ಹರಿಹರ, ಸೆ.26- ರೈತ ಸಂಘದ ವತಿಯಿಂದ ನಾಡಿದ್ದು ಸೋಮವಾರ ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ನಡೆಯುವ ರಾಜ್ಯ ಬಂದ್ ನಿಮಿತ್ತವಾಗಿ ಹರಿಹರ ತಾಲ್ಲೂಕಿನಲ್ಲಿ ಬಂದ್ ಮಾಡುವ ಉದ್ದೇಶದಿಂದ ಇಂದು ನಗರದಲ್ಲಿ ಬೈಕ್ ರಾಲಿ ನಡೆಸಲಾಯಿತು.
ಬೈಕ್ ರಾಲಿ ಶಿವಮೊಗ್ಗ ರಸ್ತೆಯ ಎಪಿಎಂಸಿ ಯಿಂದ ಪ್ರಾರಂಭಗೊಂಡು ರಾಣಿ ಚೆನ್ನಮ್ಮ ವೃತ್ತ, ದೇವಸ್ಥಾನ ರಸ್ತೆ, ಟಿ.ಬಿ. ರಸ್ತೆ, ಹಳೆ ಪಿ.ಬಿ ರಸ್ತೆ, ಗಾಂಧಿ ವೃತ್ತ, ಮುಖ್ಯರಸ್ತೆ ಸೇರಿದಂತೆ ನಗರದ ಹಲವಾರು ರಸ್ತೆಯಲ್ಲಿ ಸಂಚಾರ ಮಾಡಿ ಸಾರ್ವಜನಿಕರಿಗೆ ತಮ್ಮ ಅಂಗಡಿ ಮುಂಗಟ್ಟು ತೆರೆಯದೇ ಬಂದ್ ಗೆ ಬೆಂಬಲ ನೀಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಪ್ರಭುಗೌಡ, ಹಾಳೂರು ನಾಗರಾಜ್, ರುದ್ರುಮುನಿ, ಚಂದ್ರಪ್ಪ, ಮಹೇಶಪ್ಪ ದೊಗ್ಗಳ್ಳಿ, ಪಾಲಕ್ಷಪ್ಪ, ಸಿರಿಗೆರೆ ಬಸವರಾಜಪ್ಪ ಹಾಗು ಇತರರು ಹಾಜರಿದ್ದರು.