ನಮ್ಮ ಮತ, ನಮ್ಮ ಆಯ್ಕೆ, ನಮ್ಮ ಭವಿಷ್ಯ…

ನಮ್ಮ ಮತ, ನಮ್ಮ ಆಯ್ಕೆ, ನಮ್ಮ ಭವಿಷ್ಯ…

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವೇ ಆಡಳಿತ ನಡೆಸುವ ಬಲಿಷ್ಠ ಪ್ರಜಾಪ್ರಭುತ್ವ ಹೊಂದಿರುವ ಭಾರತ. ಇಲ್ಲಿ ಪ್ರಜೆಗಳೇ ಪ್ರಭುಗಳು. ಮತದಾರನೇ ಪ್ರಜಾಪ್ರಭುತ್ವದ ಬಲಿಷ್ಟ ಬೇರು. ಜಾತಿ, ಮತ, ಪಂಥ, ಧರ್ಮ, ಜನಾಂಗ, ಬಡವ-ಬಲ್ಲಿದ, ಅಕ್ಷರಸ್ಥೆ, ಅನಕ್ಷರಸ್ಥೆ, ಅಂಗವಿಕಲ, ವಯೋವೃದ್ಧ ಹೀಗೆ ಯಾವುದೇ ಬೇಧ-ಭಾವವಿಲ್ಲದೆ ಎಲ್ಲರೂ ಮತದಾನ ಮಾಡಲು ಸಮಾನ ಅವಕಾಶ ಮತ್ತು ಸಮಾನ ಮತ ಮೌಲ್ಯ ಹೊಂದಿದ್ದಾರೆ. 

ಪ್ರಜಾಪ್ರಭುತ್ವ ಉಳಿಯುವುದು ಕೇವಲ ಮತದಾರನ ಮತದಾನದಿಂದಲ್ಲ, ಅವರಿಂದ ಆಯ್ಕೆ ಯಾದ ಜನಪ್ರತಿನಿಧಿಗಳು ಸಮಾನತೆ, ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ, ಸೌಹಾರ್ದ ಮತ್ತು ಸಂವಿಧಾನದ ಆಶಯಗಳ ನೆಲೆಗಟ್ಟಿನ ಮೇಲೆ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ ಮಾತ್ರ ಸಾಧ್ಯ. ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ರವರ ನುಡಿಯಂತೆ “ಬದುಕಲು ರಾಜಕೀಯಕ್ಕೆ ಬರಬೇಡಿ, ಜನರ ಬದುಕನ್ನು ಬದಲಾಯಿಸಲು ಬನ್ನಿ. ಏಕೆಂದರೆ ರಾಜಕೀಯವು ಉದ್ಯೋಗವಲ್ಲ, ಸಾಮಾಜಿಕ ಜವಾಬ್ದಾರಿ”. ಆದ್ದರಿಂದ ನದಿಯೇ ಇಲ್ಲದ ಕಡೆ ಸೇತುವೆ ಕಟ್ಟುವ ಭರವಸೆ ನೀಡಬಲ್ಲ ರಾಜಕಾರಣಿಗಳನ್ನು ಬಿಟ್ಟು ದೃಢ ಮನಸ್ಸಿನ ದೂರದೃಷ್ಟಿವುಳ್ಳ ತನ್ನ ಹೊಣೆಗಾರಿಕೆ ಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬಲ್ಲ ಆಡಳಿತವನ್ನು ನಿರೂಪಿಸುವ ಮತ್ತು ಅಸ್ತಿತ್ವಕ್ಕೆ ತರುವ ಅಧಿಕಾರ ಮತದಾರನ ಕೈಯ್ಯಲ್ಲಿದೆ. ವಿನ್ಸೆಂಟ್‌ ಚರ್ಚಿಲ್‌ರವರ ಮಾತನ್ನು ನಾವಿಲ್ಲಿ ನೆನಪಿಸಿಕೊ ಳ್ಳಬೇಕು. ಕಾಲಕಾಲಕ್ಕೆ ಸುಧಾರಣೆಗೊಳ್ಳದಿದ್ದರೆ ಸರಿ ಪಡಿಸಿಕೊಳ್ಳದೆ ಹೋದರೆ ಪ್ರಜಾಪ್ರಭುತ್ವ ಬೇರಲ್ಲ ಪ್ರಭುತ್ವಕ್ಕಿಂತಲೂ ಅತ್ಯಂತ ಕೆಟ್ಟದಾಗಿರುತ್ತದೆ. 

ಚುನಾವಣೆ ಎನ್ನುವುದು ಜನತಂತ್ರದ ಜೀವಾಳ. ಒಬ್ಬ ಒಳ್ಳೆಯ ಆಡಳಿತಗಾರರನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ನಮ್ಮ, ನಿಮ್ಮ ಮುಂದಿದೆ. ಜವಾಬ್ದಾರಿಯುತ ನಾಗರಿಕರಾಗಿ ಮತದಾನ ಮಾಡಿ ನಿಮ್ಮ ಪಾತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಒಬ್ಬ ಸರ್ವೋತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ಬಂದಿದೆ.

ಆಂಗ್ಲ ಭಾಷೆಯಲ್ಲಿ ಒಂದು ಮಾತು ಇದೆ “Bad Politician are created by Good People, who do not vote”. ಒಳ್ಳೆಯ ವ್ಯಕ್ತಿಗಳು ನಿರ್ಲಕ್ಷ ವಹಿಸಿದರೆ ಅಯೋಗ್ಯರು ಆಯ್ಕೆಯಾಗಿ ನಮ್ಮ ಬದುಕು ಮತ್ತು ಅಭಿವೃದ್ಧಿ ಕಪಿ ಮುಷ್ಠಿಯಲ್ಲಿ ಸಿಲುಕಿದಂತಾಗುತ್ತದೆ. ಕೆಟ್ಟ ವ್ಯಕ್ತಿಗಳು ಆಯ್ಕೆಯಾಗಿ ಜನರ ಮಧ್ಯೆ ಕಲಹ ತಂದಿಟ್ಟು, ರೊಚ್ಚಿಗೆಬ್ಬಿಸಿ, ಸಾಮಾಜಿಕ ಶಾಂತಿಯನ್ನು ಕದಡುವ, ಮತಕ್ಷೇತ್ರವನ್ನು ರಣರಂಗವನ್ನಾಗಿ ಮಾಡುವ ರಾಜಕಾರಣಿಗಳಿಗೆ ನಾವು ಹಂಸಕ್ಷೀರ ನ್ಯಾಯ, ತತ್ವದ ಮೇಲೆ ಪ್ರಬುದ್ಧತೆಯಿಂದ, ಜಾಗರೂಕತೆಯಿಂದ, ಸ್ವಯಂ ಪ್ರೇರಿತರಾಗಿ ಪ್ರತಿಯೊಬ್ಬರು ಮತದಾನ ಮಾಡಿ, ಉತ್ತರ ಕೊಡಿ.

ಸಾಮಾನ್ಯ ಜನರಲ್ಲಿ ಚುನಾವಣೆ ನಮಗೆ ಸಂಬಂಧಿಸಿದ್ದಲ್ಲ ಎಂಬ ಉದಾಸೀನತೆ ಮತ್ತು ಬೇಜವಾಬ್ದಾರಿ ಇದೆ. ಇಂತಹ ಧೋರಣೆ ತುಂಬಾ ಅಪಾಯಕಾರಿ, ಆತಂಕಕಾರಿ ಮತ್ತು ಆಘಾತಕಾರಿಯೂ ಹೌದು. ನಾವು ಮತದಾನ ಮಾಡದಿದ್ದಲ್ಲಿ ಅಯೋಗ್ಯರು ಆಯ್ಕೆಯಾಗಿ, ನಮ್ಮ ಬದುಕನ್ನು ಅಯೋಗ್ಯರ ಕೈಗೆ ನೀಡಿದಂತಾಗುತ್ತದೆ. ಮತದಾರನ ವೈಫಲ್ಯವೂ ಪ್ರಜಾಪ್ರಭುತ್ವದ ವೈಫಲ್ಯವಾಗುತ್ತದೆ. ಅಂತಹ ಸಂದರ್ಭವನ್ನು ನಾವೀಗ ಎದುರಿಸುತ್ತಿದ್ದೇವೆ. ಇಲ್ಲಿ ಸರ್ವಜ್ಞನ ನುಡಿ ಪ್ರಸ್ತುತವೆನಿಸುತ್ತದೆ

`ಹಿರಿತನವು ಹೇಡಿಂಗೆ
ಗುರುತನವು ಮೂಡಂಗೆ
ದೊರೆತನವು ನಾಡ ನೀಚಂಗೆ ದೊರಕಿದರೆ
ಧರೆಗೆ ಕೇಡಂದ – ಸರ್ವಜ್ಞ.

ಆದ್ದರಿಂದ ಮಗನನ್ನಾಗಲೀ, ಮಗಳನ್ನಾಗಲೀ ಅಯೋಗ್ಯರಿಗೆ ಕೊಡಬಾರದು. ವಿಶ್ವದ ರಾಜನೀತಿ ತಜ್ಞರೆಲ್ಲರ “The price of liberty is eternal vigilance” ಮಾತು ಪ್ರಸ್ತುತವೆನಿಸುತ್ತಿದೆ. ಪ್ರಸ್ತುತ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತ ದಾರ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ, ಭಾವುಕತೆಗೆ ಒಳಗಾಗಿ ಭಾವನೆಗಳ ಮಹಾಪೂರದಲ್ಲಿ ಕೊಚ್ಚಿಹೋಗುವ ಪ್ರವೃತ್ತಿಗೆ ಕಡಿವಾಣ ಹಾಕಿ ತಮ್ಮ ಮತವನ್ನು ಆತ್ಮಸಾಕ್ಷಿಯಿಂದ ಚಲಾಯಿಸಬೇಕು.

ಸ್ಪರ್ಧಿಗಳೂ ಸಹ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕು. ವೈಯಕ್ತಿಕ ನಿಂದನೆ, ಚಾರಿತ್ರ್ಯ ವಧೆ, ನಾಲಿಗೆ ಹರಿಬಿಟ್ಟು ಬೇಕಾಬಿಟ್ಟಿ ಮಾತನಾಡುವುದು ಸಲ್ಲದು. ಸೈದ್ಧಾಂತಿಕ ಹಾಗು ತಾತ್ವಿಕ ನೆಲೆಗಟ್ಟಿನ ಮೇಲೆ ಪ್ರಚಾರ ಮತ್ತು ಚುನಾವಣೆಗಳು ನಡೆಯಬೇಕು. 

ದಾವಣಗೆರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಡ್ಡಾಯವಾಗಿ ಮತದಾನ ಮಾಡಲಿ, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ “ನಮ್ಮ ನಡೆ ಮತಗಟ್ಟೆ ಕಡೆ” ಎಂಬ ಅಭಿಯಾನ ಹಾಗು ಮತ್ತಿತರ ಕಾರ್ಯಕ್ರಮಗಳು ನಡೆದಿರುವುದು ಪ್ರಸಂಶನೀಯ. ಇಂತಹ ಪವಿತ್ರ ಕಾರ್ಯದಲ್ಲಿ ಎಲ್ಲಾ ಪಕ್ಷಗಳು, ಅಭ್ಯರ್ಥಿಗಳು, ಮತದಾರರು ಹಾಗು ಸಂಘ-ಸಂಸ್ಥೆಗಳು ಒಗ್ಗೂಡಿ ಚುನಾವಣೆ ಆಯೋಗಕ್ಕೆ ನೆರವಾಗಬೇಕು. 

ಸರ್ಕಾರದ ಮಟ್ಟದಲ್ಲಿ ನಿಮ್ಮನ್ನು ಪ್ರತಿನಿಧಿಸಲು, ನಿಮ್ಮ ಅಗತ್ಯತೆಗಳನ್ನು ಸರ್ಕಾರಕ್ಕೆ ತಿಳಿಸಲು ಒಬ್ಬ ಯೋಗ್ಯ ಪ್ರತಿನಿಧಿ ಬೇಕು. ಸಂವಿಧಾನ ನಮಗೆ ನೀಡಿರುವ ಪ್ರಬಲ ಅಸ್ತ್ರ ಮತದಾನ. ಸೂಕ್ತ ವ್ಯಕ್ತಿಗೆ ಮತ ನೀಡಿದರೆ ಮಾತ್ರ ನಮ್ಮ ಹಿತ ಮತ್ತು ಅಭಿವೃದ್ಧಿ ಸಾಧ್ಯ. ಆದ್ದರಿಂದ “ಹಿಂದಿನ ಅನುಭವ ಪ್ರಸ್ತುತ ಪ್ರಜ್ಞೆ ನಾಳಿನ ಪರಿಕಲ್ಪನೆ” ಹೊಂದಿರುವ ಅಭ್ಯರ್ಥಿ ನಿಮ್ಮ ಮತದ ಪ್ರಥಮ ಆದ್ಯತೆಯಾಗಬೇಕು. 

ನಮ್ಮದೊಂದು ಮಾತು ನಮ್ಮ ಬದುಕಿಗೆ ನಾವೇ ಲೇಖಕರು. ನಮ್ಮ ಭವಿಷ್ಯದ ನಿರ್ಧಾರಕರು ನಾವೇ. ಆಗಾಗಿ ತಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಅದು “Right person in the Right place”.


ಡಾ. ಹೆಚ್‌.ಎಸ್‌. ಮಂಜುನಾಥ ಕುರ್ಕಿ
ಐಗೂರು ಚಂದ್ರಶೇಖರ್‌

 

error: Content is protected !!