ಜೀವಗಳನ್ನು ಉಳಿಸಲು ದಣಿವರಿವಿಲ್ಲದೆ ದುಡಿಯುವ ವೈದ್ಯರಿಗಾಗಿ `ವೈದ್ಯರ ದಿನ’

ಜೀವಗಳನ್ನು ಉಳಿಸಲು ದಣಿವರಿವಿಲ್ಲದೆ ದುಡಿಯುವ ವೈದ್ಯರಿಗಾಗಿ `ವೈದ್ಯರ ದಿನ’

ಭಾರತ ದೇಶದಾದ್ಯಂತ ಪ್ರತೀ ವರ್ಷ ಜುಲೈ 1ರಂದು ರಾಷ್ಟ್ರೀಯ ‘ವೈದ್ಯರ ದಿನ’ವನ್ನು ಆಚರಿಸಲಾಗುತ್ತಿದೆ. ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಭಾರತ ರತ್ನ ಪುರಸ್ಕೃತರಾದ ಡಾ|| ಬಿ.ಸಿ.ರಾಯ್ ಅವರ ಕೊಡುಗೆ ಅಪಾರ. ಇವರು ಮಹಾತ್ಮ ಗಾಂಧೀಜಿಯವರ ವೈದ್ಯರಾಗಿದ್ದರು, ಡಾ|| ರಾಯ್ ಅವರು 1928ರಲ್ಲಿ ‘ಭಾರತೀಯ  ವೈದ್ಯಕೀಯ ಸಂಘ’ ಹಾಗೂ 1933ರಲ್ಲಿ ‘ಭಾರತೀಯ ವೈದ್ಯಕೀಯ  ಮಂಡಳಿ’ ನಂತಹ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿ ದೂರದೃಷ್ಟಿಯ  ಮಾರ್ಗದರ್ಶನಕ್ಕೆ ಬುನಾದಿ ಹಾಕಿದ್ದಾರೆ. 

ಸಮಾಜದಲ್ಲಿ ವೈದ್ಯರ ಪಾತ್ರ : ‘ಎಲ್ಲಿ ವಿದ್ವಾಂಸರು, ವೈದ್ಯರು, ರಾಜರು ಹಾಗೂ ನೀರು ಇರುವುದಿಲ್ಲವೋ, ಅಲ್ಲಿ ಇರುವುದು ಉಚಿತವಲ್ಲ’ ಎಂದು  ಸಂಸ್ಕೃತದಲ್ಲಿ ಒಂದು ಉಕ್ತಿ ಇದೆ. ಪ್ರತೀ ಸಮಾಜದಲ್ಲಿ ಎಲ್ಲಾ ವರ್ಗದ ಕೆಲಸಗಾರರೂ ಅದರ ಸರ್ವಾಂಗೀಣ  ಅಭಿವೃದ್ಧಿಗೆ ಅತ್ಯವಶ್ಯ. ಅದರಲ್ಲೂ ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವುದು ವೈದ್ಯರ ಕರ್ತವ್ಯ.  ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು, ಹಗಲು-ರಾತ್ರಿಯೆನ್ನದೇ ಸೇವೆ ಸಲ್ಲಿಸುವ ವೈದ್ಯರಿಗೆ ಸಮಾಜ ಯಾವಾಗಲೂ ಋಣಿ. ರೋಗಿಗಳಿಗೆ ಚಿಕಿತ್ಸೆ, ಮಾರ್ಗದರ್ಶನ ಹಾಗೂ ಸುರಕ್ಷತೆಯ ಭಾವನೆಯನ್ನು ನೀಡುವ ವೈದ್ಯರ ನಿಸ್ವಾರ್ಥ  ಸೇವೆಯನ್ನು ಜ್ಞಾಪಿಸಿಕೊಳ್ಳುವ ಹಾಗೂ ಧನ್ಯವಾದ ಅರ್ಪಿಸುವ ಅವಕಾಶದ ಒಂದು ಸಾಂಕೇತಿಕ ದಿನ ಈ ‘ವೈದ್ಯರ  ದಿನ’. 

ವೈದ್ಯ-ರೋಗಿ ಬಾಂಧವ್ಯ ಪೂರ್ವಾಪರ : ರೋಗಿ-ವೈದ್ಯ ಸಂಬಂಧವೆಂದರೆ ಅದೊಂದು ಪವಿತ್ರ ಸಂಬಂಧ. ಯಾವುದೇ ರೋಗಿಯ ತನ್ನೆಲ್ಲಾ ಸಂಕಟ,  ತೊಂದರೆಗಳನ್ನು ಮನೆಯವರಿಗಿಂತಲೂ ಹೆಚ್ಚಾಗಿ ವೈದ್ಯರ ಹತ್ತಿರ ಹೇಳಿಕೊಳ್ಳುತ್ತಾರೆ. ರೋಗಿಯ ಪರೀಕ್ಷೆ ಇಂದು  ಉನ್ನತ ಸ್ತರದ ಮಾನಸಿಕ ಪ್ರಕ್ರಿಯೆ, ಯಾವ ಸಂಕೋಚವಿಲ್ಲದೆ ತನ್ನನ್ನು ಪರೀಕ್ಷೆಗೆ ಒಡ್ಡಿಕೊಳ್ಳುವ ರೋಗಿಗೆ ವೈದ್ಯರ  ಮೇಲಿನ ನಂಬಿಕೆ ತುಂಬಾ ಗಟ್ಟಿಯಾಗಿರಬೇಕು. ರೋಗಿಯ ಅಥವಾ ರೋಗದ ಬಗ್ಗೆ ಗೌಪ್ಯತೆಯನ್ನು ಕಾಯ್ದಿರಿಸುವುದು  ವೈದ್ಯರ ಆದ್ಯ ಕರ್ತವ್ಯ. ಆದರೆ ಇತ್ತೀಚೆಗೆ ಈ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಅದು ಹೆಚ್ಚಾಗುತ್ತಲೇ ಇದೆ.  ಇದಕ್ಕೆ ಎರಡೂ ಕಡೆಯಿಂದಲೂ ವೈಫಲ್ಯಗಳು ಕಂಡುಬರುತ್ತವೆ. 

ಇತ್ತೀಚಿನ ದಿನಗಳಲ್ಲಿ ವೈದ್ಯರ ಹಾಗೂ ಇತರೆ ಸಿಬ್ಬಂದಿಯ ಮೇಲೆ ಆಗುವ ಹಲ್ಲೆಗಳ ಬಗ್ಗೆ ಪದೇ ಪದೇ ವರದಿಗಳು ಬರುತ್ತಲೇ ಇರುತ್ತವೆ. ಎಷ್ಟೋ ಬಾರಿ ಅವು  ವರದಿಯಾಗುವುದೇ ಇಲ್ಲ. 2015 ರ ಅಮೇರಿಕದ ಒಂದು ಸರ್ವೆಯ ಪ್ರಕಾರ ವೈದ್ಯರ ಮೇಲಿನ ಹಲ್ಲೆಗಳು ಬೇರೆ  ವೃತ್ತಿಗಳಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು, ಭಾರತದಲ್ಲಿ ಈ ಪ್ರಮಾಣದ ವೈಜ್ಞಾನಿಕ ಸರ್ವೆಗಳು ಇಲ್ಲದಿದ್ದರೂ  ಇದು ಗಣನೀಯವಾಗಿ ಹೆಚ್ಚಿದೆ ಎಂಬುದು ಸರ್ವವಿದಿತ. ಇದನ್ನು ನಾವು ಎರಡು ದೃಷ್ಟಿಕೋನಗಳಿಂದ  ನೋಡಬಹುದು.

1. ರೋಗಿಗಳ / ಸಮಾಜದ ದೃಷ್ಟಿ ಕೋನ :  ಸಾಮಾನ್ಯ ಜನರ ದೃಷ್ಟಿಯಲ್ಲಿ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಗೌರವ ಭಾವ ಕಡಿಮೆಯಾಗಿ ವೈದ್ಯರು ಹಾಗೂ  ಆಸ್ಪತ್ರೆಗಳು ಕೇವಲ ದುಡ್ಡು ಮಾಡುವ ಪಿಪಾಸುಗಳಂತೆ ಕಾಣತೊಡಗಿದ್ದಾರೆ. ಅವಶ್ಯಕತೆ ಇಲ್ಲದೇ ಅನೇಕ ಪರೀಕ್ಷೆಗಳಿಗೆ  ಒಳಪಡಿಸುತ್ತಾರೆಂಬುದು ಜನರ ಅಭಿಪ್ರಾಯ.

2. ವೈದ್ಯರ/ಆಸ್ಪತ್ರೆಗಳ ದೃಷ್ಟಿಕೋನ :   ವೈದ್ಯರು ಆಯಾ ರಂಗಗಳಲ್ಲಿ ವಿಶೇಷ ಪರಿಣಿತಿಯನ್ನು ಪಡೆದಿದ್ದರೂ ಅವರೂ ಕೂಡ ಸಾಮಾನ್ಯ ಮನುಷ್ಯರೇ.  ಎಲ್ಲಾ ಪ್ರಯತ್ನಗಳ ನಂತರವೂ ವೈದ್ಯರ ಕೈಮೀರಿ ತೊಂದರೆಗಳಾಗಬಹುದು. ರೋಗಿ ಸಾವಿಗೀಡಾಗಬಹುದು. ಸಾವನ್ನು  ಇನ್ನೂ ಗೆಲ್ಲಲಾಗಿಲ್ಲವಾದ್ದರಿಂದ ಹಾಗೂ ಎಷ್ಟೋ ರೋಗಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆಗಳು  ಇಲ್ಲದಿರುವುದರಿಂದ ಮತ್ತು ಪ್ರತಿಯೊಬ್ಬ ರೋಗಿಯೂ ಒಂದೊಂದು ರೀತಿ ಚಿಕಿತ್ಸೆಗಳಿಗೆ ಸ್ಪಂದಿಸುವುದರಿಂದ ಪ್ರತಿ ಬಾರಿ ರೋಗವನ್ನು ಗುಣಪಡಿಸುವುದು ಹಾಗೂ ಸಾವನ್ನು ತಪ್ಪಿಸುವುದು ಅಸಾಧ್ಯ.  

ಅನೇಕ ಬಾರಿ ವೈದ್ಯರು ಹಲ್ಲೆಗೊಳಗಾದ ನಂತರ ಮಾನಸಿಕ ಹಿಂಸೆ, ಒತ್ತಡಗಳನ್ನು ಅನುಭವಿಸಿ ಆತ್ಮಹತ್ಯೆಯಂತಹ  ಕೊನೆಯ ಪ್ರಯತ್ನಕ್ಕೂ ಮುಂದಾಗುತ್ತಾರೆ. ಇದೇ ರೀತಿ ಮುಂದುವರೆದರೆ ವೈದ್ಯರು ಯಾವುದೇ ಚಿಕಿತ್ಸೆಗೆ ಮುಂದಾಗದೇ ಇರಬಹುದು. ಇದರಿಂದ ಜನರಿಗೆ ಹಾಗೂ ಸಮಾಜಕ್ಕೆ ತೊಂದರೆ. ಬಹುಶಃ ವೈದ್ಯರ ಮೇಲಿನ ಗೌರವ ಸ್ವಲ್ಪ ಪ್ರಮಾಣದಲ್ಲಿಯಾದರೂ ಹೆಚ್ಚಾಗಲಿಕ್ಕೆ ಕೋವಿಡ್-19 ಮಹಾಮಾರಿಯೂ  ಒಂದು ಕಾರಣ. ಆ ದಿನಗಳಲ್ಲಿ ಅನುಭವಿಸಿದ ಸಂಕಟಗಳು, ಮನೆ ಮಕ್ಕಳಿಂದ ದೂರವಿದ್ದು, ಹಗಲಿರುಳು ಶ್ರಮಿಸಿದ ವೈದ್ಯರು ಹಾಗೂ ಇತರೆ ಸಿಬ್ಬಂದಿಯವರ ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು.  

ಸಮಾಜದ, ಸರ್ಕಾರದ ಜವಾಬ್ದಾರಿಗಳು : ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ಸೌಲಭ್ಯಕ್ಕಾಗಿ ಅನೇಕ ಸ್ಕೀಮ್‍ಗಳನ್ನು ಜಾರಿಗೆ ತಂದಿವೆ. ಆರೋಗ್ಯ  ಕರ್ನಾಟಕ, ಆಯುಷ್ಮಾನ್ ಭಾರತದಂತಹ ಸೇವೆಗಳಿಂದ ಹೃದಯ ರೋಗಗಳು, ಕ್ಯಾನ್ಸರ್‍ನಂತಹ ಅನೇಕ ರೋಗಗಳಿಗೆ  ಉಚಿತ ಚಿಕಿತ್ಸೆಗಳು ಲಭ್ಯವಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆಗಳು, ಔಷಧಿಗಳು ದೊರೆಯುತ್ತವೆ. ಪ್ರತಿಯೊಬ್ಬ  ಪ್ರಜೆಯೂ ಇವುಗಳ ಸದುಪಯೋಗ ಪಡೆದುಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. 

ಅದೇ ರೀತಿ ಸರ್ಕಾರ ಆಸ್ಪತ್ರೆಗಳ ಮೇಲೆ ಕನಿಷ್ಟ ಗುಣಮಟ್ಟದ ನಿಯಮಗಳ ಕಡ್ಡಾಯದ ಜೊತೆಗೆ ಆಸ್ಪತ್ರೆಗಳ  ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳಲು ಆಯೋಜಿಸಬೇಕು. ವ್ಯೆದ್ಯರ ಮೇಲೆ  ಹಲ್ಲೆಯಾದರೆ ಕಠಿಣ ಶಿಕ್ಷೆಯಾಗುವ ಕಾಯಿದೆಗಳನ್ನು ಜಾರಿ ಮಾಡಬೇಕು.

ರೋಗಮುಕ್ತ ಸಮಾಜ – ಉಜ್ವಲ ಭವಿಷ್ಯದೆಡೆಗೆ… ಔಷಧಿಗಳು ‘ರೋಗ’ಗಳನ್ನು ವಾಸಿ ಮಾಡಬಹುದು, ಆದರೆ ‘ರೋಗಿ’ಗಳನ್ನು ವಾಸಿ ಮಾಡಲು ವೈದ್ಯರೇ ಬೇಕು.  ಪ್ರತಿಯೊಬ್ಬ ವ್ಯಕ್ತಿಯೂ ಈಗಿನ ಅಂತರ್ಜಾಲ ದಿನಗಳಲ್ಲಿ ಅರ್ಧಂಬರ್ಧ ವಿಷಯಗಳನ್ನು ತಿಳಿದುಕೊಂಡು ಸ್ವಂತ  ಚಿಕಿತ್ಸೆಗಳನ್ನು ತೆಗೆದುಕೊಳ್ಳದೇ, ತಮ್ಮ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಸೂಕ್ತ ಪರಿಹಾರಗಳನ್ನು ಕೈಗೊಂಡರೆ ಎಷ್ಟೋ  ರೋಗಗಳನ್ನು ಮೂಲದಲ್ಲಿಯೇ ಗುಣಪಡಿಸಬಹುದು. 

ಎಲ್ಲಕ್ಕಿಂತ ಹೆಚ್ಚಾಗಿ ‘Prevention is better than cure’ ಎಂದು ಎಲ್ಲರಿಗೂ ತಿಳಿದಿರುವಂತೆ ನಿಯಮಿತ  ಆಹಾರ ಸೇವನೆ, ಯೋಗ, ವ್ಯಾಯಾಮ, ಧೂಮಪಾನ, ಮದ್ಯಪಾನಗಳಿಂದ ದೂರವಿರುವಿಕೆ, ಆಗಾಗ್ಗೆ ರಕ್ತದೊತ್ತಡ  ಹಾಗೂ ಮಧುಮೇಹ ರೋಗಗಳ ತಪಾಸಣೆ, ನಿಯಂತ್ರಣ ಮತ್ತು ಒತ್ತಡದ ಜೀವನ ಶೈಲಿಯನ್ನು ಬಿಟ್ಟು ನೆಮ್ಮದಿಯ  ಬದುಕಿನ ದಾರಿಯಲ್ಲಿ ಸಾಗಿದರೆ ಹಿರಿಯರು ಹೇಳಿದಂತೆ ಬಾಳು ಬಂಗಾರವಾಗುವುದು.   ಹೊಸ ಆವಿಷ್ಕಾರಗಳಿಂದಲೇ ರೋಗಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ಅದಕ್ಕೆ ವೈದ್ಯರ ನಿಜವಾದ  ಮಾತೃಸದೃಶ ‘Healing Touch’ ಅತ್ಯವಶ್ಯ. ರೋಗಿಯ ಎಲ್ಲಾ ಆಯಾಮಗಳನ್ನು ಅರಿತುಕೊಂಡು,  ನಿಸ್ವಾರ್ಥತೆಯಿಂದ ಅವರನ್ನು ಗುಣಪಡಿಸುವ ಅಥವಾ ಗುಣಪಡಿಸಲು ಸಾಧ್ಯವಿಲ್ಲದಂತಹ ಕಾಯಿಲೆಗಳಿದ್ದರೆ ಅವುಗಳ  ತೀವ್ರತೆಯನ್ನು ಕಡಿಮೆ ಮಾಡಿ ಜೀವನವನ್ನು ಹಸನು ಮಾಡುವ ಮಹತ್ತರ ಕಾರ್ಯ ವೈದ್ಯರ ಮೇಲಿದೆ.  

ರೋಗ ಮುಕ್ತ ಸಮಾಜ ಎಲ್ಲ ವೈದ್ಯರ ಧ್ಯೇಯವಾಗಬೇಕು. ಅದಕ್ಕಾಗಿ ಎಲ್ಲಾ ವಿಭಾಗಗಳ ವೈದ್ಯರು (ಅಲೋಪಥಿ,  ಆಯುರ್ವೇದ, ಹೋಮಿಯೋಪಥಿ ಇತ್ಯಾದಿ) ಕೈಗೂಡಿಸಿ ಆ ಗುರಿಯೆಡೆಗೆ ಕಾಯಾ, ವಾಚಾ, ಮನಸಾ ಶ್ರಮಿಸಬೇಕು.  ವೈದ್ಯರ ಪ್ರತಿಯೊಂದು ನಡಿಗೆ ಸದ್ಭಾವನೆಯಿಂದ ಕೂಡಿದ್ದರೆ ಮಾತ್ರ ಸಮಾಜಕ್ಕೆ ಮತ್ತೆ ವೈದ್ಯ ವೃತ್ತಿಯ ಮೇಲೆ ಗಾಢವಾದ  ನಂಬಿಕೆ, ಗೌರವ ಬರುವುದಕ್ಕೆ ಸಾಧ್ಯ. 


ಜೀವಗಳನ್ನು ಉಳಿಸಲು ದಣಿವರಿವಿಲ್ಲದೆ ದುಡಿಯುವ ವೈದ್ಯರಿಗಾಗಿ `ವೈದ್ಯರ ದಿನ' - Janathavaniಡಾ|| ಶ್ರೀನಿವಾಸ. ಬಿ.
MD., DM., FSCAI (USA), FACC (USA)
ಹೃದಯರೋಗ ತಜ್ಞರು,
ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್, ದಾವಣಗೆರೆ.

error: Content is protected !!