ಡ್ರಗ್ಸ್ : ವಿರುದ್ಧ ಸಹಿ ಸಂಗ್ರಹ

ದಾವಣಗೆರೆ, ಸೆ.12- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದೇಶಾದ್ಯಂತ ನಶಾ ಮುಕ್ತ ಭಾರತ ಜಾಗೃತಿ ಅಭಿಯಾನ ಆರಂಭಿಸಿದ್ದು, ಎಬಿವಿಪಿಯ ದಾವಣಗೆರೆ ಶಾಖೆ ವತಿಯಿಂದ ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಡ್ರಗ್ ಮಾಫಿಯಾದ ವಿರುದ್ಧ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಾಯಿತು.

ಈ ಪರಿಷತ್ 2015 ರಿಂದಲೂ ಅನೇಕ ಮನವಿ ಹಾಗೂ ಹೋರಾಟಗಳನ್ನು ಕೈಗೆತ್ತಿಕೊಂಡಿತ್ತು. ದುರದೃಷ್ಟವಶಾತ್ ಸರ್ಕಾರ ನಮ್ಮ ಮನವಿಯನ್ನು ಕೇಳಿಸಿಕೊಳ್ಳಲಿಲ್ಲ. ಈ ಜಾಲದಲ್ಲಿ ಅನೇಕ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಇದನ್ನು ಈ ದೇಶದಿಂದಲೇ ಹೊರ ಹಾಕಬೇಕೆಂದು ಪರಿಷತ್ ನ ಪದಾಧಿಕಾರಿಗಳು ಮನವಿ ಮಾಡಿಕೊಂಡರು.

ಈ ಡ್ರಗ್ ಮಾಫಿಯಾದಲ್ಲಿ ಅನೇಕ ಚಲನಚಿತ್ರ ನಟಿಯರು ಹಾಗೂ ಉದ್ಯಮಿಗಳು ಹಾಗೂ ರಾಜಕಾರಣಿ ಮಕ್ಕಳು ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಗೃಹ ಸಚಿವರು ಮಾಧ್ಯಮದ ಮೂಲಕ ಡ್ರಗ್ಸ್ ಜಾಲದ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿಕೆಯನ್ನು ನೀಡಿರುತ್ತಾರೆ. ಆದರೆ ಈ ಜಾಲದಲ್ಲಿ ಮುಗ್ಧ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. 

ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ಕಡೆಗಳಲ್ಲಿ ಡ್ರಗ್ ಮಾಫಿಯಾ ಅವ್ಯಾಹತವಾಗಿ ಬೆಳೆದಿದೆ. ಇದು ಪೊಲೀಸ್ ಇಲಾಖೆಗೂ ತಿಳಿದಿದೆ. ಡ್ರಗ್ಸ್ ಪೂರೈಸುವ ವ್ಯಕ್ತಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಡ್ರಗ್ ಮುಕ್ತ ಕರ್ನಾಟಕವನ್ನಾಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯ ಸಮಿತಿ ಸದಸ್ಯೆ ಭವ್ಯಶ್ರೀ, ನಗರ ಕಾರ್ಯದರ್ಶಿ ಆಕಾಶ್ ಇಟಗಿ ಹಾಗೂ ಸುಮನ್, ನಿತಿನ್ ಸೇರಿದಂತೆ ಇನ್ನಿತರು ಇದ್ದರು.

error: Content is protected !!