ಹರಿಹರ, ಜ. 5 – ಸಾರ್ವಜನಿಕರು ಯಾವುದೇ ಮೂಲಭೂತ ಸಮಸ್ಯೆಗಳು ಇದ್ದರೆ, ನಗರಸಭೆಯ ಪೌರಾಯುಕ್ತ ಐಗೂರು ಬಸವರಾಜ್ ಅವರ ಗಮನಕ್ಕೆ ತಂದರೆ ಬರುವ 2023-24ನೇ ಸಾಲಿನ ಬಜೆಟ್ ವೇಳೆ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ನಗರಸಭೆ ಅಧ್ಯಕ್ಷರಾದ ಶಾಹೀನಾಬಾನು ದಾದಾಪೀರ್ ಭಾನುವಳ್ಳಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ 2023-24 ನೇ ಸಾಲಿನ ಬಜೆಟ್ ಪೂರ್ವಭಾವಿ ಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಬಗ್ಗೆ ಸರ್ವ ಸದಸ್ಯರು, ಪೌರಾಯುಕ್ತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಲಾಗುವುದು. ಈ ಸಮಸ್ಯೆಗಳ ಬಗೆಹರಿಸುವ ರೀತಿಯಲ್ಲಿ 2023 – 24 ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗುವುದು ಎಂದು ಹೇಳಿದರು.
ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ, ಇನ್ನೂ ಎರಡು ಮಹತ್ವದ ಸಭೆಗಳನ್ನು ಆಯೋಜನೆ ಮಾಡಲಾಗುವುದು. ಸಭೆಯ ವಿಚಾರಗಳ ಕುರಿತು ಶಾಸಕರ ಬಳಿ ಮತ್ತು ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಚರ್ಚೆ ಮಾಡಿ ನಂತರದಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ಎ. ವಾಮನಮೂರ್ತಿ ಮಾತನಾಡಿ, ಎಲ್ಲಾ ಅಧಿಕಾರಿಗಳಿಗೆ ಉತ್ತಮ ಕೆಲಸವನ್ನು ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಆದಾಯ ಕೊರತೆಯಿಂದ ಹರಿಹರ ನಗರ ಸುಧಾರಣೆ ಸಾಧ್ಯವಾಗುತ್ತಿಲ್ಲ ಎಂದರು.
ನಗರಸಭೆ ಸದಸ್ಯ ಗುತ್ತೂರು ಜಂಬಣ್ಣ ಮಾತನಾಡಿ, ಸಮಸ್ಯೆ ಹೆಚ್ಚಾಗಿರುವ ಬಡಾವಣೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಸದಸ್ಯ ಹನುಮಂತಪ್ಪ ಮಾತನಾಡಿ, ಹಿಂದುಳಿದ ವರ್ಗಗಳ ಬಡಾವಣೆಗಳು ಅಭಿವೃದ್ಧಿ ಆಗಬೇಕು ಎಂದು ಸರ್ಕಾರ ಎಷ್ಟೆಲ್ಲ ಸೌಲಭ್ಯಗಳನ್ನು ನೀಡಿದರೂ ಸಹ ಅವುಗಳ ಸದ್ಬಳಕೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂದರು.
ಕೈಗಾರಿಕೋದ್ಯಮಿ ಪ್ರಹ್ಲಾದ್ ಮಾತನಾಡಿ, ಕೈಗಾ ರಿಕಾ ಪ್ರದೇಶದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲ ಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಮಹೋನ್ ಮಾತನಾಡಿ, ರಸ್ತೆ ದುರಸ್ತಿ ಮಾಡಬೇಕು. ಆಟೋ ಚಾಲ ಕರ ಕುಟುಂಬದವರಿಗೆ ವಸತಿ ಕಲ್ಪಿಸಬೇಕು. ನಗರಸಭೆ ಯಲ್ಲಿ ಲಂಚದ ಸಮಸ್ಯೆ ಬಗೆಹರಿಯಬೇಕು ಎಂದರು.
ನಿಂಗಪ್ಪ ಚಂದಾಪೂರ್ ಮಾತನಾಡಿ, ಚರಂಡಿಗೆ ಆದ್ಯತೆ ನೀಡಬೇಕು. ನೀರಿನ ಕಂದಾಯದ ಗೊಂದಲ ನಿವಾರಿಸಬೇಕು ಎಂದರು.
ನಗರಸಭೆ ಸದಸ್ಯ ಅಬ್ದುಲ್ ಅಲಿಂ ಮಾತನಾಡಿ, ಶುದ್ಧ ಘಟಕಗಳ ನಿರ್ವಹಣೆಯಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಎಇಇ ವಿನಯ್ ಕುಮಾರ್, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಆರ್.ಸಿ. ಜಾವೇದ್, ಉಷಾ ಮಂಜುನಾಥ್ ಅಂಗಡಿ, ಪಕ್ಕೀರಮ್ಮ, ಎಸ್.ಎಂ. ವಸಂತ್, ಷಾಹಿನಾಬಾನು, ರತ್ನ.ಡಿ. ಉಜ್ಜೇಶ್, ಲಕ್ಷ್ಮಿ ಮೋಹನ್, ದಿನೇಶ್ ಬಾಬು, ಅಬ್ದುಲ್ ಅಲಿಂ, ಎಂ.ಎಸ್. ಬಾಬುಲಾಲ್, ಮುಖಂಡ ನಿಂಗಪ್ಪ ಚಂದಾಪೂರ್ ಮತ್ತಿತರರು ಉಪಸ್ಥಿತರಿದ್ದರು.