ಕರಾಮುವಿ ಕುಲಪತಿ ಪ್ರೊ.ವಿದ್ಯಾಶಂಕರ್
ದಾವಣಗೆರೆ, ಸೆ. 3 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಎಲ್ಲಾ ಚಟುವಟಿಕೆಗಳು ಆನ್‌ಲೈನ್ ಮೂಲಕ ನಡೆಯುವಂತಾಗಿವೆ ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಹೇಳಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಯು 25ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಸರ್ಕಾರ ನಮ್ಮ ವಿವಿಗೆ ಮಾತ್ರ ದೂರ ಶಿಕ್ಷಣ ನೀಡಲು ಅನುವು ಮಾಡಿಕೊಟ್ಟಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಗುಣಮುಟ್ಟದ ಶಿಕ್ಷಣ ನೀಡಲು ಅನೇಕ ಬದಲಾವಣೆ ತಂದಿರುವುದಾಗಿ ಅವರು ಹೇಳಿದರು. ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಸಾಧಿಸಲು ಕೆಎಸ್‌ಒಯು ಮೊಬೈಲ್ ಆಪ್ ರಚಿಸಲಾಗಿದೆ. ಇಲ್ಲಿ ಎಲ್ಲಾ ವಿವರಗಳೂ ದೊರೆಯಲಿವೆ. ಭಾರತದಲ್ಲಿಯೇ ಮೊದಲ ಬಾರಿಗೆ ನಮ್ಮ ವಿವಿಯಿಂದ ವೆಬ್ ರೇಡಿಯೋ ಲೈವ್ ನೀಡಲಾಗುತ್ತಿದೆ. ವಿದ್ಯಾರ್ಥಿ ಬಳಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಆತ ಸುಲಭವಾಗಿ ಪದವಿ ಪಡೆಯಬಹುದಾಗಿದೆ ಎಂದರು.
ರಾಜ್ಯದಲ್ಲಿ 75 ಸ್ಟಡಿ ಸೆಂಟರ್‌ಗಳಿರುವುದಾಗಿ ಹೇಳಿದ ಅವರು, ಪ್ರಸಕ್ತ ವರ್ಷದ ಶೈಕ್ಷಣಿಕ ಸಾಲಿಗೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಿದ್ದು ದಂಡ ರಹಿತ ಪ್ರವೇಶಾತಿಗೆ ಅಕ್ಟೇಬರ್ 10 ಹಾಗೂ ದಂಡ ಸಹಿತ ಪ್ರವೇಶಾತಿಗೆ ಅ.29 ಕೊನೆಯ ದಿನವಾಗಿರುವುದಾಗಿ ಹೇಳಿದರು.
ದೂರ ಶಿಕ್ಷಣಕ್ಕೆ ಮೌಲ್ಯವಿಲ್ಲ ಎನ್ನುವ ಮಾತುಗಳಿಗೆ ಕಿವಿಗೊಡದಿರಲು ಅವರು ವಿದ್ಯಾರ್ಥಿಗಳಿಗೆ ಸಲೆ ನೀಡಿದ ಅವರು, ದೂರ ಶಿಕ್ಷಣದ ಪಡೆದ 18 ಜನರು ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ ಎಂದರು.
ಪ್ರಾದೇಶಿಕ ಕೇಂದ್ರ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ ಪತ್ರಿಕಾಗೋಷ್ಠಿಯಲ್ಲಿದ್ದರು.