ಬಜೆಟ್‌ ಗಾತ್ರ ಭರ್ಜರಿ ಆದರೆ, ಆದಾಯಕ್ಕಿದೆಯೇ `ಗ್ಯಾರಂಟಿ’ ?

ಬಜೆಟ್‌ ಗಾತ್ರ ಭರ್ಜರಿ ಆದರೆ, ಆದಾಯಕ್ಕಿದೆಯೇ `ಗ್ಯಾರಂಟಿ’ ?

ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಿದ ರೀತಿಯಲ್ಲೇ 5 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು, ಇದಕ್ಕೆ 60 ಸಾವಿರ ಕೋಟಿ ರೂ.ಗಳ ವೆಚ್ಚವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರೊಂದಿಗೆ ಗ್ಯಾರಂಟಿಗಳಿಗೆ ಆಗುವ ವೆಚ್ಚವೇನೋ ಬಹುತೇಕ ಸ್ಪಷ್ಟವಾಯಿತು. ಆದರೆ, ಈ ವೆಚ್ಚ ಭರಿಸುವಂತಹ ಆದಾಯದ ಮೂಲವೆಷ್ಟು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

ಗ್ಯಾರಂಟಿ ಹಿನ್ನೆಲೆಯಲ್ಲಿ ಬಜೆಟ್ ಗಾತ್ರವನ್ನು 3.35 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದಕ್ಕೂ ಮುಂಚೆ ಹೇಳಿಕೆಗಳನ್ನು ನೀಡಿದ್ದ ಸಿದ್ದರಾಮಯ್ಯ, ರಾಜ್ಯ ಬಜೆಟ್ ಗಾತ್ರ 3.1 ಲಕ್ಷ ಕೋಟಿ ರೂ. ಆಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ. ಕೊಡುವುದು ಕಷ್ಟವಾಗದು ಎಂದವರು ಹೇಳಿದ್ದರು.

ಆದರೆ, ವಾಸ್ತವಿಕವಾಗಿ ಬಜೆಟ್ ಗಾತ್ರ ನಿಕ್ಕಿ ಕೈಗೆ ಸಿಗುವ ಆದಾಯವಲ್ಲ. ನೌಕರರ ಒಟ್ಟು ವೇತನ ಹಾಗೂ ನಿವ್ವಳ ವೇತನದ ನಡುವೆ ವ್ಯತ್ಯಾಸ ಇರುತ್ತದೆ. ನೌಕರರ ವೇತನದ ಸಾಕಷ್ಟು ಹಣ ಆದಾಯ ತೆರಿಗೆ, ಸಾಲ, ಮುಂಗಡ, ಇಎಂಐ, ರೇಷನ್ ಅಂಗಡಿ ಇತ್ಯಾದಿಗಳಿಗೆ ಕಡಿತವಾಗುತ್ತದೆ. ನಂತರ ಕೈಯಲ್ಲಿ ಸಿಗುವ ಹಣದಿಂದಲೇ ನಿಜವಾದ ಮನೆ ಬಜೆಟ್ ಆರಂಭವಾಗುತ್ತದೆ. ಕೆಲವೊಮ್ಮೆ ಈ ಕಡಿತಗಳಿಂದಾಗಿ ಸಂಬಳವೆಲ್ಲ ಮೊದಲ ದಿನವೇ ಖಾಲಿಯಾಗಿ ಸಾಲ ಮಾಡುವ ಪರಿಸ್ಥಿತಿಯೂ ಬರಬಹುದು!

ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್ ಗಾತ್ರ 3.1 ಲಕ್ಷ ಕೋಟಿ ರೂ. ಎಂದರೂ, ಅದರಲ್ಲಿ 77,750 ಕೋಟಿ ರೂ. ಸಾಲವೇ ಇದೆ! 2021ರ ಏಪ್ರಿಲ್‌ನಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ ಹೇಳಿಕೆ ಈ ದಿಸೆಯಲ್ಲಿ ಗಮನಾರ್ಹವಾಗಿದೆ. ರಾಜ್ಯದ ಒಟ್ಟು ಆದಾಯದ ಶೇ.85ರಷ್ಟು ವೇತನ, ಭತ್ಯೆ, ಪಿಂಚಣಿ ಮತ್ತಿತರೆ ಯೋಜನೇತರ ವೆಚ್ಚಗಳಿಗೆ ವ್ಯಯವಾಗುತ್ತಿದೆ ಎಂದವರು ಹೇಳಿದ್ದರು. ಈಗಲೂ ಸಹ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.

ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ, ಸಾಮಾಜಿಕ ಭದ್ರತಾ ಯೋಜನೆಗಳ ವೆಚ್ಚಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲಾಗದು.  ಈಗಲೂ ಹೊಸ ಬಜೆಟ್ ಗಾತ್ರ 3.35 ಲಕ್ಷ ಕೋಟಿ ರೂ. ಎಂದುಕೊಂಡರೂ, ಅದರಲ್ಲಿ ಸಾಕಷ್ಟು ಹಣ ಬಂಡವಾಳೇತರ ಮೂಲಗಳಿಗೆ ಹೋಗಲಿದೆ. 

ಶಿಕ್ಷಣ, ಆರೋಗ್ಯ ಇತ್ಯಾದಿಗಳಿಗೆ ವೆಚ್ಚ ಮಾಡುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಇದೆಲ್ಲ ವೆಚ್ಚವನ್ನು ನಿರ್ವಹಿಸಿದ ನಂತರ ಉಳಿಯವ ಹಣವಾದರೂ ಎಷ್ಟು? ಹೀಗಾಗಿ 3 ಲಕ್ಷ ಕೋಟಿ ರೂ. ಬಜೆಟ್‌ ಗಾತ್ರದಲ್ಲಿ ಗ್ಯಾರಂಟಿ ನಿರ್ವಹಿಸುತ್ತೇವೆ ಎಂಬುದು ಸರಿಯಾದ ಲೆಕ್ಕಾಚಾರವಲ್ಲ. ಕಡ್ಡಾಯ ವೆಚ್ಚಗಳನ್ನು ಹೊರತಾಗಿಸಿದರೆ, ಗ್ಯಾರಂಟಿಗಳಿಗೆ ನೀಡಲು ಹೆಚ್ಚೇನೂ ಹಣ ಉಳಿಯದು.

ಅಲ್ಲದೇ, ಬೊಮ್ಮಾಯಿ ಅವರು 3.10 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದಾಗ ರಾಜ್ಯದ ಪರಿಸ್ಥಿತಿ ಸಾಮಾನ್ಯವಾಗಿತ್ತು. ಈಗ ಬರ ಪರಿಸ್ಥಿತಿ ಎದುರಾಗಿದೆ. ಮುಂದಿನ ಕೆಲ ವರ್ಷಗಳು ಎಲ್ ನೀನೋ ಕಾರಣದಿಂದ ಮಳೆಯ ಕೊರತೆಯಾಗಲಿದೆ ಎಂದು ಹವಾಮಾನ ವರದಿಗಳು ತಿಳಿಸುತ್ತಿವೆ. ಹೀಗಾಗಿ ಬರ ಪರಿಸ್ಥಿತಿ ಎದುರಿಸುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಲಿದೆ. ಬಜೆಟ್ ಗಾತ್ರ ಹೆಚ್ಚಳ, ಕಟ್ಟುನಿಟ್ಟಿನ ತೆರಿಗೆ ಸಂಗ್ರಹ, ಇಲಾಖೆಗಳ ತೆರಿಗೆ ಸಂಗ್ರಹದ ಗುರಿ ಏರಿಕೆ, ಅನಗತ್ಯ ವೆಚ್ಚಗಳಿಗೆ ಕಡಿತ ಸಾಲ ಕಡಿಮೆ ಮಾಡುವುದು ಇತ್ಯಾದಿ ಮಾರ್ಗಗಳಿಂದ ಸರ್ಕಾರ ಕೊಡುಗೆಗಳಿಗೆ ಮಾರ್ಗ ಕಂಡುಕೊಳ್ಳುವ ವಿಶ್ವಾಸ ಹೊಂದಿದೆ.

ಆದರೆ, ಆರ್ಥಿಕ ಪರಿಸ್ಥಿತಿ ಹೀಗೇ ಎಂದು ಹೇಳಲಿಕ್ಕಾಗದು. ಹಠಾತ್ತನೆ ಎದುರಾದ ಕೊರೊನಾದಿಂದ ಹಿಡಿದು ಉಕ್ರೇನ್‌ ದಾಳಿ, ಹವಾಮಾನ ವೈಪರೀತ್ಯಗಳವರೆಗೆ ಆಗುವ ಬದಲಾವಣೆಗಳು ಸರ್ಕಾರದ ಆದಾಯದ ಮೇಲೆ ಪರಿಣಾಮ ಬೀರಬಹುದು.

ಈ ರೀತಿಯ ಅನಿರೀಕ್ಷಿತ ಏರುಪೇರುಗಳನ್ನು ನಿಭಾಯಿಸುತ್ತಲೇ ಗ್ಯಾರಂಟಿಗಳ ಹೊಣೆ ನಿರ್ವಹಿಸುವುದು ಸುಲಭದ ಮಾತಾಗದು. ಗ್ಯಾರಂಟಿಗಳನ್ನು ಸರ್ಕಾರ ಕೊಟ್ಟೇ ಕೊಡಲಿದೆ. ಆದರೆ, ಅದಕ್ಕೆ ಆಗುವ ನಿಜವಾದ ವೆಚ್ಚ ಎಷ್ಟು ಹಾಗೂ ಅದನ್ನು ಸರಿದೂಗಿಸುವ ಆದಾಯ ಎಲ್ಲಿದೆ? ಎಂಬುದೇ ಈಗಿರುವ ಪ್ರಶ್ನೆ. ನಿಜವಾದ ವೆಚ್ಚವನ್ನು ತೆರಿಗೆ ರೂಪದಲ್ಲಿ ಪಾವತಿಸುವವರು ಜನ ಸಾಮಾನ್ಯರೇ ಹೊರತು ಅಧಿಕಾರಸ್ಥರಲ್ಲ. ಹೀಗಾಗಿ ಗ್ಯಾರಂಟಿ ಬಜೆಟ್‌ ಹೊಂದಾಣಿಕೆ ಜನರ ಮೇಲೆ ನೇರ ಪರಿಣಾಮ ಬೀರಲಿದೆ ಎಂಬುದು ಸ್ಪಷ್ಟ.

ಮುಂಬರುವ ಲೋಕಸಭೆ ಹಾಗೂ ಹಲವಾರು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಗ್ಯಾರಂಟಿ ಎಂಬ ಕಬ್ಬಿಣದ ಕಡಲೆಯನ್ನು ರಾಜ್ಯ ಸರ್ಕಾರ ಖಂಡಿತಾ ಕಡಿದೇ ಕಡಿಯಲಿದೆ. ಆದರೆ, ರಾಜ್ಯದ ಆರ್ಥಿಕತೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿದೆಯೇ ಎಂಬುದನ್ನು ಭವಿಷ್ಯವೇ ನಿರ್ಧರಿಸಬೇಕಿದೆ.


– ಎ.ಜಿ. ಮುರಳಿ ಮೋಹನ್‌, ದಾವಣಗೆರೆ

error: Content is protected !!