ಪ್ರತಿಭೆಯನ್ನು ಗುರುತಿಸುವ, ಬೆನ್ನು ಚಪ್ಪರಿಸುವ, ಒಳ್ಳೆಯ ಕೆಲಸ ಮಾಡಿದಾಗ ಪ್ರೋತ್ಸಾಹದ ಮಾತುಗಳನ್ನಾಡುವ, ಯಾರನ್ನೂ ದ್ವೇಷಿಸದ,
ಯಾರಿಗೂ ತೊಂದರೆ ನೀಡದ, ಎಲ್ಲರನ್ನೂ ತಬ್ಬಿಕೊಂಡು ಹೋಗುವ ಅವರ ವ್ಯಕ್ತಿತ್ವ ಅಸದಳವಾದುದು.
60-70ರ ದಶಕದಲ್ಲಿ ಸಿರಿಗೆರೆ ಎಂಬ ಪುಟ್ಟ ಗ್ರಾಮದಲ್ಲಿ ಸಹಪಂಕ್ತಿ ಭೋಜನ, ವಿಧವಾ ವಿವಾಹ, ಅಂತರ್ಜಾತಿ- ಅಂತರ ಧರ್ಮೀಯ ವಿವಾಹ, ಸಾಮೂಹಿಕ ವಿವಾಹ, ಅಮಾವಾಸೆಯ ದಿನ ಗೃಹ ಪ್ರವೇಶ, ವನ ಮಹೋತ್ಸವ, ವಚನ ಸಾಹಿತ್ಯ ಪ್ರಚಾರ, ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶ, ಶಿವಾನುಭವ ಪ್ರವಾಸ, ಶರಣರ ಕ್ಷೇತ್ರಗಳ ಸಂಶೋಧನೆ ಮುಂತಾದ ಚಟುವಟಿಕೆಗಳ ಮೂಲಕ ಹೊಸತನಕ್ಕೆ ನಾಂದಿ ಹಾಡಿದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಆ ಚಟುವಟಿಕೆಗಳು ಹೊರಜಗತ್ತಿಗೆ ತಿಳಿಯುವಂತೆ ಮಾಡುತ್ತಿದ್ದವರು ಎಸ್. ಬಿ. ರಂಗನಾಥ್. ಮುದ್ರಣ ಮಾಧ್ಯಮದಲ್ಲಿ ಇಷ್ಟೊಂದು ತ್ವರಿತ ಸೇವೆಯಿಲ್ಲದ ಆ ಕಾಲದಲ್ಲಿ, ರಾಷ್ಟ್ರ-ರಾಜ್ಯಮಟ್ಟದ ದಿನ ಪತ್ರಿಕೆಗಳಲ್ಲಿ ಸಿರಿಗೆರೆಯ ಈ ಸುದ್ದಿಗಳು, ಬರಹಗಳು ಪ್ರಕಟಣೆಗೊಳ್ಳುತ್ತಿದ್ದವು ಮತ್ತು ಸಮಾಜ ವಿಜ್ಞಾನಿಗಳ, ಚಿಂತಕರ ಗಮನ ಸೆಳೆಯುವಂತೆ ಮಾಡಿದ ಕೀರ್ತಿ ರಂಗನಾಥ್ ಅವರದು. ಆ ಕಾಲಕ್ಕೆ ಯುಎನ್ಐ, ಪಿಟಿಐ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಅಂತಹ ಅಂತರರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆಗಳ ವರದಿಗಾರರಾಗಿ ರಂಗನಾಥ್ ಅವರು ಸಲ್ಲಿಸಿದ ಸೇವೆ ಅನನ್ಯವಾದುದು.
ನಾಡಿನ ವಿವಿಧೆಡೆ ನಡೆಯುವ ತರಳಬಾಳು ಹುಣ್ಣಿಮೆಯಂತಹ ಒಂಬತ್ತು ದಿನಗಳ ಬೃಹತ್ ಉತ್ಸವಕ್ಕೆ, 1979ರ ಪಟ್ಟಾಭಿಷೇಕ ಮಹೋತ್ಸವಕ್ಕೆ , ಹಿರಿಯ ಗುರುಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ನಾಡಿನ ಮುಖ್ಯಮಂತ್ರಿ, ರಾಜ್ಯಪಾಲರಾದಿಯಾಗಿ ಹೆಸರಾಂತ ಸಾಹಿತಿಗಳನ್ನು, ಕಲಾವಿದರನ್ನು ಕರೆದು, ಕಳುಹಿಸುವ ಹಿರಿದಾದ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಿದ ಕೀರ್ತಿ ರಂಗನಾಥ್ ಅವರದು. ತೀರ ಇತ್ತೀಚೆಗೆ ಅಂದರೆ 2019ರಲ್ಲಿ ಹಳೇಬೀಡು ಮತ್ತು 2023ರಲ್ಲಿ ಕೊಟ್ಟೂರು ಪಟ್ಟಣಗಳಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಸಂದರ್ಭದಲ್ಲಿ ರಂಗನಾಥ್ ಅವರಿಗೆ ಎಂಬತ್ತರ ಏರು ವಯಸ್ಸು. ಆ ವಯಸ್ಸಿನ ಪರಿವೆಯಿಲ್ಲದೆ, ಯುವಕರನ್ನೂ ನಾಚಿಸುವಂತೆ ಒಂಬತ್ತು ದಿನಗಳ ಕಾಲವೂ ಬೆಳಗಿನಿಂದ ಕಾರ್ಯಕ್ರಮ ಮುಗಿಯುವ ನಡುರಾತ್ರಿಯವರೆಗೂ ಕಾರ್ಯಕರ್ತರಿಗೆ ಹುರಿದುಂಬಿಸುತ್ತಾ ಮಾರ್ಗದರ್ಶನ ಮಾಡುತ್ತಿದ್ದ ಪರಿ ಮರೆಯಲಾಗದು.
ಬಹುಮುಖವಾಗಿ ಬೆಳೆದಿರುವ ದಾವಣಗೆರೆ ನಗರದಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಪಟ್ಟ ಚಟುವಟಿಕೆಗಳಿಗಾಗಿ ಒಂದು ಸ್ವಂತ ಕಟ್ಟಡವಿರಲಿಲ್ಲ. ಅಂತಹ ಕಟ್ಟಡ ನಿರ್ಮಾಣ ಮಾಡಲು ಯೋಗ್ಯ ಸ್ಥಳವೂ ಲಭ್ಯವಿರಲಿಲ್ಲ. ಆದರೆ ರಂಗನಾಥ್ ಅವರ ಶ್ರಮ, ಹೋರಾಟದ ಫಲವೇ ಇಂದು ನಗರದ ಹೃದಯ ಭಾಗದಲ್ಲಿ ತಲೆಯೆತ್ತಿ ನಿಂತಿರುವ ಭವ್ಯವಾದ `ಕುವೆಂಪು ಕನ್ನಡ ಭವನ’. ಅದಕ್ಕಾಗಿ ವಿಧಾನಸೌಧ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳ ನಿವಾಸಕ್ಕೆ ಅಲೆದು, ಸೂಕ್ತ ನಿವೇಶನ ಪಡೆದು; ಅನೇಕ ವಿಘ್ನ ಸಂತೋಷಿಗಳ ನಡುವೆಯು ನಿರ್ಮಾಣಗೊಂಡಿರುವ `ಕುವೆಂಪು ಕನ್ನಡ ಭವನ’ ರಾಜ್ಯದಲ್ಲಿಯೇ ಅತ್ಯಂತ ಮಾದರಿ ಎನಿಸಿದೆ. ಇವೆಲ್ಲವೂ ಅವರ ಬದ್ಧತೆಗೆ ಸಾಕ್ಷಿಯಾಗಿದ್ದ ಕೆಲವು ಉದಾಹರಣೆಗಳು.
1962ರಿಂದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಸಾರ್ಥಕ ಸೇವೆ ಸಲ್ಲಿಸಿದ ಪ್ರೊ. ಎಸ್.ಬಿ. ರಂಗನಾಥ್ ಪ್ರೌಢಶಾಲಾ ಅಧ್ಯಾಪಕ, ಮುಖ್ಯೋಪಾಧ್ಯಾಯ, ಕಿರಿಯ ಕಾಲೇಜಿನ ಪ್ರಾಚಾರ್ಯ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ, ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಯೋಜಕ ಮುಂತಾದ ಹುದ್ದೆಗಳಲ್ಲಿ ತಮ್ಮ ಅನುಭವ, ಬದ್ಧತೆ ಹಾಗೂ ಅರ್ಪಣಾ ಮನೋಭಾವನೆಯಿಂದ ದುಡಿದವರು. ಇದರೊಂದಿಗೆ ನಾಡಿನಾದ್ಯಂತ 270ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ, ಆನಂತರ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯವರೆಗೆ ಅರವತ್ತು ವರ್ಷಗಳಷ್ಟು ದೀರ್ಘ ಕಾಲ ಕಾರ್ಯ ನಿರ್ವಹಿಸಿದ ಹಿರಿಮೆ ಇವರದು.
ಲೇಖಕ, ಅನುವಾದಕ, ಪತ್ರಕರ್ತರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿರುವ ಇವರು, ಸಂಘಟನೆಯಲ್ಲಿಯೂ ಸೈ ಎನಿಸಿಕೊಂಡವರು. ಅವಿಭಜಿತ ಚಿತ್ರದುರ್ಗ ಮತ್ತು ವಿಭಜಿತ ದಾವಣಗೆರೆ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕುವೆಂಪು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿ, ಸಿಂಡಿಕೇಟ್, ಸೆನೆಟ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮುಂತಾದವುಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವಿಗಳು.
ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾದರೂ, ಪ್ರವೃತ್ತಿಯಿಂದ ಅನುವಾದಕರಾಗಿ ಪ್ರಸಿದ್ಧರಾಗಿದ್ದರು. ಖುಷುವಂತ್ ಸಿಂಗ್, ಶಂಕರ್ ಪಿಳ್ಳೈ, ಭಗವಾನ್ ಎಸ್. ಗಿದ್ವಾನಿ, ಶಶಿ ತರೂರು, ಮಾಡಭೂಷಿ ಮದನಗೋಪಾಲ್ ಮುಂತಾದ ಹೆಸರಾಂತ ಲೇಖಕರ ಕೃತಿಗಳನ್ನು ಕನ್ನಡ ಓದುಗರಿಗೆ ನೀಡಿದ್ದಾರೆ. ತೊಂಬತ್ತರ ದಶಕದ ಆರಂಭದಲ್ಲಿ ಬಹಳ ಸುದ್ದಿ ಮಾಡಿದ್ದ ಗಿದ್ವಾನಿಯವರ `ಸ್ವೋರ್ಡ್ ಆಫ್ ಟಿಪ್ಪು’ ಕೃತಿಯನ್ನು ಅನುವಾದಿಸಿದ್ದು, ಇವರ ಸಾಹಸಗಳಲ್ಲಿ ಒಂದು. ಇದನ್ನು ಅನುವಾದಿಸುವವರಿಗೂ, ಪ್ರಕಟಿಸುವವರಿಗೂ ಗಂಡೆದೆ ಬೇಕಾಗಿತ್ತು. ಅಂತಹ ಗಂಡೆದೆ ರಂಗನಾಥ್ ಅವರದಾದರೆ, ಇದನ್ನು ಪ್ರಕಟಿಸಿದ್ದು ತರಳಬಾಳು ಪ್ರಕಾಶನ. ಈ ಕೃತಿ ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ. ಬೃಹತ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಂತಹ ಒತ್ತಡದ ಕೆಲಸಗಳ ನಡುವೆಯೂ ಶಶಿ ಥರೂರರ `ಕಗ್ಗತ್ತಲೆ ಕಾಲ’ ಮಾಡಭೂಷಿ ಮದನಗೋಪಾಲರ `ಮಾವೋನಿಂದ ಮಹರ್ಷಿವರೆಗೆ’ ಎನ್ನುವ ಕೃತಿಗಳನ್ನು ಅನುವಾದಿಸಿದರು. ಹಾಸ್ಯ ಲೇಖನ ಬರೆಯುವುದರಲ್ಲೂ ಸಿದ್ಧಹಸ್ತರಾಗಿದ್ದಕ್ಕೆ `ಎಲೆಲೆ ಮಧುಬಾಲೆ’ ಮತ್ತು `ಕಚಗು(ಳಿ)ಗೆ ಕಾಲ’ ಎಂಬ ಕೃತಿಗಳು ಸಾಕ್ಷಿ. ಕರಡು ತಿದ್ದುವುದರಲ್ಲಿ ವಿಶೇಷ ನೈಪುಣ್ಯತೆ. ಕನ್ನಡ ಅಧ್ಯಾಪಕರಿಗೆಲ್ಲಾ ಕರಡು ತಿದ್ದುವ ಕಾರ್ಯಾಗಾರ ಏರ್ಪಡಿಸಬೇಕೆಂದು ಪದೇಪದೇ ಹೇಳುತ್ತಿದ್ದರು. 1975ರಿಂದ `ತರಳಬಾಳು’ ತ್ರೈಮಾಸಿಕದ ಸಂಸ್ಥಾಪಕ ಸಂಪಾದಕರಾಗಿ, ಕೊನೆಯವರೆಗೂ ಸಂಪಾದಕ ಮಂಡಳಿಯ ಮಾರ್ಗದರ್ಶಕರಾಗಿದ್ದರು.
`ನಿತ್ಯೋತ್ಸವ’ದ ಪ್ರಸಿದ್ಧ ಕವಿ ಕೆ. ಎಸ್. ನಿಸಾರ್ ಅಹಮ್ಮದರ ಪರಮಾಪ್ತ ಶಿಷ್ಯರಾಗಿ, ಕನ್ನಡ ನಾಡು-ನುಡಿಯ ಸೇವಾ ಕೈಂಕರ್ಯದ ದೀಕ್ಷೆ ಪಡೆದು ಅಪೂರ್ವ ಪರಿಚಾರಕರಾಗಿ ರಂಗನಾಥರು ಸಲ್ಲಿಸಿದ ಸೇವೆ ಅನನ್ಯ. ಚನ್ನಗಿರಿ ತಾಲ್ಲೂಕಿನ ಸಿದ್ಧನಮಠ ಗ್ರಾಮದಲ್ಲಿ ನಾಡಿಗರ ಬಸಪ್ಪ ಮತ್ತು ಕಮಲಮ್ಮ ದಂಪತಿ 1941 ಜೂನ್ 18ರಂದು ಜನಿಸಿದ ರಂಗನಾಥ್, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಬಾಯಲ್ಲಿ ಪ್ರೀತಿಯ ರಂಗಣ್ಣ ಆಗಿದ್ದರು. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕಾಲದಲ್ಲಿ ವಿದ್ಯಾಸಂಸ್ಥೆ ಮತ್ತು ಇತರೆ ಅಂಗ ಸಂಸ್ಥೆಗಳ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದವರು.
ಪ್ರತಿಭೆಯನ್ನು ಗುರುತಿಸುವ, ಬೆನ್ನು ಚಪ್ಪರಿಸುವ, ಒಳ್ಳೆಯ ಕೆಲಸ ಮಾಡಿದಾಗ ಪೋನ್ ಮಾಡಿ ಪ್ರೋತ್ಸಾ ಹದ ಮಾತುಗಳನ್ನಾಡುವ, ಯಾರನ್ನೂ ದ್ವೇಷಿಸದ, ಯಾರಿಗೂ ತೊಂದರೆ ನೀಡದ, ಎಲ್ಲರನ್ನೂ ತಬ್ಬಿಕೊಂಡು ಹೋಗುವ ಅವರ ವ್ಯಕ್ತಿತ್ವ ಅಸದಳವಾದುದು.
ಅನಾರೋಗ್ಯದ ನಡುವೆಯೂ 2024ರ ಫೆಬ್ರವರಿ ಯಲ್ಲಿ ಸಿರಿಗೆರೆಯಲ್ಲಿ ಜರುಗಿದ ಸರಳ ತರಳಬಾಳು ಹುಣ್ಣಿಮೆಯ ಬಗ್ಗೆ ಲೇಖನ ಬರೆದು, ಪತ್ರಿಕೆಗಳಿಗೆ ಕಳುಹಿಸಿದ್ದರು. ಸಾವಿನ ಮನೆಯ ಹೊಸ್ತಿಲಲ್ಲಿದ್ದಾಗಲೂ ಕುವೆಂಪು ಅವರ ಆತ್ಮಕಥೆ `ನೆನಪಿನ ದೋಣಿ’ಯನ್ನು ಮತ್ತೊಮ್ಮೆ ಓದುತ್ತಿದ್ದರು. ಅಂತಹ ವಿಷಮ ಪರಿಸ್ಥಿತಿ ಯಲ್ಲೂ ಓದು-ಬರಹವನ್ನು ಕೊನೆಯ ಕ್ಷಣದವರೆಗೂ ಬಿಟ್ಟಿರಲಿಲ್ಲ. ಅಂತಿಮ ಉಸಿರಿನವರೆಗೂ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸೇವೆಗೆ ಅವರ ಮನಸ್ಸು ತುಡಿಯುತಿತ್ತು ಎನ್ನುವುದಕ್ಕೆ ಸಾವಿನ
ಹಿಂದಿನ ದಿನ ಅವರು ಪೂಜ್ಯರಿಗೆ ಬರೆದ ಪತ್ರ ಸಾಕ್ಷಿಯಾಗಿದೆ.
ಬ್ರಿಟಿಷ್ ಆಳ್ವಿಕೆಯ ಕಾಲದ ಭಾರತದ ಬಿಕ್ಕಟ್ಟು ಗಳನ್ನು ಯಥಾವತ್ತಾಗಿ ಚಿತ್ರಿಸಿದ ಶಶಿ ಥರೂರ್ ಕೃತಿ `ಕಗ್ಗತ್ತಲೆಯ ಕಾಲ’ ಕನ್ನಡ ಅನುವಾದವನ್ನು 2022ರ ಆಗಸ್ಟ್ 15ರಂದು ಸಿರಿಗೆರೆಯಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಲೋಕಾರ್ಪಣೆ ಮಾಡಿಸಿದ್ದರು. ದೇಶವೆಲ್ಲಾ 2024ರ. ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಸಡಗರದಲ್ಲಿರು ವಾಗ ನಮ್ಮನ್ನು ಬಿಟ್ಟು ದೇಹಾತೀತರಾದರು.
ತಮ್ಮ ಎತ್ತರದ ನಿಲುವಿನಂತೆ ಎತ್ತರದ ವ್ಯಕ್ತಿತ್ವ ದಿಂದಲೂ ಅಪರೂಪದಲ್ಲಿ ಅಪರೂಪದವರಾಗಿದ್ದ ಪ್ರೊ. ಎಸ್. ಬಿ. ರಂಗನಾಥ್ ಅವರ ಅಗಲಿಕೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸಾಂಸ್ಕೃತಿಕ ವಕ್ತಾರ, ಅನನ್ಯ ಸೇವಕನನ್ನು ಕಳೆದುಕೊಂಡಿದೆ ಎಂದರೆ ಅತಿಶಯೋಕ್ತಿ ಯಾಗಲಾರದು. ಅವರ ಆದರ್ಶನೀಯ ಅರ್ಪಣಾ ಮನೋಭಾವ ನಮಗೆಲ್ಲಾ ದಾರಿದೀಪ. ಅದನ್ನು ಅನುಕರಿ ಸುವುದೇ ನಾವು ಅವರಿಗೆ ನೀಡುವ ದೊಡ್ಡ ಗೌರವ.
ನಾಗರಾಜ ಸಿರಿಗೆರೆ
ಕನ್ನಡ ಅಧ್ಯಾಪಕ
ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆ, ಆನಗೋಡು
[email protected]