ಕಂದಗಲ್ಲು ಗ್ರಾಮದಲ್ಲೊಂದು ‘ಪಂಚವಟಿ’

‘ಪಂಚವಟಿ’ ಈ ಹೆಸರನ್ನು ಬಹುಜನರು ಕೇಳಿರಬಹುದು. ಮಹಾಭಾರತ, ರಾಮಾಯಣದ ಪುರಾಣ ಪುಣ್ಯ ಕಥೆಗಳಲ್ಲಿ ಈ ಹೆಸರಿನ ಪ್ರಸ್ತಾಪವಿದೆ.

ಋಷಿ ಮುನಿಗಳು ಹೆಚ್ಚಿನ ದಿನಗಳ ಕಾಲ ನೀರು, ಆಹಾರವಿಲ್ಲದೆ ತಪಸ್ಸು ಮಾಡುತ್ತಿದ್ದುದು ಈ ಪಂಚವಟಿ ವನದ ಮಧ್ಯಭಾಗದಲ್ಲಿಯೇ.  ತಪ್ಪಸ್ಸಿನ ವೇಳೆ ಋಷಿ ಮುನಿಗಳಿಗೆ ನೀರು-ಆಹಾರದ ಶಕ್ತಿ ತುಂಬುತ್ತಿದ್ದುದೂ ಸಹ ಈ ಪಂಚ ವೃಕ್ಷಗಳು ಎಂದು ಹೇಳಲಾಗುತ್ತದೆ.

ವೈಜ್ಞಾನಿಕ ದೃಷ್ಟಿಯಲ್ಲಿ ನೋಡಿದಾಗ ಪಂಚವಟಿ ವನದಲ್ಲಿ  ಕಂಡು ಬರುವ ಬಿಲ್ವ, ಆಲ, ಹತ್ತಿ, ಅರಳಿ ಹಾಗೂ ಬನ್ನಿ ಮರಗಳು ಅತಿ ಹೆಚ್ಚು ಆಕ್ಸಿಜನ್ ನೀಡುತ್ತವೆ. 

ಭೂಮಿಯ ಮೇಲೆ ಸುಮಾರು ಹತ್ತು ಮರಗಳು ಹೆಚ್ಚಿನ ಆಕ್ಸಿಜನ್ ಒದಿಗಿಸುತ್ತವೆ. ಅದರಲ್ಲಿ ಈ ಐದು ವೃಕ್ಷಗಳು ಅತಿ ಹೆಚ್ಚಿನ ಆಕ್ಸಿಜನ್ ನೀಡುತ್ತವೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟ ವಿಷಯ. ಅಲ್ಲದೆ ಮೋಡಗಳನ್ನು ಆಕರ್ಷಿಸಿ ಮಳೆ ತರಿಸುವ ಶಕ್ತಿ ಈ ಪಂಚವಟಿ ವನಕ್ಕಿದೆ.

ಕಂದಗಲ್ಲು ಗ್ರಾಮದ ಪ್ರಗತಿ ಪರ ರೈತ ಕೆ.ಜಿ. ಈಶ್ವರಪ್ಪ ಅವರು, ಇದೀಗ ತಮ್ಮ ನಿವಾಸಕ್ಕೆ  ಸನಿಹ ದೂರದಲ್ಲಿನ ಕೃಷಿ ಭೂಮಿಯಲ್ಲಿ ಈ `ಪಂಚವಟಿ’ ನಿರ್ಮಿಸಿ ರಾಜ್ಯದ ಗಮನ ಸೆಳೆದಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಅನೇಕರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೂ, ಕಳೆದ ಆರೇಳು ತಿಂಗಳಿನಿಂದ ಪಂಚ ಸಸಿಗಳಾಗಿ ಹುಡುಕಾಡಿ ಸಂಗ್ರಹಿಸಿದ್ದಾರೆ.

ಇವರ ಪಂಚವಟಿ ಸ್ಥಾಪನೆಗೆ ಖ್ಯಾತ ಪ್ರಾಧ್ಯಾಪಕ ಡಾ.ಸೆಲ್ವಪಿಳ್ಳೆ ಐಯ್ಯಂಗಾರ್ ಅವರು, ವಾರಣಾಸಿ ಮತ್ತು ಪಶ್ಚಿಮ ಬಂಗಾಳದಲ್ಲಿ ತಮಗೆ ಪರಿಚಯ ಇರುವ ಸ್ನೇಹಿತರೊಂದಿಗೆ ಚರ್ಚಿಸಿ  ಯಾವ ಸಸಿ ಯಾವ ದಿಕ್ಕಿನಲ್ಲಿ ನೆಡಬೇಕೆಂಬ ಬಗ್ಗೆ ಸಲಹೆ, ಸೂಚನೆ ನೀಡಿದ್ದಾರೆ.

ಮತ್ತೋರ್ವ ಸ್ನೇಹಿತರಾದ ಬೆಳಗಾವಿಯ ಅಭಯ್ ಮುತಾಲಿಕ್ ಅವರು ಬ್ರಹ್ಮಪುರಾಣದಲ್ಲಿ ಪಂಚವಟಿ ಬಗ್ಗೆ ಉಲ್ಲೇಖವಾಗಿರುವ ಬಹಳಷ್ಟು ವಿಷಯ ಗ್ರಹಿಸಿಕೊಂಡು ಸಸಿ ನೆಡಬೇಕಾದ ದೂರವನ್ನು ನಿಖರವಾಗಿ ತಿಳಿಸಿದ್ದಾರೆ. ಅಲ್ಲದೆ  ಪ್ರದೀಪ್ ತಾಪಸ್ವಿ ಅವರೂ ಸಹ ಅನೇಕ ಸಲಹೆಗಳನ್ನು ನೀಡಿದ್ದಾಗಿ ಈಶ್ವರಪ್ಪ ನೆನೆದರು.

ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಈ ಐದು ವೃಕ್ಷಗಳು ಕಾಣ ಸಿಗುತ್ತವೆ. ಆದರೆ ಅದು ಪಂಚವಟಿಯಾಗದು, ಅದಕ್ಕೆ ನಿರ್ದಿಷ್ಟ ದೂರ, ದಿಕ್ಕಿನಲ್ಲಿದ್ದಾಗ ಮಾತ್ರ ಅದರ ಉಪಯೋಗ ಪಡೆಯಲು ಸಾಧ್ಯ ಎಂಬುದು ಅವರ ಅಭಿಪ್ರಾಯ. ಸದ್ಯ ಮೇಲುಕೋಟೆಯಲ್ಲೂ ಈ ರೀತಿ ಪಂಚ ಮರಗಳಿವೆ. ಆದರೆ ನಿರ್ದಿಷ್ಟ ದಿಕ್ಕು, ದೂರ ಇಲ್ಲದ ಕಾರಣ ಅದು ಪಂಚವಟಿ ಅಲ್ಲ ಎನ್ನುತ್ತಾರೆ ಈಶ್ವರಪ್ಪ.

ಆಲ, ಅತ್ತಿ ಹಾಗೂ ಅರಳಿ ಸಸಿಗಳು ಅರಣ್ಯ ಇಲಾಖೆಯಲ್ಲಿ ಸುಲಭವಾಗಿ ದೊರೆತವು. ಆದರೆ ಬಿಲ್ವ ಹಾಗೂ ಬನ್ನಿ ಗಿಡಗಳಿಗಾಗಿ ಸಾಕಷ್ಟು ಶ್ರಮ ಪಡಬೇಕಾಯಿತು. ಈ ಎರಡೂ ಪೂಜ್ಯನೀಯ ಮರಗಳ ಎಲ್ಲೆಂದರಲ್ಲಿ ಬೆಳೆಯುವುದೂ ಇಲ್ಲ, ಬೆಳೆಸುವುದೂ ಇಲ್ಲ. ಇವನ್ನು ಸಾಕಿದ ಮೇಲೆ ಎಲ್ಲಿ ಬೇಕೆಂದರಲ್ಲಿ ನೆಡಲೂ ಆಗದು ಈ ಕಾರಣಕ್ಕಾಗಿಯೇ ಸಸಿ ಸಿಗುವುದು ಕಷ್ಟವಾಗಿತ್ತು ಎಂದು ಅಭಿಪ್ರಾಯಿಸಿದರು.

ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಪಂಚವಟಿ ನಿರ್ಮಿಸಿದ್ದೇನೆ.  ಇದರ ಉಪಯೋಗ ಪಡೆಯಲು ಇನ್ನೂ ಐದಾರು ವರ್ಷಗಳಾದರು ಬೇಕು. ಪ್ರಕೃತಿ ದಿಢೀರ್ ಕೊಡುಗೆ ನೀಡುವುದಿಲ್ಲ ಎಂದರು.


ಕಂದಗಲ್ಲು ಗ್ರಾಮದಲ್ಲೊಂದು 'ಪಂಚವಟಿ' - Janathavaniಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]

error: Content is protected !!