ಸರಳ, ಪ್ರಾಮಾಣಿಕ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರೀಜಿ

ಸರಳ, ಪ್ರಾಮಾಣಿಕ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರೀಜಿ

ಸರಳ, ಪ್ರಾಮಾಣಿಕ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರೀಜಿ

ಅಕ್ಟೋಬರ್ 2 ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವೂ ಹೌದು. ಆದರೆ ಗಾಂಧೀಜಿಯವರನ್ನು ಆದರಿಸುವ ಭರ ದಲ್ಲಿ ಜನರು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸುವುದೇ ಇಲ್ಲ. ಎಲ್ಲೋ ಬೆರಳೆಣಿಕೆಯಷ್ಟು ಜನ ಅವರನ್ನು ನೆನೆಯುತ್ತಾರೆ. ಬಾಲ್ಯದಿಂದಲೂ ಕಡು ಬಡತನದಲ್ಲಿ ಬೆಳೆದು, ಬ್ರಿಟಿಷರ ವಿರುದ್ಧ ಹೋರಾಡಿ 9 ವರ್ಷ ಸೆರೆವಾಸ ಅನುಭವಿಸಿದರು. ಸತ್ಯಸಂದರು, ಸರಳ – ಪ್ರಾಮಾಣಿಕ ವ್ಯಕ್ತಿ. ಕುಳ್ಳಗಿನ, ತೆಳ್ಳಗಿನ ದೇಹ. ಪ್ರಶಾಂತವಾದ ಮುಖ ಮುದ್ರೆ ಇವರದಾಗಿತ್ತು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶಾರದಾ ಪ್ರಸಾದ್ ಹಾಗೂ ರಾಮ್ದುಲಾರಿ ದೇವಿ ದಂಪತಿಯ ಮಗನಾಗಿ 1904 ಅಕ್ಟೋಬರ್ 2ರಂದು ಉತ್ತರ ಪ್ರದೇಶದ ರುದ್ರ ಪ್ರಯಾಗದಲ್ಲಿ ಜನಿಸಿದರು. ಇವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರಿಯವರು ಒಂದೂವರೆ ವರ್ಷದವರಾಗಿರುವಾಗಲೇ ಅವರು ತೀರಿಕೊಂಡರು. ಗಾಂಧೀಜಿ ತನ್ನ ದೇಶದ ನಾಗರಿಕರನ್ನು ಅಸಹಕಾರ ಚಳುವಳಿಗೆ ಸೇರಲು ಕರೆ ನೀಡಿದ ಸಂದರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಕೇವಲ ಹದಿನಾರು ವರುಷ ವಯಸ್ಸು. ಮಹಾತ್ಮಾ ಅವರ ಕರೆಗೆ ಪ್ರತಿಕ್ರಿಯೆಯಾಗಿ ತನ್ನ ಓದನ್ನು ಬಿಟ್ಟು ಚಳುವಳಿಗೆ ಸೇರಲು ಶಾಸ್ತ್ರಿ ಅವರು ನಿರ್ಧರಿಸಿದರು. 

ಎಳವೆಯಿಂದಲೇ ನಾನಾ ಕಷ್ಟಗಳನ್ನು ಎದುರಿಸಿದ ಶಾಸ್ತ್ರೀಜಿ  ಬಾಲಕನಾಗಿದ್ದಾಗ ಅವರು ಒಂದು ದಿನ ಗಂಗಾ ನದಿಯನ್ನು ದಾಟಿ ಮತ್ತೊಂದು ತೀರಕ್ಕೆ  ಹೋಗಬೇಕಾಗಿತ್ತು. ಅಲ್ಲಿ ದೋಣಿಯು ಇತ್ತು ಅಂಬಿಗ ಜನರನ್ನೆಲ್ಲಾ ದೋಣಿಯಲ್ಲಿ ನದಿ ದಾಟಿಸುತ್ತಿದ್ದ. ಲಾಲ್ ಬಹದ್ದೂರ್‍ಶಾಸ್ತ್ರಿ ಅವರು ದೋಣಿಯಲ್ಲಿ ಕುಳಿತರು ಅಂಬಿಗ ನದಿ ದಾಟಿಸಲು ಐದು ಪೈಸೆ ಕೇಳಿದ ಶಾಸ್ತ್ರೀಯವರ ಬಳಿ ಎರಡು ಪೈಸೆ ಮಾತ್ರ ಇತ್ತು, ಅಂಬಿಗ ಒಪ್ಪಲಿಲ್ಲ. ದೋಣಿಯಿಂದಿ ಳಿದ ಹತ್ತು ವರ್ಷದ ಬಾಲಕ ಶಾಸ್ತ್ರಿ ತುಂಬಿ ಹರಿಯುತ್ತಿದ್ದ ಎಂಥ ನುರಿತ ಈಜುಗಾರರು ಈಜಲು ಅಂಜುವ ಗಂಗಾನದಿಗೆ ಧುಮುಕಿ ಈಜಿ ಸುರಕ್ಷಿತವಾಗಿ ದಡ ಸೇರಿಯೇ ಬಿಟ್ಟ.  ಮತ್ತೆಂದು ಅವರು ದೋಣಿ ಹತ್ತಲಿಲ್ಲ. ಈಜಿಕೊಂಡೇ ನದಿ ದಾಟುತ್ತಿದ್ದರು.

 ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ ಇವರು. ದೇಶ ಕಂಡ ಅಪರೂಪದ ಪ್ರಧಾನಿ. ಭಾರತಕ್ಕೆ ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರಿಯವರ ಕೊಡುಗೆ ಅವಿಸ್ಮರಣೀಯ. ಇಡೀ ದೇಶವನ್ನು ಇವರು ಸ್ವಾಭಿಮಾನಿ ಯನ್ನಾಗಿ ಮಾಡಿದರು. ಇವರ ಆಡಳಿತ ಅವಧಿಯಲ್ಲಿ ಬರಗಾಲ ಬಂತು. 

ಹೊರದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳ ಬೇಕಾಯಿತು ಸಾಲಭಾರ ಅಧಿಕವಾಯಿತು. ಅದನ್ನು ಅರಿತ ಶಾಸ್ತ್ರೀಯವರು ವಾರದಲ್ಲಿ ಒಂದು ದಿನ ಊಟ ಬಿಟ್ಟರೆ ಎಷ್ಟು ಆಹಾರ ಸಂಗ್ರಹವಾಗುವುದೆಂದು ಲೆಕ್ಕಾಚಾರ ಹಾಕಿ ಪ್ರತಿ ಸೋಮವಾರ ರಾತ್ರಿ ಊಟ ಬಿಡಲು ಜನರಲ್ಲಿ ಮನವಿ ಮಾಡಿದರು ತಾವು ಸಹ ಸೋಮವಾರದ ಊಟ ತ್ಯಜಿಸಿದರು.

ಲಾಲ್‍ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಅವರ ಮಕ್ಕಳು ಕುದುರೆಗಾಡಿಯಲ್ಲಿ ಶಾಲೆಗೆ ಹೋಗುತ್ತಿದ್ದರು. ಶಾಸ್ತ್ರಿಗಳ ಮಕ್ಕಳು ಕಾರಿನಲ್ಲೇ ಹೋಗುವ ಆಸೆ ವ್ಯಕ್ತಪಡಿಸಿದಾಗ ‘ಮಕ್ಕಳೇ ಸರ್ಕಾರದ ಕಾರನ್ನು ಸರ್ಕಾರದ ಕೆಲಸಗಳಿಗೇ ಉಪಯೊಗಿಸಿಕೊಳ್ಳ ಬೇಕು. ಬೇರೆ ಕೆಲಸಗಳಿಗಲ್ಲ’ ಎಂದರು. 

ಒಮ್ಮೆ ಖಾಸಗಿ ಸಂಸ್ಥೆಯೊಂದು ಶಾಸ್ತ್ರಿಯವರಿಗೆ ಚಿನ್ನದಲ್ಲಿ ತುಲಾಭಾರ ಮಾಡಿ ಆ ಚಿನ್ನವನ್ನು ರಾಷ್ಟ್ರಕ್ಕೆ ನೀಡುವುದಾಗಿ ಮುಂದೆ ಬಂದಾಗ ‘ನನ್ನ ತೂಕ ಬಹಳ ಕಡಿಮೆ, ತೂಕವಿರುವವರನ್ನು ಹುಡುಕಿ’ ಎಂದು ಶಾಸ್ತ್ರೀಜಿಯವರು ಹೇಳಿ ಕಳುಹಿಸಿದರು. 

ಭಾರತ ಸ್ವಾತಂತ್ರ್ಯಗೊಂಡ ಮೇಲೆ ನೆಹರು ಸರ್ಕಾರದಲ್ಲಿ ಶಾಸ್ತ್ರೀಯವರು ರೈಲ್ವೆ ಮಂತ್ರಿಯಾಗಿ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಿದರು. ಸೆಪ್ಟೆಂಬರ್ 1956ರಲ್ಲಿ ಮೆಹಬೂಬ ನಗರದಲ್ಲಿ ರೈಲು ಅಪಘಾತವಾಗಿ 112 ಜನರು ಮೃತರಾದಾಗ ಮತ್ತು ಮತ್ತೊಂದು ರೈಲು ದುರಂತ ಸಂಭವಿಸಿ 144 ಜನ ದುರ್ಮರಣವನ್ನಪ್ಪಿದ ಸಂದರ್ಭದಲ್ಲಿ ತುಂಬಾ ಮನನೊಂದು ರೈಲ್ವೆ ಸಚಿವ ಸ್ಥಾನಕ್ಕೆ ಮತ್ತೊಮ್ಮೆ ರಾಜೀನಾಮೆ ನೀಡಿದರು.

ನೆಹರು ಅವರ ಮರಣಾ ನಂತರ 1964 ರಲ್ಲಿ ಶಾಸ್ತ್ರಿಜಿಯವರು ದೇಶದ ಎರಡನೇ ಪ್ರಧಾನಿಯಾದರು. ಒಮ್ಮೆ ಅವರು ವಿದೇಶಕ್ಕೆ ಹೋಗಬೇಕಾಗಿ ಬಂತು. ಶಾಸ್ತ್ರಿಗಳು ಎಂದಿನಂತೆ ಮಾಸಲು ಅಂಗಿ, ಕಚ್ಚೆ ಪಂಚೆ ತೊಟ್ಟಿದ್ದರು. ಆಗ ಯಾರೋ ಒಬ್ಬರು `ಸರ್ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದೀರಿ, ಈಗಲಾದರೂ ಚೆನ್ನಾಗಿರುವ ಸೂಟ್ ಹಾಕಿಕೊಳ್ಳಿ’ ಎಂದಾಗ ಶಾಸ್ತ್ರೀಯವರು `ನಾನು ಬಡವರ ದೇಶದ ಪ್ರತಿನಿಧಿ ಎಂದು ಜಗತ್ತಿಗೆ ಗೊತ್ತಾಗಲಿ ಬಿಡಿ’, ಒಮ್ಮೆ ಅವರಿಗೆ ಯಾರೋ ಹೇಳಿದರಂತೆ : ಸರ್, ಅಲ್ಲಿ ಒಂದು ದೊಡ್ಡ ಹುದ್ದೆ ಖಾಲಿ ಇದೆ, ತಾವು ಒಂದು ಶಿಫಾರಸ್ಸು ಪತ್ರ ಕೊಟ್ಟರೆ, ಅದನ್ನು ತಮ್ಮ ಮಗನಿಗೆ ಕೊಡುವರು’ ಎಂದರು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಅವನಿಗೆ ಯಾವುದರಲ್ಲಿ ಯೋಗ್ಯತೆ ಇದೆಯೋ ಅದಕ್ಕೆ ಸೇರಲಿ ಎಂದರಂತೆ. ಶಾಸ್ತ್ರೀಯವರು ಕಾಲವಾದ ಮೂರು ವರ್ಷ ಲಲಿತಾ ಶಾಸ್ತ್ರಿ ಅವರು ಹೊಲದಲ್ಲಿ ಗೋದಿಯ ತೆನೆಯನ್ನು ಕೊಯ್ಯುತ್ತಿರುವುದನ್ನು ಪತ್ರಿಕೆಗಳಲ್ಲಿ ಕಾಣಬ ಹುದಿತ್ತು. ಇವರು ನಮ್ಮ ಹೆಮ್ಮೆಯ ಪ್ರಧಾನಿಯವರ ಧರ್ಮಪತ್ನಿ. ಅದನ್ನು ಕಂಡು ಕಣ್ಣೀರು ಹರಿಯಿತು.

 ಜನವರಿ 1966ರಲ್ಲಿ ತಾಷ್ಕೆಂಟ್‍ನಲ್ಲಿ ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಮಾತುಕತೆಗೆ ತೆರಳಿದ ಶಾಸ್ತ್ರೀಜಿ, `ನೀವು ನಮ್ಮ ಮೇಲೆ ವಿನಾಕಾರಣ ದಾಳಿ ಮಾಡುವುದಿಲ್ಲವೆಂದು ಮಾತು ಕೊಟ್ಟು ಸಹಿ ಹಾಕುವವರೆಗೂ ಯಾವ ಮಾತುಕತೆಯು ಇಲ್ಲ’ ಎಂದು ಪಟ್ಟು ಹಿಡಿದು ಕುಳಿತುಬಿಟ್ಟರು. ಕೊನೆಗೂ ಒಪ್ಪಿದ ಪಾಕಿಸ್ತಾನದ ಅಯೂಬ್  ಖಾನ್ ಒಪ್ಪಂದಕ್ಕೆ ಸಹಿ ಮಾಡಿದರು. 

ಶಾಸ್ತ್ರಿಯವರು ಒಂದು ಲೋಟ ಹಾಲು ಕುಡಿದು ನಿಶ್ಚಿಂತೆಯಿಂದ ಮಲಗಿದರು. ಹೃದಯಾಘಾತದಿಂದ ಮೃತಪಟ್ಟ ರೆಂದು ಸುದ್ದಿ ಬಂತು ದೇಹವೆಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು. ನಮ್ಮ ಯಜಮಾನರು ತೀರ ಸರಳ ಜೀವನ ನಡೆಸಿದವರು, ಪ್ರತಿದಿನವೂ ವ್ಯಾಯಾಮ ಮಾಡುತ್ತಿದ್ದರು, ಅವರಿಗೆ ಹೃದಯದ ಕಾಯಿಲೆ ಇರಲೇ ಇಲ್ಲ, ಅವರನ್ನು ವಿಷ ಕೊಟ್ಟು ಕೊಲ್ಲಲಾಗಿದೆ. ಹಾಗಾಗಿ ದೇಹವೆಲ್ಲಾ ನೀಲಿ ಬಣ್ಣಕ್ಕೆ ತಿರುಗಿದೆ’ ಎಂದು ಶಾಸ್ತ್ರಿಯವರ ಪತ್ನಿ ಲಲಿತ ಶಾಸ್ತ್ರಿ ಗೋಳಾಡಿದರೂ ಯಾರೂ ಕೇಳಲೇ ಇಲ್ಲ. `ಈ ಮನುಷ್ಯ ಬಹಳ ದುಡ್ಡು ಮಾಡಿಕೊಂಡಿದ್ದಾನೆ, ನಾವು ಅಂದುಕೊಂಡಷ್ಟು ಸಾಚಾ ಅಲ್ಲ’ ಎಂದು ಕೆಲ ರಾಜಕಾರಣಿಗಳು ಸಾವಿನ ಮನೆಯಲ್ಲೂ ಆರೋಪಿಸಿದರು. 

ಶಾಸ್ತ್ರೀಜಿ ಅವರ ಬ್ಯಾಂಕಿನ ಪಾಸ್‍ಪುಸ್ತಕವನ್ನು ಅವರ ಪತ್ನಿ ತಂದು ತೋರಿಸಿದಾಗ ಪ್ರಧಾನಿಯಾಗಿ ಶಾಸ್ತ್ರೀಯವರು ಸಾಯುವ ಕಾಲಕ್ಕೆ ಅದರಲ್ಲಿ
ಬರಿ 313 ರೂಪಾಯಿ ಇತ್ತು. ಇಂತಹ ಸರಳ, ಪ್ರಾಮಾಣಿಕ ಪ್ರಧಾನಿಯನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.


ಹೆಚ್. ಮಲ್ಲಿಕಾರ್ಜುನ
ಹರಪನಹಳ್ಳಿ
[email protected]

error: Content is protected !!