ಅವಸರಕ್ಕೆ ಹಾಕು ಕಡಿವಾಣ… ನೀನಾಗುವೆ ಆಗ ಕಡುಜಾಣ

ಅವಸರಕ್ಕೆ ಹಾಕು ಕಡಿವಾಣ… ನೀನಾಗುವೆ ಆಗ ಕಡುಜಾಣ

ಇದು ಸ್ಪರ್ಧಾತ್ಮಕ ಕಾಲ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಯಾವುದರಲ್ಲಿ ಸ್ಪರ್ಧೆ ಇರಬೇಕ್ಕೆನ್ನುವ ಮೂಲ ಜ್ಞಾನವೇ ಕೆಲವರಲ್ಲಿ ಇಲ್ಲದಾಗಿದೆ. ಈಗ ನಾನು ಹೇಳ ಹೊರಟಿರುವುದು ಹದಿಹರೆಯದ ಮನಗಳಿಗೆ, ವಾಹನ ಸವಾರರಿಗೆ. ಅದರಲ್ಲೂ ದ್ವಿಚಕ್ರವಾಹನಗಳಲ್ಲಿ ಸಂಚರಿಸುವ ಸವಾರರು. ಯಾವುದಕ್ಕೂ ಯೋಚಿಸುವುದಿಲ್ಲ. ಮನೆಯಿಂದ ಹೊರಡುವಾಗ ಹೆತ್ತವರು ಹೇಳುವ ‘ನಿಧಾನಕ್ಕೆ ಹೋಗು’ ಎಂಬ ಮಾತನ್ನು ಆ ಕಿವಿಯಲ್ಲಿ ಕೇಳಿ, ಈ ಕಿವಿಯಲ್ಲಿ ಬಿಟ್ಟು ಹೊರಟು ಬಿಡುತ್ತಾರೆ. ವಾಹನದ ಮೇಲೆ ಕೂತು ರಸ್ತೆಗಿಳಿದರೆ ಸಾಕು ಜಗವೆಲ್ಲಾ ನನ್ನದೇ ಎಂಬ ಭಾವ, ಸ್ವಾತಂತ್ರ್ಯದ ಬದಲಾಗಿ ಮನಸ್ಸು ಸ್ವೇಚ್ಚೆಯ ಕಡೆ ತಿರುಗಿ ನಾನು, ನನ್ನಿಷ್ಟ ಎಂಬಂತೆ ವರ್ತಿಸ ತೊಡಗುತ್ತದೆ.

ಒಬ್ಬರು ಇಬ್ಬರಾಗುತ್ತಾರೆ. ಪಯಣದಲ್ಲಿ ವೇಗ ಹೆಚ್ಚುತ್ತದೆ. ಮುಂದೆ ಹೋಗುತ್ತಾ ಇಬ್ಬರು ಮೂರು ಜನರಾಗುತ್ತಾರೆ. ಇನ್ನಷ್ಟು ವೇಗ ಹೆಚ್ಚುಗೊಳ್ಳುತ್ತದೆ. ಈಗಂತೂ ಮನಸ್ಸು ಹುಚ್ಚು ಕುದುರೆಯಂತಾಗಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಯಲ್ಲಿ ಅಡ್ಡವಾಗುವ ಉಬ್ಬು-ತಗ್ಗುಗಳ ಅರಿವೇ ಇಲ್ಲದೇ ಒಂದೇ ಭರದಲ್ಲಿ ಹಾಡುತ್ತಾ, ಕೂಗುತ್ತಾ ಕೇಕೆ ಹಾಕುತ್ತಾ ಮಿತಿಯಿಲ್ಲದೆ ಅತಿಯಾಗಿ ಓಡಿಸಿ ಅಪಘಾತಕ್ಕೀಡಾಗುತ್ತಾರೆ. ಕೈ, ಕಾಲು, ಯಾವುದೋ ಮುರಿದು ಇನ್ನೊಬ್ಬರಿಗೆ ಹೊರೆಯೂ ಆಗುತ್ತಾರೆ. ಶಾಶ್ವತವಾಗಿ ನರಳುವ ಪರಿಸ್ಥಿತಿಯೂ ಬರಬಹುದು. ಅಪಘಾತಕ್ಕೆ ಒಳಗಾಗಿ – ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಾ ಕಾಪಾಡಿ ಎಂದು ಅಂಗಲಾಚುವಾಗ ಹೆತ್ತವರು ಹೇಳಿ ಕಳುಹಿಸಿದ ಎಚ್ಚರಿಕೆಯ ಮಾತು ನೆನಪಾಗುತ್ತವೆ. ಆದರೆ ಕಾಲ ಮಿಂಚಿ ಹೋಗುತ್ತದೆ. ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. 

ನೆನಪಿರಲಿ ಮನಸುಗಳೇ, ಎಷ್ಟೋ ತಂದೆ ತಾಯಿಯರಿಗೆ ಒಬ್ಬನೇ ಮಗ ಇದ್ದು ಅವನ ಬದುಕು, ಬೆಳವಣಿಗೆಯಲ್ಲೇ ತಮ್ಮ ಜೀವನ ಕಳೆಯುವವರಿರುತ್ತಾರೆ. ಮುಂದೆ ಭವಿತವ್ಯಕ್ಕೆ ನೀವು ಆಸರೆಯಾಗುತ್ತೀರೆಂಬ ಅವರ ನಂಬಿಕೆಗೆ ನಿಮ್ಮ ಮಿತಿಮೀರಿದ ಉತ್ಸಾಹ ತಣ್ಣೀರೆರಚಿ ಕಣ್ಣೀರಲ್ಲಿ ಕೈತೊಳೆಯವಂತೆ ಮಾಡುತ್ತದೆ. ಈ ಅನಾಹುತಕ್ಕೆ ಮುಂಚೆ ಕೊಂಚ ಜಾಗೃತಿ ವಹಿಸಿದ್ದರೆ, ನೀ ಮತ್ತೆ ಹೆತ್ತವರ ಮುಂದೆ, ನಂಬಿದವರ ಮುಂದೆ ಇರುತ್ತಿದ್ದೆ. ಉತ್ಸಾಹಕ್ಕೆ ಕೊನೆಯಿಲ್ಲದಂತೆ ಮೂರು ಜನ ಹುಚ್ಚೆದ್ದು ಹೊರಟಿದ್ದಕ್ಕೆ ನಾಲ್ವರ ಹೆಗಲ ಮೇಲೆ ಹೊತ್ತೊಯ್ಯುವ ಪರಿಸ್ಥಿತಿ ಎದುರಾಯಿತು. ಆಗ ಹೆತ್ತವರಿಗೆ, ನಂಬಿದವರಿಗೆ ಆಗುವ ನೋವು, ಸಂಕಟ ನಮ್ಮ ಶತ್ರುಗಳಿಗೂ ಬೇಡ.

ಯಾರೋ ನಮ್ಮನ್ನು ನೋಡಲಿ ಎಂಬ ಭ್ರಮೆಯೋ ಅಥವಾ ನನ್ನಂಥವರು ಯಾರೂ ಇಲ್ಲ ಎಂಬ ಅಹಂಕಾರವೋ, ಯಾರ ಮಾತು ನಾನೇನು ಕೇಳಬೇಕು, ನನ್ನಿಷ್ಟ ಎಂಬ ಹುಂಬತನವೋ ನಮ್ಮನ್ನು ಸಾವಿನ ಕೂಪಕ್ಕೆ ನೂಕಿಬಿಡುತ್ತದೆ. ಎಲ್ಲಿಗೇ ಹೊರಡಲಿ ಹಿರಿಯರು, ಹೆತ್ತವರು, ಆತ್ಮೀಯರು ಹೇಳುವ ಜಾಗೃತಿಯ ಮಾತುಗಳನ್ನು ಜೋಪಾನದಿಂದ ಮನದಲ್ಲಿ ಕಾಪಿಟ್ಟುಕೊಳ್ಳಬೇಕು. ತಾಳ್ಮೆಯಿಂದ ಪ್ರಯಾಣ ಆರಂಭಿಸಬೇಕು. 

ಸಂಚಾರಿ ನಿಯಮದ ಸೂಚನಾ ಫಲಕಗಳನ್ನು ಅರ್ಥೈಸಿಕೊಂಡು ಅದರಂತೆ ನಡೆಯಬೇಕು. ಎಲ್ಲಿಗೇ ಹೋಗಬೇಕಾದರೂ ಹತ್ತು ನಿಮಿಷ ಮುಂಚಿತವಾಗಿ ಹೊರಡಿ, ಆಗ ಅವಸರ ಎನಿಸುವುದಿಲ್ಲ. ಏನನ್ನೂ ಮರೆಯುವುದಿಲ್ಲ. ಯಾವುದೇ ಅವಘಡಗಳೂ ಸಂಭವಿಸುವುದಿಲ್ಲ. ತಾಳ್ಮೆ ಕಹಿಯೆನಿಸಬಹುದು. ಆದರೆ ಅದರ ಫಲ ಸಿಹಿಯಾಗಿಯೇ ಇರುತ್ತದೆ.

ಇದನ್ನು ಓದಿದ ಮೇಲೆ ಮತ್ತೆ ನೀವು ದ್ವಿಚಕ್ರ ವಾಹನದಲ್ಲಿ ಹೊರಟಿರಬಹುದು. ಮತ್ತೊಮ್ಮೆ ನೆನಪಿರಲಿ ನಿಮಗೆ ರಸ್ತೆ, ಪಯಣ, ಖುಷಿ, ಉತ್ಸಾಹವೇ ಪ್ರಪಂಚವಾಗಿರಬಹುದು. ಆದರೆ ನಿಮ್ಮನ್ನೇ ನಂಬಿರುವ ಎಷ್ಟೋ ಮನಸ್ಸುಗಳಿಗೆ ನೀವೇ ಪ್ರಪಂಚ. ಅರಿವಿರಲಿ, ಜಾಗೃತರಾಗಿ, ಭ್ರಮಾಲೋಕದಿಂದ ವಾಸ್ತವದೆಡೆಗೆ ಪಯಣಿಸಿ, ಪಯಣ ಸುಖಕರವಾಗಿರಲಿ. 


ಅವಸರಕ್ಕೆ ಹಾಕು ಕಡಿವಾಣ... ನೀನಾಗುವೆ ಆಗ ಕಡುಜಾಣ - Janathavani– ಶ್ರೀಮತಿ ಉಷಾ ಈ., ಕನ್ನಡ ಉಪನ್ಯಾಸಕರು,  ಎಸ್.ಎ.ಜಿ.ಬಿ.ಸಂ.ಪ.ಪೂ ಕಾಲೇಜು. ದಾವಣಗೆರೆ. ಮೊ: 98445 72738.

error: Content is protected !!