ಇಂದು ವಚನಗಳ ಪಿತಾಮಹ ಫ.ಗು. ಹಳಕಟ್ಟಿ ಜನುಮ ದಿನ

ಇಂದು ವಚನಗಳ ಪಿತಾಮಹ ಫ.ಗು. ಹಳಕಟ್ಟಿ ಜನುಮ ದಿನ

60 ವರ್ಷಗಳ ಕಾಲ ಮಠ- ಮಾನ್ಯಗಳನ್ನು ಸುತ್ತಿ,  ಭಕ್ತರ ಮನೆಗೆ ಅಲೆದಾಡಿ, ಅಟ್ಟದ ಮೇಲೆ ಧೂಳು ತಿನ್ನುತ್ತಾ ಬಿದ್ದಿದ್ದ, ಹುಳು ಹತ್ತಿ ಹರಿದಿದ್ದ, ಧಾರ್ಮಿಕ ಭಾವನೆಯಿಂದ ಪೂಜೆಗೊಳಪಡುತ್ತಿದ್ದ ಶರಣರ ವಚನಗಳ ಓಲೆಗರಿಯ ಹಸ್ತಪ್ರತಿಗಳನ್ನು ಸಂಗ್ರಹಿಸಿ ಜಗತ್ತಿಗೆ ನೀಡಿ ಹೃದಯ ಶ್ರೀಮಂತಿಕೆಯಿಂದ ಮೆರೆದ ವಚನಗಳ ಪಿತಾಮಹ ಫ.ಗು. ಹಳಕಟ್ಟಿ ಅವರ ಜನುಮದಿನವಿಂದು.

ಲಿಂಗಾಯತ ನೇಕಾರ ಸಮಾಜದ ಫ.ಗು.ಹಳಕಟ್ಟಿ ಅವರ ಪೂರ್ವಜರು ಪರಸಗಡ ಈಗಿನ ಸವದತ್ತಿ ತಾಲ್ಲೂಕಿನ ಹಳಕಟ್ಟಿಯಿಂದ ಧಾರವಾಡಕ್ಕೆ ಬಂದು ನೆಲೆಸಿದ್ದರು. 

ತಂದೆ ಗುರುಬಸಪ್ಪ, ತಾಯಿ ದಾನಮ್ಮದೇವಿ ಉದರದಲ್ಲಿ 1880ನೇ ಇಸ್ವಿ ಜುಲೈ 2ರಂದು ಜನಿಸಿದ ಫಕ್ಕೀರಪ್ಪ ಅವರು, 3  ವರ್ಷ ದವನಾಗುತ್ತಲೇ ತಾಯಿಯನ್ನು ಕಳೆದುಕೊಂಡು ಅಜ್ಜಿ ಬಸಮ್ಮನ ಆರೈಕೆಯಲ್ಲಿ ಬೆಳೆಯುತ್ತಾರೆ.  

ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ಮೆಟ್ರಿಕ್ ವರೆಗೆ ಓದಿ ಉನ್ನತ ವ್ಯಾಸಂಗಕ್ಕೆ ಮುಂಬಯಿಯ ಸೇಂಟ್ ಝೇವಿಯರ್ ಕಾಲೇಜು ಸೇರುತ್ತಾರೆ. 

ಕನ್ನಡದ ಕುಲ ಪುರೋಹಿತ ಆಲೂರ ವೆಂಕಟ ರಾಯರು ಇವರ ಸಹಪಾಟಿಗಳಾಗುತ್ತಾರೆ. ಶಿಕ್ಷಕರು, ಸಾಹಿತಿ ಗಳು ಆಗಿದ್ದ ತಂದೆಯ ಕೃಪೆ,  ವೆಂಕಟರಾಯರ ಸನಿಹ ಹಾಗೂ  ಮುಂಬಯಿ ವಿದ್ಯಾರ್ಥಿಗಳ ಗುಜರಾತಿ ಹಾಗೂ ಮರಾಠಿ ಭಾಷೆಯ ಅಭಿಮಾನ ಕಂಡು ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿ ಜೀವಿತಾವಧಿಯ ಕೊನೆಯವರೆಗೂ ಹಳಕಟ್ಟಿ ಅವರು  ಶ್ರಮಿಸುತ್ತಾರೆ.

ವಚನಗಳ ಓಲೆಗರಿಗಳನ್ನು ಸಂಗ್ರಹಿಸಲು ಅಲೆದಾಡಿದ ಊರುಗಳು ಅನೇಕ, ಮನವೊಲಿಸಿದ್ದು ಅಸಂಖ್ಯಾತ ಜನರನ್ನು, ಅದರಲ್ಲೂ ಕೆಲವರಿಗೆ ಹಣ ನೀಡಿ ಕಲೆ ಹಾಕಿದ ಹಸ್ತ ಪ್ರತಿಗಳಿಗೆ ಜೀವ ತುಂಬಿ ಮುದ್ರಿಸಲು ಪಟ್ಟ ಪರಿಶ್ರಮ ಅಪಾರ. ಮುದ್ರಿಸದೇ  ತಿಂಗಳುಗಳ‌ ಕಾಲ ತಮ್ಮ ಬಳಿ ಇಟ್ಟುಕೊಂಡು ಮರಳಿಸಿದ ಮುದ್ರಣಾಲಯದ ಮಾಲೀಕರು. ತಮ್ಮ ಸ್ವಂತ ಮನೆಯನ್ನು ಮಾರಿ ವಚನಗಳ ಮುದ್ರಣಕ್ಕೆ ಹಣ ಹೊಂದಿಸುತ್ತಾರೆ.

ಬೆಳಗಾವಿಯಲ್ಲಿ ವಕೀಲ ವೃತ್ತಿ ಆರಂಭಿಸಿದ ಹಳಕಟ್ಟಿ ಅವರು, ತಮ್ಮ ಹದಿನಾರನೇ ವಯಸ್ಸಿನಲ್ಲಿ ಸೋದರಮಾವ ತಮ್ಮಣ್ಣಪ್ಪ ಚಿಕ್ಕೋಡಿ ಅವರ ಮಗಳು ಭಾಗೀರಥಿ ಅವರನ್ನು ವಿವಾಹವಾಗಿ ಅವರ ಆದೇಶದಂತೆ ಬಿಜಾಪುರಕ್ಕೆ ಬಂದು ನೆಲೆಸುತ್ತಾರೆ.

ಆಧುನಿಕ ಶಿಕ್ಷಣ ಪಡೆದಿದ್ದು, ಉತ್ತಮವಾದ ಸರ್ಕಾರಿ ನೌಕರಿ ಮಾಡಬಹುದಿತ್ತು ಅಥವಾ ವಕಾಲತ್ತು ಮುಂದುವರೆಸಿ ಶ್ರೀಮಂತಿಕೆಯ ಬದುಕು ನಡೆಸಬಹುದಿತ್ತು.

ಆದರೆ, ಅಲ್ಲಿ ಜನರ ಬಡತನ, ಬದುಕಲು ಪಡುವ ಕಷ್ಟ ಕಾರ್ಪಣ್ಯಗಳು ಇವರನ್ನು ಸಮಾಜ ಸೇವೆಯತ್ತ ಸೆಳೆಯುತ್ತವೆ.

ಕೊನೆತನಕ ಕಷ್ಟದಲ್ಲಿಯೇ ಬದುಕು ಸವೆಸುತ್ತಾರೆ.


– ಮನೋಹರ ಮಲ್ಲಾಡದ, ರಾಣೇಬೆನ್ನೂರು

error: Content is protected !!