ಅಪ್ರಸ್ತುತ, ಅತಿರೇಕಗಳ ಪ್ರಚಾರದಲ್ಲೇ ಮುಗಿಯುತ್ತಿದೆ ಚುನಾವಣೆ

ಅಪ್ರಸ್ತುತ, ಅತಿರೇಕಗಳ ಪ್ರಚಾರದಲ್ಲೇ ಮುಗಿಯುತ್ತಿದೆ ಚುನಾವಣೆ

ಮಾತುಗಳಿಗಿಲ್ಲ ಮಹತ್ವ…

ಪ್ರಚಾರದಲ್ಲಿರುವ ಸಲುವಾಗಿ ಏನೋ ಒಂದು ಪ್ರಹಸನ ಮಾಡುವುದು ಇಲ್ಲವೇ ಅತಿರೇಕದ ಮಾತುಗಳನ್ನು ಆಡುವುದು ರಾಜಕಾರಣದಲ್ಲಿ ಅಭ್ಯಾಸದಂತಾಗಿ ಹೋಗಿದೆ. ಚಿಪ್ಪು – ಚೊಂಬಿನ ಪ್ರಚಾರ ಇದಕ್ಕೊಂದು ಉದಾಹರಣೆ.
ಸಾಮಾಜಿಕ ಜಾಲತಾಣದ ಈ ಕಾಲದಲ್ಲಿ ರಾಜಕಾರಣಿಗಳ ಮಾತುಗಳ ಗಾಂಭೀರ್ಯ ಹಿಂದೆಗಿಂತಲೂ ತಳಮಟ್ಟಕ್ಕೆ ತಲುಪುತ್ತಿರುವ ಸೂಚನೆಗಳು ಕಂಡು ಬರುತ್ತಿವೆ. ಮೌಲ್ಯಗಳಿಲ್ಲದ ಮಾತುಗಳ ಎದುರು ಸಿದ್ಧಾಂತಗಳು ಸವಕಲಾಗುತ್ತಿವೆ.
`ಸ್ಫೋಟಕ’ ಹೇಳಿಕೆ ನೀಡುವುದು, ನಂತರ ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದು ಹೆಚ್ಚಾಗುತ್ತಿದೆ. ಒಂದು ಪಕ್ಷದಲ್ಲಿದ್ದಾಗ, ಎದುರಾಳಿ ಪಕ್ಷದ ಬಗ್ಗೆ ಎಗ್ಗಿಲ್ಲದೇ ಮಾತನಾಡುವುದು, ನಂತರ ಅದೇ ಪಕ್ಷವನ್ನು ಸೇರುವುದು ಮಾಮೂಲಾಗಿದೆ.
ಚುನಾವಣೆ ವೇಳೆ ಏನೇ ಹೇಳಿದರೂ ನಡೆಯುತ್ತದೆ ಎಂದಾದ ಮೇಲೆ, ಚುನಾವಣೆ ನಂತರ ಏನು ಮಾಡಿದರೂ ನಡೆಯುತ್ತದೆ ಎಂಬ ಪರಿಸ್ಥಿತಿ ಬರುವುದರಲ್ಲಿ ಆಶ್ಚರ್ಯವಿಲ್ಲ. 

ಅಸಂಗತ, ಅಪ್ರಸ್ತುತ, ಅನುಚಿತ, ಅಕಾರಣ, ಅತಿರೇಕ … ಹೀಗೆ ಅನಪೇಕ್ಷಿತವಾದ ಆಕಾರಗಳಿಂದ ಆರಂಭವಾಗುವ ಅಪಸವ್ಯಗಳೆಲ್ಲವನ್ನು ಚುನಾವಣಾ ಪ್ರಚಾರದ ಭಾಷಣಗಳು ಬಿಂಬಿಸುತ್ತಿವೆಯೇ ಎಂಬ ಅನುಮಾನ ಬರುತ್ತಿದೆ.

ರಾಜಕೀಯ ನಾಯಕರ ಅತಿರಂಜಿತ ಮಾತುಗಳ ಬಗ್ಗೆ ಚುನಾವಣಾ ಆಯೋಗದ ಎದುರು ಹಲವು ಅರ್ಜಿಗಳು ದಾಖಲಾಗಿದ್ದವು. ಈ ಬಗ್ಗೆ, ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನ ಪ್ರತಿಪಕ್ಷಗಳಾದ ಕಾಂಗ್ರೆಸ್ ಎರಡಕ್ಕೂ ಆಯೋಗ ಖಂಡನೆ ವಿಧಿಸಿದೆ.

ಆದರೆ, ಚುನಾವಣಾ ನಿಮಿತ್ತವಾಗಿ ರೂಪಿಸಲಾಗಿರುವ ನೀತಿಗಳನ್ನು ಪಕ್ಷಗಳು ಅದೆಷ್ಟರ ಮಟ್ಟಿಗೆ ಪಾಲಿಸಲಿವೆ ಎಂಬ ಅನುಮಾನವಿದೆ. ಅನುಚಿತ ಪ್ರಚಾರದ ಭರಾಟೆ ಚುನಾವಣೆ ಸಮಯದಲ್ಲಷ್ಟೇ ಆರಂಭವಾಯಿತು ಎಂದರೆ ತಪ್ಪಾಗುತ್ತದೆ.

ಚುನಾವಣೆಗೆ ಸಾಕಷ್ಟು ಮುಂಚೆಯೇ, ಮೂರನೇ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ಚುನಾವಣೆಗಳೇ ರದ್ದಾಗುತ್ತವೆ, ಸರ್ವಾಧಿಕಾರ ಬರುತ್ತದೆ, ಸಂವಿಧಾನ ರದ್ದಾಗುತ್ತದೆ ಎಂಬ ಪ್ರಚಾರ ಆರಂಭವಾಗಿತ್ತು. ಇನ್ನೂ ಮುಂದುವರೆದು ದಲಿತರ ಹಕ್ಕುಗಳನ್ನು ಕಸಿಯಲಾಗುತ್ತದೆ ಎಂದೂ ಹೇಳಲಾಯಿತು. ಇಂತಹ ಪ್ರಚಾರಕ್ಕೆ ಯಾವುದೇ ಆಧಾರ ನೀಡಬೇಕು ಎಂಬ ಷರತ್ತೇನೂ ಇಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೇ.40ರಷ್ಟು ಕಮೀಷನ್‌ ಆರೋಪಕ್ಕೆ ಯಾವ ಆಧಾರ ಬೇಕಿತ್ತು?

ಇದಕ್ಕೆ ಪ್ರತಿಯಾಗಿ ಪ್ರಧಾನ ಮಂತ್ರಿ ನೇತೃತ್ವದಲ್ಲಿ ಬಿಜೆಪಿಯವರು ಅತಿರೇಕದ ಪ್ರಚಾರ ಆರಂಭಿಸಿದರು. ಮಾಂಗಲ್ಯ ಸರ ಕಸಿಯುತ್ತಾರೆ ಎಂಬುದರಿಂದ ಆರಂಭವಾಗಿ, ಮೀಸಲಾತಿಯವರೆಗೆ ಸತ್ಯಾಂಶಗಳನ್ನು ಗರಿಷ್ಠ ಮಟ್ಟಕ್ಕೆ ತಿರುಚುವ ಪ್ರಯತ್ನ ನಡೆಸಲಾಯಿತು. 

ಯಾರೋ ಒಬ್ಬ ಮುಖಂಡ ಅನುಚಿತ ಹೇಳಿಕೆ ನೀಡಿದರೆ, ಅದನ್ನೇ ಬಂಡವಾಳ ಮಾಡಿಕೊಂಡು ಇಡೀ ಪಕ್ಷವನ್ನೇ ಆರೋಪಿಸುವುದು ಹೆಚ್ಚಾಗುತ್ತಿದೆ. 

ಪ್ರಚಾರದ ಭರಾಟೆ ನೋಡಿದರೆ, ಚುನಾವಣಾ ಸಮಯದಲ್ಲಿ ಸುಳ್ಳುಗಳನ್ನು ಹೇಳಬೇಕು – ದೊಡ್ಡ ಮಟ್ಟದಲ್ಲಿ ಸುಳ್ಳುಗಳನ್ನು ಹೇಳಬೇಕು ಎಂಬುದಷ್ಟೇ ರಾಜಕೀಯ ಪಕ್ಷಗಳ ಏಕೈಕ ಉದ್ದೇಶ ಎಂಬ ಅನುಮಾನ ಮೂಡುತ್ತದೆ. ಹೀಗೆ ಅತಿರೇಕದ ಅಬ್ಬರದಿಂದಾಗಿ ಚುನಾವಣೆಯಲ್ಲಿ ವಾಸ್ತವವಾಗಿ ಯಾವ ವಿಷಯಗಳು ಚರ್ಚೆಯಾಗಬೇಕಿತ್ತೋ ಅದು ಆಗಲೇ ಇಲ್ಲ.

ಆರ್ಥಿಕ, ಸಾಮಾಜಿಕ, ಭದ್ರತೆ, ಮೂಲಭೂತ ಸೌಲಭ್ಯ, ಶಿಕ್ಷಣ, ಆರೋಗ್ಯ ಇತ್ಯಾದಿಗಳ ಬಗ್ಗೆ ಚರ್ಚೆಗಳು ನಡೆದಿದ್ದೇ ಕಡಿಮೆ. ಅದರಲ್ಲೂ ಸಾಮಾಜಿಕ ಮಾಧ್ಯಮಗಳ ಭರಾಟೆಯ ಈ ಕಾಲದಲ್ಲಿ, ವಿಭಜನಾತ್ಮಕ ವಿಷಯಗಳೇ ಹೆಚ್ಚು ಚರ್ಚೆಗೆ ಕಾರಣವಾಗುತ್ತಿವೆ. 

ಅವರು ಅಧಿಕಾರಕ್ಕೆ ಬಂದರೆ ನಿಮಗೆ ಹೀಗೆ ತೊಂದರೆಯಾಗುತ್ತದೆ, ಅವರು ಅಧಿಕಾರಕ್ಕೆ ಬಂದರೆ ಹಾಗೆ ತೊಂದರೆಯಾಗುತ್ತದೆ ಎಂಬ ಆರೋಪ – ಪ್ರತ್ಯಾರೋಪಗಳಲ್ಲೇ ಚುನಾವಣಾ ಪರ್ವ ಮುಗಿಯುವ ಹಂತಕ್ಕೆ ಬಂದಿದೆ.

ದಶಕಗಳ ಹಿಂದೆ ಚುನಾವಣಾ ಸಮಯದಲ್ಲಿ ರಸ್ತೆ ಬದಿಯ ಗೋಡೆಗಳನ್ನು ಪಕ್ಷಗಳ ಪ್ರಚಾರಕ್ಕೆ ಬಳಸಿ ಅಂದಗೆಡಿಸಲಾಗು ತ್ತಿತ್ತು. ಮೈಕುಗಳ ಅಬ್ಬರದ ಮೂಲಕ ಶಬ್ದ ಮಾಲಿನ್ಯ ಮಾಡಲಾಗುತ್ತಿತ್ತು. ಟಿ.ಎನ್. ಶೇಷನ್ ಅವರು ಚುನಾವಣಾ ಆಯುಕ್ತರಾದ ನಂತರ ಬಹಿರಂಗ ಪ್ರಚಾರದ ಮಾಲಿನ್ಯಕ್ಕೆ ಸಾಕಷ್ಟು ಕಡಿವಾಣ ಬಿದ್ದಿದೆ. ಆದರೆ, ಸಾಂಪ್ರದಾಯಿಕ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಿಜವಾದ ಮಾಲಿನ್ಯ ಹರಡುತ್ತಿದೆ.

ಇಂತಹ ಮಾಲಿನ್ಯ ತಡೆಗಾಗಿ ಚುನಾವಣಾ ಆಯೋಗ ಎಂದೋ ಒಮ್ಮೆ, ನೀತಿ ಸಂಹಿತೆ ಪಾಲಿಸುವ ನಿರ್ದೇಶನ ನೀಡಿದರೆ ಸಾಕೇ? ಅತಿರೇಕದ ಮಾತುಗಳನ್ನಾಡಿ ಅರಗಿಸಿಕೊಳ್ಳಬಹುದು ಎಂಬುದನ್ನು ರಾಜಕೀಯ ಪಕ್ಷಗಳು ಕಲಿತಿರುವಂತಿದೆ. ಸಾಮಾಜಿಕ ಜಾಲತಾಣಗಳು ಇಂತಹ ಅತಿರೇಕದ ಉನ್ಮಾದಕ್ಕೆ ಇನ್ನಷ್ಟು ವೇದಿಕೆ ಒದಗಿಸುತ್ತಿವೆ. ಇವುಗಳಿಗೆ ಸೂಕ್ತ ಕಡಿವಾಣ ಹಾಕಲು ಇನ್ನೊಬ್ಬ ಶೇಷನ್ ಬರುವಿಕೆ ಈಗ ಅನಿವಾರ್ಯ ಎನಿಸುತ್ತಿದೆ.


ಎಸ್.ಎ. ಶ್ರೀನಿವಾಸ್‌

ಸಾಧನೆಗೆ ಸಾಧಕಗಳು : ಸತ್ಯ, ಧರ್ಮ, ಅಹಿಂಸೆ, ಪ್ರೀತಿ ಮತ್ತು ಕರುಣೆ. ನಿರ್ಭಯ, ನಿಶ್ಚಿತತೆ, ನಿಶ್ಚಿಂತೆ, ವಿನಮ್ರತೆ, ದೃಢ ಮನಸ್ಸು, ಸಂಕಟ-ಸವಾಲುಗಳಲ್ಲಿ ವಿಚಲಿತವಾಗದ ಮನಸ್ಥಿತಿ.

ಸಾಧನೆಗೆ ಬಾಧಕಗಳು: ದುರಭಿಮಾನ, ಎಲ್ಲೆಲ್ಲಿಯೋ ಚದುರಿ ಹೋಗುವ ಮನಸ್ಸು, ಅಜ್ಞಾನಗಳಾದ `ನಾನು, ಸ್ವಾರ್ಥ, ದುರಾಸೆ, ಭೋಗ ಲಾಲಸೆ ಮತ್ತು ಮೌಢ್ಯ’.

ಜೀವ ಕಲ್ಯಾಣಕ್ಕೆ ಬೇಕು ಗಾಳಿ, ನೀರು, ಅನ್ನ, ಒಳ್ಳೆಯ ಮಾತುಗಳು ಅತ್ಯಗತ್ಯ. ಮುಕ್ತ ಮನ, ಜೀವ ಕಲ್ಯಾಣ ಭಾವನೆಗಳು, ಆನಂದಭಾವದಿಂದ ಕಾಯಕ ಮಾಡುವುದು, ಮನೋವಿಕಾರಗಳಾದ ಕಾಮ, ಕ್ರೋಧ, ಮೋಹ, ಮದ, ಮತ್ಸರಗಳಿಗೆ ನಾವೇ ಅಂಟಿಕೊಳ್ಳದೆ ಬಿಡಿಸಿಕೊಳ್ಳಬೇಕು.

ನಾವು ಒಳಿತನ್ನು ಆಚರಿಸುವುದರಿಂದ ಒಳಿತಾಗುತ್ತದೆಯೇ ಹೊರತು, ನಂಬಿಕೆ, ಮೌಢ್ಯ ಸಂಪ್ರದಾಯಗಳಿಂದಲ್ಲ.

ಸರಿ, ತಪ್ಪು, ಒಳಿತು, ಕೆಡುಕಗಳ ಮೂಲ `ದೇಹ ಮತ್ತು ಮನಸ್ಸು’, ದೇಹ ಮತ್ತು ಮನಸ್ಸಿನ ಶಕ್ತಿ ಅರಿತು ವಿವೇಕದಿಂದ ಬಾಳಬೇಕು.

ಬುದ್ಧನ 10 ಪರಿಪೂರ್ಣ ಮಾರ್ಗಗಳು : ದಾನ, ಧ್ಯಾನ, ಶೀಲ, ತ್ಯಾಗ, ಪ್ರಜ್ಞೆ, ಪ್ರಯತ್ನಶೀಲತೆ, ತಾಳ್ಮೆ, ಸತ್ಯ, ದೃಢಸಂಕಲ್ಪ, ಮೈತ್ರಿ ಮತ್ತು ಉಪೇಕ್ಷೆ.

ಬುದ್ಧನ ಜೀವನಾನಂದದ ಸೂತ್ರಗಳು

  • ಪ್ರತ್ಯೇಕತೆ, ವಿಭಜನೆ ಪ್ರಪಂಚದ ಎಲ್ಲಾ ಸಂಕಷ್ಟಗಳ ಮೂಲ. ಕರುಣೆ, ಮೈತ್ರಿ ಬಲವರ್ಧಕಗಳು, ಸಕಲ ಸಂಕಷ್ಟಗಳಿಗೆ ಅಮೃತ.
  • ನಿನಗೆ ನಿನ್ನ ಆಲೋಚನೆಗಳೇ ಬೆಳಕು. ನಿನ್ನ ದುಃಖ ಪರಿಹಾರ ನಿನ್ನಿಂದಲೇ ಪರಮಾನಂದವೂ ನಿನ್ನಿಂದಲೇ.
  • ಉದಾರ ಹೃದಯ, ಮೃದು ಮಧುರ ಮಾತು, ಸೇವೆಯ ಜೀವನ ಅತ್ಯುತ್ತಮ. ಆನಂದದ ಜೀವನಕ್ಕೆ ಭದ್ರ ಬುನಾದಿ.
  • ಹೆಚ್ಚೆಚ್ಚು ಒಳಿತನ್ನು ಮಾಡುತ್ತಿರಿ, ಖಂಡಿತಾ ಹೆಚ್ಚೆಚ್ಚು ಆನಂದ ಪಡೆಯುತ್ತೀರಿ. ಆನಂದ ನಮ್ಮ ಜನ್ಮಸಿದ್ಧ ಹಕ್ಕು.
  • ನಿನ್ನನ್ನು ದ್ವೇಷಿಸುವವರಿಗಿಂತ, ನಿನ್ನ ಶತ್ರುಗಳಿಗಿಂತ ನಿನ್ನ ಶಿಸ್ತಿಲ್ಲದ ದಶದಿಕ್ಕುಗಳಿಗೆ ಹರಿಯುವ ನಿನ್ನ ಮನಸ್ಸೇ ಹಿತಶತ್ರು.

ಮೇಲಿನ ಬುದ್ಧೋಪದೇಶಗಳನ್ನು ನಮ್ಮ ನಮ್ಮ ಜೀವನಗಳಲ್ಲಿ ಅನುಸರಿಸಿದರೆ, ಈ ಬದುಕನ್ನು ಆನಂದಮಯವಾಗಿಸಬಹುದು. ಇಲ್ಲದಿದ್ದರೆ, ದುಃಖ ಕಟ್ಟಿಟ್ಟ ಬುತ್ತಿ. ಅದರಿಂದ ಎಂದೂ ಬಿಡುಗಡೆ ದೊರೆಯದು.


ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.

error: Content is protected !!