ದಾವಣಗೆರೆ, ಸೆ. 22- ಅಡಿಕೆ ಕೃಷಿ ಪದ್ಧತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಸಿ ಮತ್ತು ಒಣ ಅಡಿಕೆ ಸುಲಿಯುವ ಯಂತ್ರಗಳು ಸೇರಿದಂತೆ ವಿವಿಧ ಯಂತ್ರೋಪಕರಣಗಳು ಬೆಳೆಗಾರರಿಗೆ ಹೊಸ ಆಶಾಕಿರಣ ಮೂಡಿಸಲಿವೆ ಎಂದು ದಾಮ್ಕೋಸ್ ಸಂಸ್ಥಾಪಕ ಅಧ್ಯಕ್ಷ ಜಯಣ್ಣ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದ ಆವರಣದಲ್ಲಿ ಟೆಂಡರ್ ಟುಡೇ ಗ್ರೂಪ್ಸ್ ವತಿಯಿಂದ ಮೊನ್ನೆ ಆಯೋಜಿಸಿದ್ದ `ಅಡಿಕೆ ಕೃಷಿ ಯಂತ್ರ ಮೇಳ-2022′ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಸಹ ಜಿಲ್ಲೆಯಲ್ಲಿ ರಾಗಿ, ಭತ್ತ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇದೀಗ ಅಡಿಕೆ ಬೆಳೆ ಬೆಳೆಯಲು ಮುಂದಾಗಿದ್ದಾರೆ ಎಂದರು.
ಅಡಿಕೆ ಸಿಪ್ಪೆಯಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಸಹ ಏರ್ಪಡಿಸಲಾಗಿತ್ತು.
ಅಡಿಕೆ ಉಪ್ಪಿನಕಾಯಿ ಸೇರಿದಂತೆ ಇತರೆ ಉತ್ಪನ್ನಗಳ ಪ್ರದರ್ಶನ ಮಾಡಲಾಯಿತು. ನವೀನ ಮಾದರಿಯ ಅಡಿಕೆ ಸುಲಿಯುವ ಯಂತ್ರಗಳು ಸೇರಿ ಅಡಿಕೆ ಕೃಷಿ ಅಭಿವೃದ್ಧಿಗೆ ಪೂರಕವಾಗುವ ಯಂತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾಮ್ಕೋಸ್ ಕಾರ್ಯದರ್ಶಿ ಡಿ.ಹೆಚ್. ಶಿವಕುಮಾರ್, ನಿರ್ದೇಶಕ ಹೆಚ್.ಜಿ. ಮಲ್ಲಿಕಾರ್ಜುನ್, ನ್ಯಾಯವಾದಿ ಬಳ್ಳಾರಿ ರೇವಣ್ಣ, ಶ್ರೀಹರಿ, ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.
ಬೆಳೆಗಾರರ ಗಮನ ಸೆಳೆದ ಅಡಿಕೆ ಕೃಷಿ ಯಂತ್ರ ಮೇಳ: ಅಡಿಕೆ ಕೃಷಿ ಯಂತ್ರ ಮೇಳ ಗ್ರಾಮೀಣ ರೈತರ ಗಮನ ಸೆಳೆಯಿತು.
ಅಡಿಕೆ ಅಭಿವೃದ್ಧಿ ಪರಿಷ್ಕರಣೆ ಯಂತ್ರಗಳು, ಅಡಿಕೆ ಸುಲಿಯುವ ಯಂತ್ರಗಳು, ಔಷಧಿ ಸಿಂಪಡಣೆ ಮತ್ತು ಅಡಿಕೆ ಗೊನೆ ತೆಗೆಯುವ ಹೈಟೆಕ್ ಕಾರ್ಬನ್ ಫೈಬರ್ ದೋಟಿ, ಮಿನಿ ಟ್ರ್ಯಾಕ್ಟರ್, ಕೈಗಾಡಿಗಳು, ರೋಟರಿ ಟಿಲ್ಲರ್, ಪವರ್ ಟಿಲ್ಲರ್, ನಾಟಿ ಯಂತ್ರ, ರೋಟೋವೇಟರ್, ಅಡಿಕೆ ಮರ ಹತ್ತುವ ಯಂತ್ರ, ಹುಲ್ಲು ಕತ್ತರಿಸುವುದು ಸೇರಿದಂತೆ ವಿವಿಧ ಯಂತ್ರಗಳನ್ನು ಪ್ರದರ್ಶಿಸಲಾಯಿತು.
November 23, 2024