ಶತಮಾನದಿಂದ ಉಂಡವರೂ… ಶರ್ಮಾಗೆ ಮೊದಲ ಟಿಕೆಟ್ಟೂ…

ಶತಮಾನದಿಂದ ಉಂಡವರೂ… ಶರ್ಮಾಗೆ ಮೊದಲ ಟಿಕೆಟ್ಟೂ…

ಶತಮಾನಗಳಿಂದ ಶ್ರಮಪಡದೇ ಉಂಡವರೇ, ಬಡವರಿಗೆ ನೀಡಿದ್ದ ನ್ನೆಲ್ಲಾ ಬಿಟ್ಟಿ ಭಾಗ್ಯ ಎಂದು ಹಂಗಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗ್ಯಾರಂಟಿ ಯೋಜನೆಗಳ ಟೀಕಾ ಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತದಲ್ಲೇ ಹೀಗೊಂದು ರೀತಿಯ ರೋಗ ಇದೆ ಎನ್ನಿಸುತ್ತದೆ. ಸಕಲ ಪಕ್ಷಗಳು ಈಗಿನದನ್ನು ನೋಡದೇ ನೂರೋ, ಇನ್ನೂರೋ ಸಾವಿರ ವರ್ಷಗಳ ಕಡತ ತೆಗೆದು ಕೂರುತ್ತವೆ ಎಂಬ ಭಾವನೆ ಬರುತ್ತಿದೆ. ಕೆಲ ಪಕ್ಷಗಳು ಟಿಪ್ಪು ಸುಲ್ತಾನ್ ಕಾಲದಲ್ಲಿದ್ದರೆ, ಇನ್ನು ಕೆಲ ಪಕ್ಷಗಳು ಮುಘಲ್ ಕಾಲದಲ್ಲಿವೆ, ಮತ್ತೆ ಕೆಲವು ಆರ್ಯರ ಕಾಲದಲ್ಲಿವೆ. ಅವರು ದಾಳಿ ಮಾಡಿದರು, ಇವರು ಸುಲಿಗೆ ಮಾಡಿದರು, ಅವರು ಲೂಟಿ ಮಾಡಿದರು, ಇವರು ಶೋಷಣೆ ಮಾಡಿದರು ಎಂದು ರಾಗ ಹಾಡುತ್ತಾ ಕುಳಿತುಕೊಳ್ಳುವುದು ನಿತ್ಯದ ಸಂಗತಿಯಂತಾಗಿದೆ.

ವಿಷಾದಕರ ಸಂಗತಿ ಎಂದರೆ ನಾವ್ಯಾರೂ ಶತಮಾನಗಳಿಂದ ಬದುಕಿಲ್ಲ! ನಾವೋ ಶತಮಾನಗಳ ಕಾಲ ಬದುಕಿ, ಎಂದೋ ಬಿಟ್ಟಿ ಉಂಡಿದ್ದರೆ, ಇಂದು ನಮ್ಮನ್ನು ಉಪವಾಸ ಹಾಕಿದ್ದರೆ ಲೆಕ್ಕ ಸರಿ ಆಗುತ್ತಿತ್ತೋ ಏನೋ. ಆದರೆ, ಕೊರೊನಾದ ದುರ್ಭಿಕ್ಷ ಕಾಲದಲ್ಲಿ ಶತಮಾನಗಳಿಂದ ಶ್ರಮಪಡದೆ ಉಂಡವರು ಎಂದು ಹೇಳಿಸಿಕೊಳ್ಳುವುದು ಅಕಟಕಟಾ…

ನಮ್ಮ ಅಜ್ಜನ ಪಿಜ್ಜನ, ಮುತ್ತಜ್ಜನ, ಹಿರಿ ತಾತನ, ಪಿತಾಮಹಾನೋರ್ವ ಶ್ರಮಪಡದೆ ಉಂಡಿದ್ದರು ಎಂದು ಹೇಳಲು ಈಗ ಯಾವ ದಾಖಲೆ ಹುಡುಕಿದರೋ ಗೊತ್ತಿಲ್ಲ. ಆಗಿನ ಕಾಲದಲ್ಲಿ ಫ್ಯಾನ್ ಎ.ಸಿ.ಇತ್ಯಾದಿ ಇರಲಿಲ್ಲ. ಹೀಗಾಗಿ ಆಗಿನವರು ಕೂತುಂಡರೂ ಕನಿಷ್ಠ ಅರಗಿಸಿಕೊಳ್ಳಲಾದರೂ  ಬೆವರು ಹರಿಸಿದ್ದರು ಎಂಬುದನ್ನು ಒಪ್ಪಲೇ ಬೇಕಾಗುತ್ತದೆ! 

ಅಂದ ಹಾಗೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಕಾಲದಿಂದಲೂ ಬಡತನದಲ್ಲೇ ಸಿಲುಕಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾ ರವೇ, ಸ್ವಾತಂತ್ರ್ಯ ದೊರೆತಾಗ ಬಹುತೇಕರು ಬಡವರಿದ್ದರು. (ಎಲ್ಲ ಜಾತಿಯವರೂ ಸೇರಿ). ಅದಕ್ಕೂ ಮುಂಚೆ ಬ್ರಿಟಿಷರ ದುರಾಡಳಿತ. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲೂ ದೇಶ ವಿಭಜನೆಯಾಗಿ ಸಂಕಷ್ಟ. ನಂತರ ಸಮಾಜವಾದಿ ಆರ್ಥಿಕತೆಯ ತೆವಳುವಿಕೆ.

ಹೀಗಾಗಿ ಕನಿಷ್ಠ ಮುನ್ನೂರು ವರ್ಷಗಳ ಕಾಲವಾದರೂ ದೇಶದ ಬಹುತೇಕರು ಬಡತನದ ಸಂಕಷ್ಟ ಎದುರಿಸಿದ್ದರು ಎಂಬುದು ಸತ್ಯ. ಅದಕ್ಕೂ ಮೀರಿ ಒಂದಾನೊಂದು ಕಾಲದಲ್ಲಿ ಯಾರಾದರೂ ಕೂತುಂಡಿದ್ದರೆ ದಯವಿಟ್ಟು ಅಂಥವರ ವಿರುದ್ಧ ಕ್ರಮ ತೆಗೆದುಕೊಂಡು ಬಾಕಿ ವಸೂಲಿ ಮಾಡಿ ಸಮಸ್ಯೆ ಬಗೆಹರಿಸಬೇಕಾಗಿ ಕೋರಿದರೆ ತಪ್ಪೇನಿಲ್ಲ.

ಮುಖ್ಯಮಂತ್ರಿಗಳು ಇತ್ತೀಚೆಗೆ ಲೇಖನವೊಂದನ್ನು ಟ್ವೀಟ್ ಮಾಡಿ, `ಇದು ಲೇಖಕರ ಮಾತಷ್ಟೇ ಅಲ್ಲ, ನನ್ನದೂ ಕೂಡ ಎಂದಿದ್ದರು’. ಆ ಲೇಖನದ ಕೊನೆಯಲ್ಲಿ `ಏನೇ ಆಗಲಿ ಪುಕ್ಕಟೆ ಯೋಜನೆಗಳ ಕಾರಣಕ್ಕೆ ಹೆಚ್ಚೆಂದರೆ, ರಾಜ್ಯದಲ್ಲಿ ಒಂದಷ್ಟು ಆರ್ಥಿಕ ಮುಗ್ಗಟ್ಟು ಉಂಟಾಗಬಹುದು. ಆಗಲಿ ಬಿಡಿ.’ ಎಂದು ತಿಳಿಸಲಾಗಿದೆ.

`ಆರ್ಥಿಕ ಬಿಕ್ಕಟ್ಟು ತಾತ್ಕಾಲಿಕ ಸ್ಥಿತಿ, ಯಾವುದೇ ರಾಜ್ಯ ಶಾಶ್ವತವಾಗಿ ದಿವಾಳಿಯಾಗಿ ನಾಶವಾದ ನಿದರ್ಶನ ಇಲ್ಲ ಎಂದು ತಿಳಿಸಲಾಗಿದೆ.’ ಇದೂ ಸಹ ಸಿದ್ದರಾಮಯ್ಯ ಅವರ ಅಭಿಪ್ರಾಯವೇ? ಗೊತ್ತಿಲ್ಲ. ಆದರೆ, ಆರ್ಥಿಕ ಮುಗ್ಗಟ್ಟಾದರೆ ಆಗಲಿ ಎಂದು ಹೇಳುವಾತ ಆರ್ಥಿಕ ಪರಿಣಿತ ಎಂದಂತೂ ಪರಿಗಣಿಸಲಾಗದು.

ಅಂದ ಹಾಗೆ, ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಮೊದಲ ಟಿಕೆಟ್ ಕೊಟ್ಟಿದ್ದು ಯಾರಿಗೆ ಗೊತ್ತೇ? ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿರುವವರು ಯಾವ ರೀತಿಯ ಶೋಷಿತರು? ಬಸ್‌ ಪ್ರಯಾಣ ಭಾಗ್ಯ ಇಂಥವರಿಗೆ ಕೊಟ್ಟರೆ ಶತಮಾನಗಳಿಂದ ದಮನಿತರಿಗೆ ನ್ಯಾಯ ಸಿಕ್ಕಂತೆ ಆಗುತ್ತಿದೆಯೇ?

ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ಹಣ, ತಿಂಗಳಿಗೆ 2 ಸಾವಿರ ರೂ. ಉಚಿತವಾಗಿ ಕೊಡುವ ಹಣವೂ ಶತ ಶತಮಾನಗಳಿಂದ ಶ್ರಮ ಪಡದೆ ಉಂಡವರೆಂಬ ಕಿರೀಟಕ್ಕೆ ಗುರಿಯಾದ ಬಹುತೇಕರಿಗೆ ಸಲ್ಲುತ್ತಿದೆ. ಈಗ ಶ್ರಮಪಡದೆ ಉಣ್ಣುತ್ತಿರುವ ವರಿಗೂ ಸಲ್ಲುತ್ತದೆ. ಹೀಗಿರುವಾಗ ಇದು ಅರ್ಹರಿಗೆ ಕೊಟ್ಟ ಭಾಗ್ಯ ಎಂದು ಹೇಳಿದರೆ ಸರಿಯೇ?

ಶತಮಾನಗಳಿಂದ ಶೋಷಣೆ ಬಿಡಿ, ಈಗ ಬಡತನಕ್ಕೆ ಸಿಲುಕಿ ಶೋಷಣೆಗೆ ಗುರಿಯಾಗುತ್ತಿರುವ ಪುರುಷರಿಗೆ ಉಚಿತ ಬಸ್ ಭಾಗ್ಯವಿಲ್ಲ. ಆತ ವೃದ್ಧನಾದರೂ ಸರಿ, ನಿರ್ಗತಿಕನಾದರೂ ಸರಿ, ಒಂದು ಕಾಸಿಗೂ ಪರದಾಡುತ್ತಿದ್ದರೂ ಸರಿ, ಉಚಿತ ಬಸ್ ಇಲ್ಲ. ಇಲ್ಲ.. ಇಲ್ಲ… ಆದರೆ, ಮತ್ತೊಂದೆಡೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿರುವವರಿಗೂ ಉಚಿತ ಪ್ರಯಾಣದ ಭಾಗ್ಯ! ಇದಲ್ಲವೇ ಆಧುನಿಕ ಸಾಮಾಜಿಕ ನ್ಯಾಯ?

ಇಂತಹ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ರಾಜ್ಯ ಒಂದಿಷ್ಟು ಆರ್ಥಿಕ ಮುಗ್ಗಟ್ಟು ಉಂಟಾದರೆ ಆಗಲಿ ಬಿಡಿ ಎನ್ನುವವರನ್ನು ಏನೆನ್ನಬೇಕು?


– ಮುರುಳಿ ಮೋಹನ್, ದಾವಣಗೆರೆ.

error: Content is protected !!