ಪುಣೆಯ ಪೋಶೆ ಕಾರಿನಿಂದ ಬಯಲಾದ ವ್ಯವಸ್ಥೆಯ ಅವಾಂತರಗಳು

ಪುಣೆಯ ಪೋಶೆ ಕಾರಿನಿಂದ ಬಯಲಾದ ವ್ಯವಸ್ಥೆಯ ಅವಾಂತರಗಳು

ಪುಣೆಯಲ್ಲಿ ಪೋಶೆ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಆಗುತ್ತಿರುವ ಬೆಳವಣಿಗೆಗಳು ದಿನೇ ದಿನೇ ಹೊಸ ಸ್ವರೂಪ ಪಡೆಯುತ್ತಿವೆ. ಮೊದಲು ಪ್ರಕರಣಕ್ಕೆ ಸಂಬಂಧಿಸಿದ ಅಪ್ರಾಪ್ತ ಬಾಲಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಬಾಲಕನನ್ನು ಬಂಧಿಸಲಾಗಿದೆ. 

ಜೊತೆಗೆ, ಆತನ ತಂದೆ ಹಾಗೂ ತಾತನೂ ಪ್ರಕರಣದಲ್ಲಿ ಬಂಧಿತ ರಾಗಿದ್ದಾರೆ. ನಂತರದಲ್ಲಿ ಅಪ್ರಾಪ್ತನ ರಕ್ತದ ಮಾದರಿಯನ್ನು ಬದಲಿಸಿದ ಆರೋಪದ ಮೇಲೆ ಇಬ್ಬರು ವೈದ್ಯರೂ ಬಂಧನಕ್ಕೆ ಒಳಗಾಗಿದ್ದಾರೆ.

ಅಪ್ರಾಪ್ತನ ತಂದೆ ಪ್ರಭಾವಿಯಾಗಿರುವ ಕಾರಣ ಇಡೀ ಪ್ರಕರಣವನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ವ್ಯವಸ್ಥೆಯ ಹಲವರ ಮೇಲೆ ಆಕ್ರೋಶ ಹೊರ ಹಾಕಲಾಗುತ್ತಿದೆ. ಆದರೆ, ಇಡೀ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿದ ಮಕ್ಕಳ ರಕ್ಷಣೆ ಹಾಗೂ ಆರೈಕೆ ಕಾಯ್ದೆ ಬಗ್ಗೆ ನಿಜವಾದ ಚರ್ಚೆಗಳು ನಡೆಯುತ್ತಿಲ್ಲ ಎನ್ನಿಸುತ್ತಿದೆ.

ಈ ಕಾಯ್ದೆಯ ಅನ್ವಯ ಅಪ್ರಾಪ್ತನನ್ನು ಕಾನೂನು ಸಂಘರ್ಷಕ್ಕೆ ಸಿಲುಕಿದ ಮಗು (ಸಿ.ಸಿ.ಐ.) ಎಂದು ಭಾವಿಸಬೇಕಾಗುತ್ತದೆ. ಅದರ ಅನ್ವಯ ವಿಚಾರಣೆ ಯನ್ನು ಬಾಲ ನ್ಯಾಯ ಮಂಡಳಿಯ ಮೂಲಕ ನಡೆಸಬೇಕಾಗುತ್ತದೆ. ಮಕ್ಕಳ ರಕ್ಷಣೆ ಹಾಗೂ ಆರೈಕೆ ಕಾಯ್ದೆಯ ಅನ್ವಯ, ಕಾನೂನು ಸಂಘರ್ಷಕ್ಕೆ ಸಿಲುಕಿದ ಮಗುವಿಗೆ ವಿಧಿಸಬಹುದಾದ ಗರಿಷ್ಠ ಶಿಕ್ಷೆಯ ಪ್ರಮಾಣ ಮೂರು ವರ್ಷ.

ಈ ಕಾಯ್ದೆಯ ಬಗ್ಗೆ ಹಿಂದಿನಿಂದಲೂ ಪರ ಹಾಗೂ ವಿರೋಧದ ದನಿಗಳಿವೆ. ಲಷ್ಕರ್ ಎ ತೊಯ್ಬಾ ಉಗ್ರವಾದಿ ಸಂಘಟನೆಯು ಈ ಕಾಯ್ದೆ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿತ್ತು ಎಂಬ ವರದಿಗಳೂ ಬಂದಿದ್ದವು. ಉಗ್ರರು ಬಂಧನಕ್ಕೊಳಗಾದಾಗ ವಯಸ್ಸನ್ನು 18ಕ್ಕಿಂತ ಕಡಿಮೆ ಎಂದು ಹೇಳುವಂತೆ ಸಂಘಟನೆ ತಿಳಿಸಿತ್ತು ಎಂದು ವರದಿಗಳು ಹೇಳಿದ್ದವು.

ಅಷ್ಟೇ ಅಲ್ಲ, ಅಪ್ರಾಪ್ತ ವಯಸ್ಸಿನವರು `ಕಾನೂನು ಸಂಘರ್ಷ’ಕ್ಕೆ ಸಿಲುಕಿದಾಗ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದನ್ನು ಗಮನಿಸಿ, ಹಲವು ಅಪರಾಧ ತಂಡಗಳು ಅಪ್ರಾಪ್ತರನ್ನು ನೇಮಿಸಿಕೊಳ್ಳುತ್ತಿದ್ದುದೂ ಬೆಳಕಿಗೆ ಬಂದಿತ್ತು. ದೆಹಲಿಯ ಠಕ್ ಠಕ್ ಗ್ಯಾಂಗ್ ಹಾಗೂ ಕಬಾಡಿವಾಲ ಗ್ಯಾಂಗ್‌ಗಳು ಅಪ್ರಾಪ್ತರನ್ನು ಬಳಸಿಕೊಂಡು ಕಳ್ಳತನ ಮಾಡುವ ಜಾಲವನ್ನೇ ಹೊಂದಿದ್ದು ಸುದ್ದಿಯಾಗಿತ್ತು. ಚೆನ್ನೈ ಹಾಗೂ ಗೋವಾಗಳಲ್ಲಿ ಕಳೆದ ವರ್ಷ ಅಪ್ರಾಪ್ತರನ್ನು ಅಪರಾಧಕ್ಕೆ ಬಳಸಿಕೊಳ್ಳುವ ಗ್ಯಾಂಗ್‌ಗಳ ವರದಿಗಳು ಬಂದಿದ್ದವು.

ಕೇಂದ್ರ ಸರ್ಕಾರದ ವರದಿಯ ಪ್ರಕಾರ, 2020ರಲ್ಲಿ ಅಪ್ರಾಪ್ತರು ಅಪರಾಧ ಎಸಗಿದ 29,768 ಪ್ರಕರಣಗಳು ನಡೆದಿದ್ದವು. 2021ರಲ್ಲಿ ಈ ಸಂಖ್ಯೆ 31,170ಕ್ಕೆ ಏರಿಕೆಯಾಗಿತ್ತು. 2022ರಲ್ಲಿ ಅಪರಾಧಗಳ ಸಂಖ್ಯೆ 30,555 ಆಗಿತ್ತು. ಒಟ್ಟು ಅಪರಾಧಗಳಲ್ಲಿ ಈ ವರ್ಗದ ಪ್ರಮಾಣ ಶೇ.6.9 ಆಗಿತ್ತು.

ಮಕ್ಕಳು ಹುಟ್ಟಿನಿಂದ ಅಪರಾಧಿಗಳಾಗಿರುವುದಿಲ್ಲ. ಅವರು ಬೆಳೆದ ವಾತಾವರಣ, ಪಾಲಕರು ಹಾಗೂ ಸ್ನೇಹಿತರ ಪ್ರಭಾವ ಮತ್ತಿತರೆ ಕಾರಣಗಳಿಂದ ಮಕ್ಕಳು ಅಪರಾಧದ ಕಡೆಗೆ ಸೆಳೆಯಲ್ಪಡುತ್ತಾರೆ. ಹೀಗಾಗಿ ಅವರ ಸುಧಾರಣೆಯ ಕಡೆ ಗಮನ ಹರಿಸಬೇಕು ಎಂಬ ಸದುದ್ದೇಶದಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ, ಕಾಯ್ದೆಯ ಉದ್ದೇಶ ಎಷ್ಟೇ ಒಳ್ಳೆಯದಿದ್ದರೂ, ಜಾರಿಗೆ ತರುವ ವ್ಯವಸ್ಥೆ ಸಮರ್ಪಕವಾಗಿರಬೇಕಿದೆ.

ಪುಣೆ ಕಾರು ಅಪಘಾತದ ಪ್ರಕರಣವನ್ನೇ ಗಮನಿಸುವುದಾದರೆ, ಕಾನೂನು ಸಂಘರ್ಷಕ್ಕೆ ಸಿಲುಕಿದ ಮಗುವಿಗಿಂತ, ಆ ಮಗುವನ್ನು ರಕ್ಷಿಸಲು ವಯಸ್ಕರು ಮಾಡಿದ್ದಾರೆ ಎನ್ನಲಾಗುವ ತಪ್ಪುಗಳು ಆಘಾತಕಾರಿಯಾಗಿವೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಜಾಮೀನು ದೊರೆಯುವಂತೆ ಮಾಡಿದ ವ್ಯವಸ್ಥೆ, ಮಗುವಿನ ರಕ್ಷಣೆಗಾಗಿ ಪ್ರಭಾವಿಗಳು ಕಾನೂನು ಧಿಕ್ಕರಿಸುವ ಮಟ್ಟಕ್ಕೆ ಹೋಗಿದ್ದು, ರಕ್ತದ ಮಾದರಿ ಪರೀಕ್ಷೆಗಳನ್ನೇ ಬದಲಿಸಿದ್ದು, ಠಾಣೆಯಲ್ಲಿದ್ದ ಮಗುವಿಗೆ ಪೊಲೀಸರು ಪಿಜ್ಜಾ ಇತ್ಯಾದಿಗಳನ್ನು ತರಿಸಿ ಕೊಟ್ಟಿದ್ದರು ಎಂಬ ಆರೋಪಗಳೆಲ್ಲವೂ ನಮ್ಮ ವ್ಯವಸ್ಥೆ ಎಷ್ಟರ ಮಟ್ಟಿಗಿದೆ ಎಂಬುದನ್ನು ತೋರಿಸುತ್ತಿದೆ. ಇಂತಹ ವ್ಯವಸ್ಥೆ ಕಾನೂನು ಸಂಘರ್ಷಕ್ಕೆ ಸಿಲುಕಿದ ಮಕ್ಕಳನ್ನು ಸುಧಾರಿಸಲು ಸಾಧ್ಯವೇ?

ಕಾನೂನು ಸಂಘರ್ಷಕ್ಕೆ ಸಿಲುಕಿದ ಮಕ್ಕಳ ಸುಧಾರಣೆ ಹಾಗೂ ಅವರನ್ನು ಮತ್ತೆ ಸಮಾಜದ ಮುಖ್ಯ ವಾಹಿನಿಗೆ ತರುವುದು ದೊಡ್ಡ ಸವಾಲಾಗಿದೆ. ಇದಕ್ಕೆ ಸಮಗ್ರ ವ್ಯವಸ್ಥೆಯಲ್ಲಿ ಸುಧಾರಣೆಯ ಕ್ರಮಗಳ ಅಗತ್ಯವಿದೆ ಎಂದು ಕಾನೂನು ವಲಯದ ಪರಿಣಿತರು ಹೇಳುತ್ತಲೇ ಬಂದಿದ್ದಾರೆ. ಆದರೆ, ಈ ದಿಸೆಯಲ್ಲಿ ಕ್ರಮ ತೆಗೆದುಕೊಳ್ಳುವುದು ಒತ್ತಟ್ಟಿಗಿರಲಿ, ಸಂಸತ್ತಿನಲ್ಲಿ ಈ ಕಾಯ್ದೆ ಜಾರಿ ಹಾಗೂ ತಿದ್ದುಪಡಿ ವೇಳೆ ಸೂಕ್ತ ಚರ್ಚೆಗಳೇ ನಡೆದಿಲ್ಲ ಎಂಬ ಆಕ್ಷೇಪಗಳಿವೆ.

ಮಕ್ಕಳ ರಕ್ಷಣೆ ಹಾಗೂ ಆರೈಕೆ ಕಾಯ್ದೆ ದುರುಪಯೋಗವನ್ನು ತಡೆಯುವ ತುರ್ತು ಅಗತ್ಯವಿದೆ. ಅಮೆರಿಕ ಮುಂತಾದ ದೇಶಗಳಲ್ಲಿ ಘೋರ ಅಪರಾಧ ಎಸಗಿದ ಅಪ್ರಾಪ್ತರನ್ನು ವಯಸ್ಕರೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲೂ ಈ ಬಗ್ಗೆ ಪರಿಶೀಲಿಸಬೇಕಿದೆ. ಓರ್ವ ಅಪರಾಧಿಗೆ ತಕ್ಕ ಶಿಕ್ಷೆಯಾದರೆ, ಸಾವಿರ ಜನರು ಅಪರಾಧ ಎಸಗಲು ಹಿಂಜರಿಯುತ್ತಾರೆ ಎಂಬ ವಾದವೂ ಇದೆ. ಇದೆಲ್ಲದರ ಬಗ್ಗೆ ಸೂಕ್ತ ಚರ್ಚೆಯಾದಾಗ ಹಾಗೂ ಕ್ರಮಗಳಾದಾಗ ಮಾತ್ರ ಪುಣೆ ಅಪಘಾತದ ನಂತರ ವ್ಯವಸ್ಥೆ ಎಚ್ಚೆತ್ತುಕೊಂಡಿದೆ ಎಂದು ಭಾವಿಸಬಹುದು.


ಬಿ.ಜಿ. ಪ್ರವೀಣ್ ಕುಮಾರ್
ದಾವಣಗೆರೆ.

error: Content is protected !!