಗಿರುವಂತಿದೆ.
ಕೆಲ ಸಿರಿವಂತ ದೇಶಗಳು ಮಕ್ಕಳು ಹೆಚ್ಚು ಮಾಡಿಕೊಳ್ಳಲು ಹಲವು ಪ್ರೋತ್ಸಾಹಗಳನ್ನು ನೀಡಿದರೂ ಜನರು ಕಿವಿಗೊಡುತ್ತಿಲ್ಲ. ಹೀಗಿರುವಾಗ ಭಾರತದ ಕೆಲ ನಾಯಕರು ಅಮೋಘ ಹೇಳಿಕೆ ನೀಡಿದ ಮಾತ್ರಕ್ಕೆ ಭಾರತೀಯರ ಮನೋಭಾವ ಬದಲಾಗುತ್ತದೆ ಎಂದು ಭಾವಿಸಿದರೆ ಮೂರ್ಖತನವಾಗುತ್ತದೆ. ಶಿಕ್ಷಣ, ಆರ್ಥಿಕತೆ ಸೇರಿದಂತೆ ಹಲವು ಸಾಮಾಜಿಕ ಕಾರಣಗಳಿಂದ ಜನಸಂಖ್ಯೆ ಬೆಳವಣಿಗೆ ಮೇಲೆ ಪರಿಣಾಮವಾಗುತ್ತದೆ ಎಂಬುದು ವಿಶ್ವದಾದ್ಯಂತ ಕಂಡು ಬಂದಿದೆ. ಸದ್ಯಕ್ಕೆ ಸಾಕಷ್ಟು ಭಾರತೀಯರು ಒಂದು ಮಗು ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಮದುವೆ – ಮಕ್ಕಳ ಸಹವಾಸವೇ ಬೇಡ ಎನ್ನುವವರ ಸಂಖ್ಯೆಯೂ ಸಾಕಷ್ಟಿದೆ.
ಕಡಿಮೆ ಮಕ್ಕಳಿಂದ ಲಾಭ : ದಕ್ಷಿಣ ಭಾರತೀಯರು ಜನಸಂಖ್ಯೆ ಕಡಿಮೆ ಮಾಡಿಕೊಂಡಿದ್ದು ಸಾಕಷ್ಟು ಲಾಭವನ್ನೂ ತಂದಿದೆ. ದಕ್ಷಿಣದ ರಾಜ್ಯಗಳು ಆರ್ಥಿಕತೆಯಲ್ಲಿ ಮುನ್ನಡೆ ಕಂಡಿವೆ. ಹೆಚ್ಚು ಮಕ್ಕಳು ಮಾಡಿಕೊಳ್ಳುವ ಪದ್ಧತಿ ಇರುವ ಉತ್ತರ ಪ್ರದೇಶ ಹಾಗೂ ಬಿಹಾರಗಳು ಸಾಕಷ್ಟು ಆರ್ಥಿಕ ಹಿನ್ನಡೆ ಕಂಡಿವೆ. ಹಿಂದಿ ಭಾಷಿಗರ ಹಲವು ರಾಜ್ಯ ಗಳನ್ನು ಬಿಮಾರು ರಾಜ್ಯಗಳು ಎಂದು ಈಗಲೂ ಕರೆಯುತ್ತಾರೆ.
ಹೀಗಾಗಿ ಮಕ್ಕಳ ಸಂಖ್ಯೆ ಹೆಚ್ಚಾದರೆ ಕುಟುಂಬ ಗಳಿಂದ ಹಿಡಿದು ದೇಶದವರೆಗೆ ಹೊರೆಯಾಗುತ್ತದೆ. ಈ ಹೊರೆಯನ್ನು ನಿರ್ವಹಿಸುವವರು ಯಾರು? ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಎರಡೂ ಸಾಕಷ್ಟು ವೆಚ್ಚದಾಯಕವಾಗಿವೆ. ಸರ್ಕಾರ ಉಚಿತ ಶಿಕ್ಷಣ ಹಾಗೂ ಆರೋಗ್ಯಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿದೆ. ಆದರೆ, ಬಹುತೇಕ ಸರ್ಕಾರಿ ಮಂದಿಯೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುವುದಿಲ್ಲ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳುವುದಿಲ್ಲ. ಅವರಿಗೆ ವಿಶ್ವಾಸ ಇಲ್ಲ ಎಂದ ಮೇಲೆ ಜನರಿಗೆ ವಿಶ್ವಾಸ ಬರುವುದುಂಟೇ?
ಉದ್ಯೋಗಕ್ಕಿಲ್ಲ ಗ್ಯಾರಂಟಿ : ಇಷ್ಟೆಲ್ಲಾ ಖರ್ಚು-ವೆಚ್ಚ ಮಾಡಿಕೊಂಡು ಮಕ್ಕಳನ್ನು ಬೆಳೆಸಿದರೂ, ಮುಂದಿನ ದಿನಗಳಲ್ಲಿ ಅವರ ಜೀವನ ಸುಸೂತ್ರ ವಾಗುತ್ತದೆ ಎಂಬ ಗ್ಯಾರಂಟಿ ಇದೆಯೇ? ಕೃತಕ ಬುದ್ಧಿವಂತಿಕೆ (ಎ.ಐ.) ಈಗಾಗಲೇ ಸಾಕಷ್ಟು ಜನರ ಉದ್ಯೋಗ ಕಸಿಯುತ್ತಿದೆ. ಮುಂದಿನ ದಿನಗಳಲ್ಲಿ ನಿರುದ್ಯೋಗ ಇನ್ನಷ್ಟು ತಾಂಡವಾಡಿದರೆ ಯುವ ಪೀಳಿಗೆಯ ಪರಿಸ್ಥಿತಿ ಏನಾಗಲಿದೆ? ಈ ಬಗ್ಗೆ ರಾಜ ಕಾರಣಿ ಮಹಾಶಯರು ಖಂಡಿತಾ ಯೋಚಿಸಿರಲಿಕ್ಕಿಲ್ಲ.
ಕುಟುಂಬ ರಾಜಕಾರಣ : ದಕ್ಷಿಣದ ರಾಜ್ಯಗಳ ಮಹಾಜನತೆ ತಮ್ಮ ರಾಜ್ಯಗಳ ರಾಜಕಾರಣಿಗಳ ಶಕ್ತಿ ಕಡಿಮೆಯಾಗಬಾರದು ಎಂದು ಭಾವಿಸಿ ಮಕ್ಕಳ ಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಾರೆ ಎಂದು ಕೊಳ್ಳೋಣ. ಆಗ ಲಾಭ ಯಾರಿಗೆ? ಜನಸಾಮಾನ್ಯರಿ ಗಂತೂ ಖಂಡಿತಾ ಅಲ್ಲ. ಹೆಚ್ಚು ಮಕ್ಕಳಾದಷ್ಟೂ ಆರ್ಥಿಕ ಹೊರೆಗೆ ಸಿಕ್ಕಿ ಜನರು ನಲುಗುತ್ತಾರೆ. ಲೋಕ ಸಭೆ ಹಾಗೂ ವಿಧಾನಸಭೆಗಳ ಸಂಖ್ಯೆ ಹೆಚ್ಚಾ ದರೆ ಲಾಭ ಸಿಗುವುದು ಕೆಲವೇ ರಾಜಕಾರಣಿಗಳಿಗೆ ಮಾತ್ರ.
ಅದರಲ್ಲೂ ದೇಶದ ಎಲ್ಲ ಪಕ್ಷಗಳಲ್ಲಿ ಈಗ ಕುಟುಂಬ ರಾಜಕೀಯ ಆರ್ಭಟಿಸುತ್ತಿದೆ. ಚಂದ್ರಬಾಬು ನಾಯ್ಡು ಅವರ ಮಾವ ಎನ್.ಟಿ. ರಾಮರಾವ್ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಯಾಗಿದ್ದರು. ನಾಯ್ಡು ನಂತರ ಅವರ ಸುಪುತ್ರ ಎನ್. ಲೋಕೇಶ್ ಮುಖ್ಯಮಂತ್ರಿಯಾಗುವುದರಲ್ಲಿ ಹೆಚ್ಚು ಜನರಿಗೆ ಸಂಶಯವಿಲ್ಲ. ಎಂ.ಕೆ. ಸ್ಟಾಲಿನ್ ಅವರ ತಂದೆ ಕರುಣಾನಿಧಿ ತಮಿಳುನಾಡಿನ ಮುಖ್ಯ ಮಂತ್ರಿ ಯಾಗಿದ್ದರು. ಸ್ಟಾಲಿನ್ ಅವರ ಪುತ್ರ ಉದಯನಿಧಿ ಈಗಾಗಲೇ ಉಪ ಮುಖ್ಯಮಂತ್ರಿ ಯಾಗಿದ್ದಾರೆ. ಮುಂದಿನ ದಾರಿ ಸ್ಪಷ್ಟವಾಗಿದೆ.
ಮುಖ್ಯಮಂತ್ರಿ ಗಾದಿ ಬಿಡಿ, ಶಾಸಕ – ಸಂಸದ ಸ್ಥಾನಗಳನ್ನೇ ಸಾಕಷ್ಟು ರಾಜಕಾರಣಿಗಳ ಕುಟುಂಬ ಗಳು ತಮಗೆ ತಮ್ಮ ಮಕ್ಕಳಿಗೆ, ಪತ್ನಿ, ಸೊಸೆ, ಅಳಿಯ… ಹೀಗೆ ಸ್ವಂತ ಆಸ್ತಿಯಂತೆ ಧಾರೆ ಎರೆಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ರೀತಿ ರಾಜಕೀಯ ಕುಟುಂಬದವರು ಮೆರೆದಾಡಲು ಜನರು ಜನಸಂಖ್ಯೆ ಹೆಚ್ಚಿಸಿಕೊಂಡು ನಲುಗಬೇಕೇ?
ಬಿ.ಜಿ. ಪ್ರವೀಣ್ ಕುಮಾರ್
ದಾವಣಗೆರೆ