ನೇತ್ರದಾನ ಮಾಡಿ… ಮರಣಾ ನಂತರವೂ ಇನ್ನೊಬ್ಬರಿಗೆ ಬೆಳಕಾಗಿ…

ನೇತ್ರದಾನ ಮಾಡಿ… ಮರಣಾ ನಂತರವೂ ಇನ್ನೊಬ್ಬರಿಗೆ ಬೆಳಕಾಗಿ…

`ಜೂನ್ 10 ವಿಶ್ವ ನೇತ್ರದಾನ ದಿನ’
ನಿನ್ನ ಕಣ್ಣು ನಿನ್ನ ನಂತರ ಮತ್ತೊಬ್ಬರಿಗೆ ಬೆಳಕಾಗಲಿ…
ನಿನ್ನ ದೇಹದ ಜೊತೆ ಮಣ್ಣಾಗದಿರಲಿ…
ಪ್ರತಿಯೊಬ್ಬರು ನೇತ್ರದಾನ ಮಾಡಿ…

ಅಮೂಲ್ಯವಾದ ಕಣ್ಣುಗಳು ಮರಣಾನಂತರ ಮಣ್ಣಿನಲ್ಲಿ ಮಣ್ಣಾಗದಂತೆ ತಡೆದು, ಇನ್ನೊಬ್ಬರ ಬದುಕಿಗೆ ದಾರಿದೀಪವಾಗುವಂತೆ ಮಾಡಲು ಪ್ರಯತ್ನಿಸುವುದು ಜವಾಬ್ದಾರಿಯುತ ಪ್ರಜೆಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಹೆಸರನ್ನು ನೇತ್ರದಾನಕ್ಕೆ ನೋಂದಾಯಿಸಿ, ಸತ್ತ ನಂತರವೂ ಬೇರೆಯವರ ಮೂಲಕ ಜಗತ್ತನ್ನು ನೋಡುವ ಭಾಗ್ಯವನ್ನು ಪಡೆಯಬಹುದು. 

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ದೃಷ್ಟಿ ಹೀನತೆ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಕುರುಡುತನಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ, `ಕಾರ್ನಿಯಾ ಅಂಧತೆ’ ಕೂಡ ಒಂದು. ಭಾರತದಲ್ಲಿ ಸುಮಾರು 68 ಲಕ್ಷ ಜನರು ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. ಅದರಲ್ಲಿ 10 ಲಕ್ಷ ಜನ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ.

ಕಾರ್ನಿಯಾ, ಕಣ್ಣಿನ ಮುಂಭಾಗದಲ್ಲಿರುವ ಪಾರದರ್ಶಕ ಪದರವಾಗಿದ್ದು, ಸ್ಪಷ್ಟ ದೃಷ್ಟಿಗಾಗಿ ಬೆಳಕಿನ ಕಿರಣಗಳನ್ನು ಒಮ್ಮುಖಗೊಳಿಸಿ ಕಣ್ಣಿನ ಒಳಗೆ ಪ್ರವೇಶ ಮಾಡಲು ಸಹಾಯ ಮಾಡುತ್ತದೆ. ರಾಸಾಯನಿಕ ವಸ್ತುಗಳು ಮತ್ತು ಧೂಳಿನ ಕಣಗಳು ಕಣ್ಣಿಗೆ ಬಿದ್ದಾಗ ಉಂಟಾಗುವ ಸವೆತದಿಂದ, ಸೂಕ್ಷ್ಮ ಜೀವಾಣುಗಳಿಂದುಂಟಾಗುವ ತೀವ್ರ ಸೋಂಕಿನಿಂದ, ವಿಟಮಿನ್ `ಎ’ ಕೊರತೆ, ಅನುವಂಶೀಯತೆ ಮತ್ತು ಅವೈಜ್ಞಾನಿಕ ದೃಷ್ಟಿ ದರ್ಪಣಗಳ (Contact lens) ಬಳಕೆಯಿಂದ ಕಾರ್ನಿಯಾದಲ್ಲಿ ಅಪಾರದರ್ಶಕತೆ ಉಂಟಾಗಿ ಬೆಳಕು ಕಣ್ಣಿನ ಒಳಗಡೆ ಪ್ರವೇಶಿಸುವುದನ್ನು ತಡೆಯುವುದರಿಂದ ಶಾಶ್ವತ ಕುರುಡುತನ ಉಂಟಾಗುತ್ತದೆ. ಈ ರೀತಿಯ ಕಾರ್ನಿಯಾ ಅಂಧತ್ವಕ್ಕೆ ಇರುವ ಪರಿಣಾಮಕಾರಿಯಾದ ಚಿಕಿತ್ಸೆಯೆಂದರೆ `ಕಾರ್ನಿಯಾ ಕಸಿ’ ಕೇವಲ ವ್ಯಕ್ತಿಯ ಮರಣಾನಂತರ ನೀಡುವ ನೇತ್ರ ದಾನದಿಂದ ಮಾತ್ರ ಪಡೆಯಲು ಸಾಧ್ಯ.

ದಾನದ ವಿಷಯ ಬಂದಾಗ ನೇತ್ರ ದಾನ ಶ್ರೇಷ್ಠವಾದುದು. ದಾನಿಯ ಮರಣಾನಂತರ ಕುರುಡುತನದಿಂದ ಬಳಲುತ್ತಿರುವ ವ್ಯಕ್ತಿಯ ಭವಿಷ್ಯಕ್ಕೆ, ನಿಸ್ವಾರ್ಥತೆಯಿಂದ ಬೆಳಕು ನೀಡುವಂತಹ ದಾನ. 

ಜನರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 10 ರಂದು `ವಿಶ್ವ ನೇತ್ರದಾನ ದಿನ’ ವೆಂದು ಆಚರಿಸಲಾಗುತ್ತದೆ. ಜನರನ್ನು ತಮ್ಮ ಸಾವಿನ ನಂತರ ನೇತ್ರದಾನ ಮಾಡಲು ಪ್ರೋತ್ಸಾಹಿಸುವುದಲ್ಲದೇ ಕುರುಡುತನ ಮತ್ತು ದೃಷ್ಟಿ ದೋಷಗಳ ಬಗ್ಗೆ ಜಾಗೃತಿ ಉಂಟು ಮಾಡುವುದೇ ಈ ದಿನದ ಉದ್ದೇಶ. ಇದಲ್ಲದೇ `ಕತ್ತಲೆಯಿಂದ ಬೆಳಕಿನೆಡೆಗೆ’ ಎನ್ನುವ ಘೋಷ ವಾಕ್ಯದೊಂದಿಗೆ ಪ್ರತಿ ವರ್ಷ ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ `ರಾಷ್ಟ್ರೀಯ ನೇತ್ರ ದಾನ ಜಾಗ್ರತಾ ಪಾಕ್ಷಿಕ’ವಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸಾರ್ವಜನಿಕರಿಗೆ ನೇತ್ರದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ, ಕಣ್ಣುಗಳನ್ನು ದಾನ ಮಾಡಲು ಹೆಸರನ್ನು ನೋಂದಾಯಿಸಲು ಪ್ರೋತ್ಸಾಹಿಸಲಾಗುತ್ತದೆ.

ನೇತ್ರದಾನ ಮಾಡುವುದು ಮತ್ತು ಪಡೆಯುವುದು ಸಂಪೂರ್ಣ ಉಚಿತ. ದಾನದಿಂದ ಬರುವ ನೇತ್ರಗಳು ಮಾರಾಟದ ವಸ್ತುಗಳಲ್ಲ. ನೇತ್ರದಾನದಿಂದ ಕೇವಲ ಕಾರ್ನಿಯಾ ಅಂಧರಿಗೆ ಮಾತ್ರ ದೃಷ್ಟಿ ನೀಡಬಹುದು. ಬೇರೆ ಕಾರಣಗಳಿಂದ ಅಂಧರಾದವರಿಗಲ್ಲ. ಎರಡು ಕಣ್ಣಿನ ನೇತ್ರದಾನದಿಂದ ನಾಲ್ಕು ವ್ಯಕ್ತಿಗಳಿಗೆ ದೃಷ್ಟಿ ನೀಡಬಹುದು. 

ಸ್ತ್ರೀ-ಪುರುಷರೆನ್ನದೆ ಯಾವುದೇ ಜಾತಿ, ಧರ್ಮದ ರಕ್ತದ ಗುಂಪಿನ ಒಂದು ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿ, ಕನ್ನಡಕ ಧರಿಸುತ್ತಿರಲಿ, ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಅಸ್ತಮಾ, ಕ್ಷಯದಂತಹ ರೋಗದಿಂದ ನರಳುತ್ತಿದ್ದರೂ, ಕಣ್ಣಿನ ಪೊರೆ (Cataract) ತೆಗೆಸಿಕೊಳ್ಳುವ ಶಸ್ತ್ರಕ್ರಿಯೆಗೆ ಒಳಗಾಗಿದ್ದರೂ ಕೂಡ ನೇತ್ರ ದಾನ ಮಾಡಬಹುದಾಗಿದೆ.

18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ, ಯಾವುದೇ ನೇತ್ರ ಚಿಕಿತ್ಸಾಲಯ, ಭಂಡಾರದಲ್ಲಿ  (Eye bank) ತಮ್ಮ ಮರಣೋತ್ತರ ನೇತ್ರದಾನದ ಅಭಿಲಾಷೆಯನ್ನು ಲಿಖಿತ ರೂಪದಲ್ಲಿ ನೋಂದಾಯಿಸಬಹುದು. 

ಆತ್ಮಹತ್ಯೆ ಮಾಡಿಕೊಂಡವರು, ಎಚ್‌ಐವಿ. ಹೆಪಟೈಟಿಸ್, ಏಡ್ಸ್, ರೇಬಿಸ್ ಸಿಫಿಲಿಸ್, ಕ್ಯಾನ್ಸರ್ ಮತ್ತು ಸೋಂಕಿನಿಂದ ರಕ್ತ ನಂಜು (septicaemia) ಉಂಟಾಗಿ ನಿಧನ ಹೊಂದಿದವರಿಂದ ನೇತ್ರದಾನ ಪಡೆಯಲಾಗುವುದಿಲ್ಲ.

ವ್ಯಕ್ತಿಯ ಸಾವಿನ ನಂತರ 6 ಗಂಟೆಯೊಳಗೆ ಕಣ್ಣುಗಳನ್ನು ಸಂಗ್ರಹಿಸಿದರೆ ಮಾತ್ರ ಯಶಸ್ವಿಯಾಗಿ ರೋಗಿಗಳಿಗೆ ಕಸಿ ಮಾಡಲು ಸಾಧ್ಯವಾಗುತ್ತದೆ. 

* ಮರಣದ ಸಮಯವನ್ನು ದಾಖಲಿಸಬೇಕು. ಮೃತರ ಕಣ್ಣಿನ ರೆಪ್ಪೆಯನ್ನು ಮುಚ್ಚಬೇಕು. ಮೃತರನ್ನಿರಿಸಿದ ಸ್ಥಳದಲ್ಲಿರುವ ಫ್ಯಾನ್ (fan) ಆರಿಸಬೇಕು. 

* ತಲೆಯ ಕೆಳಗೆ 6 ಅಂಗುಲ ಎತ್ತರದ ದಿಂಬನ್ನಿರಿಸಿರಬೇಕು. ತಣ್ಣನೆಯ ನೀರಿನಲ್ಲಿ ಅದ್ದಿದ ಹತ್ತಿ/ಬಟ್ಟೆಯನ್ನು ಕಣ್ಣುಗಳ ಮೇಲಿರಿಸಿರಬೇಕು.

* ತಡಮಾಡದೆ ಹತ್ತಿರದ ನೇತ್ರ ಭಂಡಾರಕ್ಕೆ ಸುದ್ದಿ ನೀಡಬೇಕು.

* ಮೃತರ ವೈದ್ಯಕೀಯ ದಾಖಲೆಗಳನ್ನು ನೇತ್ರ ತಜ್ಞರಿಗೆ ತೋರಿಸಲು ಎತ್ತಿಡಬೇಕು.

ದಾನ ಪಡೆದ ಕಣ್ಣುಗಳನ್ನು ನೇತ್ರ ಭಂಡಾರಗಳಲ್ಲಿ ಶೇಖರಿಸಿಡಲಾಗುತ್ತದೆ. ಇವು ಸ್ಥಳೀಯ ಆರೋಗ್ಯ ವ್ಯವಸ್ಥೆಯ ನಿಯಂತ್ರಣದಲ್ಲಿರುತ್ತವೆ ಮತ್ತು ಸಾಮಾನ್ಯ ವಾಗಿ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತವೆ. ಎಲ್ಲಾ ನೇತ್ರ ಭಂಡಾರಗಳ ಸಿಬ್ಬಂದಿಯು 24 ಗಂಟೆಗಳೂ ನೇತ್ರ ಸಂಗ್ರಹಣಾ ಕಾರ್ಯಕ್ಕೆ ಉಚಿತವಾಗಿ ಮೃತರಿರುವ ಸ್ಥಳಕ್ಕೇ ಧಾವಿಸುತ್ತಾರೆ.

ನೇತ್ರ ಭಂಡಾರದ ಸೂಕ್ತ ವಾತಾವರಣದಲ್ಲಿ ಸಂಗ್ರಹಿಸಿದ ಕಣ್ಣಿನ ಕಾರ್ನಿಯಾಗಳನ್ನು ಪರೀಕ್ಷಿಸಿ ಮತ್ತು ಸಂಸ್ಕರಿಸಿ ಅದಾಗಲೇ ನೋಂದಣಿ ಮಾಡಿದ ಕಾರ್ನಿಯಾ ಅಂಧರಿಗೆ ಸೂಕ್ತ ತರಬೇತಿ ಪಡೆದ, ನುರಿತ ಕಣ್ಣಿನ ಶಸ್ತ್ರಚಿಕಿತ್ಸಕರಿಂದ ದೋಷಯುಕ್ತ ಕಾರ್ನಿಯಾದ ಜಾಗದಲ್ಲಿ ಕಸಿ ಮಾಡುವುದರಿಂದ ಕಳೆದುಕೊಂಡ ದೃಷ್ಟಿಯನ್ನು ಮರಳಿ ಪಡೆಯಬಹುದು. 

ಬಾಪೂಜಿ ಕಣ್ಣಿನ ಆಸ್ಪತ್ರೆ, ನೇತ್ರ ಭಂಡಾರವನ್ನು ಹೊಂದಿದೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಊರಿನ ಜನರು ನೇತ್ರದಾನ ಮಾಡಲು ಬಾಪೂಜಿ ಆಸ್ಪತ್ರೆ ಅಥವಾ ಚಿಗಟೇರಿ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವನ್ನು ನೇರವಾಗಿ ಸಂಪರ್ಕಿಸಬಹುದು ಅಥವಾ 08192- 253850, 08912 231389 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮೃತ ವ್ಯಕ್ತಿಯ ಮನೆಯ ವಿಳಾಸ ಮತ್ತು ವೈದ್ಯಕೀಯ ವಿವರಗಳನ್ನು ನೀಡಬೇಕು.


ಡಾ.ಸಂಜನ ಸೋಮಶೇಖ‌ರ್‌
ಮಾರ್ಗದರ್ಶಕರು:
ಡಾ|| ರವೀಂದ್ರ ಬಣಕಾರ್ ಮತ್ತು
ಡಾ|| ರಾಜ್ಯಶ್ರೀ ಎಸ್.

error: Content is protected !!