ಮಾಯಕೊಂಡ, ಸೆ.13- ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿ ಮತ್ತು ಮಾಯಕೊಂಡ ಪುರ ಅಭಿವೃದ್ಧಿ ವೇದಿಕೆಯು ಸಂಯುಕ್ತವಾಗಿ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ಸಭೆ ಸೇರಿತ್ತು.
ಡಿಸೆಂಬರ್ 20 ರೊಳಗೆ ಮಾಯಕೊಂಡವನ್ನು ತಾಲ್ಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡುವುದು ಎಂದು ವಿಜಯೇಂದ್ರ ಅವರು ನಾಲ್ಕಾರು ಬಾರಿ ಪ್ರಸ್ತಾಪಿಸಿದ್ದು, ಕಂದಾಯ ಇಲಾಖೆ ಪ್ರಿನ್ಸಿಪಲ್ ಕಾರ್ಯದರ್ಶಿ (ಎಂ.ಎಸ್. ಕಟ್ಟಡ) ಎಸ್. ಮಂಜುನಾಥ ಪ್ರಸಾದ್ ಅವರು ಕೂಡ (ಆದೇಶ ನಂ. ಆರ್.ಎಲ್.ಡಿ. 5. 2020. ದಿನಾಂಕ 28-ಫೆಬ್ರವರಿ 2020 ರಂದು) ಶಿಫಾರಸ್ಸು ಮಾಡಿದ್ದಾರೆಂದು ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರೀ ಅವರಿಗೆ ಉತ್ತರಿಸಿದ್ದಾರೆ ಎಂದು ತಿಳಿಸಲಾಯಿತು.
ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಹೋರಾಟ ಸಮಿತಿ ಭಾಗವಹಿಸಿ ಮುಖ್ಯಮಂತ್ರಿ ಗಳು, ಸಚಿವ ಆರ್. ಅಶೋಕ್ ಹಾಗೂ ವಿಜ ಯೇಂದ್ರ ಅವರನ್ನು ಭೇಟಿಯಾಗಿ ಬರಲು ಸಭೆ ನಿರ್ಧರಿಸಿತು. ಈಗಿರುವ ಹೋರಾಟ ಸಮಿತಿ ಪದಾಧಿಕಾರಿಗಳನ್ನು ಮತ್ತು ಮಾಯಕೊಂಡ ಪುರ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳನ್ನು ಸಂಪೂರ್ಣವಾಗಿ ರದ್ದು ಮಾಡಿ ಸಮಾನ ಮನಸ್ಕರನ್ನು, ನೂತನವಾಗಿ ತಾಲ್ಲೂಕು ರಚನೆಗಾಗಿ ಶ್ರಮಪಡುವವರನ್ನು ನೂತನವಾಗಿ ಆಯ್ಕೆ ಮಾಡಿಕೊಳ್ಳಿರಿ ಎಂದು ಸಭೆ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರೀ ಅವರಿಗೆ ಅಧಿಕಾರ ನೀಡಿತು. ಸಭೆಗೆ ನೂರಾರು ಜನರು ಆಗಮಿಸಿದ್ದರು.