ಪ್ರತಿಷ್ಠಿತ ಸಂಸ್ಥೆ ಕದಳಿ ಮಹಿಳಾ ವೇದಿಕೆಯು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾಗಿದ್ದು, ಕಳೆದ 14 ವರ್ಷಗಳಿಂದ ದಾವಣಗೆರೆಯಲ್ಲಿ ಶರಣ ಸಾಹಿತ್ಯ, ಶರಣ ಪರಂಪರೆ, ಶರಣ ಸಂಸ್ಕೃತಿ ಇವುಗಳ ಅನುಷ್ಠಾನಕ್ಕಾಗಿ ವಿವಿಧ ಕಾರ್ಯಕ್ರಮ ಗಳನ್ನು, ದತ್ತಿ ಉಪನ್ಯಾಸಗಳನ್ನು ಹಮ್ಮಿಕೊಳ್ಳು ತ್ತಾ ಬಂದಿದೆ. ವೇದಿಕೆಯು ಪ್ರತೀ ವರ್ಷ ತನ್ನ ವಾರ್ಷಿಕೋತ್ಸವದಲ್ಲಿ ಸಮಾಜದ ಒಬ್ಬ ಸಾಧಕಿಯನ್ನು ಗುರುತಿಸಿ `ಕದಳಿಶ್ರೀ’ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಶ್ರೀಮತಿ ಯಶಾ ದಿನೇಶ್ ಅವರು ತಮ್ಮ ತಂದೆ ಪ್ರೊ|| ಬಿ. ಕೆ. ಸಿದ್ದಪ್ಪ ಮತ್ತು ತಾಯಿ ಸಾವಿತ್ರಮ್ಮ ಹೆಸರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಲ್ಲಿ ಒಂದು ಲಕ್ಷ ರೂ.ಗಳ ಕದಳಿ ಪ್ರಶಸ್ತಿಯ ಶರಣ ದತ್ತಿ ಸ್ಥಾಪಿಸಿದ್ದಾರೆ.
ಬಿ. ಕೆ. ಸಿದ್ದಪ್ಪ ಅವರು 26 ವರ್ಷ ಸಿರಿಗೆರೆ ಸಂಸ್ಥೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ನಂತರ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಉತ್ತಮ ಆಡಳಿತ ಸೇವೆ ನೀಡಿದ್ದಾರೆ. ಇವರು ಉತ್ತಮ ಕ್ರೀಡಾಪಟುವೂ, ರಂಗನಟರೂ, ಸಿರಿಕಂಠದ ಗಾಯಕರೂ, ಜನಪದ ಕಲೆಗಳಲ್ಲಿ ಪರಿಣಿತರೂ, ಸಂಘಟನಾಕಾರರಾಗಿದ್ದರು. ಸಿರಿಗೆರೆಯಲ್ಲಿ ಶಿಕ್ಷಣ ವೃತ್ತಿ ಜೊತೆಗೆ ಅಕ್ಕನ ಬಳಗ, ತರಳಬಾಳು ಕಲಾಸಂಘ, ರೋಟರಿ ಸಂಸ್ಥೆಗಳಲ್ಲಿ ಸದಾ ಸಕ್ರಿಯವಾಗಿ ಚಟುವಟಿಕೆಯಿಂದ ಭಾಗವಹಿಸುತ್ತಿದ್ದರು, ಸಿದ್ದಪ್ಪನವರು ನಿವೃತ್ತಿ ನಂತರವೂ ಕ್ರಿಯಾಶೀಲರಾಗಿರುತ್ತಾ ದಾವಣಗೆರೆಯ ತರಳಬಾಳು ಬಡಾವಣೆಯಲ್ಲಿ ವಿವಿಧ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿ ದ್ದರು. ವಿದ್ಯಾನಗರದಲ್ಲಿ ಪರಿಸರ ಕಾಳಜಿಯಿಂದ ಸಾವಿರಾರು ಸಸಿಗಳನ್ನು ನೆಡಿಸಿದರು. ಪ್ರತೀ ತಿಂಗಳು ಶಿವಗೋಷ್ಠಿ ಪ್ರಾರಂಭಿಸಿದರು. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಸೇವೆ ಸಲ್ಲಿಸಿ ಪರಿಪೂರ್ಣ ವ್ಯಕ್ತಿತ್ವ ಹೊಂದಿದ್ದ ಸಿದ್ದಪ್ಪನವರು ಮಾದರಿ ವ್ಯಕ್ತಿಯಾಗಿದ್ದರು, ಇವರ ಧರ್ಮಪತ್ನಿ ಸಾವಿತ್ರಮ್ಮನವರೂ ಸಹ ಉತ್ತಮ ಹಾಡುಗಾರರಾಗಿದ್ದು, ಸಿರಿಗೆರೆಯ ಅಕ್ಕನ ಬಳಗದ ಅಧ್ಯಕ್ಷರಾಗಿದ್ದು, ಸರಳ, ಮಾತೃ ಹೃದಯದ, ಸಂಸ್ಕಾರವಂತ, ಶಾಂತಮೂರ್ತಿಯಾದ ಸಾವಿತ್ರಮ್ಮನವರು ಇನ್ನರ್ ವ್ಹೀಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಬಾರಿ `ಕದಳಿ ಶ್ರೀ’ ಪ್ರಶಸ್ತಿಗೆ ಸಮಾಜ ಸೇವಕಿ ಶ್ರೀಮತಿ ಪ್ರೇಮಾ ನಾಗರಾಜ್ ಭಾಜನರಾಗಿದ್ದಾರೆ. ಇವರು ಎಂ. ಬಸವರಾಜಪ್ಪ ಹಾಗೂ ಸುಶೀಲಮ್ಮ ದಂಪತಿಯ ಪುತ್ರಿ. ಬೆಂಗಳೂರಿನಲ್ಲಿ ಬಿ.ಎ. ಪದವಿ, ದಾವಣಗೆರೆಯಲ್ಲಿ ಬಿ.ಎಡ್. ಪದವಿ ಹಾಗೂ ಇಂಗ್ಲೆಂಡಿನಲ್ಲಿ ಮಾಂಟೆಸ್ಸೊರಿ ತರಬೇತಿ ಪಡೆದಿದ್ದಾರೆ. ಪ್ರೇಮಾ ಅವರು ವನಿತಾ ಸಮಾಜದ ಕಾರಿಕಾರಿಣಿ ಸಭೆಯ ಸದಸ್ಯರಾಗಿ ಇಪ್ಪತ್ತೈದು ವರ್ಷ ಕಾರ್ಯ ನಿರ್ವಹಿಸಿರುವರು. ದಾವಣಗೆರೆ ಜಿಲ್ಲಾ ಶಿಶು ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವನಿತಾ ಸಮಾಜದ ಅಂಗ ಸಂಸ್ಥೆಗಳಾದ ಅಂಗನವಾಡಿ ತರಬೇತಿ ಕೇಂದ್ರ, ಬಾಲವಿಕಾಸ ತರಬೇತಿ ಕೇಂದ್ರ, ಪ್ರೇಮಾಲಯ, ನಿರ್ಗತಿಕ ಹೆಣ್ಣುಮಕ್ಕಳ ಕುಟೀರ, `ಸಾಹಸ್’ ಕಿವುಡ ಮತ್ತು ಮೂಕ ಮಕ್ಕಳ ತರಬೇತಿ ಕೇಂದ್ರದ ಮೇಲ್ವಿಚಾರಣೆ ಹೀಗೆ ಹಲವು ಕ್ಷೇತ್ರಗಳಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಡಾ|| ಲೀಲಾ ಮತ್ತು ಡಾ|| ನಿರ್ಮಲ ಕೇಸರಿ ಟ್ರಸ್ಟಿನ ಸದಸ್ಯರಾಗಿ ಬಡ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ಒದಗಿಸುವಲ್ಲಿ ಹಾಗೂ ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆ ಯಲ್ಲಿ ಸಹಾಯ ಮಾಡಿದ್ದಾರೆ.
ಪ್ರೇಮಾ ಅವರ ಕುಟುಂಬದವರು, ಹೆಣ್ಣು ಮಕ್ಕಳ ಉಚಿತ ವಸತಿಯುತ ಶಾಲೆ ಪ್ರಾರಂಭಿಸಿದಾಗ ಶಾಲೆಯ ಸಂಪೂರ್ಣ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಮೊದಲು 25 ಜನರಿಂದ ಪ್ರಾರಂಭವಾಗಿದ್ದು, ಈಗ 250ಕ್ಕೂ ಹೆಚ್ಚು ಅನಾಥ, ನಿರ್ಗತಿಕ ಬಡ ಹೆಣ್ಣುಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಒಂದರಿಂದ ಹತ್ತನೇ ತರಗತಿವರೆಗೆ ಉಚಿತ ವಿದ್ಯಾಭ್ಯಾಸವನ್ನು ಒದಗಿಸಲಾಗುತ್ತಿದೆ. ಈ ಶಾಲೆ ಯಾವುದೇ ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ. ಎಲ್ಲಾ ಮಕ್ಕಳಿಗೂ ಸಮಾನ ಅವಕಾಶವಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ವಾತಾವರಣದಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಪಠ್ಯಪುಸ್ತಕ, ಬಟ್ಟೆ, ಊಟ, ವಸತಿಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಆರೋಗ್ಯ ತಪಾಸಣೆ, ದಂತ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಗಮನ ನೀಡಲಾಗುತ್ತಿದೆ. ಸಮಾಜದ ಸೇವೆಗೆ ತಮ್ಮ ತನು, ಮನ, ಧನವನ್ನು ಧಾರೆಯೆರೆದಿದ್ದಾರೆ. ಇವರ ಸೇವೆ ಶ್ಲಾಘನೀಯ ವಾಗಿದೆ. ಶ್ರೀಮತಿ ಪ್ರೇಮಾ ಅವರಿಗೆ 2017ರಲ್ಲಿ `ಜಿಲ್ಲೆ ಸಮಾಚಾರ’ ಬಳಗವು ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀಮತಿ ಪ್ರೇಮಾ ಮತ್ತು ಡಾ. ನಾಗರಾಜ್ ಕುಟುಂಬದವರಿಗೆ 2013ರಲ್ಲಿ ಶ್ರೀ ಗುದ್ಲೆಪ್ಪ ಹಳ್ಳಿಕೇರಿಯವರ ಸ್ಮರಣಾರ್ಥವಾಗಿ ಕೊಡಲ್ಪಡುವ `ಸೇವಾ ಗೌರವ’ ಪ್ರಶಸ್ತಿ ಲಭಿಸಿದೆ. ಇದೀಗ 2023ರ ಕದಳಿ ಪ್ರಶಸ್ತಿಗೆ ಭಾಜನರಾಗಿರುವುದು ಸ್ತುತ್ಯಾರ್ಹವಾಗಿದೆ.
ಯಶಾ ದಿನೇಶ್‌ರವರು ಕದಳಿ ಮಹಿಳಾ ವೇದಿಕೆಯ ಪ್ರಥಮ ಅಧ್ಯಕ್ಷರೂ, ಗೌರವ ಸಲಹೆಗಾರರೂ ಆಗಿದ್ದಾರೆ. ಇವರು ಸರಳ, ಸ್ನೇಹಜೀವಿಯಾಗಿದ್ದು, ಮುಂಬಯಿಯಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಈಗ ಅನ್‌ಮೋಲ್ ವಿದ್ಯಾಸಂಸ್ಥೆಯ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಡುಗಾರಿಕೆ, ನೃತ್ಯ, ನಟನೆ, ಸಾಹಿತ್ಯ ರಚನೆ ಇವರ ಹವ್ಯಾಸಗಳಾಗಿದ್ದು ಸುಶ್ರಾವ್ಯ ಸಂಗೀತ ಶಾಲೆ ಪ್ರಾರಂಭಿಸಿ ಮಹಿಳೆಯರಿಗೆ ವಚನಗಳನ್ನೂ, ಸುಗಮ ಸಂಗೀತವನ್ನೂ ಕಲಿಸುತ್ತಿದ್ದಾರೆ. ಯಶಾರವರು ಕನ್ನಡ ಸಾಹಿತ್ಯ ಪರಿಷತ್ತು, ಸುಗಮ ಸಂಗೀತ ಪರಿಷತ್ತು, ಪಾರಂಪರಿಕ ವೈದ್ಯ ಪರಿಷತ್ತು, ಅಭಿಯಂತರಂಗ, ಮುಂಬಯಿಯ ಶರಣ ಸಂಕುಲ ಹೀಗೆ ಹಲವು ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. 2008ರಲ್ಲಿ ಕದಳಿ ಮಹಿಳಾ ವೇದಿಕೆ ಪ್ರಾರಂಭಿಸಿ, ವಚನ ಪ್ರಚಾರ, ಶರಣ ಸಂಸ್ಕೃತಿಯನ್ನು ಜನರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ವೇದಿಕೆಗೆ ಶರಣ ಪರಂಪರೆಯ ಭದ್ರ ಬುನಾದಿ ಹಾಕಿದ್ದಲ್ಲದೇ ವಚನ ಶಿಬಿರಗಳನ್ನು ನಡೆಸುತ್ತಾ ವೇದಿಕೆ ಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಯಶಾ ಅವರ ಕಾರ್ಯ ಚಟುವಟಿಕೆಗಳಿಗೆ ಪತಿ ದಿನೇಶ್ ಅವರ ಪ್ರೋತ್ಸಾಹವಿದೆ, ದಿನೇಶ್‌ರವರು ಅನ್ ಮೋಲ್ ವಸತಿಯುತ ಶಾಲೆ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ವಿದ್ಯಾಭಾಸದ ಜೊತೆಗೆ ಸಾಂಸ್ಕೃತಿಕ ಪರಿಚಯವನ್ನೂ ನೀಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಉತ್ತಮ ಸಂಘಟನಾಕಾರ ರಾಗಿದ್ದು, ಇವರಿಗೆ ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ದಿನಾಂಕ 20.1.2023ರ ಶುಕ್ರವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ `ಕದಳಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
– ಮಮತಾ ನಾಗರಾಜ್
ಉಪಾಧ್ಯಕ್ಷರು, ತಾಲ್ಲೂಕು ಘಟಕ
ಕದಳಿ ಮಹಿಳಾ ವೇದಿಕೆ, ದಾವಣಗೆರೆ.