ಚುನಾವಣಾ ಮಥನದ `ವಿಷ’ ಯಾರ ಪಾಲಿಗೆ?

ಚುನಾವಣಾ ಮಥನದ `ವಿಷ’ ಯಾರ ಪಾಲಿಗೆ?

ಸಾಕಷ್ಟು ಸಮಸ್ಯೆಗಳು : ಪಕ್ಷಗಳು ಉಚಿತವಾಗಿ  ನೀಡುವ ಭರವಸೆಗಳಲ್ಲಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಪುಕ್ಕಟೆಯಾಗಿ ನಗದು ಕೊಡುವುದಕ್ಕಿಂತ ಸಮಸ್ಯೆ ಇನ್ನೊಂದಿಲ್ಲ. 

ದೇವ ದಾನವರು ಸೇರಿಕೊಂಡು ಅಮೃತಕ್ಕಾಗಿ ಸಮುದ್ರ ಮಥನ ಮಾಡಿದರು ಎಂಬ ಪುರಾಣವಿದೆ. ಆದರೆ, ಈ ಮಥನದ ವೇಳೆ ಅಮೃತಕ್ಕಿಂತ ಮುಂಚೆ ವಿಷ ಹೊರ ಹೊಮ್ಮಿತ್ತು. ವಿಷಕಂಠ ಈ ವಿಷದ ಸಮಸ್ಯೆ ನಿವಾರಿಸಿದ ಮೇಲೆಯೇ ಅಮೃತ ಬಂದಿದ್ದು. ರಾಜಕೀಯ ಪಕ್ಷಗಳು ಘೋಷಿಸಿರುವ ಉಚಿತ ಕೊಡುಗೆಗಳೂ ಸಹ ಒಂದು ರೀತಿ ಚುನಾವಣಾ ಮಥನದಂತೆ ಕಾಣುತ್ತಿವೆ. ಕೊಡುಗೆಗಳು ಯಾರಿಗೆ ಎಂಬುದು ಸ್ಪಷ್ಟವಾಗಿದೆ, ಆದರೆ `ವಿಷ’ ಯಾರ ಪಾಲಿಗೆ ಸೇರಲಿದೆ ಎಂಬುದನ್ನು ಪಕ್ಷಗಳು ಯೋಚಿಸಿವೆಯೇ?

ಮತದಾನದ ದಿನ ಸಮೀಪಿಸುತ್ತಿರುವಂತೆಯೇ ರಾಜ್ಯದ ಪ್ರಮುಖ ಪಕ್ಷಗಳು ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಭರವಸೆಗಳ ಮಹಾಪೂರವನ್ನೇ ಹರಿಸಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳ ನಡುವೆ ಯಾರು ಹಿತವರು ನಮಗೆ ಎಂಬುದನ್ನು ಮಹಾಜನತೆ ನಿರ್ಧರಿಸಬೇಕಿದೆ. 

ಉಚಿತ ಕೊಡುಗೆಗಳಿಂದ ಆರ್ಥಿಕತೆ ಹಾಳಾಗಿ ಪಾಕಿಸ್ತಾನವೋ ಶ್ರೀಲಂಕಾವೋ ಆಗುತ್ತೇವೆ ಎಂಬುದು ಪ್ರಜ್ಞಾವಂತರ ಚಿಂತೆ. ಆದರೆ, ಪ್ರಜ್ಞಾವಂತಿಕೆಗೂ ಚುನಾವಣೆಗೂ ಅದೆಷ್ಟರ ಮಟ್ಟಿಗೆ ಸಂಬಂಧವಿದೆಯೋ ಗೊತ್ತಿಲ್ಲ. ಆದರೆ, ಪಕ್ಷಗಳ ಭರವಸೆಗಳು ಸಮಾಜದ ಕೆಲ ವರ್ಗದ ಮೇಲೆ ನೇರ ಪರಿಣಾಮವಾಗುವ ಬಗ್ಗೆ ಈ ವರ್ಗದ ಜನರಂತೂ ಯೋಚಿಸಬೇಕಿದೆ.

ಉದಾಹರಣೆ ಒಂದು : ಬಿಜೆಪಿಯು ತಾನು ಅಧಿಕಾರಕ್ಕೆ ಬಂದರೆ ಬಿಪಿಎಲ್ ವರ್ಗದವರಿಗೆ ಪ್ರತಿದಿನ ಅರ್ಧ ಲೀಟರ್ ಹಾಲು ಕೊಡುವುದಾಗಿ ಹೇಳಿದೆ. ರಾಜ್ಯದ ಬಹುತೇಕ ಜನರಿಗೆ ಉಚಿತ ಹಾಲು ಸಿಗುವ ಪರಿಸ್ಥಿತಿ ಬಂದರೆ, ಹಾಲು ವಿತರಕರ ಗತಿ ಏನು? ಅಷ್ಟೇ ಅಲ್ಲದೇ, ಒಂದೆರಡು ಹಸು ಕಟ್ಟಿಕೊಂಡು ಮನೆ ಮನೆಗೆ ಹಾಲು ಮಾರುವವರ ಗತಿ ಏನು?

ಉಚಿತ ಹಾಲಿನಿಂದಾಗಿ ಈಗಿರುವ ಹಾಲು ಮಾರಾಟ ಕೇಂದ್ರಗಳ ವ್ಯಾಪಾರ ಗಣನೀಯವಾಗಿ ಕುಸಿಯಬಹುದು. ಅಲ್ಲದೇ, ಖಾಸಗಿ ಹಾಲಿನ ಸಂಸ್ಥೆಗಳಿಗೂ ಹೊಡೆತ ಬೀಳಲಿದೆ. ಖಾಸಗಿಯವರು ಹೋದರೆ ಹೋಗಲಿ ಬಿಡಿ ಎಂದಿರಾ? ಸರಿ ಬಿಡಿ. ರೈತರ ಗತಿ ಏನು? ಪ್ರಸಕ್ತ ರೈತರಿಗೆ ಹಾಲು ಮಾರಲು ಹಲವಾರು ಮಾರ್ಗಗಳಿವೆ. ಉಚಿತ ಹಾಲು ಕೊಡುವುದಾದರೆ ಕೆ.ಎಂ.ಎಫ್. ದೃಢವಾಗಿ ಉಳಿಯಲಿದ್ದು, ಉಳಿದವರ ಅಸ್ತಿತ್ವವೇ ಅಲುಗಾಡಲಿದೆ. ನಂತರ ರೈತರು ಹಾಲು ಮಾರಾಟಕ್ಕೆ ಕೆ.ಎಂ.ಎಫ್. ಒಂದನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಈ ರೀತಿಯ ಏಕಸ್ವಾಮ್ಯ ಯಾರಿಗೆ ಹಿತ?

ಉದಾಹರಣೆ ಎರಡು : ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದೆ. ಮಹಿಳೆಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದರೆ, ಅವರಷ್ಟೇ ಅಲ್ಲದೇ ಜೊತೆಗಿರುವ ಪುರುಷರೂ ಸರ್ಕಾರಿ ಬಸ್‌ಗೇ ಬರುತ್ತಾರೆ. ಒಂದಿಷ್ಟು ಕಾಸು ಉಳಿಯುವ ಅವಕಾಶ ಯಾರಿಗೆ ಬೇಡ ಹೇಳಿ?

ಹೀಗಾಗಿ ಖಾಸಗಿ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ. ಆಗ ಖಾಸಗಿ ಬಸ್‌ಗಳ ಗತಿ ಏನಾಗಬೇಕು? ಖಾಸಗಿ ಬಸ್ ವಲಯದಲ್ಲೂ ಲಕ್ಷಾಂತರ ಜನ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಬಸ್ ಪ್ರಯಾಣ ಉಚಿತವಾದರೆ, ರೈಲುಗಳಿಗೂ ಹೊಡೆತ ಬೀಳಲಿದೆ. ಕಡಿಮೆ ಡೀಸೆಲ್ ಕುಡಿಯುವ ರೈಲಿನ ಬದಲು, ಹೆಚ್ಚು ಡೀಸೆಲ್ ಕುಡಿಯುವ ಬಸ್‌ಗಳ ಮೊರೆ ಹೋಗುವುದು ಪರಿಸರಕ್ಕೆ ಎಷ್ಟು ಹಿತ?

ಉದಾಹರಣೆ ಮೂರು : ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್‌ ಘೋಷಿಸಿದೆ. ಇದುವರೆಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ತಮ್ಮದೇ ಆದ ರೀತಿಯಲ್ಲಿ ಸ್ವಾವಲಂಬನೆ ಕಂಡುಕೊಂಡಿದ್ದವು. ಒಂದು ಬಾರಿ ಸರ್ಕಾರ ಸಾಲ ಮನ್ನಾ ಮಾಡಿದರೆ, ಮುಂದೆ ಮತ್ತೆ ಸಾಲ ಮನ್ನಾ ಆಗಬಹುದು ಎಂಬ ಯೋಚನೆ ಬರುವುದಿಲ್ಲ ಎಂದು ಏನು ಗ್ಯಾರಂಟಿ?

ಈಗಾಗಲೇ ಸರ್ಕಾರಿ ನಿಗಮಗಳ ಮೂಲಕ ನೀಡಲಾಗುವ ಸಾಲ ವಸೂಲಿ ಮಾಡುವುದೇ ಕಠಿಣವಾಗಿದೆ. ಯಾವುದೋ ಒಂದು ಕಾಲದಲ್ಲಿ ಸಾಲ ಮನ್ನಾ ಮಾಡಿದ ಕಾರಣದಿಂದ, ಮತ್ತೆ ಮನ್ನಾ ಆಗಬಹುದು ಎಂದು ಸಾಲ ಪಡೆದವರು ಕಾಯುತ್ತಿರುತ್ತಾರೆ. ಇದೇ ಪರಿಸ್ಥಿತಿ ಸ್ತ್ರೀಶಕ್ತಿ ಸಂಘಗಳಿಗೂ ಬರುವುದಿಲ್ಲ ಎಂಬ ಗ್ಯಾರಂಟಿ ಏನು?

ಇಂತಹ ಸಾಕಷ್ಟು ಸಮಸ್ಯೆಗಳು ಪಕ್ಷಗಳ ಭರವಸೆಗಳಲ್ಲಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಪುಕ್ಕಟೆಯಾಗಿ ನಗದು ಕೊಡುವುದಕ್ಕಿಂತ ಸಮಸ್ಯೆ ಇನ್ನೊಂದಿಲ್ಲ. ಜನರನ್ನು ಉತ್ಪಾದನೆಯಲ್ಲಿ ತೊಡಗಿಸಿ ಅದಕ್ಕಾಗಿ ಹಣ ಕೊಡಬೇಕು. ಆಗ ಆರ್ಥಿಕತೆಯಲ್ಲಿ ನಗದು ಬರುತ್ತದೆ, ಉತ್ಪನ್ನಗಳೂ ಬರುತ್ತವೆ. ಅದರ ಬದಲು, ಉತ್ಪಾದನೆಯನ್ನೇ ಮಾಡಿಸದೇ ಕೇವಲ ಹಣ ಕೊಟ್ಟರೆ, ಮಾರುಕಟ್ಟೆಯಲ್ಲಿ ಹಣ ಬರುತ್ತದೆ ಉತ್ಪನ್ನಗಳು ಹೆಚ್ಚಾಗುವುದಿಲ್ಲ. ಇದರಿಂದ ವಸ್ತುಗಳ ಬೆಲೆ ಹೆಚ್ಚಾಗಿ ನೂರೆಂಟು ಸಮಸ್ಯೆ.

ಮನೆಗಳಿಗೆ ಉಚಿತ ವಿದ್ಯುತ್ ಕೊಟ್ಟರೆ ದುರ್ಬಳಕೆ ಹೆಚ್ಚಾಗುವ ಅಪಾಯ. ಹೊಲಗಳಿಗೆ ಉಚಿತ ವಿದ್ಯುತ್ ಅಂತರ್ಜಲ ಅತಿ ಬಳಕೆಯಾಗುವ ಅಪಾಯ. ಹೀಗೆ ಪ್ರತಿ ಯೊಂದು ಉಚಿತ ಕೊಡುಗೆಯೂ ಆಯಾ ವಲಯಗಳಿಗೆ ಅಪಾಯ ತರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪಕ್ಷಗಳು ಅಧ್ಯಯನ ಮಾಡಿವೆಯೋ ಬಿಟ್ಟಿವೆಯೋ ಗೊತ್ತಿಲ್ಲ. ಮಹಾಜನತೆ ಮಾತ್ರ ಯೋಚಿಸಬೇಕಿದೆ.


ಜಿ.ಎನ್. ಕಾಮತ್‌, ದಾವಣಗೆರೆ

 

error: Content is protected !!