ಸಂತೋಷ, ಸಂಪತ್ತು, ಸಮೃದ್ಧಿಯ ಸಂಕೇತವೇ `ಸಂಕ್ರಾಂತಿ’

ಸಂತೋಷ, ಸಂಪತ್ತು, ಸಮೃದ್ಧಿಯ ಸಂಕೇತವೇ `ಸಂಕ್ರಾಂತಿ’

ಹಬ್ಬಗಳು ಮನಸುಗಳನ್ನು ಬೆಸೆಯುವ ಸಂತೋಷ, ಸಂಭ್ರಮ, ಪ್ರೀತಿ, ವಿಶ್ವಾಸ ಹಂಚುವ, ನಾಡಿನ ಸಂಸ್ಕೃತಿಯನ್ನು ಸಾಮರಸ್ಯವನ್ನು ಸಾರುವ ಸಂಕೇತಗಳಾಗಿವೆ. ಹಬ್ಬಗಳು ಮಕರ ಸಂಕ್ರಾಂತಿಯಿಂದಲೇ ಪ್ರಾರಂ ಭವಾಗುತ್ತವೆ.   ಸೂರ್ಯ ದೇವ ಮಕರ ರಾಶಿಗೆ ಪ್ರವೇಶಿಸುವ ಹಬ್ಬವೇ ಮಕರ ಸಂಕ್ರಾಂತಿ. ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಅದರದ್ದೇ ಆದ ಮಹತ್ವವಿದೆ. ಮಕರ ಸಂಕ್ರಾಂತಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಹಬ್ಬ. 

ಈ ಹಬ್ಬವು ಚಳಿಗಾಲದ ಅಂತ್ಯವನ್ನು ಮತ್ತು ಬೇಸಿಗೆಯ ಆಗಮನವನ್ನು ಸೂಚಿಸುತ್ತದೆ. ಸಂತೋಷ, ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೇ ಸಂಕ್ರಾಂತಿ.  ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಎಳ್ಳು ಬೆಲ್ಲ.  ಮನೆಯಲ್ಲಿ ಎಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ `ಎಳ್ಳು ಹಂಚುವುದು ಸಂಕ್ರಾಂತಿಯ ಸಂಪ್ರದಾಯ. “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ” ಎಂದು ಪರಸ್ಪರ ಹೇಳಿಕೊಂಡು ಎಳ್ಳು ಬೆಲ್ಲ ಹಂಚುವರು. 

ಸಂಕ್ರಾಂತಿಯನ್ನು ಕೆಲವು ಕಡೆ ಮೂರು ನಾಲ್ಕು ದಿನ ಆಚರಿಸುತ್ತಾರೆ. ಇದನ್ನು ಬೋಗಿ ಹಬ್ಬ ಎಂದೂ ಕರೆಯುತ್ತಾರೆ. ಬೋಗಿ ಎಂದರೆ ಬೋಗಿಸುವುದು. (ಸುಖವಾಗಿರುವುದು) ವರ್ಷಪೂರ್ತಿ ರೈತ ದುಡಿದಿದ್ದಾನೆ, ಸುಗ್ಗಿ ಬಂದಿದೆ ರೈತನಿಗೆ ಹಿಗ್ಗು ತಂದಿದೆ. 

ಸಂಕ್ರಾಂತಿ ಹಬ್ಬದ ನಂತರ ಆ ವರ್ಷದ ಎಲ್ಲಾ ಹಬ್ಬಗಳು ಪ್ರಾರಂಭವಾಗುತ್ತವೆ.  ಬಣ್ಣ ಬಣ್ಣದ ಹೊಸ ಬಟ್ಟೆ ತೊಟ್ಟು ಕೋಲಾಟ ಆಡುವುದು, ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು, ಎತ್ತಿನ ಸ್ಪರ್ಧೆ, ದನಕರುಗಳನ್ನು ಸಿಂಗರಿಸಿ, ಮೆರವಣಿಗೆ ಮಾಡುವುದು. ಗಾಳಿಪಟ ಹಾರಿಸುವುದು, ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವುದು, ಎಲ್ಲರೊಂದಿಗೂ ಎಳ್ಳು-ಬೆಲ್ಲ ಹಂಚಿ  ಸಂಭ್ರಮಿಸುತ್ತಾರೆ.  

ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸುಗ್ಗಿ ಸಂಭ್ರಮದ ಹಬ್ಬ, ಅರ್ಥಾತ್ ಕೃಷಿಯ ಸಂಭ್ರಮಾಚರಣೆಯ ಹಬ್ಬವಾಗಿದೆ. ಪ್ರಕೃತಿ ಆರಾಧನೆಯೇ ಹಬ್ಬಗಳ ಆಶಯವಾಗಿದ್ದು, ದನ-ಕರುಗಳ ಪೂಜೆ ಮಾಡಿ ಈ ದಿನ ವಿಶೇಷ ಭಕ್ಷ್ಯ ಭೋಜನವನ್ನು ತಯಾರಿಸಿ ನದಿ, ಹೊಲ, ತೋಟಗಳ ಮಡಿಲಲ್ಲಿ ಸವಿಯುತ್ತಾರೆ.  

ವೈಜ್ಞಾನಿಕ ಹಿನ್ನೆಲೆ : ಸೂರ್ಯದೇವನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಮಕರ ರಾಶಿಯನ್ನು ಪ್ರವೇಶಿಸಿದಾಗ ‘ಮಕರ ಸಂಕ್ರಾಂತಿ’ ಹಬ್ಬವನ್ನು ಆಚರಿಸಲಾಗುತ್ತದೆ. ಸೂರ್ಯ ತನ್ನ ಪಥವನ್ನು ಬದಲಿಸೋ ಈ ಸಮಯದಲ್ಲಿ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಹಬ್ಬಗಳ ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿಯ ಸತ್ವವಿದೆ. ಸರ್ವ ಜೀವ ಜಂತುಗಳ ಶಕ್ತಿಯ ಕೇಂದ್ರವಾದ ಮತ್ತು ವಿಶ್ವಕ್ಕೆ ಬೆಳಕು ನೀಡುವ ಸೂರ್ಯ ದೇವ ಪಥ ಬದಲಿಸುವ ಸಂದರ್ಭ ಇದಾಗಿದೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪರಿವರ್ತನೆಯಾಗುವುದೇ ಸಂಕ್ರಾಂತಿ. ಈ ಹಬ್ಬವು ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ.

ದೇಶ-ವಿದೇಶಗಳಲ್ಲಿ : ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ದೊಡ್ಡ ಹಬ್ಬ. ಭಾರತದ ವಿವಿಧ ರಾಜ್ಯಗಳಲ್ಲಿ ಅಷ್ಟೇ ಅಲ್ಲದೇ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ಗಳಲ್ಲಿಯೂ ವಿವಿಧ ಹೆಸರಿನಿಂದ ವಿಜೃಂಭಣೆಯಿಂದ ತಮ್ಮದೇ ಆದ ಧಾರ್ಮಿಕ ಸಂಸ್ಕೃತಿ ಮತ್ತು ಪದ್ಧತಿಗಳೊಂದಿಗೆ ಆಚರಿಸಲಾಗುತ್ತದೆ.

 ಹಬ್ಬಗಳು ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಜಾತಿ, ಮತ ಭೇದ-ಭಾವಗಳನ್ನು ಮರೆತು ಸ್ನೇಹ, ಪ್ರೀತಿ, ಭ್ರಾತೃತ್ವದ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.  ಸಂಕ್ರಾಂತಿಯಿಂದ ನಾವು ಬದಲಾಗಿ ನಮ್ಮಲ್ಲೂ “ಸಂಕ್ರಾಂತಿ” ಯಾಗಬೇಕು. ನಾವು ಬಲಿಷ್ಠರಾಗಿ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು. ಹೊಸ ಪಥದತ್ತ ಬದುಕು ಸಾಗಿಸುತ್ತಾ ಪ್ರೀತಿ ಹಂಚುವ ಸಂಕ್ರಾಂತಿಯು, ಯಶಸ್ವೀ ಬದುಕಿಗೆ ನಾಂದಿಯಾಗಲಿ.


ಹೆಚ್. ಮಲ್ಲಿಕಾರ್ಜುನ
ಹರಪನಹಳ್ಳಿ.

error: Content is protected !!