`ಕ್ಯಾನ್ಸರ್ ಎಂದರೆ `ಕ್ಯಾನ್ಸಲ್’ ಎಂಬ ಮಾತು ಹೆಚ್ಚು ಪ್ರಚಲಿತದಲ್ಲಿದೆ, ಆದರೆ ಇದನ್ನು ಹುಸಿಯಾಗಿಸುವುದು ರೋಗಿ ಮತ್ತು ವೈದ್ಯರ ಕೈಲಿದೆ. ಇದು ಒಂದು ಮಾರಕ ರೋಗವಾಗಿದ್ದು, ಈ ರೋಗ ಬಂದಿದೆ ಎಂದು ಯಾರಿಗಾ ದರೂ ತಿಳಿದರೆ ಸಾಕು ತುಂಬಾ ಭಯಭೀತರಾಗುತ್ತಾರೆ. ಆರಂಭಿಕ ಹಂತದಲ್ಲಿ ಈ ರೋಗವನ್ನು ಪತ್ತೆ ಹಚ್ಚಿದರೆ ರೋಗಿ ಬಹು ಬೇಗ ಗುಣಮುಖನಾಗಬಹುದು, ಆದರೆ ಈ ರೋಗ ಬಂದಿದೆ ಎಂದು ತಿಳಿಯುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ. ನಂತರದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಂಡಲ್ಲಿ ರೋಗಿ ಗುಣಮುಖನಾಗುವ ಸಾಧ್ಯತೆ ಹೆಚ್ಚು. ಯಾವುದೇ ಕಾಯಿಲೆ ಯಾವ ವಯಸ್ಸಿನವರಿ ಗಾದರೂ ಬರಬಹುದು. ಹಾಗೆಯೇ ಕ್ಯಾನ್ಸರ್ ಕೂಡ. 40 ವರ್ಷ ಮೇಲ್ಪಟ್ಟ ಎಲ್ಲಾ ಪುರುಷ ಹಾಗೂ ಮಹಿಳೆಯರು ತಪ್ಪದೇ ವರ್ಷಕ್ಕೊಮ್ಮೆ ದೇಹವನ್ನು ತಪಾಸಣೆಗೆ ಒಳಪಡಿಸಿ, ತಾನು ಇತರೆ ರೋಗಗಳ ಜೊತೆಗೆ, ಕ್ಯಾನ್ಸರ್ನಿಂದಲೂ ಮುಕ್ತ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕ್ಯಾನ್ಸರ್ ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ಇದು ದೇಹದಲ್ಲಿ ಅನಿಯಂತ್ರಿತವಾಗಿ ಕೆಲವು ಜೀವಕೋಶಗಳನ್ನು ಬೆಳೆ ಸಲು ಪ್ರಾರಂಭಿಸುತ್ತದೆ, ಅಂತಿಮವಾಗಿ ಅದು ದೇಹದ ಇತರೆ ಭಾಗಗಳಿಗೂ ಹರಡಲು ಮುಂದಾಗುತ್ತದೆ.
“Prevention is better than cure” ಎಂಬಂತೆ, ಕ್ಯಾನ್ಸರ್ ನಮ್ಮ ಬಳಿ ಸುಳಿಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತೀ ಅಗತ್ಯ.ಇದಕ್ಕೆಂದೇ ನಿಯಮಿತ ವಾಗಿ ತಪಾಸಣೆ ಮಾಡಿಸುವುದು ಒಳಿತು. ಕ್ಯಾನ್ಸರ್ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಶ್ವಾದ್ಯಂತ ಜನರಿಗೆ ಜಾಗೃತಿ ಮೂಡಿಸಲು ಹಾಗೂ ಈ ರೋಗಕ್ಕೆ ಸೂಕ್ತ ಔಷಧಿ ಕಂಡುಹಿಡಿಯಲು ಬೇಕಾದ ಸಂಶೋಧನೆಗಳ ಮೇಲೆ ಹೆಚ್ಚು ಗಮನ ಹರಿಸಲು ಪ್ರತಿ ವರ್ಷ ಆಗಸ್ಟ್ 01 ರಂದು ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನವನ್ನು ಆಚರಿಸಲಾ ಗುತ್ತದೆ. ಇದರ ಆಚರಣೆ 2012ರಿಂದ ಆರಂಭವಾಯಿತು.
ಶ್ವಾಸಕೋಶದ ಕ್ಯಾನ್ಸರ್ ಒಂದು ವಿಧದ ಕ್ಯಾನ್ಸರ್ ಆಗಿದ್ದು, ಅದು ಸೋಂಕಿತ ವ್ಯಕ್ತಿಯ ಶ್ವಾಸಕೋಶದ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಈ ರೋಗಕ್ಕೆ ಪ್ರಮುಖ ಕಾರಣ ಧೂಮಪಾನ. ಇತ್ತೀಚೆಗೆ ಈ ಕ್ಯಾನ್ಸರ್ ನಿಂದ ಹಲವರು ಸಾವಿಗೀಡಾಗಿದ್ದಾರೆ. ಈ ಸಮಸ್ಯೆ ಪುರುಷ ಮತ್ತು ಮಹಿಳೆ ಇಬ್ಬರಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲೂ ಧೂಮಪಾನಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ತಂಬಾಕಿನ ಹೊಗೆ ಸಾವಿರಾರು ರಾಸಾಯನಿಕಗಳನ್ನು ಹೊಂದಿರುತ್ತದೆ, ಅವುಗಳಲ್ಲಿ ಹಲವು ಕಾರ್ಸಿನೋಜೆನಿಕ್ (ಕ್ಯಾನ್ಸರ್ ಉಂಟುಮಾಡುವ) ಎಂಬ ರಾಸಾಯನಿಕಗಳನ್ನು ಉಸಿರಾಡಿದಾಗ, ಅವು ಶ್ವಾಸಕೋಶದ ಒಳಪದರದ ಜೀವಕೋಶಗಳನ್ನು ಹಾನಿಗೊಳಿಸಬಹುದು, ಅಂತಿಮ ವಾಗಿ ಕ್ಯಾನ್ಸರ್ ಕೋಶಗಳ ಅನಿಯಂತ್ರಿತ ಬೆಳವಣಿಗೆಗೆ ಕಾರಣವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ವಿಶ್ವಾದ್ಯಂತ ಕ್ಯಾನ್ಸರ್ ಸಾವುಗಳಿಗೆ ಪ್ರಮುಖ ಕಾರಣವಾಗಿದೆ. ಕ್ಯಾನ್ಸರ್ ಬರೀ ಧೂಮಪಾನ, ಮದ್ಯಪಾನ ಹಾಗೂ ಗುಟ್ಕಾ ಸೇವಿಸು ವವರಿಗಷ್ಟೇ ಮಾತ್ರ ಬರುತ್ತದೆ ಎನ್ನುವುದು ಸುಳ್ಳು, ಅದು ಈಗ ನಾವು ಸೇವಿಸುವ ನೀರು ಹಾಗೂ ಆಹಾರದಿಂದಲೂ ಬಂದರೂ ಆಶ್ಚರ್ಯವಿಲ್ಲ. ಕ್ಯಾನ್ಸರ್ ಬಂದಾಗ, ನಮಗೆ ಆಹಾರ ಸೇವಿಸಲೂ ಕಷ್ಟವಾಗುವುದು. ನಾವು ತೀರಾ ಬಿಸಿಯಾದ ನೀರು ಹಾಗೂ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದಾಗಲೂ ಈ ಬಗೆಯ ಕ್ಯಾನ್ಸರ್ ಬರುತ್ತದೆ.
ರೋಗ ಲಕ್ಷಣಗಳು: ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಆರಂಭಿಕ ಹಂತದಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬರದೇ ಇದ್ದರೂ ರೋಗವು ತೀವ್ರತರವಾದಾಗ ಈ ಕೆಳಗಿನ ಲಕ್ಷಣಗಳು ಗೋಚರಿಸುತ್ತವೆ.
* ನಿರಂತರವಾಗಿ ಕೆಮ್ಮುವುದು ಹಾಗೂ ಕೆಮ್ಮಿದಾಗ ರಕ್ತ ಬರುವುದು .
* ಉಸಿರಾಟದ ತೊಂದರೆ.
* ಉಬ್ಬಸ.
* ವಿಪರೀತ ತಲೆನೋವು.
* ದೇಹದ ತೂಕ ಕಡಿಮೆಯಾಗುವುದು.
* ಹಸಿವು ಮತ್ತು ಆಯಾಸ.
* ಮುಖ ಅಥವಾ ಕುತ್ತಿಗೆಯಲ್ಲಿ ಊತ .
* ಎದೆ ನೋವು, ವಿಶೇಷವಾಗಿ ನಗುವಾಗ ಅಥವಾ ಆಳವಾದ ಉಸಿರನ್ನು ತೆಗೆದುಕೊಳ್ಳುವಾಗ ಧ್ವನಿಯ ಕರ್ಕಶತೆ
* ತ್ವಚೆಯಲ್ಲಿ ಬದಲಾವಣೆಯಾಗುವುದು.
* ಮಹಿಳೆಯರಲ್ಲಿ ಅಸಹಜ ರಕ್ತಸ್ರಾವ, ನೋವು ಮತ್ತು ಅಸ್ವಸ್ಥತೆ.
* ಮೂಳೆ ಹಾಗೂ ಕೀಲುಗಳ ನೋವು.
* ಮುಖ ಮತ್ತು ತೋಳುಗಳ ಉರಿಯೂತ ಹಾಗೂ ಮುಖದ ಪಾರ್ಶ್ವವಾಯು ಕೂಡ ಶ್ವಾಸಕೋಶದ ಕ್ಯಾನ್ಸರ್ನ ಲಕ್ಷಣವಾಗಿರಬಹುದು.
ಹೀಗಾಗಿ ಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಸಂಭವನೀಯ ಚಿಕಿತ್ಸೆಗಳು :
* ಶಸ್ತ್ರಚಿಕಿತ್ಸೆ.
* ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆ.
* ಇತರೆ ಆಯ್ಕೆಗಳಲ್ಲಿ ಉದ್ದೇಶಿತ ಚಿಕಿತ್ಸೆ.
* ಇಮ್ಯುನೋಥೆರಪಿ, ಲೇಸರ್, ಹಾರ್ಮೋನ್ ಥೆರಪಿ ಇತ್ಯಾದಿ.
ರೋಗ ತಡೆಗಟ್ಟುವ ಬಗೆ : ಯಾವುದೇ ಬಗೆಯ ಕ್ಯಾನ್ಸರನ್ನು ತಡೆಗಟ್ಟಲು ಖಚಿತವಾದ ಮಾರ್ಗವಿಲ್ಲದಿದ್ದರೂ ಅಪಾಯದ ಮಟ್ಟವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಅಂದರೆ
* ಹೆಚ್ಚು ಜನದಟ್ಟಣೆ ಪ್ರದೇಶಗಳಾದ ಮಾರುಕಟ್ಟೆ, ಬಸ್, ರೈಲು ಮತ್ತು ವಿಮಾನ ನಿಲ್ದಾಣಗಳಂತಹ ಅಧಿಕ ವಾಯುಮಾಲಿನ್ಯ ಇರುವ ಕಡೆ ಮಾಸ್ಕ್ ಧರಿಸುವುದು ಒಳ್ಳೆಯದು.
* ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು.
* ನಿತ್ಯವೂ ವ್ಯಾಯಾಮ ಮಾಡುವುದು.
* ಆಲ್ಕೋಹಾಲ್ ಸೇವನೆಯನ್ನು ತ್ಯಜಿಸುವುದು.
* ಲೈಂಗಿಕವಾಗಿ ಹರಡುವ ಸೋಂಕುಗಳಿಂದ ರಕ್ಷಿಸಿಕೊಳ್ಳುವುದು.
* ನಿಯಮಿತವಾಗಿ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು.
* ಧೂಮಪಾನ ಮಾಡುವ ಅಭ್ಯಾಸ ಎಷ್ಟು ಹಾನಿಕಾರ ಕವೋ ಅಷ್ಟೇ ತೊಂದರೆ ಅದರ ಹೊಗೆಯನ್ನು ಸೇವಿಸು ವುದು. ಆದ್ದರಿಂದ ಆದಷ್ಟು ಅದರಿಂದ ದೂರವಿರು ವುದು.
* ಸಿಗರೇಟ್ ಸೇದುವವರ ಪಕ್ಕದಲ್ಲಿ ನಿಲ್ಲದಂತೆ ಎಚ್ಚರ ವಹಿಸುವುದು.
* ಆದಷ್ಟು ಧೂಳು ಮುಕ್ತ ಜಾಗದಲ್ಲಿ ಸಂಚರಿಸುವುದು.
* ಸುಟ್ಟ ಪ್ಲಾಸ್ಟಿಕ್ ನಿಂದ ಬರುವ ಹೊಗೆಯಿಂದ ಅಂತರ ಕಾಯ್ದುಕೊಳ್ಳುವುದು .
* ಕ್ಯಾನ್ಸರ್ ವಿರುದ್ಧ ಹೋರಾಡಲು ಬೆರ್ರಿ ಹಣ್ಣುಗಳು, ಕ್ರೂಸಿಫೆರಸ್ ತರಕಾರಿಗಳು, ಹೂಕೋಸು, ಎಲೆಕೋಸು, ಬ್ರಸೆಲ್ಸ್ ಮೊಗ್ಗುಗಳು, ಮೀನು, ದ್ವಿದಳ ಧಾನ್ಯಗಳು ಹಾಗೂ ಡಾರ್ಕ್ ಚಾಕೊಲೇಟ್ಗಳನ್ನು ಸೇವಿಸುವುದು ಉತ್ತಮ.
ಡಾ. ಶಿವಯ್ಯ ಎಸ್.
ವಿಶ್ರಾಂತ ಪ್ರಾಧ್ಯಾಪಕರು , ದಾವಣಗೆರೆ.
[email protected]